ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದರು: ಬಿಜೆಪಿ ಕಾರ್ಯಕರ್ತ ಆರೋಪ
ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಮೇಲೆ ಗಲಾಟೆ ಮಾಡಿದರು. ಏಕಾಏಕಿ ಸಿದ್ದರಾಮಯ್ಯಗೆ ಜೈ, ಸೋಮಣ್ಣಗೆ ಧಿಕ್ಕಾರ ಎಂದು ಕೂಗಿದರು. ಕಲ್ಲು ತೂರಾಟ ನಡೆಸಿ ಕಾರುಗಳನ್ನು ಜಖಂಗೊಳಿಸಿದರು ಎಂದು ಬಿಜೆಪಿ ಕಾರ್ಯಕರ್ತರಾದ ರವಿಶಂಕರ್ ಆರೋಪ ಮಾಡಿದ್ದಾರೆ.
ಮೈಸೂರು: ಸಿದ್ದರಾಮಯ್ಯ (Siddaramaiah) ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದರು. ಏಕಾಏಕಿ ಸಿದ್ದರಾಮಯ್ಯಗೆ ಜೈ, ಸೋಮಣ್ಣಗೆ ಧಿಕ್ಕಾರ ಎಂದು ಕೂಗಿದರು. ಕಲ್ಲು ತೂರಾಟ ನಡೆಸಿ ಕಾರುಗಳನ್ನು ಜಖಂಗೊಳಿಸಿದರು ಎಂದು ಬಿಜೆಪಿ ಕಾರ್ಯಕರ್ತರಾದ ರವಿಶಂಕರ್ ಆರೋಪ ಮಾಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಸಿದ್ದರಾಮನಹುಂಡಿಯಲ್ಲಿ ಪ್ರಚಾರ ವೇಳೆ ಸಿದ್ದರಾಮಯ್ಯ ಸಂಬಂಧಿಕರು ನಮ್ಮ ಜೊತೆ ಗಲಾಟೆ ಮಾಡಿದರು. ಬಿಜೆಪಿ ಪ್ರಚಾರ ವಾಹನದಲ್ಲಿ ವಿ.ಸೋಮಣ್ಣ, ಪ್ರತಾಪ್ ಸಿಂಹ ಇದ್ದರು. ಏಕಾಏಕಿ ಕಲ್ಲು ತೂರಾಟ ನಡೆಸಿದ್ದಲ್ಲದೇ ದೊಣ್ಣೆಯಿಂದ ಹಲ್ಲೆ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಎನ್ನುವವರ ಕಾಲು ಮತ್ತು ಕೈಗೆ ಪೆಟ್ಟಾಗಿದೆ ಎಂದು ಹೇಳಿದರು.
ಘಟನೆ ಸಂಬಂಧ ಮೂವರನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಸಿದ್ದರಾಮಯ್ಯ ಆಪ್ತರು ಪೊಲೀಸರಿಗೆ ಕರೆ ಮಾಡಿದ ನಂತರ ಬಿಡುಗಡೆ ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ. ನಾವು ಪ್ರಚಾರ ನಡೆಸಲು ಕಷ್ಟವಾಗಿದೆ, ಆದರೂ ಪ್ರಚಾರ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರಾದ ರವಿಶಂಕರ್, ಶಿವಪ್ರಕಾಶ್ ಹೇಳಿದರು.
ಇದನ್ನೂ ಓದಿ: ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಕಲ್ಲೆಸೆತ ಆರೋಪ: ಸ್ವಲ್ಪದರಲ್ಲೇ ಪಾರಾದ ವಿ ಸೋಮಣ್ಣ, ಪ್ರತಾಪ್ ಸಿಂಹ
ಘಟನೆ ಹಿನ್ನೆಲೆ
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದ್ದು, ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲೆಸೆದ ಆರೋಪ ಮಾಡಲಾಗಿದೆ. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಘಟನೆ ನಡೆದಿದೆ. ಅಭ್ಯರ್ಥಿ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪ್ರಚಾರ ರಥದಲ್ಲಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಗೇಶ್ ಕಾಲಿಗೆ ಪೆಟ್ಟಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ
ಯಾದಗಿರಿ: ಚುನಾವಣಾ ಪ್ರಚಾರದ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತನಿಂದ ಹಲ್ಲೆ ಮಾಡಿರುವಂತಹ ಘಟನೆ ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ ಹುಣಸಗಿ ತಾಲೂಕಿನ ತೊಳದಿನ್ನಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಪ್ರಚಾರ ಮಾಡಲು ಯಾಕೆ ಬಂದಿದ್ದೀಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸುರಪುರ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆರ್.ಎಂ.ನಾಯಕ ಎದರೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಜೊತೆ ಆರ್.ಎಂ.ನಾಯಕ ಪ್ರಚಾರಕ್ಕೆ ಹೋಗಿದ್ದು, ಅಭ್ಯರ್ಥಿ ಪ್ರಚಾರ ಭಾಷಣ ಮಾಡುವಾಗ ಘಟನೆ ನಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಕಿರಿಕ್
ಪೊಲೀಸ್ ಠಾಣೆಗೆ ಬಂದವರಿಗೆ ಲಾಠಿ ಎಟು
ದಾವಣಗೆರೆ: ಎಳೆ ಮಕ್ಕಳು ಮಹಿಳೆಯರು ಸೇರಿದಂತೆ ಕೈಗೆ ಸಿಕ್ಕವರ ಮೇಲೆ ಪೊಲೀಸರು ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆ ಮುಂದೆ ನಡೆದಿದೆ. ಜಗಳೂರಿನಲ್ಲಿ ದೊಡ್ಡ ಮಾರಮ್ಮನಜಾತ್ರೆ. ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳಿಂದ ವಾಹನಗಳಿಗೆ ಹಾನಿ ಮಾಡದ್ದಾರೆ. ಈ ವಿಚಾರಕ್ಕೆ ಹತ್ತಕ್ಕೂ ಹೆಚ್ಚು ಯುವಕರನ್ನ ಪೊಲೀಸರು ಕರೆ ತಂದಿದ್ದು, ಅನಗತ್ಯವಾಗಿ ತಮ್ಮ ಮಕ್ಕಳನ್ನ ಕರೆತರಲಾಗಿದೆ ಎಂದು ಪೊಲೀಸ್ ಠಾಣೆಗೆ ಕೇಳಲು ಸಂಬಂಧಿಕರು ಬಂದಿದ್ದಾರೆ.
ಹೀಗೆ ಕೇಳಲು ಹೋದವರ ಮೇಲೆ ಸಹ ಪೊಲೀಸರು ಹಲ್ಲೆ ಮಾಡಿದ್ದಾರೆ. ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಗಾಯಗಳಾಗಿದ್ದು, ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:26 pm, Thu, 27 April 23