Karnataka Assembly Election 2023: ಬನಶಂಕರಿ ತಾಯಿಯ ನಾಡಲ್ಲಿ ಇಂದು ಮಧ್ಯಾಹ್ನ ಮೋದಿ ಪಥ‘ಸಂಚಲನ’

| Updated By: ಕಿರಣ್ ಹನುಮಂತ್​ ಮಾದಾರ್

Updated on: May 06, 2023 | 8:03 AM

ವಿಧಾನಸಭೆ ಚುನಾವಣೆಗೆ ಕೊನೆ ಹಂತದ ಕಸರತ್ತು ಶುರುವಾಗಿದೆ. ರಾಷ್ಟ್ರ, ರಾಜ್ಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ರಾಜ್ಯಕ್ಕರ ಲಗ್ಗೆಯಿಟ್ಟಿದ್ದಾರೆ. ಇಂದು(ಮೇ.6) ಬನಶಂಕರಿ ಆಸ್ಥಾನಕ್ಕೆ ಪ್ರಧಾನಿ ಮೋದಿ ಲಗ್ಗೆಯಿಡುತ್ತಿದ್ದು, ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಜೊತೆಗೆ ಕಮಲ ಕಲಿಗಳಿಗೆ ಮೋದಿ ಆಗಮನ ಭರ್ಜರಿ ಉತ್ಸಾಹ ಮೂಡಿಸಿದೆ. ಮೋದಿ‌ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಹೇಗೆ ಘರ್ಜಿಸಲಿದ್ದಾರೆ ಎಂಬ ಕುತೂಹಲ‌ ಮನೆ ಮಾಡಿದೆ.

Karnataka Assembly Election 2023: ಬನಶಂಕರಿ ತಾಯಿಯ ನಾಡಲ್ಲಿ ಇಂದು ಮಧ್ಯಾಹ್ನ ಮೋದಿ ಪಥ‘ಸಂಚಲನ’
ಬಾದಾಮಿಯಲ್ಲಿ ಇಂದು ಮೋದಿ ಪ್ರಚಾರ
Follow us on

ಬಾಗಲಕೋಟೆ: ವಿಧಾನಸಭೆ ಚುನಾವಣಾ(Karnataka Assembly Election 2023) ಕಣ ರಂಗೇರಿದೆ. ಬಹಿರಂಗ ಪ್ರಚಾರಕ್ಕೆ ಎರಡು ದಿನಗಳು ಬಾಕಿಯಿದ್ದು, ಉಭಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಂತೆ ಪ್ರಧಾನಿ ನರೇಂದ್ರ  ಮೋದಿ(Narendra Modi) ಇಂದು(ಮೇ.6) ಜಿಲ್ಲೆಯ ಬಾದಾಮಿ(Badami)ಗೆ ಬರಲಿದ್ದು, ವೇದಿಕೆ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ. ಮೋದಿ ಬರುವ ಮೂರು ಸೇನಾ ಹೆಲಿಕಾಪ್ಟರ್​ಗಳಿಗಾಗಿ ಹೆಲಿಪ್ಯಾಡ್ ಸಿದ್ದತೆ. ಸ್ಥಳದಲ್ಲಿ ಎಸ್​.ಪಿ.ಜಿ ಹಾಗೂ ಪೊಲೀಸ್ ಸೇನಾಪಡೆ ಪರಿಶೀಲನೆ. ಮೋದಿಗೆ ಉಡುಗೊರೆಯಾಗಿ ಕೊಡಲು ಬೆಳ್ಳಿ ಬನಶಂಕರಿ ದೇವಿ ಮೂರ್ತಿ ಸಿದ್ದವಾಗಿದೆ. ಹೌದು ಚುನಾವಣೆಯ ಕೊನೆ ಹಂತದ ಕಸರತ್ತು ಇಂದು ನಡೆಯಲಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಹೊರವಲಯದ ಬನಶಂಕರಿ ಲೇಔಟ್​ನಲ್ಲಿ ಮೋದಿ‌ ಬಹಿರಂಗ ಪ್ರಚಾರ ಸಭೆ ನಡೆಯಲಿದೆ. ಬಾಗಲಕೋಟೆಗೆ ಇಂದು ಎಮ್‌ಐ -17 ಮೂರು ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಹುಬ್ಬಳ್ಳಿಯಿಂದ ಹೊರಟು 2.50ಕ್ಕೆ ಬಾದಾಮಿ ಹೆಲಿಪ್ಯಾಡ್​ಗೆ ಮೋದಿ ಆಗಮಿಸಲಿದ್ದಾರೆ.

ಮೋದಿ ಕಾರ್ಯಕ್ರಮದ ವೇದಿಕೆ ಸಿದ್ದತೆ ಹೀಗಿದೆ

ಇನ್ನು ನಂತರ 3 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ‌ ಮೋದಿ ಅಬ್ಬರಿಸಲಿದ್ದಾರೆ. ಇದರಿಂದ ವೇದಿಕೆ ಸಿದ್ದತಾ ಕಾರ್ಯ ಬರದಿಂದ ಸಾಗಿದೆ. ಸಾರ್ವಜನಿಕರಿಗಾಗಿ 1000 ಅಡಿ ಉದ್ದ, 400 ಅಡಿ ಅಗಲದ ವೇದಿಕೆ ಹಾಕಲಾಗಿದೆ. ಇನ್ನು ಪ್ರಮುಖ ವೇದಿಕೆ 200 ಅಡಿ ಉದ್ದ 300 ಅಡಿ ಅಗಲವಿದೆ. ಅದರಲ್ಲಿ ಮುಖ್ಯ ವೇದಿಕೆ 60 ಅಡಿ ಅಗಲ 40 ಅಡಿ ಉದ್ದವಿದೆ. ವೇದಿಕೆ ಮೇಲೆ ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಬಾದಾಮಿ ಅಭ್ಯರ್ಥಿ ಎಸ್ ಟಿ ಪಾಟಿಲ್, ಬೀಳಗಿ ಅಭ್ಯರ್ಥಿ ಮುರುಗೇಶ್ ನಿರಾಣಿ, ಹುನಗುಂದ ಅಭ್ಯರ್ಥಿ ದೊಡ್ಡನಗೌಡ ಪಾಟಿಲ್, ಮುಧೋಳ ಅಭ್ಯರ್ಥಿ ಗೋವಿಂದ ಕಾರಜೋಳ, ಗದಗ ಜಿಲ್ಲೆಯ ರೋಣ ಅಭ್ಯರ್ಥಿ ಕಳಕಪ್ಪ ಬಂಡಿ, ನರಗುಂದ ಅಭ್ಯರ್ಥಿ ಸಿಸಿ ಪಾಟಿಲ್ ಸೇರಿದಂತೆ ಒಟ್ಟು 25 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ:Manipur Violence: ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಬಿಟ್ಟು ತೆರಳಿದ ಅಮಿತ್ ಶಾ, ಚುನಾವಣೆಗೂ ಮುನ್ನ ಮತ್ತೆ ರಾಜ್ಯಕ್ಕೆ ಬರುವುದು ಅನುಮಾನ

ಎರಡುವರೆ ಇಂಚು ಎತ್ತರದ ಐದುವರೆ ಇಂಚು ಅಗಲದ ಬನಶಂಕರಿ ಬೆಳ್ಳಿ‌ಮೂರ್ತಿ ಮೋದಿಗೆ ಉಡುಗೊರೆ

ಇನ್ನು ಸಾರ್ವಜನಿಕರಿಗೆ 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಎರಡು ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಬಂದವರಿಗೆ ಕುಡಿಯುವ‌ ನೀರು, ಸಕ್ಕರೆ ಕಾಯಿಲೆ ಇರುವವರಿಗೆ ಪೆಪ್ಪರಮೆಂಟ್ ನೀಡಲಾಗುತ್ತಿದ್ದು, ಒಂದು ಸಾವಿರ ಕಾರ್ಯಕರ್ತರು ಸೇವಾಕಾರ್ಯ ‌ಮಾಡಲಿದ್ದಾರೆ. ಇನ್ನು‌ ಶಾಖಂಬರಿ ಶಕ್ತಿಪೀಠ ಎಂದೇ ಹೆಸರಾದ ಬನಶಂಕರಿ ದೇವಿ ದೇವಸ್ಥಾನದ ಸಮೀಪ‌ ಕಾರ್ಯಕ್ರಮವಿದ್ದು, ದೇವಸ್ಥಾನ ಟ್ರಸ್ಟ್ ಮಂಡಳಿ ಎರಡುವರೆ ಇಂಚು ಎತ್ತರದ ಐದುವರೆ ಇಂಚು ಅಗಲದ ಬನಶಂಕರಿ ಬೆಳ್ಳಿ‌ಮೂರ್ತಿಯನ್ನು ಬಿಜೆಪಿ ಮುಖಂಡರ ಮೂಲಕ‌ ವೇದಿಕೆಯಲ್ಲಿ ಉಡುಗೊರೆ ‌ನೀಡಲಿದ್ದಾರೆ. ಜೊತೆಗೆ ಶಿವಯೋಗಮಂದಿರದ ರುದ್ರಾಕ್ಷಿ‌ಮಾಲೆಯನ್ನು ಮೋದಿಗೆ ಹಾಕಲಿದ್ದಾರೆ.

ಮೋದಿ ಭೇಟಿ ಎರಡು ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಿಗೆ ಬೂಸ್ಟ್​

ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ಹಿನ್ನೆಲೆ ‌ಮೊಟ್ಟ ಮೊದಲ ಬಾರಿಗೆ ಮೋದಿ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಮೋದಿ ಪ್ರಚಾರ ಮತ್ತಷ್ಟು ಕುತೂಹಲ‌ ಮೂಡಿಸಿದೆ. ಮೋದಿ ಬಾದಾಮಿಗೆ ದಾಳಿ ಇಡುತ್ತಿರೋದು ಬಾಗಲಕೋಟೆ, ಗದಗ ಜಿಲ್ಲೆಯ ಅಭ್ಯರ್ಥಿಗಳಿಗೆ ಬಿಜೆಪಿ ಕಾರ್ಯಕರ್ತರಿಗೆ ಬೂಸ್ಟ್ ಸಿಕ್ಕಂತಾಗಿದೆ. ಮೋದಿ ಪ್ರಭಾವದಿಂದ ಹೆಚ್ಚು ಮತ ಪಡೆಯುವ ನಿರೀಕ್ಷೆ ಬಿಜೆಪಿ ಅಭ್ಯರ್ಥಿಗಳದ್ದಾಗಿದೆ.

ಕುಪ್ಪಸದ ಶಾಲನ್ನು ಹಾಕಿ, ಬನಶಂಕರಿದೇವಿಗೆ ಪೂಜೆ ಮಾಡಿದ ಕುಂಕುಮದಿಂದ‌ ತಿಲಕವಿಟ್ಟು ಸ್ವಾಗತ

ಇನ್ನೊಂದು ವಿಶೇಷ ಅಂದರೆ ಬಾದಾಮಿ‌ ಕ್ಷೇತ್ರದ ಗುಳೇದಗುಡ್ಡ ನೇಕಾರರ ನಾಡು ಕುಪ್ಪಸ ತಯಾರಿಕೆಯಲ್ಲಿ ಹೆಸರಾಗಿರೋದರಿಂದ ಮೋದಿ ಅವರಿಗೆ ಗುಳೇದಗುಡ್ಡ ಖಣ(ಕುಪ್ಪಸ)ದ ಶಾಲನ್ನು ವೇದಿಕೆಯಲ್ಲಿ ಹಾಕಲಾಗುವುದು. ಇನ್ನು ಮಹಿಳಾ ಶಕ್ತಿ ಸಮಾವೇಶ ಹೆಸರಲ್ಲಿ ಸಮಾವೇಶ ನಡೆಯಲಿದ್ದು, ಪ್ರತಿಶತ 75 ರಷ್ಟು ಮಹಿಳೆಯರು ಬರಲಿದ್ದು,. ಅವರು ಬನಶಂಕರಿದೇವಿಗೆ ಪೂಜೆ ಮಾಡಿದ ಕುಂಕುಮದಿಂದ‌ ತಿಲಕವಿಟ್ಟು ಸ್ವಾಗತ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಪೇಟೆಯಂ, ಗೂಗಲ್ ಪೇ, ಯುಪಿಐ ವಹಿವಾಟಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು: ಚುನಾವಣಾ ಅಕ್ರಮ ತಡೆಗಟ್ಟಲು ಕ್ರಮ

ಕಾರ್ಯಕ್ರಮ ಭದ್ರತೆ

ಇನ್ನು ಭದ್ರತೆಗೆ ಓರ್ವ ಎಸ್​ ಎಸ್ ಪಿ, 2 ಆರ್ಮ್ಡ್ ಎಸ್​.ಪಿ ಎಸ್, 8 ಐಆರ್​ಬಿ ತುಕಡಿ, 7 ಡಿಎಆರ್, 3 ಫೈರ್ ಎಂಜಿನ್, 3 ಬಿಡಿಡಿ ಎಸ್ ತಂಡ, 5 ಎಎಸ್​ಸಿ ತಂಡ, 3ಸಿಎಪಿಎಫ್ ತಂಡ, 9 ಜನ ಡಿಎಸ್​ಪಿ, 23 ಸಿಪಿಐ, 70 ಪಿಎಸ್​ಐ, 135 ಎಎಸ್​ಐ, 867 ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್, 800 ಹೋಮ್ ಗಾರ್ಡ್ಸ್, ನಿಯೋಜನೆ ಮಾಡಲಾಗಿದೆ. ಒಟ್ಟು 18 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಒಟ್ಟಾರೆ ನಾಳೆ‌ ಪ್ರಧಾನಿ ಆಗಮನ ಕಮಲ ಪಾಳಯಕ್ಕೆ ಬಾರಿ ಉತ್ಸಾಹ ಮೂಡಿಸಿದ್ದು, ಮೋದಿ ಭಾಷಣ ಕೇಳಲು ಎಲ್ಲರೂ ಕಾತುರರಾಗಿದ್ದಾರೆ. ಮೋದಿ ಪ್ರಚಾರ ಎರಡು ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಎಷ್ಟರಮಟ್ಟಿಗೆ ವರವಾಗಲಿದೆ ಫಲಿತಾಂಶವೇ ಉತ್ತರಿಸಲಿದೆ.

ಇನ್ನಷ್ಟ ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ