ಉಡುಪಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (pramod muthalik) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಶಾಸಕ, ಬೊಮ್ಮಾಯಿ ಸಂಪುಟದಲ್ಲಿ ಇಂಧನ ಸಚಿವರಾಗಿರಾಗಿರುವ ಸುನಿಲ್ ಕುಮಾರ್ಗೆ(sunil kumar) ತಮ್ಮ ಕಾರ್ಕಳ ಕ್ಷೇತ್ರವನ್ನು(karkala Assembly constituency )ಬಿಟ್ಟುಕೊಡುವಂತೆ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಬಗ್ಗೆ ಉಡುಪಿಯ ಕಾರ್ಕಳದಲ್ಲಿ ಇಂದು(ಡಿಸೆಂಬರ್ 13) ಮಾತನಾಡಿದ ಪ್ರಮೋದ್ ಮುತಾಲಿಕ್, ಪ್ರಮೋದ್ ಮುತಾಲಿಕ್ ಹಿಂದುತ್ವ ಮತ್ತು ನಿಮ್ಮ ಹಿಂದುತ್ವ ಒಂದೇ ತಕ್ಕಡಿಯಲ್ಲಿ ಇಡೋಣ. ಯಾರು ಹಿಂದುತ್ವ ಸಲುವಾಗಿ ಇದ್ದಾರೆ ಎನ್ನುವುದನ್ನು ಜನರ ಮುಂದೆ ಇಡೋಣ. ನನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ಕ್ಷೇತ್ರ ತ್ಯಾಗ ಮಾಡಿ ಬೇರೆ ಕಡೆ ಎಲ್ಲಾದರೂ ಚುನಾವಣೆಗೆ ಸ್ಪರ್ಧಿಸಿ ಎಂದು ಸುನಿಲ್ ಕುಮಾರ್ಗೆ ಸಲಹೆ ನೀಡಿದರು.
ನಿಮ್ಮಲ್ಲಿ ನಿಜವಾಗಿ ಹಿಂದುತ್ವ , ಆರ್ಎಸ್ಎಸ್ ಇದ್ದರೆ ಕ್ಷೇತ್ರ ತ್ಯಾಗ ಮಾಡಿ. ಕ್ಷೇತ್ರ ನನಗೆ ಬಿಟ್ಟು ಕೊಡಿ. ನಾನು ಹಿಂದುತ್ವ ಏನೆಂದು ತೋರಿಸುತ್ತೇನೆ. ಐದು ವರ್ಷದ ನಂತರ ಮತ್ತೆ ನಿಮ್ಮನ್ನು ನಿಲ್ಲಿಸುತ್ತೇನೆ. ಯಾವ ದಾರಿಯಲ್ಲಿ ನಡೆಯಬೇಕೆಂದು ನಾನು ತೋರಿಸಿಕೊಡುತ್ತೇನೆ ಎಂದು ಹೇಳಿದರು.
ಈಗ ನಡೆದದ್ದು ಮತ್ತು ಗಳಿಸಿದ್ದು ಸಾಕು. ತಾತ ಮುತ್ತಾತನಿಂದ ಮರಿ ಮೊಮ್ಮಗನ ತನಕ ಗಳಿಸಿದ್ದು ಸಾಕು. ತಲವಾರು ಹಿಡಿದುಕೊಂಡು ಬಂದವರ ಮುಂದೆ ಹೋರಾಟ ಮಾಡಿದವನು ನಾನು. ಭಯಾನಕವಾದ ತುರ್ತುಪರಿಸ್ಥಿತಿಯಲ್ಲಿ ಹೋರಾಟ ಮಾಡಿದ ಗಂಡುಗಲಿ ನಾನು. ಫೋನ್ ಮಾಡಿಸಿ ನನಗೆ ಭಯಪಡಿಸುವ ಚಿಲ್ಲರೆ ಕೆಲಸ ಮಾಡಬೇಡಿ. ಹಿಂದುತ್ವದ ವೇದಿಕೆಯಲ್ಲಿ ಇಬ್ಬರು ನಿಂತು ಚರ್ಚೆ ಮಾಡೋಣ, ಚರ್ಚೆಗೆ ಬರುವ ತಾಕತ್ತು ಇದೆಯಾ ಎಂದು ಸುನಿಲ್ ಕುಮಾರ್ಗೆ ಸವಾಲು ಹಾಕಿದರು.
ಕಾರ್ಯಕರ್ತರನ್ನು ಹೆದರಿಸುತ್ತಾರೆ. ದುಡ್ಡು ಅಹಂಕಾರ ಸೊಕ್ಕು ದರ್ಪ ಬಿಟ್ಟುಬಿಡಿ. ಹತ್ತು ಪಟ್ಟು ಜನ ನನ್ನ ಜೊತೆ ಬರುತ್ತಾರೆ ಎಂದರು. ಈ ಮೂಲಕ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರವನ್ನು ನನಗೆ ಬಿಟ್ಟುಕೊಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಮುತಾಲಿಕ್, ಸುನಿಲ್ ಕುಮಾರ್ಗೆ ತಾಕೀತು ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:24 pm, Tue, 13 December 22