Yadgiri: ಸುರಪುರದಲ್ಲಿ ಅದ್ಧೂರಿ ಚುನಾವಣಾ ಮೆರವಣಿಗೆಗೆ ಬ್ರೇಕ್; ಸರಳವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಲು ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಈ ಹಿನ್ನೆಲೆ ಕಾಂಗ್ರೆಸ್​ ಮತ್ತು ಬಿಜೆಪಿ ಅಭ್ಯರ್ಥಿಗಳು ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ.

Yadgiri: ಸುರಪುರದಲ್ಲಿ ಅದ್ಧೂರಿ ಚುನಾವಣಾ ಮೆರವಣಿಗೆಗೆ ಬ್ರೇಕ್; ಸರಳವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು
ಸರಳವಾಗಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ
Follow us
ವಿವೇಕ ಬಿರಾದಾರ
| Updated By: ರಮೇಶ್ ಬಿ. ಜವಳಗೇರಾ

Updated on:Apr 17, 2023 | 2:08 PM

ಯಾದಗಿರಿ: ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆ ರಾಜಕಾರಣಿಗಳು ಅದ್ಧೂರಿಯಾಗಿ ಮೆರವಣಿಗೆ ಮಾಡಿ ತಮ್ಮ ಶಕ್ತಿ ಪ್ರದರ್ಶಿಸಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ ಯಾದಗಿರಿ (Yadgiri) ಜಿಲ್ಲೆಯ ಸುರಪುರ (Surapur) ಕ್ಷೇತ್ರದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಲು ಚುನಾವಣಾ ಆಯೋಗ (Election Commission) ಅನುಮತಿ ನೀಡಿಲ್ಲ. ಇದಕ್ಕೆ ಕಾರಣ ಕಳೆದ ಕೆಲ ದಿನಗಳ ಹಿಂದೆ ಸುರಪುರ ಕ್ಷೇತ್ರದಲ್ಲಿ ಬಿಜೆಪಿ (BJP) ಮತ್ತು ಕಾಂಗ್ರೆಸ್​ (Congress) ಕಾರ್ಯಕರ್ತರ ಮಧ್ಯೆ ದೊಡ್ಡಮಟ್ಟದಲ್ಲಿ ಗಲಾಟೆಯಾಗಿತ್ತು. ಈ ಕಾರಣಕ್ಕೆ ಮತ್ತೆ ಗಲಾಟೆಯಾಗಬಹುದು ಎಂದು ಚುನಾವಣಾ ಆಯೋಗ ಮೆರವಣಿಗೆಗೆ ಅನುಮತಿ ನೀಡಿಲ್ಲ.

ಈ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್​ ಎರಡು ಪಕ್ಷದ ಅಭ್ಯರ್ಥಿಗಳು ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಕೇವಲ ಐದು ಜನರ ಜೊತೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಹಾಗೇ ಇತ್ತ ಬಿಜೆಪಿ ಅಭ್ಯರ್ಥಿ ರಾಜುಗೌಡ ಕೂಡ ಐದು ಜನರ ಜೊತೆ ಬಂದು ಸುರಪುರ ತಹಶಿಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸುರಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಮಧ್ಯೆ ಕಲ್ಲು ತೂರಾಟ

ಏಪ್ರಿಲ್​ 6 ರಂದು ಕಾಂಗ್ರೆಸ್​​​​​​ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕನ ಬೆಂಬಲಿಗರು ಕಾರುಗಳಲ್ಲಿ ಹಾರ್ನ್ ಮಾಡಿ ತೆರಳುತ್ತಿದ್ದರು. ಇದಕ್ಕೆ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಹಾರ್ನ್ ಮಾಡದಂತೆ ತಾಕೀತು ಮಾಡಿದ್ದರು. ಇದೇ ವಿಷಯಕ್ಕೆ ಜಗಳ ಆರಂಭವಾಗಿತ್ತು. ಮೊದಲು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮುಖಂಡರ ಕಾರುಗಳ ಮೇಲೆ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾಂಗ್ರೆಸ್ ಮುಖಂಡರ ಕಾರಿನ ಮೇಲೆ ಕೆಲವು ಮಂದಿ ಮಚ್ಚಿನಿಂದಲೂ ದಾಳಿ ನಡೆಸಿದ್ದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಬಗ್ಗೆ ಯಾರು ಏನು ಹೇಳಿದ್ರು? ಇಲ್ಲಿದೆ ನೋಡಿ

ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ಮುಖಂಡರ 15 ಕಾರುಗಳು ಜಖಂಗೊಂಡಿದ್ದವು. ಕಾರುಗಳ ಗಾಜು ಪುಡಿ ಪುಡಿಯಾಗಿದ್ದವು. ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ 4-5 ಜನ ಕಾರ್ಯಕರ್ತರಿಗೆ ಗಾಯಗಳಾಗಿದ್ದವು. ಸ್ಥಳಕ್ಕೆ ಯಾದಗಿರಿ ಎಸ್​​ಪಿ ಡಾ. ಸಿ.ಬಿ. ವೇದಾಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದರು. ಘಟನೆ ನಡೆದ ದಿನದಿಂದ ಸುರಪುರ ವಿಧಾನಸಭಾ ಕ್ಷೇತ್ರದಾದ್ಯಂತ 2 ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಕಲಬುರಗಿ ಈಶಾನ್ಯ ವಲಯ ವಿಭಾಗೀಯ ಐಜಿಪಿ ಅನುಪಮ ಅಗರ್ವಾಲ್ ಅವರು ಕೂಡ ಸುರಪುರದಲ್ಲಿ ಮೊಕ್ಕಾಂ ಹೂಡಿದ್ದರು. ಘಟನೆ ಸಂಬಂಧ ಪೊಲೀಸರು ಈಗಾಗಲೇ 4 ಪ್ರಕರಣ ದಾಖಲಿಸಿಕೊಂಡಿದ್ದು, ಗಲಾಟೆಯಲ್ಲಿ ಭಾಗಿಯಾದ 118 ಜನರ ಮೇಲೆ ಸಿಆರ್​ಪಿಸಿ 107 ಕಲಂ ದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದರು. 18 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:48 pm, Mon, 17 April 23