ಪದ್ಮನಾಭನಗರ ಅಭ್ಯರ್ಥಿಗೆ ಬಿ ಫಾರಂ ನೀಡದ ಡಿಕೆ ಶಿವಕುಮಾರ್ ನಡೆಯ ಹಿಂದಿನ ಮರ್ಮವೇನು?

|

Updated on: Apr 13, 2023 | 7:00 PM

ಪದ್ಮನಾಭನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ರಘುನಾಥ್ ನಾಯ್ಡು ಅವರಿಗೆ ಘೋಷಣೆಯಾಗಿದೆ. ಆದರೆ ಬಿಜೆಪಿ ಪ್ರಬಲ ಅಭ್ಯರ್ಥಿ ಅಶೋಕ್ ಅವರನ್ನು ಕನಕಪುರದಿಂದ ಕಣಕ್ಕಿಳಿದಿರುವುದಕ್ಕೆ ಕಾಂಗ್ರೆಸ್ ತಿರುಗೇಟು ನೀಡಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಯಾಕೆಂದರೆ ರಘುನಾಥ್ ನಾಯ್ಡುಗೆ ಕಾಂಗ್ರೆಸ್ ಬಿ ಫಾರಂ ನೀಡಿಲ್ಲ. ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಾಯ್ಡುಗೆ ಕೋಕ್ ನೀಡಲಾಗುತ್ತಾ? ಕಾದು ನೋಡಬೇಕಿದೆ.

ಪದ್ಮನಾಭನಗರ ಅಭ್ಯರ್ಥಿಗೆ ಬಿ ಫಾರಂ ನೀಡದ ಡಿಕೆ ಶಿವಕುಮಾರ್ ನಡೆಯ ಹಿಂದಿನ ಮರ್ಮವೇನು?
ಡಿಕೆ ಶಿವಕುಮಾರ್ ಮತ್ತು ಆರ್ ಅಶೋಕ್
Follow us on

ಬೆಂಗಳೂರು: ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸ್ಪರ್ಧಿಸುವ ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನಾಗಿ ಆರ್ ಅಶೋಕ (R Ashoka) ಅವರನ್ನು ಕಣಕ್ಕಿಳಿಸಲಾಗಿದ್ದು, ಇದಕ್ಕೆ ಪ್ರತಿಯಾಗಿ ಆರ್ ಅಶೋಕ್ ಸ್ಪರ್ಧಿಸುವ ಮತ್ತೊಂದು ಕ್ಷೇತ್ರ ಪದ್ಮನಾಭನಗರದಲ್ಲಿ (Padmanabhanagar) ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು (Raghunath Naidu) ಅವರಿಗೆ ಬಿ ಫಾರಂ ನೀಡದೆ ಕೋಕ್ ನೀಡುವ ಸಾಧ್ಯತೆ ಇದೆ.

ಟಿಕೆಟ್ ಘೋಷಣೆಯಾದ ಹಿನ್ನೆಲೆ ಬಿ ಫಾರಂ ಪಡೆಯಲು ರಘುನಾಥ್ ನಾಯ್ಡು ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಶೋಕ್ ಅವರನ್ನು ಕಣಕ್ಕಿಳಿಸಿದ ಹಿನ್ನೆಲೆ ರಘುನಾಥ್ ನಾಯ್ಡುಗೆ ಡಿಕೆ ಶಿವಕುಮಾರ್ ಬಿ ಫಾರಂ ನೀಡದೆ ಕುತೂಲಹ ಕೆರಳಿಸಿದ್ದಾರೆ.

ಅಶೋಕ ವಿರುದ್ಧ ಡಿಕೆ ಸುರೇಶ್ ಕಣಕ್ಕೆ?

ಇತ್ತ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಬಿಜೆಪಿ ಹೈಕಮಾಂಡ್ ಆರ್ ಅಶೋಕ್ ಅವರನ್ನು ಕನಕಪುರದಲ್ಲಿ ಕಣಕ್ಕಿಳಿಸಿದರೆ, ಇತ್ತ ಅದೇ ಅಶೋಕ್ ಅವರನ್ನು ಪದ್ಮನಾಭನಗರದಲ್ಲಿ ಸೋಲುಣಿಸಲು ಕಾಂಗ್ರೆಸ್ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಹಾಕಿಕೊಂಡಿದೆ. ಈ ಹಿಂದೆ ಅಶೋಕ್ ಅವರ ವಿರುದ್ಧ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸುವುದಾಗಿ ಡಿಕೆ ಶಿವಕುಮಾರ್ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಇದೀಗ ಹಾಲಿ ಅಭ್ಯರ್ಥಿ ನಾಯ್ಡು ಅವರಿಗೆ ಬಿ ಫಾರಂ ನೀಡದೇ ಇರುವುದು ಇದೇ ಕಾರಣಕ್ಕಾ? ಕಾದುನೋಡಬೇಕಿದೆ.

ಕ್ಷೇತ್ರ ತ್ಯಾಗಕ್ಕೆ ಸಿದ್ದ: ರಘುನಾಥ ನಾಯ್ಡು

ಬಿ ಫಾರಂ ನೀಡದ ಬಗ್ಗೆ ಪ್ರತಿಕ್ರಿಯೆ ನೀಡಿದ ರಘುನಾಥ ನಾಯ್ಡು, ಕ್ಷೇತ್ರ ತ್ಯಾಗಕ್ಕೆ ಸಿದ್ದವಾಗಿದ್ದೇನೆ. ಡಿಕೆ ಸುರೇಶ್ ನಿಲ್ಲುತ್ತಾರೆ ಅಂದರೆ ನಾನೇ ಕ್ಷೇತ್ರ ಬಿಟ್ಟುಕೊಡುತ್ತೇನೆ. ಡಿಕೆ ಸುರೇಶ್ ಬಂದರೆ 70 ಸಾವಿರ ಲೀಡ್​ನಲ್ಲಿ ಗೆಲ್ಲಿಸುತ್ತೇವೆ. ಇದನ್ನು ನಾನೇ ಡಿಕೆಶಿವಕುಮಾರ್ ಮುಂದೆ ಹೇಳಿದ್ದೇನೆ. ಹೇಗೆ ಗೆಲ್ಲಬಹುದು ಅಂತ ಡಿಕೆಶಿವಕುಮಾರ್​ಗೆ ವಿವರ ಕೊಟ್ಟಿದ್ದೇನೆ. ಡಿಕೆಶಿವಕುಮಾರ್ ಡಿಕೆ ಸುರೇಶ್ ಇಬ್ಬರೂ ಪಕ್ಷದ ಆಸ್ತಿ. ಡಿಕೆ ಸುರೇಶ್ ಹೊರತುಪಡಿಸಿದರೆ ಪದ್ಮನಾಭ ನಗರದಲ್ಲಿ ನಾನೇ ಪವರ್ ಫುಲ್. ಹೀಗಾಗಿ ನಾನು ಡಿಕೆ ಸುರೇಶ್ ಬಂದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ. ಆರ್ ಅಶೋಕ್ ಎರಡೂ ಕ್ಷೇತ್ರಗಳಲ್ಲಿ ಸೋಲುತ್ತಾರೆ. ಕನಕಪುರದಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತಾರೆ. ಡಿಕೆಶಿವಕುಮಾರ್ ಒಂದೂವರೆ ಲಕ್ಷ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.

ಇದನ್ನೂ ಓದಿ: ಆತಿಥ್ಯ ಕೊಡುವುದಕ್ಕೆ ಕನಕಪುರದವರು ಫೇಮಸ್: ಒಳ್ಳೆ ಆತಿಥ್ಯ ಕೊಡೋಣ: ಅಶೋಕ್​ಗೆ ಡಿಕೆ ಶಿವಕುಮಾರ್ ಟಾಂಗ್

ರಘುನಾಥ ನಾಯ್ಡುಗೆ ಬಿ ಫಾರಂ ನೀಡದ ಬಗ್ಗೆ ಪ್ರತಿಕ್ರಿಯಿಸಿದ ನಾಯ್ಡು, ನಾಳೆ ಬಂದು ಬಿ ಫಾರಂ ಪಡೆಯುತ್ತೇನೆ ಎಂದು ತೆರಳಿದರು. ನೀನೆ ನಿಲ್ಲು ರಾಜ್ಯದಲ್ಲಿ ಇತಿಹಾಸ ಬರೆಯಬಹುದು ಅಂತ ಅಧ್ಯಕ್ಷರು ಹೇಳಿದ್ದಾರೆ. ನಾಳೆ ಬಿ ಫಾರಂ ಪಡೆಯುತ್ತೇನೆ. ಏಪ್ರಿಲ್ 19ಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ.  ಇಂದು ಸಮಯ ಸರಿಯಿರಲಿಲ್ಲ, ಹೀಗಾಗಿ ನಾಳೆ ಬಂದು ಬಿ ಫಾರಂ ತೆಗೆದುಕೊಳ್ಳುತ್ತೇನೆ ಎಂದರು.

ಹಾಲಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್​ನ ಪ್ರಬಲ ನಾಯಕರಾಗಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಸೋಲಿಸಲು ಮಾಸ್ಟರ್ ಪ್ಲಾನ್ ಹಾಕಿದ್ದಾರೆ. ಅದರಂತೆ ಡಿಕೆ ಶಿವಕುಮಾರ್​ ವಿರುದ್ಧ ಬಿಜೆಪಿ ಪ್ರಬಲ ನಾಯಕ ಆರ್ ಅಶೋಕ್​ ಅವರನ್ನು ಕಣಕ್ಕಿಳಿಸಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರನ್ನು ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಆರಂಭದಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯಿತು. ನಂತರ ಅಚ್ಚರಿ ಎಂಬಂತೆ ವಿ ಸೋಮಣ್ಣ ಅವರನ್ನು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿದೆ.

ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಅಶೋಕ್ ವಿರುದ್ಧ ಇದೆ. ಹೀಗಾಗಿ ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿಸಲಾಗಿದೆ ಅಂತಾನೂ ಹೇಳಲಾಗುತ್ತಿದೆ. ಇದರ ಹೊರತಾಗಿ ಈ ಬಾರಿ ಡಿಕೆ ಶಿವಕುಮಾರ್ ಮತ್ತು ಆರ್ ಅಶೋಕ, ಸಿದ್ದರಾಮಯ್ಯ ಹಾಗೂ ವಿ ಸೋಮಣ್ಣ ನಡುವೆ ಗೆಲುವಿನ ಹೋರಾಟ ಭಾರೀ ಕುತೂಹಲ ಮೂಡಿಸಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:11 pm, Thu, 13 April 23