ಆರ್ಎಸ್ಎಸ್ ಪ್ರಮುಖರ ಜೊತೆ ಬಿಜೆಪಿ ನಾಯಕರ ಸಭೆ; ಅಚ್ಚರಿ ಮೂಡಿಸಿದ ಸಚಿವ ವಿ.ಸೋಮಣ್ಣ ಉಪಸ್ಥಿತಿ
ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಸಚಿವ ವಿ. ಸೋಮಣ್ಣ ಗುರುವಾರ ಹೇಳಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಸಚಿವ ವಿ. ಸೋಮಣ್ಣ ಗುರುವಾರ ಹೇಳಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಿಂದಲೇ ಸ್ಪರ್ಧಿಸುವ ವಿಚಾರವಾಗಿ ಕೇಶವಶಿಲ್ಪದಲ್ಲಿ ಆರ್ಎಸ್ಎಸ್ ಪ್ರಮುಖರ ಜೊತೆ ಚರ್ಚೆ ನಡೆದಿದೆಯೇ ಎಂಬ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಆರ್ಎಸ್ಎಸ್ ಪ್ರಮುಖರ ಜತೆಗಿನ ಸಭೆಯಲ್ಲಿ ಕ್ಷೇತ್ರದ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕರೆದಿದ್ದರಿಂದ ಮಾತನಾಡಿಕೊಂಡು ಬರಲು ಹೋಗಿದ್ದೆ ಅಷ್ಟೇ ಎಂದು ಅವರು ‘ಟಿವಿ9’ಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕೇಶವಶಿಲ್ಪದಲ್ಲಿ ಆರ್ಎಸ್ಎಸ್ ಪ್ರಮುಖರ ಜೊತೆ ಬಿಜೆಪಿ ನಾಯಕರು ಸುಮಾರು 2 ಗಂಟೆ ಕಾಲ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಭಾಗವಹಿಸುವಂತೆ ಸೋಮಣ್ಣ ಅವರಿಗೂ ಬುಲಾವ್ ಬಂದಿತ್ತು. ಅದರಂತೆ ಅವರು ಭಾಗವಹಿಸಿದ್ದರು. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಆರ್ಎಸ್ಎಸ್ ಪ್ರಮುಖರಾದ ಮುಕುಂದ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಕೇಶವಶಿಲ್ಪದಲ್ಲಿ ಸಾಹಿತ್ಯ ಚರ್ಚೆ ಎಂದ ಕಟೀಲ್
ಕೇಶವಶಿಲ್ಪದಲ್ಲಿ ಆರ್ಎಸ್ಎಸ್ ಪ್ರಮುಖರೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಚರ್ಚೆ ಮಾಡಿದ್ದೇವೆ ಎಂದು ಸಭೆ ಬಳಿಕ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸಚಿವ ವಿ.ಸೋಮಣ್ಣ ಕ್ಷೇತ್ರದ ಬಗ್ಗೆ ನಾನು ನಿರ್ಧರಿಸಲು ಆಗಲ್ಲ ಎಂದು ಅವರು ಹೇಳಿದ್ದಾರೆ. ಬಿ.ಎಸ್.ಯಡಿಯೂರಪ್ಪ ಶುಕ್ರವಾರ ದೆಹಲಿಗೆ ತೆರಳುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾಳೆಯೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲ್ಲ. 224 ಕ್ಷೇತ್ರಗಳಿಗೆ ತಲಾ ಮೂವರ ಹೆಸರನ್ನು ಆಯ್ಕೆ ಮಾಡಿದ್ದೇವೆ. ಪಟ್ಟಿಯನ್ನು ಪಕ್ಷದ ಕೇಂದ್ರದ ಚುನಾವಣಾ ಸಮಿತಿಗೆ ಕಳುಹಿಸಿದ್ದೇವೆ. ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರು ಘೋಷಿಸಲಿದೆ ಎಂದು ಕಟೀಲ್ ‘ಟಿವಿ9’ಗೆ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:45 pm, Thu, 6 April 23