AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಕುರ್ಚಿ ಫೈಟ್: ತಡರಾತ್ರಿ ವರೆಗೂ ನಡೆದ ಶಾಸಕಾಂಗ ಸಭೆಯಲ್ಲಿ ಅಂತಿಮವಾಗಿ ಏನು ತೀರ್ಮಾನವಾಯ್ತು? ಇಲ್ಲಿದೆ ವಿವರ

ಮುಖ್ಯಮಂತ್ರಿ ಆಯ್ಕೆ ಕುರಿತು ಇಂದು ( ಮೇ 14, ಭಾನುವಾರ) ಕಾಂಗ್ರೆಸ್​ ಪಕ್ಷ ನಡೆಸಿದ್ದ ಶಾಸಕಾಂಗ ಸಭೆ (CLP meeting) ಅಂತ್ಯಗೊಂಡಿದೆ. ಸಿಎಂ ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಹಾಗಾದ್ರೆ, ತಡರಾತ್ರಿ ವರೆಗೂ ನಡೆದ ಸಭೆಯಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆದವು ಎನ್ನುವ ವಿವರ ಇಲ್ಲಿದೆ.

ಸಿಎಂ ಕುರ್ಚಿ ಫೈಟ್: ತಡರಾತ್ರಿ ವರೆಗೂ ನಡೆದ ಶಾಸಕಾಂಗ ಸಭೆಯಲ್ಲಿ ಅಂತಿಮವಾಗಿ ಏನು ತೀರ್ಮಾನವಾಯ್ತು? ಇಲ್ಲಿದೆ ವಿವರ
ರಮೇಶ್ ಬಿ. ಜವಳಗೇರಾ
|

Updated on:May 15, 2023 | 8:50 AM

Share

ಬೆಂಗಳೂರು: ಕಾಂಗ್ರೆಸ್ (Congress) ಕರ್ನಾಟಕ ಕುರುಕ್ಷೇತ್ರ ಗೆದ್ದಾಗಿದೆ. ಪ್ರಚಂಡ ಬಹುಮತ ಪಡೆದಿರುವ ಕಾಂಗ್ರೆಸ್‌ನಲ್ಲಿ ಇದೀಗ ಸಿಎಂ ಕುರ್ಚಿ ಫೈಟ್ ತೀವ್ರಗೊಂಡಿದೆ. ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ. ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಂತ್ರ ಜಪಿಸಿದ ಈ ಉಭಯ ನಾಯಕರು ಇದೀಗ ಸಿಎಂ ಕುರ್ಚಿಗೆ ಪಟ್ಟು ಬಿಗಿಗೊಳಿಸಿದ್ದಾರೆ. ಪಕ್ಷವು ಭಾರಿ ಬಹುಮತ ಪಡೆಯಲು ತಮ್ಮ ಕೊಡುಗೆಯನ್ನು ಮುಂದಿಟ್ಟುಕೊಂಡು ಉಭಯ ನಾಯಕರು ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. ಹೀಗಾಗಿ ಇದು ನಾಡಿನ ಮುಂದಿನ ದೊರೆಯ ಆಯ್ಕೆಯನ್ನು ಕಗ್ಗಂಟು ಮಾಡಿದೆ. ಹಾಗಾದ್ರೆ ಶಾಸಕಾಂಗ ಸಭೆಯಲ್ಲಿ ತಡರಾತ್ರಿವರೆಗೆ ಏನೆಲ್ಲ ಬೆಳವಣಿಗೆಗಳು ನಡೆದವು ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: DK Shivakumar Birthday: ಸಿಎಂ ಕುರ್ಚಿ ಜಟಾಪಟಿ ಮಧ್ಯೆ ಅದ್ದೂರಿಯಾಗಿ ಡಿಕೆ ಶಿವಕುಮಾರ್​ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ನಾಯಕರು

ಡಿಕೆ ಶಿವಕುಮಾರ್ ಪಟ್ಟು ಏನು?

ಈ ಬಾರಿ ಇಡೀ ಒಕ್ಕಲಿಗ ಸಮುದಾಯ ನನ್ನ ಬೆನ್ನಿಗೆ ನಿಂತಿದೆ ಅನ್ನೋದು ಡಿಕೆ ವಾದ.. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳು ಬಂದಿವೆ.. ಶೇಕಡಾ 5ರಷ್ಟು ಒಕ್ಕಲಿಗರ ಹೆಚ್ಚುವರಿ ವೋಟು ಕಾಂಗ್ರೆಸ್‌ಗೆ ಬಂದಿದೆ. ಒಕ್ಕಲಿಗರು ಸಿಎಂ ಆಗುವ ಅವಕಾಶ ಇರುವುದಕ್ಕೆ ಹೆಚ್ಚುವರಿ ಮತ ಬಂದಿದೆ. ಹೀಗಾಗಿ ನನಗೇ ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ವಾದವೇನು?

ಸಿದ್ದರಾಮಯ್ಯ ಮೊದಲು ಶಾಸಕರ ಅಭಿಪ್ರಾಯ ಸಂಗ್ರಹವಾಗಲಿ.. ಶಾಸಕರು ಯಾರ ಪರ ನಿಲ್ಲುತ್ತಾರೋ ಅವರಿಗೆ ಸಿಎಂ ಸ್ಥಾನ ನೀಡಬೇಕು. ಹೈಕಮಾಂಡ್ ತೀರ್ಮಾನಕ್ಕೆ ಬಂದಲು ಶಾಸಕರು ತೀರ್ಮಾನಿಸಲು ಅನ್ನೋದು ಸಿದ್ದು ವಾದ. ಸಿದ್ದರಾಮಯ್ಯ ಈ ಹಿಂದೆ ಕೂಡ ಮುಂದಿನ ಮುಖ್ಯಮಂತ್ರಿಯನ್ನು ಪಕ್ಷದ ಶಾಸಕರು ಮತ್ತು ಹೈಕಮಾಂಡ್ ತೀರ್ಮಾನಿಸುತ್ತಾರೆ ಎಂದಿದ್ರು. ಇದೀಗ ಡಿಕೆ ಕೂಡ ಮುಂದಿನ ಸಿಎಂ ಯಾರು ಅನ್ನೋದನ್ನು ಶಾಸಕಾಂಗ ಪಕ್ಷದ ಸಭೆ ಮತ್ತು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ; ಗುರುವಾರ ಪ್ರಮಾಣ ವಚನ?

ತೆರೆಮರೆಯ ಕದನ ಟೆನ್ಷನ್

ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವಿನ ಖುಷಿ ನಡುವೆಯೂ ಹೈಕಮಾಂಡ್​ಗೆ ತಲೆ ಬಿಸಿ ಶುರುವಾಗಿದೆ. ಸಿಎಂ ಕುರ್ಚಿಗಾಗಿ ಕೈ ಪಾಳಯದಲ್ಲಿ ನಡೀತಿರೋ ತೆರೆಮರೆಯ ಕದನ ಟೆನ್ಷನ್ ಕೊಡುತ್ತಿದೆ. ಸಿಎಂ ಸ್ಥಾನದಲ್ಲಿ ಯಾರನ್ನ ಕೂರಿಸ್ಬೇಕು? ಯಾರಿದ್ರೆ ಪಕ್ಷಕ್ಕೆ ಒಳ್ಳೇದು.. ಮುಂಬರುವ ಲೋಕಸಭೆ ಚುನಾವಣೆ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಅಳೆದು ತೂಗಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗೇ ತಡರಾತ್ರಿವರೆಗೂ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಡಿನ್ನರ್ ಜೊತೆ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಯ್ತು.

ಅಭಿಪ್ರಾಯ ಸಂಗ್ರಹ

ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾರನ್ನ ವೀಕ್ಷಕರಾಗಿ ಹೈಕಮಾಂಡ್ ಕಳಿಸಿದ್ದು, ಮೊದಲ ಶಾಸಕಾಂಗ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರೂ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ಬಹುತೇಕ ಶಾಸಕರ ಬೆಂಬಲ ಸಿದ್ದರಾಮಯ್ಯಗೆ ಇದೆ ಎಂದು ಹೇಳಲಾಗ್ತಿದೆ. ಶಾಸಕಾಂಗ ಸಭೆಯಲ್ಲಿ ಒನ್ ಲೈನ್ ಅಭಿಪ್ರಾಯ ತಿಳಿಸಿ ಸುಮ್ಮನಾಗಿದ್ದಾರೆ. ಆದ್ರೆ ಶಾಸಕರ ಅಭಿಪ್ರಾಯಕ್ಕಿಂತ ಹೈಕಮಾಂಡ್ ಸಿಎಂ ಯಾರು ಎನ್ನುವುದನ್ನು ನಿರ್ಧರಿಸಬೇಕು ಎಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಈಗ ಕುತೂಹಲ ಕೆರಳಿಸಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜೊತೆ ಮುಂದಿನ ಸಿಎಂ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಈ ನಡುವೆ ಇಂದು(ಮೇ 15) ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.

ಎಲ್ಲರ ಚಿತ್ತ ದೆಹಲಿಯತ್ತ!

ಸಿಎಂ ಯಾರು ಆಗಬೇಕೆಂದು ಶಾಸಕ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಇಬ್ಬರು ನಾಯಕರ ನಡುವಿನ ತೀವ್ರ ಪೈಪೋಟಿಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ನ ಎದುರು ಬದುರು ಕೂರಿಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತುಕತೆ ಮೂಲಕ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಸದ್ಯಕ್ಕೆ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:26 am, Mon, 15 May 23