ಚುನಾವಣೆ ಅಖಾಡಕ್ಕಿಳಿದ PSI ಅಕ್ರಮ ಪ್ರಮುಖ ಆರೋಪಿ: ಪೊಲೀಸ್ ಭದ್ರತೆಯಲ್ಲಿಯೇ ಆಗಮಿಸಿ ನಾಮಪತ್ರ ಸಲ್ಲಿಸಿದ ರುದ್ರಗೌಡ ಪಾಟೀಲ್
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣದಲ್ಲಿ ಪ್ರಮುಖ ಆರೋಪಿ ಆಗಿರುವ ರುದ್ರಗೌಡ ಪಾಟೀಲ್ ಚುನಾವಣೆ ಅಖಾಡಕ್ಕಿ ಇಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣದಲ್ಲಿ ಪ್ರಮುಖ ಆರೋಪಿ ಆಗಿರುವ ರುದ್ರಗೌಡ ಪಾಟೀಲ್ (Rudragowda Patil) ಚುನಾವಣೆ ಅಖಾಡಕ್ಕಿ ಇಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯ ಅಫಜಲಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಹಿನ್ನೆಲೆ ರುದ್ರಗೌಡ ಪಾಟೀಲ್ ಜೈಲಿನಲ್ಲಿದ್ದು, ಇಂದು ನಾಮಪತ್ರ ಸಲ್ಲಿಸಲು ನ್ಯಾಯಾಲಯದ ಅನುಮತಿ ಪಡೆದಿದ್ದರು. ಪೊಲೀಸ್ ಭದ್ರತೆಯಲ್ಲಿಯೇ ಆಗಮಿಸಿ ಅಫಜಲಪುರ ತಹಶಿಲ್ದಾರ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನರು ಹಾಜರಾಗಿದ್ದು, ಆರ್ಡಿ ಪಾಟೀಲ್ ಇದ್ದ ಪೊಲೀಸ್ ವಾಹನಕ್ಕೆ ಬೆಂಬಲಿಗರು ಹೂಮಳೆ ಸುರಿಸಿದ್ದಾರೆ.
ಟಿಕೆಟ್ ನೀಡುವಂತೆ ಕಾಂಗ್ರೆಸ್ಗೆ ಮನವಿ
ರುದ್ರಗೌಡ ಪಾಟೀಲ್ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈ ಹಿಂದೆ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆಯೇ ಟಿಕೆಟ್ ನೀಡುವಂತೆ ಕಾಂಗ್ರೆಸ್ಗೆ ಮನವಿ ಕೂಡ ಮಾಡಿದ್ದರು. ಆದರೆ ರುದ್ರಗೌಡ ಪಾಟೀಲ್ಗೆ ಕೆಆರ್ಪಿಪಿ ಪಕ್ಷದಿಂದ ಜಿಲ್ಲೆಯ ಅಫಜಲಪುರ ಕ್ಷೇತ್ರದ ಟಿಕೆಟ್ ನೀಡಲು ಮುಂದಾಗಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ನೇಮಕಾತಿ ಅಕ್ರಮದಲ್ಲಿ ಜೈಲಿನಲ್ಲಿರುವ ರುದ್ರಗೌಡ ಪಾಟೀಲ್, ಜಾಮೀನು ಸಿಗದೆ ಇದ್ದರೇ ಜೈಲಿನಲ್ಲಿದ್ದುಕೊಂಡೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಏಪ್ರಿಲ್ 10 ರಂದು ರುದ್ರಗೌಡ ಪಾಟೀಲ್ ಸಹೋದರ ಮತ್ತು ಬೆಂಬಲಿಗರು ಕೆಆರ್ಪಿಪಿ ಪಕ್ಷ ಸೇರಲಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಕೆಲ ತಿಂಗಳ ಹಿಂದೆ ರುದ್ರಗೌಡ ಪಾಟೀಲ್ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.
ಯಾರು ಈ ರುದ್ರಗೌಡ ಪಾಟೀಲ್
ರುದ್ರಗೌಡ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷನಾಗಿ ಕೆಲಸ ಮಾಡಿದ್ದರು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳುವ ಮೂಲಕ ಆಗಾಗ ಸುದ್ದಿಯಲ್ಲಿದ್ದರು. ಅಲ್ಲದೆ ಕ್ಷೇತ್ರದ ತುಂಬೆಲ್ಲಾ ಓಡಾಡಿಕೊಂಡು ತಮ್ಮ ಸಮುದಾಯ ಸೇರಿದಂತೆ ಕ್ಷೇತ್ರದಲ್ಲಿ ಯುವ ಪಡೆ ಕಟ್ಟಿಕೊಂಡು ಚುನಾವಣೆಗೆ ಅಖಾಡ ಸಿದ್ದಮಾಡಿಕೊಂಡಿದ್ದರು. ಈ ಸಮಯದಲ್ಲಿಯೇ ಪಿಎಸ್ಐ ಕೇಸ್ ಉರುಳು ರುದ್ರಗೌಡ್ ಪಾಟೀಲ್ಗೆ ಸುತ್ತುಕೊಂಡಿತ್ತು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹೆಸರು ಕೇಳಿಬಂದಿದ್ದದರಿಂದ, ಸಿಐಡಿ ಅಧಿಕಾರಿಗಳು ರುದ್ರಗೌಡ್ನನ್ನು ಬಂಧಿಸಿದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:46 pm, Mon, 17 April 23