ಲಿಂಗಸೂಗೂರು ಮೀಸಲು ಕ್ಷೇತ್ರಕ್ಕೆ ಭಾರೀ ಪೈಪೋಟಿ, ಹಾಲಿ ಶಾಸಕರಿದ್ದರೂ ಕಾಂಗ್ರಸ್ನಲ್ಲಿ ಟಿಕೆಟ್ ಫೈಟ್!
ಹಾಲಿ ಶಾಸಕರು ಇದ್ದರೂ ಕೂಡ ಲಿಂಗಸೂಗೂರು ವಿಧಾನಸಭಾ ಕ್ಷೇತ್ರ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಪೈಪೋಟಿ ಶುರುವಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ರಾಯಚೂರು: ಜಿಲ್ಲೆಯ ಲಿಂಗಸೂಗೂರು ವಿಧಾನಸಭಾ (Lingsugur Assembly constituency) ಕ್ಷೇತ್ರವೂ ಎಸ್ ಸಿ ಮೀಸಲು ಕ್ಷೇತ್ರ. ಇಲ್ಲಿ ಮೂರು ಪಕ್ಷದಲ್ಲಿ ಬೋವಿ ಸಮಾಜದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾ ಬಂದಿದ್ದಾರೆ. ಆದ್ರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಅಸ್ಪೃಶ್ಯರಿಗೆ ಕಾಂಗ್ರೆಸ್ (Congress) ಟಿಕೆಟ್ ನೀಡಬೇಕೆಂದು ನಾಯಕರು ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ. ಇದರಲ್ಲಿ ನಿವೃತ್ತ ಇಂಜಿನಿಯರ್ ಕೂಡ ಇದ್ದಾರೆ.
ಲಿಂಗಸೂಗೂರು ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಬೋವಿ ಸಮಾಜದವರಾಗಿದ್ದು, ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಅಸ್ಪೃಶ್ಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾಂಗ್ರೆಸ್ ಟಿಕೆಟ್ ಅಸ್ಪೃಶ್ಯರಿಗೆ ನೀಡಬೇಕೆಂದು ಕಾಂಗ್ರೆಸ್ ಮುಖಂಡರು ಭಾರೀ ಕಸರತ್ತು ನಡೆಸುದ್ದಾರೆ.
ಕೆಪಿಸಿಸಿ ನಿರ್ದೇಶನದಂತೆ ಹಾಲಿ ಶಾಸಕರು ಇರುವ ಕಡೆ ಹಾಲಿ ಶಾಸಕರ ಹೆಸರು ಅದರ ಜೊತೆಗೆ ಮತ್ತೊಂದು ಹೆಸರು ಮತ್ತು ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಮೂರು ಹೆಸರು ಶಿಫಾರಸ್ಸು ಮಾಡಲು ಜಿಲ್ಲಾ ಚುನಾವಣಾ ಸಮಿತಿ ನಿರ್ಧರಿಸಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಚುನಾವಣಾ ಸಮಿತಿ ಸಭೆಯು ಮಾಜಿ ಸಚಿವ, ಚುನಾವಣೆ ಸಮಿತಿ ಉಸ್ತುವಾರಿ ಶರಣಪ್ರಕಾಶ್ ಪಾಟೀಲ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದೆ.
ರಾಯಚೂರಿನ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಸಭಾ ಚುನಾವಣಾ ಸಮಿತಿ ಆಗಮಿಸಿ ಟಿಕೆಟ್ ಆಕಾಂಕ್ಷಿಗಳನ್ನ ಕರೆದು ಅವರ ಅಭಿಪ್ರಾಯ ಸಂಗ್ರಹಿಸಿದ್ದು,. ಈ ವೇಳೆ ಲಿಂಗಸೂಗೂರು ಮೀಸಲು ಕ್ಷೇತ್ರಕ್ಕೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ ಮಾಜಿ ಸಚಿವ ಆಲ್ಕೋಡ್ ಹಣಮಂತಪ್ಪ ಸಹ ಸಭೆಗೆ ಹಾಜರಾಗಿದ್ದರು.
ಟಿಕೆಟ್ ಬೇಡಿಕೆ ಇಟ್ಟ ಆಲ್ಕೋಡ್ ಹಣಮಂತಪ್ಪ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಲ್ಕೋಡ್, ಲಿಂಗಸೂಗೂರು ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ನಾನು ಮಾಜಿ ಸಚಿವ ಇದ್ದೇನೆ. ಯಾವುದೇ ಕಪ್ಪು ಚುಕ್ಕೆ ಆರೋಪವೂ ನನ್ನ ಮೇಲೆ ಇಲ್ಲ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನೀವೂ ಜನರ ಅಭಿಪ್ರಾಯ ಸಂಗ್ರಹಿಸಿ, ಒಂದೇ ಒಂದು ಆರೋಪ ಬಂದ್ರೂ ನನಗೆ ಟಿಕೆಟ್ ನೀಡಬೇಡಿ. ನಾನು ಹಾಗೇ ಪಕ್ಷಕ್ಕಾಗಿ ದುಡಿಯುವೆ. ನಮ್ಮ ರಾಯಚೂರು ಜಿಲ್ಲೆಯಲ್ಲಿ ಒಂದೇ ಒಂದು ಎಸ್ಸಿ ಮೀಸಲು ಕ್ಷೇತ್ರ ಇರುವುದು ಅದು ಲಿಂಗಸೂಗೂರು ವಿಧಾನಸಭಾ ಕ್ಷೇತ್ರ. ಲಿಂಗಸೂಗೂರು ಕ್ಷೇತ್ರದಲ್ಲಿ ಬೇರೆ ಜಿಲ್ಲೆಯವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಬೇಡ ಎಂದರು.
ಸ್ಥಳೀಯ ಅಸ್ಪೃಶ್ಯರಿಗೆ ಟಿಕೆಟ್ ನೀಡಿ, ಹಾಲಿ ಶಾಸಕ ಡಿ.ಎಸ್. ಹೂಲಗೇರಿಗೆ ಲಿಂಗಸೂಗೂರು ಕ್ಷೇತ್ರದ ಮೇಲೆ ಪ್ರೀತಿಯಿಲ್ಲ. ಜಿ.ಪಂ. ಸಭೆಯೂ ಶಾಸಕ ಡಿ.ಎಸ್. ಹೂಲಗೇರಿ ಹೋಗಿಲ್ಲ. ತ್ರೈಮಾಸಿಕ ಸಭೆಗೂ ಶಾಸಕ ಡಿ.ಎಸ್. ಹೂಲಗೇರಿ ಹಾಜರಾಗಿಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಅದರಲ್ಲೂ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಇಡೀ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯವೂ 40 ಸಾವಿರಕ್ಕೂ ಅಧಿಕ ಮತದಾರರು ನಾವು ಇದ್ದೇವೆ. ನಮ್ಮ ಸಮುದಾಯವನ್ನ ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಲ್ಲ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇವರ ಜೊತೆ ಇನ್ನುಳಿದ ಆಕಾಂಕ್ಷಿಗಳು ಕೂಡ ಇದೇ ಮಾತನ್ನ ಹೇಳಿದರು.
ಟಿಕೆಟ್ ರೇಸ್ನಲ್ಲಿ ನಿವೃತ್ತ ಇಂಜಿನಿಯರ್
ಇನ್ನು ನಿವೃತ್ತ ಇಂಜಿನಿಯರ್ ಆರ್. ರುದ್ರಯ್ಯ ಎನ್ನುವವರು ಕೂಡ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆಯನ್ನೂ ಮಾಡಿದ್ದಾರೆ. ಅರ್ಜಿ ಸಲ್ಲಿಕೆಗೂ ಮುನ್ನ ಲಿಂಗಸೂಗೂರು ಕ್ಷೇತ್ರದಲ್ಲಿ ಓಡಾಟ ಮಾಡಿ ಲಿಂಗಸೂಗೂರು ಕ್ಷೇತ್ರದಲ್ಲಿ ನನಗೆ ಆರ್ಶಿವಾದ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಈಗ ವಿಧಾನಸಭಾ ಚುನಾವಣೆಗೆ ಇನ್ನೂ 3-4 ತಿಂಗಳು ಮಾತ್ರ ಬಾಕಿಯಿದೆ. ಹೀಗಾಗಿ ಆರ್. ರುದ್ರಯ್ಯನವರ ಪತ್ನಿ ಗಿರಿಜಮ್ಮ ಕೂಡ ಜನರಿಗೆ ಹೊಸ ಕ್ಯಾಲೆಂಡರ್ ವಿತರಣೆ ಮಾಡುತ್ತಾ ವಿದ್ಯಾವಂತರಿಗೆ ತಾವೂಗಳು ಬೆಂಬಲಿಸಿ ಎಂದು ಪ್ರಚಾರ ಶುರು ಮಾಡಿದ್ದಾರೆ.
ಟಿಕೆಟ್ ಪೈಪೋಟಿ ಮಧ್ಯೆಯೂ ಕ್ಷೇತ್ರದಲ್ಲಿ ಹಾಲಿ ಶಾಸಕರ ಓಡಾಟ..!
ಲಿಂಗಸೂಗೂರು ಹಾಲಿ ಶಾಸಕ ಡಿ.ಎಸ್.ಹೂಲಗೇರಿ ಬೋವಿ ಸಮುದಾಯಕ್ಕೆ ಸೇರಿದವರು. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಎಂದು ನಂಬಿಕೆ ಇಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಜನರಿಗೆ ತಿಳಿಸುತ್ತಿದ್ದಾರೆ. ಈ ಮೂಲಕ ತಮಗೆ ಟಿಕೆಟ್ ಫಿಕ್ಸ್ ಅಂತಲೇ ಓಡಾಟ ನಡೆಸಿದ್ದಾರೆ. ಆದರೆ ಹೈಕಮಾಂಡ್ ಅಥವಾ ರಾಜ್ಯ ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಡತ್ತೆ ಎಂದು ಕಾದು ನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ