ಕರ್ನಾಟಕದಲ್ಲೂ ಗುಜರಾತ್ ಮಾದರಿ ಎಲೆಕ್ಷನ್: ಏನಿದು ಗುಜರಾತ್ ಮಾಡೆಲ್? ಹೇಗಿರುತ್ತೆ ಕಾರ್ಯ ತಂತ್ರ? ಇಲ್ಲಿದೆ ಮಾಹಿತಿ

ಕರ್ನಾಟಕ ಬಿಜೆಪಿ ನಾಯಕರಿಂದ ಹಿಡಿದು ಕಾರ್ಯಕರ್ತರ ಬಾಯಲ್ಲೂ ಗುಜರಾತ್ ಮಾದರಿ..ಗುಜರಾತ್ ಮಾದರಿ ಮಾತುಗಳು ಕೇಳಿಬರುತ್ತಿದೆ. ಹಾಗಿದ್ರೆ ಏನದು ಗುಜರಾತ್ ಮಾಡಲ್? ಬಿಜೆಪಿ ಹೆಣೆದಿರೋ ರಣತಂತ್ರವಾದ್ರೂ ಏನು ಎನ್ನುವ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲೂ ಗುಜರಾತ್ ಮಾದರಿ ಎಲೆಕ್ಷನ್: ಏನಿದು ಗುಜರಾತ್ ಮಾಡೆಲ್? ಹೇಗಿರುತ್ತೆ ಕಾರ್ಯ ತಂತ್ರ?  ಇಲ್ಲಿದೆ ಮಾಹಿತಿ
Bommai And Modi
Follow us
| Updated By: ರಮೇಶ್ ಬಿ. ಜವಳಗೇರಾ

Updated on: Dec 11, 2022 | 5:36 PM

ಬೆಂಗಳೂರು: ಮೋದಿ ಮೋಡಿಯಲ್ಲೇ ಗುಜರಾತ್​ನಲ್ಲಿ (Gujarat Election 2022) ಐತಿಹಾಸಿಕ ಗೆಲುವು ದಾಖಲಿಸಿರುವ ಬಿಜೆಪಿ ಈಗ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು(Karnataka Assembly Election 2023)  ಟಾರ್ಗೆಟ್ ಮಾಡಿದೆ. ಗೆಲುವಿನ ರಣಕಹಳೆ ಮೊಳಗಿಸಲು ರಾಜ್ಯ ಕೇಸರಿ ಪಡೆ ಗುಜರಾತ್ ಮಾಡೆಲ್ ಅನ್ನು ಕರ್ನಾಟಕದಲ್ಲೂ (Karnataka)​ ಕೂಡಾ ಅಪ್ಲೈ ಮಾಡುವುದಕ್ಕೆ ತಂತ್ರ ರೂಪಿಸಿದ್ದು, ಇದೀಗ ಬಿಜೆಪಿ ನಾಯಕರಿಂದ ಹಿಡಿದು ಕಾರ್ಯಕರ್ತರ ಬಾಯಲ್ಲೂ ಗುಜರಾತ್ ಮಾದರಿ..ಗುಜರಾತ್ ಮಾದರಿ (Gujarat model) ಮಾತುಗಳು ಕೇಳಿಬರುತ್ತಿದೆ. ಹಾಗಿದ್ರೆ ಏನದು ಗುಜರಾತ್ ಮಾಡಲ್? ಬಿಜೆಪಿ ಹೆಣೆದಿರೋ ರಣತಂತ್ರವಾದ್ರೂ ಏನು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಪ್ರಧಾನಿ ಮೋದಿ ಮೋಡಿಗೆ ಗುಜರಾತ್ ಕೇಸರಿ ವಶವಾಗಿದೆ. ಮೋದಿ ಅಬ್ಬರದ ಮುಂದೆ ಗುಜರಾತ್​ನಲ್ಲಿ ವಿಪಕ್ಷಗಳು ಧೂಳೀಪಟವಾಗಿದೆ. ಫಲಿತಾಂಶ ಬಂದು ರಾತ್ರಿ ಕಳೆದು ಬೆಳಗಾಗೋ ಹೊತ್ತಿಗೆ ಅಖಾಡ ಈಗ ಕಂಪ್ಲೀಟ್ ಕರ್ನಾಟಕದ ಕಡೆ ಶಿಫ್ಟ್ ಆಗಿದೆ. ಗುಜರಾತ್​ನಲ್ಲಿ ಯಾವ ರೀತಿ ವಿಪಕ್ಷಗಳು ಸೊಲ್ಲೇ ಎತ್ತದಂತೆ ಕೆಡವಿ ಬಿಸಾಕಿದ್ರೋ, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಗೆಲುವನ್ನ ಕಾಣುವುದಕ್ಕೆ ಬಿಜೆಪಿ ಭಾರಿ ಪ್ಲ್ಯಾನ್ ಮಾಡುತ್ತಿದೆ. ಗುಜರಾತ್ ಮಾಡೆಲ್ ಗೆಲುವನ್ನ ಕರ್ನಾಟಕದಲ್ಲೂ ಸಾಧಿಸುವುದಕ್ಕೆ ರಣತಂತ್ರಗಳನ್ನ ಹೆಣೆಯುತ್ತಿದೆ.

ಇದನ್ನೂ ಓದಿ: Karnataka Politics: ದಲಿತ ಬಲ ಪಂಗಡದ ಯುವ ನಾಯಕರ ಹುಡುಕಾಟದಲ್ಲಿ ರಾಜ್ಯ ಬಿಜೆಪಿ

ಗುಜರಾತ್ ಮಾದರಿಯಲ್ಲೇ ಸರ್ವೆ ಆಧರಿಸಿ ಟಿಕೆಟ್

ಗುಜರಾತ್​ನಲ್ಲೂ ಬಿಜೆಪಿ ಸರ್ವೆ ಮಾಡಿಯೇ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಿತ್ತು. ಅದೇ ರೀತಿ ಕರ್ನಾಟಕದಲ್ಲೂ ಸರ್ವೆ ಆಧರಿಸಿಯೇ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲು ತಯಾರಿ ನಡೆಸಲಾಗ್ತಿದೆಯಂತೆ. ಅಂದ್ರೆ ಹಳಬರು, ಹೊಸಬರು ಎನ್ನದೇ ಸರ್ವೆಯಲ್ಲಿ ಏನ್ ರಿಸಲ್ಟ್ ಬರುತ್ತೋ, ಸರ್ವೆಯಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಟಿಕೆಟ್ ಫಿಕ್ಸ್ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಗೆಲ್ಲುವ ಅಭ್ಯರ್ಥಿಗಳಿಗಾಗಿ ಬಿಜೆಪಿ ಸರ್ವೆ ನಡೆಸಲು ಮುಂದಾಗಿದ್ದು, ಇದಕ್ಕಾಗಿಯೇ ಹೈಕಮಾಂಡ್​ನ ಎರಡು ತಂಡಗಳು ಸರ್ವೆ ಮಾಡಲಿವೆ. ಸರ್ವೆ ನಂತರ ಆ ತಂಡಗಳು ನೇರವಾಗಿ ವರಿಷ್ಠರಿಗೆ ಮಾಹಿತಿ ನೀಡಲಿದ್ದು, ರಾಜ್ಯದ ಸಂಪೂರ್ಣ ವರದಿಯನ್ನ ಪಡೆಯಲಿರೋ ವರಿಷ್ಠರು ಮುಂದಿನ ನಿರ್ಧಾರ ಮಾಡಲಿದ್ದಾರೆ.

ಗುಜರಾತ್​ನಲ್ಲಿ ಹಲವು ಹಾಲಿ ಶಾಸಕರಿಗೆ ಟಿಕೆಟ್ ಕಟ್

ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ವರಿಷ್ಠರು ರವಾನಿಸಿದ್ದ ಸರ್ವೇ ತಂಡಗಳು, ಹಾಲಿ ಶಾಸಕರ ಪೈಕಿ 40ರಷ್ಟು ಮಂದಿ ಗೆಲ್ಲುವುದಿಲ್ಲ ಎಂದು ವರದಿ ನೀಡಿದ್ದವು. ಈ ವರದಿ ಆಧಾರದ ಮೇಲೆ 40 ಮಂದಿ ಶಾಸಕರಿಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಹೀಗೆ ಟಿಕೆಟ್ ಕೈತಪ್ಪಿದವರ ಪೈಕಿ ಏಳು ಮಂದಿ ಸ್ವತಃ ಅಮಿತ್ ಶಾ ಅವರ ಪರಮಾಪ್ತರೇ ಆಗಿದ್ದರು. ಆದರೆ ಗೆಲುವಿನ ಸಾಧ್ಯತೆ ಇಲ್ಲ ಎಂಬ ಮನವರಿಕೆ ಬಳಿಕ ವರಿಷ್ಠರು ಆ ನಲವತ್ತು ಮಂದಿ ಹಾಲಿ ಶಾಸಕರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನಿರಾಕರಿಸಿದ್ದರು.

ಇದನ್ನೂ ಓದಿ: ಮುಂದಿನ ಚುನಾವಣೆಗೆ ಕಾರ್ಯತಂತ್ರ: ದಿಲ್ಲಿಗೆ ಬರುವಂತೆ ಕರ್ನಾಟಕ ಕಾಂಗ್ರೆಸ್ ನಾಯರಿಗೆ ಹೈಕಮಾಂಡ್ ದಿಢೀರ್ ಬುಲಾವ್

ಬಿಜೆಪಿ ಭದ್ರಕೋಟೆಯಲ್ಲಿ ಹೊಸ ಮುಖಗಳಿಗೆ ಮಣೆ

ಗುಜರಾತ್​ನಲ್ಲಿ ಕಳೆದ ಬಾರಿ ಗೆದ್ದ ಕ್ಷೇತ್ರಗಳಲ್ಲಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಹೀಗಾಗಿ ಇದೇ ತಂತ್ರವನ್ನೂ ಕರ್ನಾಟಕದಲ್ಲಿ ಅನುಸರಿಸುವುದಕ್ಕೆ ಬಿಜೆಪಿ ಮುಂದಾಗಿದೆ. ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಲು ಪ್ಲ್ಯಾನ್ ರೂಪಿಸಲಾಗಿದ್ದು, ಬಿಜೆಪಿ ಭದ್ರ ಕೋಟೆಯಂತಿರೋ ಕ್ಷೇತ್ರಗಳಲ್ಲಿ ಈ ಪ್ಲ್ಯಾನ್ ಮಾಡಿದ್ದಾರಂತೆ. ಹಾಗೇ ವಿರೋಧಿ ಅಲೆ ಇರುವ ಕಡೆ ಮಾಹಿತಿ ಪಡೆದು ಟಿಕೆಟ್ ಹಂಚಿಕೆ ಮಾಡಲಾಗುತ್ತಂತೆ. ಒಂದು ವೇಳೆ ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಇದ್ರೆ ಅಂಥವರಿಗೆ ಕಷ್ಟವಾಗಲಿದ್ದು, ಕಾರ್ಯಕರ್ತರ ಮಧ್ಯೆ ಹೊಂದಾಣಿಕೆ ಇಲ್ಲದೇ ಇದ್ರೆ ಟಿಕೆಟ್ ಮಿಸ್ ಆಗುತ್ತೆ ಎನ್ನಲಾಗಿದೆ. ಆ ಮೂಲಕ ಆಡಳಿತ ವಿರೋಧಿ ಅಲೆಯನ್ನ ತಳಮಟ್ಟದಲ್ಲೇ ನಿಯಂತ್ರಣ ಮಾಡುವುದಕ್ಕೆ ಮುಂದಾಗಿದ್ದು, ಈಗಾಗಲೇ ಬಿಜೆಪಿ ಪಡೆಯಲ್ಲಿ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿಯೂ ಸಿಕ್ಕಿದೆ.

ರಾಜ್ಯದಲ್ಲೂ ಗುಜರಾತ್ ಮಾದರಿಯಂತೆಯೇ ಚುನಾವಣೆ ನಡೆಸಬೇಕೆಂಬ ಕೂಗು ಎದ್ದಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡದೆ, ಪಕ್ಷದ ಬಾವುಟ ಕಟ್ಟುವವರಿಗೆ ಚುನಾವಣೆ ಯಲ್ಲಿ ಸ್ರ್ಪಧಿಸಲು ಅವಕಾಶ ಕೊಡಬೇಕೆಂಬ ಬೇಡಿಕೆ ಕೇಳಿಬರುತ್ತಿರುವುದರಿಂದ ಎರಡು ಡಜನ್‍ಗೂ ಅಧಿಕ ಶಾಸಕರು ಮತ್ತು ಸಚಿವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.

ಗುಜರಾತ್ ‘ಪೇಜ್’ ಅಸ್ತ್ರ ಕರ್ನಾಟದಲ್ಲೂ ಅಪ್ಲೈ..?

ಗುಜರಾತ್​ನಂತೆ ಕರ್ನಾಟಕದಲ್ಲೂ ಗೆಲ್ಲುವುದಕ್ಕೆ ಬಿಜೆಪಿ, ಸಂಘಟನೆಯ ಹೊಸ ಸೂತ್ರ ಹೆಣೆದಿದೆ. ಮೋದಿ ಮತ್ತು ಅಮಿತ್​ ಶಾ ಪೇಜ್​ ಫಾರ್ಮುಲಾವನ್ನೂ ಇಲ್ಲಿ ಅಳವಡಿಸಲು ಪ್ಲ್ಯಾನ್​ ಮಾಡಿದೆ. ಪೇಜ್ ಸಮಿತಿ ಅಸ್ತ್ರ ಪ್ರಯೋಗಕ್ಕೆ ತಯಾರಿ ಮಾಡಿಕೊಂಡಿರುವ ರಾಜ್ಯ ಬಿಜೆಪಿ, ಗುಜರಾತ್​ನಂತೆ ಇಲ್ಲೂ ಪೇಜ್​ಗೆ ಓರ್ವ ಮುಖಂಡನ ನೇಮಕಕ್ಕೆ ನಿರ್ಧಾರ ಮಾಡಿದೆ. ಈ ಪೇಜ್ ಪ್ರಮುಖ್​ರ ಜೊತೆಗೆ 6 ಮಂದಿಯ ಸಮಿತಿ ಇರಲಿದೆ. ಒಂದು ಪೇಜ್​ನಲ್ಲಿ 30 ಮತಗಳ ಲಿಸ್ಟ್ ಇರುತ್ತವೆ. ಪೇಜ್​ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೆ, ಐದು ಮತಗಳನ್ನ ಹಾಕಿಸುವ ಟಾರ್ಗೆಟ್​ ನೀಡಲಾಗುತ್ತೆ. ಪ್ರಮುಖವಾಗಿ ಈ ಪೇಜ್​ನಲ್ಲಿ ಎಲ್ಲಾ ಶಾಸಕರು, ಎಂಪಿಗಳು, ಕಾರ್ಯರ್ತರು ಇರಲಿದ್ದಾರೆ. ಎಲ್ಲರಿಗೂ ಕೂಡ ಮತಗಳನ್ನ ಹಾಕಿಸುವ ಜವಾಬ್ದಾರಿ ಇರುತ್ತೆ..

ಜಾತಿ ಸಮೀಕರಣದ ಅಸ್ತ್ರ ಪ್ರಯೋಗ..!

ಬಿಜೆಪಿ ಪಡೆ ರಾಜ್ಯದಲ್ಲಿ ಜಾತಿ ಸಮೀಕರಣ ಅಸ್ತ್ರ ಪ್ರಯೋಗಿಸಲು ಸಿದ್ಧವಾಗಿದ್ದು, ಆ ಮೂಲಕ ಕಾಂಗ್ರೆಸ್​ ಪಾಲಿನ ಅಹಿಂದ ಮತಗಳಿಗೆ ಕೇಸರಿ ಗಾಳ ಹಾಕಲು ಮುಂದಾಗಿದೆ. ಅಂದ್ರೆ ವೀರಶೈವ ಲಿಂಗಾಯತ, ಒಕ್ಕಲಿಗ, ಹಿಂದುಳಿದ ಸಮುದಾಯ, SC & ST ಸಮುದಾಯಗಳನ್ನ ಮತ್ತಷ್ಟು ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದಂತೆ ಇದರ ಭಾಗವಾಗೇ ಸದಾಶಿವ ಆಯೋಗದಂತೆ SC ಒಳ ಮೀಸಲಾತಿ ಜಾರಿಗೂ ಚಿಂತನೆ ಇದ್ದು, ಸಣ್ಣ ಸಣ್ಣ ಸಮುದಾಯಗಳಿಗೆ ಅನುದಾನ ನೀಡಲು ಮುಂದಾಗಿದೆಯಂತೆ.

ಅಂದ್ರೆ ವಿಶ್ವಕರ್ಮ, ಅಂಬಿಗ, ಈಡಿಗ, ಬಿಲ್ಲವ, ನೇಕಾರ ಸಮುದಾಯದ ಮಠಗಳಿಗೆ ಅನುದಾನ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇನೆ ಸಣ್ಣ ಸಣ್ಣ ಅಭಿವೃದ್ಧಿ ಮಂಡಳಿಗೆ ಹಣ ಮತ್ತು ಪ್ರೋತ್ಸಾಹ ನೀಡೋ ಮೂಲಕ ಜಾತಿ ಸಮೀಕರಣ ಮಾಡುವುದಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.

ಹೀಗೆ ಬಿಜೆಪಿ ತಂತ್ರಗಳ ಮೇಲೆ ತಂತ್ರ.. ಅಸ್ತ್ರಗಳ ಮೇಲೆ ಅಸ್ತ್ರವನ್ನ ಸಿದ್ಧಪಡಿಸುತ್ತಿದೆ. ಆದ್ರೆ, ಗುಜರಾತ್​ನಲ್ಲಿ ವರ್ಕೌಟ್ ಆದ ಪ್ಲ್ಯಾನ್​ಗಳು ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಫಲ ಕೊಡುತ್ತೆ ಎನ್ನುವುದಕ್ಕೆ ಚುನಾವಣೆ ಫಲಿತಾಂಶ ಬಳಿಕವೇ ಉತ್ತರ ಸಿಗಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ