PM Modi in Karnataka: ಸಮಾಜ ಒಡೆಯುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ; ಪ್ರಧಾನಿ ಮೋದಿ

|

Updated on: Apr 29, 2023 | 4:48 PM

ಜಗತ್ಯೋತಿ ಬಸವೇಶ್ವರರು ಸಮಾನತೆಗಾಗಿ ಹೋರಾಡಿದ್ದರು. ಆದರೆ ಇಂದಿನ ಕಾಂಗ್ರೆಸ್ ನಾಯಕರು ಸಮಾಜ ಒಡೆಯುತ್ತಿದ್ದಾರೆ. ಸಮಾಜವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ ಎಂದು ಮೋದಿ ಹೇಳಿದರು. ಮೋದಿ ಭಾಷಣದ ಪೂರ್ಣ ವಿವರ ಇಲ್ಲಿದೆ.

PM Modi in Karnataka: ಸಮಾಜ ಒಡೆಯುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ; ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ವಿಜಯಪುರ/ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections) ಅಬ್ಬರದ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ಸಮಾಜವನ್ನು ಒಡೆಯುವ ಕೃತ್ಯ ಎಸಗುತ್ತಿದೆ. ಅಂಥ ಕಾಂಗ್ರೆಸ್ಸನ್ನು ಎಂದಿಗೂ ಕ್ಷಮಿಸಬೇಡಿ ಎಂದು ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಬೀದರ್​​ನಲ್ಲಿ ಚುನಾವಣಾ ಪ್ರಚಾರದ ರಣ ಕಹಳೆ ಮೊಳಗಿಸಿದ ಮೋದಿ ನಂತರ ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಸಮಾವೇಶದಲ್ಲಿ ಮಾತನಾಡಿದರು. ಬಳಿಕ ಬೆಳಗಾವಿಯ ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಬಳಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಜಗತ್ಯೋತಿ ಬಸವೇಶ್ವರರು ಸಮಾನತೆಗಾಗಿ ಹೋರಾಡಿದ್ದರು. ಆದರೆ ಇಂದಿನ ಕಾಂಗ್ರೆಸ್ ನಾಯಕರು ಸಮಾಜ ಒಡೆಯುತ್ತಿದ್ದಾರೆ. ಸಮಾಜವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ ಎಂದು ಮೋದಿ ಹೇಳಿದರು. ಕುವೆಂಪು ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಲನ್ನು ಉಲ್ಲೇಖಿಸಿದ ಮೋದಿ, ಸಮಾಜದ ವರ್ಗಗಳು ಪರಸ್ಪರ ಗೌರವ ನೀಡಿ ಬಾಳುವುದು ಮುಖ್ಯ ಎಂದರು. ಜತೆಗೆ, ಕನಕದಾಸರ ಹೆಸರನ್ನೂ ಸ್ಮರಿಸಿದರು.

ನನ್ನನ್ನು ಟೀಕಿಸುವುದರಲ್ಲೇ ಕಾಂಗ್ರೆಸ್​ ಸಮಯ ವ್ಯರ್ಥ ಮಾಡುತ್ತಿದೆ. ಡಾ. ಅಂಬೇಡ್ಕರ್​​​ರನ್ನು ಕಾಂಗ್ರೆಸ್​ನವರು ದೇಶದ್ರೋಹಿ ಎಂದಿದ್ದರು. ನನ್ನನ್ನು 91 ಬಾರಿ ಕಾಂಗ್ರೆಸ್​ ನಾಯಕರು ಬೈದಿದ್ದಾರೆ. ನನ್ನ ಸಮಾಧಿ ತೋಡಬೇಕೆಂಬುದೇ ಕಾಂಗ್ರೆಸ್ ಉದ್ದೇಶ. ಆದರೆ ನಿಮ್ಮ ಆಶೀರ್ವಾದ ಇರುವ ವರೆಗೆ ಏನೂ ಮಾಡಲಾಗದು ಎಂದು ಮೋದಿ ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಬಯಲುಶೌಚ ಮುಕ್ತಕ್ಕಾಗಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಕಾಶಿಯಲ್ಲಿ ಮಹಿಳೆಯರು ಶೌಚಾಲಯಕ್ಕೆ ‘ಮರ್ಯಾದ ಮನೆ’ ಎಂಬ ಬೋರ್ಡ್​ಗಳನ್ನು ಅಳವಡಿಸಿದ್ದಾರೆ ಅಳವಡಿಸಿದ್ದಾರೆ. ಸಹಕಾರ ಇಲಾಖೆಯಲ್ಲೂ ನಾವು ಬದಲಾವಣೆ ತಂದಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: PM Narendra Modi Speech: ಅಂಬೇಡ್ಕರ್​​ರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದ ಕಾಂಗ್ರೆಸ್; ಮೋದಿ ಆರೋಪ

ಕಬ್ಬು ಬೆಳೆಗಾರರಿಗೆ ಕಾಂಗ್ರೆಸ್​ ಯಾವುದೇ ಅನುಕೂಲ ಕಲ್ಪಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಎಥೆನಾಲ್ ಉತ್ಪಾದನೆ ಹೆಚ್ಚಳ ಮಾಡಿದ್ದೇನೆ. ಕಬ್ಬು ಸಹಕಾರ ಸಂಘದ ಮೂಲಕ ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಿದ್ದೇವೆ. ಬಜೆಟ್​ನಲ್ಲಿ ಕಬ್ಬು ಬೆಳೆಗಾರರಿಗೆ 10,000 ಕೋಟಿ ರೂ. ಅನುದಾನ ಮೀಸಲಿರಿಸಿದ್ದೇವೆ ಎಂದು ಮೋದಿ ಹೇಳಿದರು.

ಕರ್ನಾಟಕದ ಜನರು ಬಿಜೆಪಿ ಅಧಿಕಾರಕ್ಕೆ ತರಲು ನಿರ್ಧಾರ ಮಾಡಿದ್ದಾರೆ. ರಾಜ್ಯದ ಪ್ರತಿ ಹಳ್ಳಿ, ಪಟ್ಟಣ, ನಗರಗಳಲ್ಲಿ ಒಂದೇ ಧ್ವನಿ ಕೇಳಿ ಬರ್ತಿದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ನನ್ನ ಹೃದಯ & ಭಾವನೆಗೆ ಸಂಬಂಧಿಸಿದ ಕೆಲಸ ಮಾಡಿ ಎಂದು ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರ ಬಳಿ ಪ್ರಧಾನಿ ಮನವಿ ಮಾಡಿದರು.

‘ದೆಹಲಿಯಿಂದ ಮೋದಿ ಬಂದಿದ್ದರು, ನಿಮಗೆ ನಮಸ್ಕಾರ ತಿಳಿಸಿದ್ದಾರೆ’ ಎಂದು ಪ್ರತಿ ಕುಟುಂಬಕ್ಕೂ ನನ್ನ ನಮಸ್ಕಾರ ತಲುಪಿಸಿ. ಸರ್ಕಾರಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಮೋದಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ವಿಜಪುರದಲ್ಲಿ ಏನೇನಂದ್ರು ಮೋದಿ?

  1. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಾಗಿದೆ. ಸಬ್​ ಕಾ ಸಾತ್ ಸಬ್​ ಕಾ ವಿಕಾಸ್​ಗೆ ಭಗವಾನ್ ಬಸವಣ್ಣನವರೂ ಸ್ಫೂರ್ತಿಯಾಗಿದ್ದಾರೆ. ಕಾಯಕ ಮತ್ತು ದಾಸೋಹದ ಪ್ರೇರಣೆ ನಮ್ಮ ಅಭಿವೃದ್ಧಿ ಯೋಜನೆಗಳ ಹಿಂದಿದೆ. ಆದಿವಾಸಿ, ಮಹಿಳೆಯರು, ದಲಿತರು ಸೇರಿದಂತೆ ಎಲ್ಲ ವರ್ಷಗಗಳ ಅಭಿವೃದ್ಧಿಗೆ ಬದ್ಧರಾಗಿದ್ದೇವೆ.
  2. ಅನ್ನ, ಆಶ್ರಯ್, ಅಕ್ಷರಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡಿದೆ.
  3. ಸಾವಿರಾರು ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ವಿತರಣೆ ಮಾಡಿದ್ದೇವೆ. ವಂಚಿತರಿಗೆ ಸರ್ಕಾರದ ಸೌಲಭ್ಯ ತಲುಪಿಸುವುದು ನಮ್ಮ ಗುರಿ. ಸಾಮಾಜಿಕ ನ್ಯಾಯ ಒದಗಿಸಲು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅನೇಕ ಕೆಲಸ ಮಾಡಿದೆ. ಇದಕ್ಕೆ ಅನೇಕ ಸಾಕ್ಷಿಗಳಿವೆ. ಕಾಂಗ್ರೆಸ್ ಸರ್ಕಾರವು ಬಂಜಾರ, ಲಂಬಾಣಿ ಸಮುದಾಯದವರಿಗೆ ಏನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರವು ಭಗವಾನ್ ಬಸವಣ್ಣರ ತತ್ವಗಳ ಅನುಷ್ಠಾನಕ್ಕೆ ಏನೂ ಮಾಡಿಲ್ಲ.
  4. ದೇಶವಿದೇಶಗಳಲ್ಲಿ ನನಗೆ ಬಸವಣ್ಣನವರ ಸಂದೇಶ ಸಾರುವ ಅವಕಾಶ ಸಿಕ್ಕಿದೆ. ಅದು ನನ್ನ ಸೌಭಾಗ್ಯ. ಲಂಡನ್​​ನಲ್ಲಿ ಅವರ ಪುತ್ಥಳಿ ಅನಾವರಣ ಅವಕಾಶ ಸಿಕ್ಕಿದೆ. ಇದು ನನ್ನ ಸೌಭಾಗ್ಯ.
  5. ಕೇಂದ್ರದಿಂದ 1 ರೂಪಾಯಿ ಬಿಡುಗಡೆ ಮಾಡಿದ್ದರೆ ಫಲಾನುಭವಿಗೆ 15 ಪೈಸೆ ಮಾತ್ರ ದೊರೆಯುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯವರೇ ಹೇಳಿದ್ದರು. ಪಂಚಾಯತಿನಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಹಿಡಿತದಲ್ಲಿದ್ದಾಗ ಪರಿಸ್ಥಿತಿ ಹಾಗಿತ್ತು. ಭ್ರಷ್ಟಾಚಾರ ತೊಡೆದುಹಾಕಲು ಏನೂ ಕ್ರಮ ಕೈಗೊಂಡಿರಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
  6. ಬಡ ಜನರಿಗೆ ಸಲ್ಲಬೇಕಾದ ದುಡ್ಡನ್ನು ಲೂಟಿ ಮಾಡಲಾಗುತ್ತಿತ್ತು. ನೇರ ನಗದು ವರ್ಗಾವಣೆ ಮೂಲಕ ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಈಗ ಎಲ್ಲ ಲಾಭಾಂಶವೂ ಫಲಾನುಭವಿಗಳಿಗೆ ತಲುಪುತ್ತಿದೆ. ಇಂದು ದೆಹಲಿಯಿಂದ 1 ರೂಪಾಯಿ ಬಿಡುಗಡೆಯಾದರೆ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪುತ್ತಿದೆ.
  7. ಬಿಜೆಪಿ ಸರ್ಕಾರ ರೈತರ ಖಾತೆಗೆ ಹಣ ನೇರ ಜಮೆ ಮಾಡಿದೆ. ಮಧ್ಯವರ್ತಿಗಳಿಲ್ಲದೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಿದೆ, ಮಾಡುತ್ತಿದೆ. ಡಬಲ್​ ಇಂಜಿನ್​ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿಯಾಗುತ್ತಿದೆ. ಕರ್ನಾಟಕದಲ್ಲೂ ಬಡವರಿಗೆ ರೇಷನ್​ ನೀಡುತ್ತಿದ್ದೇವೆ.
  8. ಬಿಜೆಪಿ ಸರ್ಕಾರವು ತನ್ನ ಯೋಜನೆಗಳಲ್ಲಿ ಪಾರದರ್ಶಕತೆ ತಂದಿದೆ. ಎಲ್ಲ ಹಣವೂ ಫಲಾನುಭವಿಗಳ ಬ್ಯಾಂಖ್ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಇಡೀ ದೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿಯ ಹಣ ನೇರವಾಗಿ ರೈತರ ಖಾತೆಗಳಿಗೆ ತಲುಪುತ್ತಿದೆ. ವಿಜಯಪುರದ ರೈತರ ಖಾತೆಗಳಿಗೂ ನೇರ ಹಣ ಜಮೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಹಣ ಇಲ್ಲಿವರೆಗೆ ಬರುತ್ತಲೇ ಇರಲಿಲ್ಲ.
  9. ಕಾಂಗ್ರೆಸ್ ಘೋಷಿಸಿರುವ ಯಾವುದೇ ಸಾಲಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ​ಮಾಡದೇ ತಮ್ಮ ಜೇಬಿಗೆ ಹಣ ಹಾಕಿಕೊಂಡರು. ಆದರೆ ಬಿಜೆಪಿಯು ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
  10. ಕಳಸಾ ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್​​ನಲ್ಲಿ ಅನುದಾನ ನೀಡಿದ್ದೇವೆ. ವಿಜಯಪುರದ ರೈತರಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕೆಲಸ ಆರಂಭವಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕಟಿಬದ್ಧತೆಯಾಗಿದೆ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿಯೂ ಡಬಲ್ ಎಂಜಿನ್ ಸರ್ಕಾರ ಕ್ರಮ ಕೈಗೊಂಡಿದೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೂ ಮೊದಲು ಕುಡಿಯುವ ನೀರನ್ನು ಎಲ್ಲಿಂದಲೋ ತರಬೇಕಿತ್ತು. ಈಗ ಮನೆ ಮನೆಗೆ ನೀರು ಬರುತ್ತಿದೆ.
  11. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿತು. ಬಿಜೆಪಿ ಸರ್ಕಾರದ ನೀತಿಯಿಂದ ಇಂದು ನಮ್ಮ ಮಾತೆಯರಿಗೆ, ಸಹೋದರಿಯರಿಗೆ ಹೊಸ ಶಕ್ತಿ ದೊರೆತಿದೆ. ಬಿಜೆಪಿ ಸರ್ಕಾರ ಜನಧನ ಬ್ಯಾಂಕ್ ಖಾತೆ ಮೂಲಕ ಮಹಿಳೆಯರ ಜೀವನ ಬದಲಿಸಿದೆ. ಈ ಖಾತೆಯ ಮೂಲಕ ಸರ್ಕಾರಿ ಯೋಜನೆಗಳ ಹಣ ನೇರ ವರ್ಗಾವಣೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರಗಳು ಮಹಿಳೆಯರ ಕಲ್ಯಾಣಕ್ಕೆ ಗಂಭೀರ ಯತ್ನವನ್ನೇ ಮಾಡಿಲ್ಲ. ಬಿಜೆಪಿ ಸರ್ಕಾರ ಲಕ್ಷಾಂತರ ರೂಪಾಯಿ ನೀಡಿದೆ.
  12. ಡಬಲ್ ಎಂಜಿನ್ ಸರ್ಕಾರ ಆಧುನಕ ಸಂಪರ್ಕ, ಮೂಲಸೌಕರ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚು ಸೃಷ್ಟಿಯಾಗಲಿವೆ.
  13. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ವೋಕಲ್ ಫಾರ್ ಲೋಕಲ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದೆವು. ಕೇಂದ್ರ ಸರ್ಕಾರವೂ ಅದಕ್ಕೆ ಬೆಂಬಲ ನೀಡಿದೆ. ವಿಜಯಪುರದಲ್ಲಿ ಏರ್​​ಪೋರ್ಟ್​ ನಿರ್ಮಾಣ ಮಾಡಿದ್ದೇವೆ. ವಿಜಯಪುರ ಜಿಲ್ಲೆಗೆ ಹೊಸ ಕೈಗಾರಿಕೆಗಳು ಬರುತ್ತಿವೆ.
  14. ಈ ಬಾರಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೇವೆ. ಕರ್ನಾಟಕದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ.
  15. ಮೋದಿ ಬಂದಿದ್ದಾರೆ. ಭಾಷಣ ಕೂಡ ಚೆನ್ನಾಗಿ ಮಾಡಿದ್ದಾರೆ ಎಂದರೆ ಸಾಲದು. ಮೇ 10ರಂದು ಬಿಜೆಪಿ ಬೆಂಬಲಿಸಬೇಕು. ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಬೇಕು. ಬಿಜೆಪಿ ಪರ ಮತ ಚಲಾಯಿಸುವಂತೆ ಮನವರಿಕೆ ಮಾಡಿಕೊಡಬೇಕು. ಮನೆ ಮನೆ ತೆರಳಿ ಕೆಲಸ ಮಾಡಿ. ಇದು ನನ್ನ ಹೃದಯದ ಮಾತು.
  16. ಮೋದಿ ನಿಮ್ಮ ಸೇವಕ. ದೆಹಲಿಯಿಂದ ವಿಜಯಪುರಕ್ಕೆ ಬಂದಿದ್ದೇನೆ. ನಿಮಗೆ ನಮಸ್ಕಾರ ಹೇಳುತ್ತಿದ್ದೇನೆ. ಕರ್ನಾಟಕವನ್ನು ನಂಬರ್ 1 ಮಾಡಲು ಮೋದಿಗೆ ಶಕ್ತಿ ನೀಡಿ. ಇದನ್ನು ಮನೆಮನೆಗೆ ತೆರಳಿ ಮನವರಿಕೆ ಮಾಡಿಕೊಡಿ. ನಮಸ್ಕಾರ.

ಮೋದಿ ಪದೇ ಪದೇ ಪುನರುಚ್ಚರಿಸಿದ್ದು…

ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ವೇಗದ ಅಭಿವೃದ್ಧಿ ಸಾಧ್ಯವಾಗಿದೆ. ಅಭಿವೃದ್ಧಿಗಾಗಿ ಸ್ಥಿರ ಸರ್ಕಾರ, ಬಹುಮತದ ಸರ್ಕಾರ ಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಭಾಷಣದುದ್ದಕ್ಕೂ ಮೋದಿ ಪದೇಪದೇ ಹೇಳುತ್ತಿದ್ದರು. ಅದರಲ್ಲೂ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಕನ್ನಡದಲ್ಲೇ ಹಲವು ಬಾರಿ ಪುನರುಚ್ಚರಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Sat, 29 April 23