ಬೆಂಗಳೂರು: ಚುನಾವಣೆ (Karnataka Assembly Elections 2023) ಸಮಯದಲ್ಲಿ ಪೋಲಿಸರು ಮತ್ತು ಆರ್ಟಿಓ (RTO) ಅಧಿಕಾರಿಗಳು ಸರ್ಕಾರಿ ವಾಹನ ಚಾಲಕರ ಮೇಲೆ ದೌರ್ಜನ್ಯ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಚುನಾವಣಾ ಡ್ಯೂಟಿಗೆ ಕಾರು ಬೇಕು ಎಂದು ನಡು ರಸ್ತೆಯಲ್ಲಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ವಾಹನ ಕೊಡಲ್ಲವೆಂದರೆ ಹೆದರಿಸಿ ಬೆದರಿಸಿ ಕೀ ಕಸಿದುಕೊಂಡು ಕಳಿಸುತ್ತಿದ್ದಾರೆ. ಈ ವೇಳೆ ಪೊಲೀಸರು ಮತ್ತು ಆರ್ಟಿಓ ಅಧಿಕಾರಿಗಳು ಚಾಲಕರಿಗೆ ಅವಾಚ್ಯ ಪದಗಳನ್ನು ಬಳಿಸಿ ರೌಡಿಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರಿ ವಾಹನ ಚಾಲಕರ ಸಂಘವು (Karnataka Government Vehicle Drivers Association) ಚುನಾವಣಾ ಆಯೋಗಕ್ಕೆ (Elections Commission) ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಪೊಲೀಸರು ಮತ್ತು ಆರ್ಟಿಓ ಅಧಿಕಾರಿಗಳು ಕೇಳಿದಾಗ ವಾಹನ ನೀಡದಿದ್ದರೆ ಪೊಲೀಸರು ಮತ್ತು ಆರ್ಟಿಓ ಅಧಿಕಾರಿಗಳು ಬಿಡಲ್ಲ, ವಾಹನ ಕೊಟ್ಟರೆ ತಮ್ಮ ಇಲಾಖೆ ಮತ್ತು ಅಧಿಕಾರಿಗಳಿಂದ ಶಿಕ್ಷೆ ಎದುರಿಸಬೇಕಾಗಿದೆ. ವಾಹನಗಳನ್ನು ತೆಗೆದುಕೊಂಡು ಹೋದರೆ ಊಟ, ವಸತಿ ಕೊಡಲ್ಲ. ಡ್ಯೂಟಿ ಮಾಡಲು ಹೋದರೆ ಎಲೆಕ್ಷನ್ ಕಮೀಷನ್ ನೀಡುವ ಸಂಭಾವನೆಯನ್ನು ಇವರೇ ಹೊಡೆದು ತಿನ್ನುತ್ತಾರೆ. ಇದರಿಂದ ಮಾನಸಿಕವಾಗಿ ನಮಗೆ ಹಿಂಸೆ ಆಗುತ್ತದೆ. ದಯವಿಟ್ಟು ಖಾಸಗಿ ವಾಹನಗಳನ್ನು ಬಳಸಿಕೊಳ್ಳಿ ನಮ್ಮನ್ನು ಬಿಟ್ಟುಬಿಡಿ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪರ ಪ್ರಚಾರಕ್ಕಿಳಿದ ಕಿಚ್ಚ ಸುದೀಪ್: ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಡ್ಯಾಮೇಜ್!
ನಮ್ಮ ಮೇಲೆ ದೈಹಿಕ ದೌರ್ಜನ್ಯದ ಜೊತೆಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಅಂತ ಕಿಡಿ ಕಾರಿದ್ದು, ನಿಯಮಗಳ ಪ್ರಕಾರ ಚುನಾವಣಾ ಸಮಯದಲ್ಲಿ ಸರ್ಕಾರಿ ವಾಹನಗಳ ಸದ್ಬಳಕೆ ಆಗಬೇಕು. ಆದರೆ ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು ಆ ಮೂಲಕ ವಾಹನಗಳನ್ನು ಬಳಕೆ ಮಾಡಿಕೊಳ್ಳಬೇಕು. ಅದು ಬಿಟ್ಟು ಏಕಾಏಕಿ ಗೂಂಡಾಗಳ ಹಾಗೇ ನಡು ರಸ್ತೆಯಲ್ಲಿ ವಾಹನಗಳನ್ನು ತಡೆದು ವಶಪಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದನೆ ಮಾಡಿ ಅವಮಾನಿಸಿದ್ದಾರೆ. ಹೀಗಾಗಿ ಬೈಸಿಕೊಂಡು ವಾಹನ ನೀಡಬೇಕಿದೆ. ಕಳೆದ ಒಂದೂವರೆ ತಿಂಗಳಿನಿಂದ ಎಲೆಕ್ಷನ್ ಡ್ಯೂಟಿ ಹೆಸರಲ್ಲಿ ನಮಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಎಂದು ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಫ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಒಂದೆಡೆ, ಖಾಸಗಿ ವಾಹನ ಚಾಲಕರ ಸಂಘವು ನಮ್ಮ ವಾಹನಗಳನ್ನು ಮುಟ್ಟಬೇಡಿ ಬಲವಂತವಾಗಿ ನೀವು ರೋಡ್ಗಳಲ್ಲಿ ನಮ್ಮ ಕ್ಯಾಬ್ಗಳನ್ನು ವಶಕ್ಕೆ ತೆಗೆದುಕೊಂಡರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರೆ, ಇನ್ನೊಂದೆಡೆ ಸರ್ಕಾರಿ ವಾಹನ ಚಾಲಕರ ಸಂಘವು ನಮ್ಮ ವಾಹನಗಳನ್ನು ಮುಟ್ಟಬೇಡಿ ಖಾಸಗಿ ವಾಹನಗಳನ್ನು ತೆಗೆದುಕೊಂಡು ಎಲೆಕ್ಷನ್ ಮಾಡಿ ಅಂತಿವೆ. ಆದರೆ ಆರ್ಟಿಓ ಅಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:23 pm, Wed, 5 April 23