ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಮತ್ತೊಂದು ಸಂಕಷ್ಟ
ಅಕ್ರಮ ಅಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಹಿನ್ನಡೆಯಾಗಿತ್ತು. ಇದಿಗ ಚುನಾವಣೆ ಹೊಸ್ತಿಲಲ್ಲಿ ರೇಣುಕಾಚಾರ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬೆಂಗಳೂರು/ದಾವಣಗೆರೆ: ಅಕ್ರಮ ಅಸ್ತಿ ಗಳಿಕೆ ಆರೋಪ ಸಂಬಂಧ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಮತ್ತು ದಾವಣಗೆರೆಯ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಇದರ ಬೆನ್ನಲ್ಲೇ ಇದೀಗ ಚುನಾವಣೆ ಹೊಸ್ತಿಲಲ್ಲೇ ರೇಣುಕಾಚಾರ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು…ರೇಣುಕಾಚಾರ್ಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿದ್ದಕ್ಕೆ ಚುನಾವಣಾಧಿರಿ ಎಫ್ಐಆರ್ ದಾಖಲಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಗುರುರಾಜ್ ಕಲ್ಯಾಣ ಮಂಟಪದಲ್ಲಿ ರೇಣುಕಾಚಾರ್ಯ ಕ್ಷೇತ್ರದ ಕಾರ್ಯಕರ್ತರ ಜೊತೆ ನಡೆಸುತ್ತಿದ್ದ ಸಭೆ ವೇಳೆಯೇ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದ್ದರು. ರೇಣುಕಾಚಾರ್ಯ ಸ್ಟೇಜ್ ಮೇಲೆ ಮಾತನಾಡುತ್ತಿದ್ದ ವೇಳೆಯೇ ಅಧಿಕಾರಿಗಳು ಮೈಕ್ ಕಸಿದುಕೊಂಡು ಕಾರ್ಯಕ್ರಮ ನಿಲ್ಲಿಸಿದ್ದರು. ಈ ಸಂಬಂಧ ಇದೀಗ ರೇಣುಕಾಚಾರ್ಯ ವಿರುದ್ಧ ದೂರು ದಾಖಲಾಗಿದೆ.
ಇದನ್ನೂ ಓದಿ: ರೇಣುಕಾಚಾರ್ಯ ಸಭೆ ಮೇಲೆ ಚುನಾವಣಾಧಿಕಾರಿಗಳ ದಾಳಿ, ಜನರಿಗೆ ತಂದಿದ್ದ ಊಟ ವಾಪಸ್
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ಇದೇ ಏಪ್ರಿಲ್ 2ರಂದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಗುರುರಾಜ್ ಕಲ್ಯಾಣ ಮಂಟಪದಲ್ಲಿ ರೇಣುಕಾಚಾರ್ಯ ಅವರು ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಿದ್ದರು. ಮಾಹಿತಿ ತಿಳಿದ ಚುನಾವಣಾ ಅಧಿಕಾರಿಗಳು ರೇಣುಕಾಚಾರ್ಯ ಅವರ ಭಾಷಣದ ವೇಳೆ ದಾಳಿ ನಡೆಸಿ ಸಭೆ ನಿಲ್ಲಿಸುವಂತೆ ಸೂಚಿಸಿದ್ದರು. ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಅಧಿಕಾರಿಗಳು ರೇಣುಕಾಚಾರ್ಯ ಅವರು ಬಳಸುತ್ತಿದ್ದ ಮೈಕ್ ಕಸಿದುಕೊಂಡು ಸಭೆ ನಿಲ್ಲಿಸಿದ್ದರು.
ಕಲ್ಯಾಣಮಂಟಪದಲ್ಲಿ ಹೊನ್ನಾಳಿ ಕ್ಷೇತ್ರದ ಜನರ ಸಭೆ ಕರೆದ ಹಿನ್ನೆಲೆ ರೇಣುಕಾಚಾರ್ಯ ಅವರು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಆದರೆ ಇದಕ್ಕೂ ಮುನ್ನ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ, ಸಭೆಯಲ್ಲಿ ನೆರೆದಿದ್ದ ಜನರಿಗೆ ಊಟ ಮಾಡಲೂ ಅವಕಾಶ ನೀಡದೆ ತಂದಿದ್ದ ಕ್ಯಾಟರಿಂಗ್ ಊಟವನ್ನು ವಾಪಸ್ ಕಳುಹಿಸಿದ್ದರು.