ವರುಣಾ ಕ್ಷೇತ್ರದಲ್ಲಿ ನಾಳೆಯಿಂದಲೇ ಸೋಮಣ್ಣ ಪ್ರಚಾರ, ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್

| Updated By: ರಮೇಶ್ ಬಿ. ಜವಳಗೇರಾ

Updated on: Apr 13, 2023 | 10:25 AM

ಸಚಿವ ವಿ ಸೋಮಣ್ಣ ಅವರು ನಾಳೆಯಿಂದಲೇ ವರುಣಾ ಅಖಾಡಕ್ಕಿಳಿಯಲಿದ್ದು, ನಾಮಪತ್ರ ಸಲ್ಲಿಗೂ ಮುಹೂರ್ತ ನಿಗದಿ ಮಾಡಿದ್ದಾರೆ.

ವರುಣಾ ಕ್ಷೇತ್ರದಲ್ಲಿ ನಾಳೆಯಿಂದಲೇ ಸೋಮಣ್ಣ ಪ್ರಚಾರ, ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್
ವಿ ಸೋಮಣ್ಣ
Follow us on

ಮೈಸೂರು: ಸಚಿವ ವಿ.ಸೋಮಣ್ಣ ಅವರು ಚಾಮರಾನಗರದ ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾದಿಂದಲೂ ಸ್ಪರ್ಧೆಗೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ಅವರು ವರುಣಾ ಕ್ಷೇತ್ರ ಪ್ರವೇಶಕ್ಕೂ ಮುನ್ನ ದೇವರ ಮೊರೆ ಹೋಗಿದ್ದಾರೆ. ಹೌದು.. ಇಂದು(ಏಪ್ರಿಲ್​ 13) ಮೈಸೂರು ಪ್ರವಾಸ ಕೈಗೊಂಡಿರುವ ಸೋಮಣ್ಣ ಅವರು ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಇನ್ನು ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ನಾಳೆಯಿಂದ(ಏಪ್ರಿಲ್ 14) ವರುಣಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸುತ್ತೇನೆ. ಹಾಗೇ ಏಪ್ರಿಲ್ 17ರಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Explainer: ಸಿದ್ದರಾಮಯ್ಯ ವಿರುದ್ಧ ಸೋಮಣ್ಣರನ್ನೇ ಆಯ್ಕೆ ಮಾಡಿದ್ದೇಕೆ? ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವೇನು? ಇಲ್ಲಿದೆ ವರುಣಾ ಗ್ರೌಂಡ್ ರಿಪೋರ್ಟ್

ಇನ್ನು ಏ.19ರಂದು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಾನು ನೆಪಮಾತ್ರ. ನನ್ನ ಕಾರ್ಯಕರ್ತರು, ಮುಖಂಡರು, ಪಕ್ಷವೇ ದೊಡ್ಡದು. ಪ್ರಚಾರಕ್ಕೆ ಯಾರು ಬರ್ತಾರೆ, ಯಾರು ಬರಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿ ವರುಣಾ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ, ನಾನು ಒಂದೇ ಗರಡಿಯಲ್ಲಿ ಪಳಗಿದವರು. ಸಿದ್ದರಾಮಯ್ಯ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ ಎಂದು ಹೇಳಿದ ಸೋಮಣ್ಣ, ಸಂಜೆಯೊಳಗೆ ಗೋವಿಂದರಾಜ ನಗರ ಟಿಕೆಟ್​ ಸಮಸ್ಯೆ ಬಗೆಹರಿಯುತ್ತೆ ಎಂದು ಸ್ಪಷ್ಟಪಡಿಸಿದರು.

ಸೋಮಣ್ಣರನ್ನು ಕಣಕ್ಕಿಳಿಸುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಮತ್ತು ತಂಡ ಭಾರೀ ತಂತ್ರಗಾರಿಕೆ ಹೆಣೆಯಲು ಆರಂಭಸಿದ್ದಾರೆ. ಸಿದ್ದರಾಮಯ್ಯ ಮತ್ತು ಆಪ್ತರಾದ ಮಾಜಿ ಗೃಹಸಚಿವ ಕೆಜೆ ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಮತ್ತಿತರರು ರಹಸ್ಯ ಸ್ಥಳದಲ್ಲಿ ನಿನ್ನೆ ಸಭೆ ಮಾಡಿದ್ದರು.

ಸಿದ್ದರಾಮಯ್ಯ ಮತ್ತು ಸೋಮಣ್ಣರಿಗೆ ನಿರ್ಣಾಯಕ ಹೋರಾಟ

ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿರುವಂತೆ ಅವರದ್ದು ಕೊನೆಯ ಚುನಾವಣೆಯಾಗಿದೆ. ಇತ್ತ ಸೋಮಣ್ಣ ಅವರಿಗೆ ನೀಡಿದ ಎರಡೂ ಕ್ಷೇತ್ರಗಳು ಅವರಿಗೆ ಹೊಸ ಕ್ಷೇತ್ರವಾಗಿರುವುದರಿಂದ ಗೆಲುವಿಗಾಗಿ ಇನ್ನಿಲ್ಲದ ಶ್ರಮ ಹಾಕಬೇಕಾಗಿದೆ. ಎರಡೂ ಕ್ಷೇತ್ರ ಕಳೆದುಕೊಂಡರೆ ರಾಜಕೀಯ ಜೀವನಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಈ ಇಬ್ಬರು ಘಟಾನುಘಟಿ ನಾಯಕರಿಗೆ ಗೆಲುವು ನಿರ್ಣಾಯಕವಾಗಿದ್ದು, ಜನಾಶೀರ್ವಾದ ಯಾರಿಗೆ ಇದೆ ಎಂಬುದು ಮೇ 13ರಂದು ತಿಳಿದುಬರಲಿದೆ.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಾಮರ್ಥ್ಯ ಕುಂದಿಸಲು ಬಿಜೆಪಿ ಯೋಜನೆ ರೂಪಿಸಿತ್ತು. ಲಿಂಗಾಯತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರನ್ನೇ ಹುರಿಯಾಳಾಗಿಸಿ ಸಿದ್ದರಾಮಯ್ಯ ಗೆ ಪ್ರಬಲ ಪೈಪೋಟಿ ನೀಡಲು ಪ್ಲ್ಯಾನ್‌ ಮಾಡಿತ್ತು. ಸಿದ್ದು ವಿರುದ್ಧ ಯಡಿಯೂರಪ್ಪ ಪುತ್ರ ವಿಜಯೇಂದ್ರನನ್ನು ಕಣ್ಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿತ್ತು. ಆದರೆ ಮಗನ ರಾಜಕೀಯ ಭವಿಷ್ಯ ಹಿತದೃಷ್ಟಿಯಿಂದ ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಬಿಎಸ್‌ವೈ ವಿರೋಧ ವ್ಯಕ್ತಪಡಿಸಿದ್ದರು. ಈಗ ಸಿದ್ದು ವಿರುದ್ಧ ಸೆಣಸಲು ಸೋಮಣ್ಣ ಹುರಿಯಾಳಾಗಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಮತ್ತು ಕನಕಪುರ ಕ್ಷೇತ್ರದಲ್ಲಿ ಸಚಿವ ಆರ್‌ ಅಶೋಕ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಎರಡೂ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಬಿಜೆಪಿ ಈ ಕದನವನ್ನು ಮತ್ತಷ್ಟು ರೋಚಕಗೊಳಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ