ಇಂದು ದಿಲ್ಲಿಗೆ ಬೊಮ್ಮಾಯಿ, ಯಡಿಯೂರಪ್ಪ: ABC ಫಾರ್ಮೂಲದೊಂದಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು
ಒಂದೊಂದು ಕ್ಷೇತ್ರ ತಲಾ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, A,B,C ಎಂದು ಮೂರು ಹೆಸರು ಪಟ್ಟಿಯಲ್ಲಿದೆ. ಇಂದು ಆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಜೆಪಿ ವರಿಷ್ಠರ ಕೈ ಸೇರಲಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023)ಕಾಂಗ್ರೆಸ್(Congress) ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಹಾಗೂ ಎರಡನೇ ಪಟ್ಟಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು 58 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡು ತಂತ್ರಗಾರಿಕೆ ಕಾಯ್ದಿರಿಸಿದೆ. ಆದ್ರೆ, ಇತ್ತ ಸ್ಥಳೀಯ ಮುಖಂಡರ ಅಭಿಪ್ರಾಯ ಆಲಿಸಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿರುವ ಬಿಜೆಪಿ(BJP) ಭರ್ಜರಿ ಕಸರತ್ತು ನಡೆಸಿದೆ. ಈಗಾಗಲೇ ಜಿಲ್ಲಾವಾರು ಕೋರ್‌ಕಮಿಟಿ ಸದಸ್ಯರ ಅಭಿಪ್ರಾಯ ಆಧರಿಸಿ ಒಂದೊಂದು ಕ್ಷೇತ್ರ ತಲಾ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, A,B,C ಎಂದು ಮೂರು ಹೆಸರು ಪಟ್ಟಿಯಲ್ಲಿದೆ. ಇಂದು ಆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಜೆಪಿ ವರಿಷ್ಠರ ಕೈ ಸೇರಲಿದೆ. ಹೌದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 224 ಕ್ಷೇತ್ರಗಳ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಜತೆ ಇಂದು(ಏಪ್ರಿಲ್ 07) ಮಧ್ಯಾಹ್ನ ದೆಹಲಿಗೆ ದೌಡಾಯಿಸಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ದೆಹಲಿಗೆ ಭೇಟಿ ನೀಡಲಿದ್ದು, ಎರಡು ದಿನ ಅಲ್ಲೇ ಠಿಕಾಣಿ ಹೂಡಲಿದ್ದಾರೆ. ನಾಳೆ ಮತ್ತು ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ವರಿಷ್ಠರು ಸಮಾಲೋಚನೆ ನಡೆಸಲಿದ್ದಾರೆ. ಎಲ್ಲ ವರದಿ ಆಧರಿಸಿ, ಅಳೆದೂ ತೂಗಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದ್ದಾರೆ. ಇನ್ನು ಬಿಜೆಪಿ ಎರಡು ಹಂತದಲ್ಲಿ ಪಟ್ಟಿ ಪ್ರಕಟಿಸಲು ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ.
ಹಾಲಿ ಸಚಿವರ ಪೈಕಿ ಎಲ್ಲರಿಗೂ ಟಿಕೆಟ್ ಖಚಿತ..?
ಹಾಲಿ ಸಚಿವರ ಪೈಕಿ ಎಲ್ಲರಿಗೂ ಟಿಕೆಟ್ ಖಚಿತವಾಗಿದ್ದು, ಹೊಸಕೋಟೆ ಕ್ಷೇತ್ರಕ್ಕೆ ಸಚಿವ ಎಂಟಿಬಿ ನಾಗರಾಜ್ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ. ಸಚಿವ ಸೋಮಣ್ಣ ಕ್ಷೇತ್ರ ಗೋವಿಂದರಾಜನಗರವೋ, ಚಾಮರಾಜನಗರವೋ ಎನ್ನುವುದು ತೂಗುಯ್ಯಾಲೆಯಲ್ಲಿದೆ. ಹೀಗೆ ಕೆಲ ಗೊಂದಲ ಇರುವುದರಿಂದ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ಸಜ್ಜಾಗಿದೆ.
ಏ.10ಕ್ಕೆ ಮೊದಲ ಪಟ್ಟಿ, ಏ.13ಕ್ಕೆ 2ನೇ ಪಟ್ಟಿ?
ಪ್ರಧಾನಿ ಮೋದಿ ಏಪ್ರಿಲ್ 9ರಂದು ರಾಜ್ಯ ಭೇಟಿ ಕೈಗೊಂಡ ಬಳಿಕ ಏಪ್ರಿಲ್ 10ರಂದು ಬಿಜೆಪಿಯ ಮೊದಲ ಪಟ್ಟಿ ಮತ್ತು ಏಪ್ರಿಲ್ 13ರಂದು ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. 224 ಕ್ಷೇತ್ರಕ್ಕೂ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ರೆಡಿ ಮಾಡಿರುವ ಬಿಜೆಪಿ, ಪ್ರತಿ ಕ್ಷೇತ್ರಕ್ಕೂ ಮೂವರು ಸಂಭಾವ್ಯರ ಹೆಸರನ್ನ ಶಿಫಾರಸು ಮಾಡಿದೆ. ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರ, ಬಿ.ವೈ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎನ್ನಲಾದ ಶಿಕಾರಿಪುರ ಕ್ಷೇತ್ರವೂ ಸೇರಿದಂತೆ, 224 ಕ್ಷೇತ್ರಕ್ಕೂ ಕಡ್ಡಾಯವಾಗಿ ಮೂವರ ಹೆಸರು ಶಿಫಾರಸು ಮಾಡಲಾಗಿದೆ.
ಪ್ರತಿ ಕ್ಷೇತ್ರಕ್ಕೂ A,B,C ಎಂದು ಮೂರು ಹೆಸರು ಶಿಫಾರಸು ಮಾಡಿದೆ. ಪ್ರಬಲ ನಾಯಕ ಹಾಗೂ ಹಾಲಿ ಶಾಸಕರ ಹೆಸರು A ಕೆಟಗೆರೆಯಲ್ಲಿದ್ದರೆ, B ಕೆಟಗೆರೆಯಲ್ಲಿ ಎರಡನೇ ಹಂತದ ನಾಯಕರ ಹೆಸರು ಇದೆ. ಇನ್ನು ಇವರಿಬ್ಬರನ್ನು ಬಿಟ್ಟರೆ ಕ್ಷೇತ್ರದ ಸಮರ್ಥ ನಾಯಕರು ಎನ್ನಿಸಿಕೊಂಡಿರುವವರ ಹೆಸರುಗಳು ಸಿ ಕೆಟಗೆರೆಯಲ್ಲಿವೆ. ಹೀಗಿ ಮೂರು ಫಾರ್ಮೂಲ ಮಾಡಲಾಗಿದ್ದು, A ಹೆಸರುಗಳಿಗೆ ಮೊದಲ ಪ್ರಾಶಸ್ತ್ಯ. ಒಂದು ವೇಳೆ ಹೈಕಮಾಂಡ್ ಅದನ್ನು ತಿರಸ್ಕರಿಸಿದರೆ B ಕೆಟಗೆರೆ ನಾಯಕರನ್ನು ಆಯ್ಕೆ ಮಾಡಬಹುದು. ಮೂಲಗಳ ಪ್ರಕಾರ ಬಹುತೇಕ A ಕೆಟಗೆರೆಯಲ್ಲಿರುವ ಅಭ್ಯರ್ಥಿಗೆ ಟಿಕೆಟ್ ಖಚಿತ ಎನ್ನಲಾಗಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭಾ ಚುನಾಚವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ