ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯದಡಿ ಸಮುದಾಯಗಳ ಮೀಸಲಾತಿ ಹೆಚ್ಚಳ: ಪ್ರಲ್ಹಾದ್ ಜೋಶಿ

ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರಕ್ಕೆ ಸಮಾಜದ ಪ್ರತಿ ವ್ಯಕ್ತಿಯ ಕಲ್ಯಾಣವೂ ಮುಖ್ಯ. ಶ್ರೇಷ್ಠ ಭಾರತದ ನಿರ್ಮಾಣ ಸರ್ವರಿಗೂ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ದೊರೆತಾಗ ಮಾತ್ರ ಸಾಧ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯದಡಿ ಸಮುದಾಯಗಳ ಮೀಸಲಾತಿ ಹೆಚ್ಚಳ: ಪ್ರಲ್ಹಾದ್ ಜೋಶಿ
ಪ್ರಹ್ಲಾದ್ ಜೋಶಿ

Updated on: Apr 06, 2023 | 9:55 PM

ಹುಬ್ಬಳ್ಳಿ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ರಾಜ್ಯ ಸರ್ಕಾರ ಸಮುದಾಯಗಳ ಮೀಸಲಾತಿ ಹೆಚ್ಚಿಸುವ ಮೂಲಕ ಎಲ್ಲರ ವಿಶ್ವಾಸ ಗಳಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ (SC ST Reservation) ಹಾಗೂ ಒಳ ಮೀಸಲಾತಿ (Internal Reservation) ಹೆಚ್ಚಿಸಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸಲು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ ಅವರು, ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರ್ಕಾರಕ್ಕೆ ಸಮಾಜದ ಪ್ರತಿ ವ್ಯಕ್ತಿಯ ಕಲ್ಯಾಣವೂ ಮುಖ್ಯ. ಶ್ರೇಷ್ಠ ಭಾರತದ ನಿರ್ಮಾಣ ಸರ್ವರಿಗೂ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ದೊರೆತಾಗ ಮಾತ್ರ ಸಾಧ್ಯ. ಅದೇ ಉದ್ದೇಶದಿಂದಲೇ ಈ ಕ್ರಾಂತಿಕಾರಿ ನಿರ್ಣಾಯವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದ್ದು, ರಾಜ್ಯದ ಪ್ರತಿ ವ್ಯಕ್ತಿಯ ಶ್ರೇಯಸ್ಸು ಬಿಜೆಪಿಯ ಗುರಿಯಾಗಿದೆ ಎಂದರು.

ಕಾಂಗ್ರೆಸ್ ಮಾತಿಗೂ ಕೃತಿಗೂ ವ್ಯತ್ಯಾಸವಿದೆ. ಕಾಂಗ್ರೆಸ್ ದ್ವಂದ್ವ ‌ನೀತಿ ಅನುಸರಿಸುತ್ತಿದೆ. ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಸಿದ್ಧರಾಮಯ್ಯ ಅವರು ಜಾತಿ ವಿಷ ಬೀಜ ಬಿತ್ತಲು ಮುಂದಾದರೆ ಹೊರತು, ಮೀಸಲಾತಿ ಹೆಚ್ಚಿಸುವ ಬಗ್ಗೆ ರಾಜಕೀಯ ಇಚ್ಛಾಶಕ್ತಿ ತೀರಿಸಲಿಲ್ಲ ಎಂದು ಹೇಳುವ ಮೂಲಕ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Elections: ಮೀಸಲಾತಿ ಮುಟ್ಟಿದರೆ ಕ್ರಾಂತಿ ಆಗತ್ತದೆ: ಕಾಂಗ್ರೆಸ್​ಗೆ ಎಚ್ಚರಿಕೆ ನೀಡಿದ ಸಿಎಂ ಬೊಮ್ಮಾಯಿ

ರಾಜ್ಯ ಬಿಜೆಪಿ ಸರ್ಕಾರ ಯಾರಿಗೂ‌, ಯಾವ ಸಮುದಾಯದಕ್ಕೂ ಅನ್ಯಾಯ ಮಾಡಿಲ್ಲ. ಎಲ್ಲ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಒಳ ಮೀಸಲಾತಿ ಹೆಚ್ಚಿಸಲಾಗಿದೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಬಿಜೆಪಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೀತಿಯನ್ನ ತೋರ್ಪಡಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Thu, 6 April 23