ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಪ್ರಚಾರದ ಅಖಾಡಕ್ಕೆ ಇಳಿದಿವೆ. ಕಾಂಗ್ರೆಸ್ ಬಸ್ ಯಾತ್ರೆ ಮಾಡುತ್ತಿದ್ದು, ಇದರ ಜೊತೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯಕ್ಕೆ ಕರೆಸಿ “ನಾ ನಾಯಕಿ” ಎಂಬ ಸಮಾವೇಶ ಮಾಡುವ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಯತ್ನ ಮಾಡಿದೆ. ಇನ್ನು ಜೆಡಿಎಸ್ ತಮ್ಮ ಪಂಚರತ್ನ ಯೋಜನೆ ಇಟ್ಟುಕೊಂಡು “ಪಂಚರತ್ನಯಾತ್ರೆ” ಎಂಬ ಹೆಸರಿನೊಂದಿಗೆ ರಾಜ್ಯ ಪ್ರವಾಸ ಮಾಡುತ್ತಿದೆ. ಇನ್ನು ಬಿಜೆಪಿ ಬೂತ್ಮಟ್ಟದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತಿದ್ದು, ಇದರ ಮಧ್ಯೆ ಬಿಜೆಪಿ ಕೇಂದ್ರ ನಾಯಕರು ಮತ್ತು ನಿನ್ನೆ (ಜ.19) ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆಸಿ ವಿವಿಧ ಯೋಜನೆಗಳಿಗೆ ಚಾಲನೆ ಕೊಡಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಮತದಾರರನ್ನು ಕ್ರೂಡಿಕರಿಸುವ ಯತ್ನಿಸಿದರು. ಹೀಗೆ ಮೂರು ಪಕ್ಷಗಳು ಒಂದಲ್ಲ ಒಂದು ಚುನಾವಣಾ ತಂತ್ರ ಹೆಣೆಯುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ನಿರಂತರ ನಡೆಯುತ್ತಿವೆ.
ನೆಲಮಂಗಲ: ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಹುನ್ನಾರ ನಡೆಸಿರುವ ಆರೋಪ ವಿಚಾರದ ಬಗ್ಗೆ ಹೇಳಿಕೆ ನೀಡಿದ ಮಾಜಿ ಸಿಎಂ ವಿರಪ್ಪಮೊಯ್ಲಿ, ನಾನು ಆ ರೀತಿ ಆರೋಪ ಎನು ಮಾಡಲ್ಲ. ಪಾಪ ಸುಪಾರಿ ಹಣನೂ ಹೊಗುತ್ತೆ, ಇತ್ತ ಜೆಡಿಎಸ್ ಕೂಡ ಬರೋದಿಲ್ಲ, ಮನುಷ್ಯನು ಹೋಗ್ತಾನೆ. 25 ರಿಂದ 26 ಸೀಟು ಬರಲ್ಲ, ಇನ್ನು ಸರ್ಕಾರ ಹೇಗೆ ಬರುತ್ತದೆ ಎಂದರು.
ಕಾಂಗ್ರೆಸ್ ಬಸ್ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ ಬಸ್ ಯಾತ್ರೆಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ನಾನು ಸಿಎಂ, ನಾನು ಸಿಎಂ ಅಂತಾ ಬಿಂಬಿಸುವ ಯಾತ್ರೆಗಳಾಗಿವೆ ಎಂದು ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಬಿ.ಕೆ.ಹರಿಪ್ರಸಾದ್ ಒಬ್ಬ ಬಾಯಿ ಹರುಕ. ಹರಿಪ್ರಸಾದ್ ಆಡುವ ಮಾತುಗಳು ಅವರ ಯೋಗ್ಯತೆ ತಿಳಿಸುತ್ತದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಮೋದಿ ವರ್ಚಸ್ಸು, ಸಿಎಂ ಬೊಮ್ಮಾಯಿ ಅಭಿವೃದ್ಧಿ ಕಾರ್ಯ, ಯಡಿಯೂರಪ್ಪನವರು ತಂದ ಕಾರ್ಯಕ್ರಮಗಳಿಂದ ಮತ್ತೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು. ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ಪರಸ್ಪರ ವೈಯಕ್ತಿಕ ನಿಂದನೆ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕ ವಾಗ್ದಾಳಿಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಬಾರದು ಎಂದು ಪಕ್ಷದ ವರಿಷ್ಠರು ಇಬ್ಬರು ನಾಯಕರಿಗೆ ತಾಕೀತು ಮಾಡಿದ್ದಾರೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನಾಳೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಡ್ಡಾ ಅವರನ್ನು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್,ಯಡಿಯೂರಪ್ಪ ಅವರು ಸ್ವಾಗತ ಕೂರಲಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಬೆಳಗ್ಗೆ ವಿಶೇಷ ವಿಮಾನದಲ್ಲಿ ಯಡಿಯೂರಪ್ಪ ಅವರು ಕಲಬುರಗಿಗೆ ತೆರಳಲಿದ್ದು, ಇಡೀ ದಿನ ನಡ್ಡಾ ಜೊತೆಗೆ ವಿಜಯಪುರದಲ್ಲಿ ಇರಲಿದ್ದಾರೆ. ಜ್ಞಾನ ಯೋಗಾಶ್ರಮ ಭೇಟಿ ಮತ್ತು ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ನಡ್ಡಾರನ್ನು ಬೀಳ್ಕೊಟ್ಟ ನಂತರ ಯಡಿಯೂರಪ್ಪ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆ ನಡೆಯುತ್ತಿದೆ. ಈ ಸಭೆಗೆ ರಾಷ್ಟ್ರೀಯ ಚುನಾವಣಾ ಸಮಿತಿ ಸೇರಿದಂತೆ ಉನ್ನತ ಸಮಿತಿಯಲ್ಲಿ ಸ್ಥಾನ ಪಡೆದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನವಿಲ್ಲ. ಸಭೆಯಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಸೇರಿದಂತೆ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಚುನಾವಣೆ ತಂತ್ರಗಾರಿಕೆ, ಪ್ರಚಾರ, ಸಂಘಟನೆ ಬಗ್ಗೆ ಮಹತ್ವದ ಸಭೆ ನಡೆಯುತ್ತಿದ್ದು, ಎರಡು ದಿನಗಳ ಮುಂಚಿತವಾಗಿಯೇ ಎಲ್ಲಾ ನಾಯಕರಿಗೂ ಮಾಹಿತಿ ನೀಡಲಾಗಿದೆ. ಆದರೆ ಯಡಿಯೂರಪ್ಪಗೆ ಆಹ್ವಾನವಿಲ್ಲ. ಇದು ಪಕ್ಷದ ಸಂಘಟನಾತ್ಮಕ ಸಭೆಯಷ್ಟೇ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದರೆ, ಬಿಎಸ್ವೈ ಬೆಂಗಳೂರಿನ ಕಾವೇರಿ ನಿವಾಸದಲ್ಲೇ ಇದ್ದಾರೆ.
ಹಾಸನ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚಾಯಿತಿಗೊಂದು ಕೆಪಿಎಸ್ಸಿ ಶಾಲೆ (ಕರ್ನಾಟಕ ಪಬ್ಲಿಕ್ ಸ್ಕೂಲ್) ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಾ ಮನ್ನಾ ಮಾಡಲಾಗುವುದು ಎಂದು ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಘೋಷಣೆ ಮಾಡಿದ್ದಾರೆ. ಪಟ್ಟಣದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾತನಾಡುತ್ತಾ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಘೋಷಣೆಗೆ ಸೆಡ್ಡು ಹೊಡೆದು ಮಹಿಳೆಯರ ಓಲೈಕೆಗೆ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕಂಡರೇ ಸಣ್ಣ ಹುಡಗರು ಕೂಡ ಭಯ ಪಡಲ್ಲ. ಪ್ರಧಾನಿ ಮೋದಿಯವರು ಭಯ ಪಡುತ್ತಾರೆ ಅಂದರೆ ಇದು ವರ್ಷದ ಜೋಕ್ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೋದಿ ಯಾಕೆ ಭಯ ಪಡಬೇಕು, ಜಗತ್ತಿನಲ್ಲಿ ಮೋದಿ ನಂಬರ್ ಒನ್ ನಾಯಕರಾಗಿದ್ದಾರೆ. ಸಿದ್ದು ಕಂಡರೆ ಯಾಕೆ ಭಯ ಪಡಬೇಕು, ಇಂತಹ ಕೆಳ ಮಟ್ಟದ ಹೇಳಿಕೆಯಿಂದ ನಿಮ್ಮ ವ್ಯಕ್ತಿತ್ವ ಬೆಳವಣಿಗೆ ಆಗಲ್ಲ. ನೀವು ರಾಜಕೀಯವಾಗಿ ಬೆಳೆಯಲ್ಲ ಎಂದು ಭವಿಷ್ಯ ನುಡಿದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ನಡೆಯುತ್ತಿರುತ್ತದೆ. ಇದರ ಭಾಗವಾಗಿ ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿ ಕಳೆದ ಮೂರು ಬಾರಿಯ ಸೋಲನ್ನು ಮರುಕಳಿಸದಂತೆ ಕಾಂಗ್ರೆಸ್ ಪ್ಲಾನ್ ಮಾಡಿದೆ. ಈ ಸಂಬಂಧ ಒಂದೆ ವೇದಿಕೆಯಲ್ಲಿ ಸಾವಿರಾರು ಜನ ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ, ಸಂಸದ ಡಿ.ಕೆ.ಸುರೇಶ್, ಶಾಸಕ ರಾಮಲಿಂಗಾ ರೆಡ್ಡಿ, ಎಂ.ಎಲ್.ಸಿ ರವಿ, ಮಾಜಿ ವಿಧನಪರಿಷತ್ ಸದಸ್ಯ ಬಿ.ಎಂ.ಎಲ್ ಕಾಂತರಾಜು ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಸ್ಥಳಿಯ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಪಂಚ ಯೋಜನೆಗಳನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಜೆಡಿಎಸ್ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಮಾಡುತ್ತಿದ್ದು, ಇಂದು (ಜ.20) ಯಾತ್ರೆ ವಿಜಯಪುರ ನಗರ ಪ್ರವೇಶ ಮಾಡಿದೆ. ವಿಜಯಪುರ ನಗರ, ನಾಗಠಾಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಗೋಳಗುಮ್ಮಟದಿಂದ ದರ್ಬಾರ್ ಮೈದಾನದವರೆಗೆ ಮೆರವಣಿಗೆ ನಡೆಯುತ್ತಿದೆ.
ಫೆಬ್ರವರಿ 5 ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶಿವಮೊಗ್ಗಕ್ಕೆ ಭೇಟಿ ನೀಡಿ ಶಿವಮೊಗ್ಗ ನಗರ ಪೇಜ್ ಪ್ರಯುಖರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ವಿಚಾರವಾಗಿ ಮಜಿ ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ ಸಚಿವ ಸ್ಥಾನ ಯಾವಾಗ ಕೊಡುತ್ತಾರೆ ನೋಡೋಣ. ಸಚಿವ ಸ್ಥಾನ ನೀಡುವ ಕುರಿತು ನನಗೆ ಮಾಹಿತಿ ಇಲ್ಲ. ನಾನು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಮಂತ್ರಿ ಆದರೆ ಆಯ್ತು, ಇಲ್ಲದಿದ್ದರೆ ಇಲ್ಲ. ಎಲ್ಲ ಶಾಸಕರೂ ಮಂತ್ರಿ ಆಗಬೇಕೇನೂ ..? ಸರ್ಕಾರ ಚೆನ್ನಾಗಿಯೇ ನಡೆಯುತ್ತಿದೆ. ನನ್ನನ್ನು ಸಚಿವ ಮಾಡಬೇಕು ಎಂದು ಅಂದು ಅಪೇಕ್ಷೆ ವ್ಯಕ್ತಪಡಿಸಿದ್ದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸ್ಥಾನ ನೀಡುವ ಕುರಿತು ಎಲ್ಲ ಪ್ರಯತ್ನ ಮಾಡುವುದಾಗಿ ಸ್ಪಷ್ಟ ವಾಗಿ ಹೇಳಿದ್ದರು. ಅವರು ನಡೆಸುತ್ತಾ ಇರಬಹುದು. ಅದು ನನಗೆ ಗೊತ್ತಿಲ್ಲ. ಆದರೆ ನಾನು ಸಚಿವ ಸ್ಥಾನದ ಆಸೆ ಬಿಟ್ಟಿರುವೆ. ಆಡಳಿತ ನಡೆಸುವುದು ಮತ್ತು ಸಚಿವ ಮಾಡುವುದು ಸುಲಭದ ಕೆಲಸ ಅಲ್ಲ. ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಮತ್ತೊಂದು ಸಮಸ್ಯೆ ತರುವುದಕ್ಕೆ ನಾನು ಸಿದ್ಧನಿಲ್ಲ.ಅವರು ಸಚಿವ ಸ್ಥಾನ ಮಾಡಿದರೆ ಸಂತೋಷ. ಇಲ್ಲದಿದ್ದರೆ ಇಲ್ಲ. ಸರ್ಕಾರದಲ್ಲಿ ಮಂತ್ರಿ ಆಗಲೇ ಬೇಕು ಅಂತ ನಾನೇ ಒಂದು ಸಮಸ್ಯೆ ಆಗುವುದಕ್ಕೆ ಇಷ್ಟ ಪಡುವುದಿಲ್ಲ ಎಂದರು.
ಶ್ರೀಕೃಷ್ಣ ಪರಮಾತ್ಮನಿಗೂ ಅರ್ಥ ಆಗದಷ್ಟು ತಂತ್ರಗಾರಿಕೆ ಕೇಂದ್ರ ನಾಯಕರಿಗೆ ಇದೆ
ಬಿಜೆಪಿ ಪಕ್ಷ ಏನು ಮಾಡುತ್ತದೆ ಎನ್ನುವುದು ಎಂದಿಗೂ ಹೇಳಿಲ್ಲ. ಶ್ರೀಕೃಷ್ಣ ಪರಮಾತ್ಮನಿಗೂ ಅರ್ಥ ಆಗದಷ್ಟು ತಂತ್ರಗಾರಿಕೆ ಕೇಂದ್ರ ನಾಯಕರಿಗೆ ಇದೆ. ನ್ಯಾಯಬದ್ಧ ತಂತ್ರಗಾರಿಕೆ ಮಾಡುತ್ತಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅಲ್ಲಿ ಸರ್ಕಾರ ಬಂದಿದೆ. ತಂತ್ರಗಾರಿಕೆ ಏನು ಮಾಡುತ್ತಾರೆ. ನನಗಿಂತ ಹೆಚ್ಚಿನ ಪ್ರಭಾವಿ, ಬುದ್ದಿವಂತರು, ಕೆಲಸ ಮಾಡುವವರು ಇನ್ನೂ ಇರಬಹುದು. ಸರ್ವೆ ಮೂಲಕ ಎಲ್ಲವನ್ನು ಕೇಂದ್ರ ತಿಳಿದುಕೊಳ್ಳುತ್ತಾರೆ. ಇದೇ ಬಿಜೆಪಿಯ ತಂತ್ರಗಾರಿಕೆ ಆಗಿದೆ. ಪಕ್ಷ 224 ಕ್ಷೇತ್ರದಲ್ಲಿ ಜನರಿಗೆ, ಪಕ್ಷ, ದೇಶ ಈ 3 ಮಾನದಂಡವನ್ನು ಇಟ್ಟುಕೊಂಡು ಯೋಗ್ಯವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ.
ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಇಂದು (ಜ.20) ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಭಿಮಾನಿಗಳಿಂದ ಸಮಾವೇಶ ನಡೆಯಲಿದೆ. ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಅಭಿಮಾನಿಗಳು ಸಮಾವೇಶ ಮಾಡುತ್ತಿದ್ದು, ಆದರೆ ಈ ಸಮಾವೇಶಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್ ಬಿಜೆಪಿ ಬ್ಯಾನರ್ ಇಲ್ಲದ ವೇದಿಕೆ ಮೇಲೆ ಹೋಗಲ್ಲ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ನಾಯಕರು ಅವರ ಬಗ್ಗೆ ಗೌರವ ಇದೆ. ಇದು ಬಿಜೆಪಿ ಕಾರ್ಯಕ್ರಮ ಅಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ನಾನು ಹೋಗುವುದಿಲ್ಲ, ನನ್ನ ಮನಸ್ಸು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಫೈಟ್ ವಿಚಾರವಾಗಿ ಮಾತನಾಡಿದ ಅವರು ಟಿಕೆಟ್ ಡಿಕ್ಲೇರ್ ಆದ ಮೇಲೆ ಎಲ್ಲರೂ ಒಂದಾಗುತ್ತಾರೆ. ಈಗ ಎಲ್ಲರೂ ಆಕಾಂಕ್ಷಿಗಳು ಅಂತ ಕಾರ್ಯಕ್ರಮ ಮಾಡುತ್ತಿದ್ದಾರೆ. ಯಾವುದೇ ವೇದಿಕೆ ಆದರೂ ಬಿಜೆಪಿ ಗೆಲ್ಲಿಸಿ ಅಂತಾ ಮನವಿ ಮಾಡುತ್ತೇವೆ. ರಮೇಶ್ ಜಾರಕಿಹೊಳಿ 5 ಬಿಜೆಪಿ ಟಿಕೆಟ್ ಆಕಾಂಕ್ಷಿಗಳನ್ನು ಏನೂ ಕರೆದಿಲ್ಲ. ರಮೇಶ ಜಾರಕಿಹೊಳಿ ನಮ್ಮ ಬಿಜೆಪಿ ಲೀಡರ್ ಅವರ ಬಗ್ಗೆ ಹೆಮ್ಮೆ ಇದೆ. ಕಾರ್ಯಕರ್ತರಿಗೆ ಹೋಗಿ ಅಂತಾನೂ ಹೇಳಲ್ಲ, ಹೋಗಬೇಡಿ ಅಂತಾನೂ ಹೇಳಲ್ಲ. ಕೆಲವರು ಅಭ್ಯರ್ಥಿ ನಾನೇ ಅಂತ ಪೌಡರ್ ಲಿಪ್‌ಸ್ಟಿಕ್ ಹಚ್ಚಿಕೊಂಡು ನಿಂತಿದ್ದಾರೆ. ಆದರೆ ಪಕ್ಷ ನಿರ್ಧಾರ ಮಾಡುತ್ತೆ ಯಾರಿಗೆ ಟಿಕೆಟ್ ನೀಡಬೇಕು ಅಂತ. ಸಂಜಯ್ ಪಾಟೀಲ್ಗೆ ಟಿಕೆಟ್ ಕೊಡಬೇಡಿ ಬೇಡ ಅಂತ ರಮೇಶ್ ಜಾರಕಿಹೊಳಿ ಎಲ್ಲೂ ಹೇಳಿಲ್ಲ. ಫೋನ್ ಮಾಡಿ ರಮೇಶ್ ಜಾರಕಿಹೊಳಿ ಸಮಾವೇಶಕ್ಕೆ ಕರೆದಿದ್ದರು. ಆದರೆ ಬಿಜೆಪಿ ಬ್ಯಾನರ್ ಹಚ್ಚಿದರೆ ಬರುತ್ತೇನೆ ಅಂದಿದ್ದೆ ಎಂದು ತಿಳಿಸಿದರು.
ಅರಮನೆ ಮೈದಾನದಲ್ಲಿ ಸಿರಿ ಧಾನ್ಯ, ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಡಾ.ಅಶ್ವತ್ಥ್ ನಾರಾಯಣ, ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವ ಕೈಲಾಶ್ ಚೌಧರಿ, ಬಿ.ಸಿ.ಪಾಟೀಲ್, ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ಷಾಹೀಜಿ, ಯುಪಿ ತೋಟಗಾರಿಕಾ ಸಚಿವ ದಿನೇಶ್ ಪ್ರತಾಪ್, ಟಿ.ಎ.ಶರವಣ ಭಾಗಿಯಾಗಿದ್ದಾರೆ.
ನಮ್ಮ ಕೆಆರ್ಪಿಪಿ ನಿರೀಕ್ಷೆಗೂ ಮೀರಿ ಜನರನ್ನು ತಲುಪುತ್ತಿದೆ ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಹೇಳಿದ್ರು. ಗಂಗಾವತಿ ಭಾಗದಲ್ಲಿ ಸಾವಿರಾರು ಜನರು ನಮ್ಮ ಪಕ್ಷ ಸೇರಿದ್ದಾರೆ. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಕೆಆರ್ಪಿಪಿ ಸೇರಿದ್ದಾರೆ. ನಾನು ಯಾರನ್ನೂ ಸೋಲಿಸುವುದಕ್ಕಾಗಿ ಅಭ್ಯರ್ಥಿ ಹಾಕುವುದಿಲ್ಲ. ನಮ್ಮ ಪಕ್ಷ ಗೆಲ್ಲುವ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಈಗಾಗಲೇ ಆಕಾಂಕ್ಷಿ ಅಭ್ಯರ್ಥಿಗಳ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ಬೆಂಗಳೂರು ಭಾಗದಲ್ಲೂ ಪಕ್ಷ ಸಂಘಟನೆ ಆರಂಭಗೊಂಡಿದೆ. ದೊಡ್ಡ ದೊಡ್ಡ ಕುಟುಂಬಗಳು ಕೆಆರ್ಪಿಪಿಯನ್ನು ಬೆಂಬಲಿಸಿವೆ. ಕಲ್ಯಾಣ ಕರ್ನಾಟಕ, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರಿಂದ ಚಂಡಿಕಾ ಹೋಮ ನಡೆಯುತ್ತಿದೆ. ದಂಪತಿ ಸಮೇತ ಹೋಮದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಪತ್ನಿ ಚೆನ್ನಮ್ಮ ಜೊತೆ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಜ್ಯಕ್ಕೆ ಇನ್ಮುಂದೆ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಬರ್ತಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಂದು ಹೋಗ್ತಾ ಇರ್ತಾರೆ. 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನಮ್ಮ ಸಂಕಲ್ಪ. ಆ ಭರವಸೆ ನಾವೆಲ್ಲರೂ ಒಟ್ಟಾಗಿ ಪ್ರಧಾನಿ ಮೋದಿಗೆ ಕೊಟ್ಟಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರಲು ಒಟ್ಟಾಗಿ ಕೆಲಸ ಆರಂಭಿಸಿದ್ದೇವೆ. ನಿಶ್ಚಿತವಾಗಿ ಗುರಿ ತಲುಪುತ್ತೇವೆ ಎಂದ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮೈಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ನಿಂದ ‘ಬಿಜೆಪಿಯ ನಿಜ ಕನಸುಗಳು’ ಹಸ್ತ ಪ್ರತಿ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ಹಸ್ತ ಪ್ರತಿ ಬಿಡುಗಡೆ ಮಾಡಿದರು. ಟಿಪ್ಪು ಹೆಸರಲ್ಲಿ ವಿಷ ಬೀಜ, ಹನುಮ ವರ್ಸಸ್ ಟಿಪ್ಪು ಸಂಘರ್ಷ ಸೃಷ್ಟಿ. ಕರ್ನಾಟಕವನ್ನು ಲೂಟಿ ಮಾಡುವುದು ಬಿಜೆಪಿಯ ನಿಜ ಕನಸು. ಬಿಜೆಪಿಯಲ್ಲಿ ಪಿಂಪ್‌ಗಳು ಹೆಚ್ಚಾಗುತ್ತಿದ್ದಾರೆ, ಇದೇ ಇವರ ಸಾಧನೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.
ನಾಳೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ನಲ್ಲಿ ವಿಜಯಪುರಕ್ಕೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ 11.30ಕ್ಕೆ ಸೈನಿಕ ಶಾಲೆಯ ಹೆಲಿಪ್ಯಾಡ್ಗೆ ಆಗಮನ. ನಾಳೆ ಬೆಳಗ್ಗೆ 11.40ಕ್ಕೆ ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಭೇಟಿ. ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಮನೆ ಮನೆಗೆ ಭೇಟಿ ಹಾಗೂ ಸದಸ್ಯತ್ವ ಅಭಿಮಾನಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರಿದೆ. ಇಂದು ಸಂಜೆ ಸುಳೇಭಾವಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಂಬಲಿಗರ ಸಮಾವೇಶ ಆಯೋಜಿಸಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಆಹ್ವಾನಿಸಲಾಗಿದೆ. ಮಾಜಿ ಶಾಸಕ ಸಂಜಯ್ ಪಾಟೀಲ್, ಧನಂಜಯ ಜಾಧವ್, ವಿನಯ್ ಕದಂ, ನಾಗೇಶ್ ಮನ್ನೋಳಕರ್ ಸೇರಿ ಎಲ್ಲರಿಗೂ ಆಹ್ವಾನ.
ಇಂದಿನಿಂದ ತುಮಕೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ಹಿನ್ನೆಲೆ ಬಿಜೆಪಿ ಮಹಿಳಾ ಮೊರ್ಚಾದಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಟೌನ್ ಹಾಲ್ ಸರ್ಕಲ್ ನಿಂದ ಸಿದ್ದಗಂಗಾ ಮಠದವರೆಗೆ ನೂರಾರು ಮಹಿಳೆಯರಿಂದ ಬೈಕ್ ರ್ಯಾಲಿ ನಡೆಯುತ್ತಿದೆ. ಬೈಕ್ ರ್ಯಾಲಿಯಲ್ಲಿ ಮೋರ್ಚಾದ ರಾಷ್ಟ್ರೀಯ ಪ್ರಭಾರಿ ದುಷ್ಯಂತ ಕುಮಾರ್ ಗೌತಂ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಭಾಗಿಯಾಗಿದ್ದಾರೆ. ಹಾಗೂ 37 ರಾಜ್ಯಗಳ ಮಹಿಳಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಜೊತೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಘಟನಾ ಕಾರ್ಯದರ್ಶಿಗಳ ಸಭೆ ಆರಂಭವಾಗಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿಭಾಗವಾರು ಸಂಘಟನೆ ನಡೆಸುತ್ತಿದ್ದು ವಿಜಯ ಸಂಕಲ್ಪ ಅಭಿಯಾನಕ್ಕೂ ಮುನ್ನ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ವೀಕ್ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ಸಾಧ್ಯತೆ. ವಿಜಯ ಸಂಕಲ್ಪ ಮಾದರಿ ಅಭಿಯಾನ ಗುಜರಾತ್ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಯಶಸ್ವಿ ಹಿನ್ನಲೆ ರಾಜ್ಯದಲ್ಲೂ ಸಮರ್ಪಕವಾಗಿ ಜಾರಿಗೆ ತರಲು ಬಿಜೆಪಿ ಪ್ಲಾನ್ ಮಾಡಿದೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಡಾ ಅಶ್ವಥ್ ನಾರಾಯಣ್, ಗೃಹ ಸಚಿವ ಅರಗ ಜ್ಙಾನೇಂದ್ರ ಅವರು ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಪಕ್ಷದ ಸಂಘಟನೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.
ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ಸಜ್ಜಾಗಿದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಹಾವೇರಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ಸಜ್ಜಾಗಿದ್ದಾರೆ. ಸ್ಥಳ ಇಲ್ಲ ಅಂತ ನಾನೇ ಇಬ್ಬರನ್ನು ಪಕ್ಷಕ್ಕೆ ಕರೆದುಕೊಂಡಿಲ್ಲ ಎಂದು ಹಾವೇರಿಯಲ್ಲಿ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಇನ್ನು ತೆಲಂಗಾಣ ಸಿಎಂ ಹಣದ ಆಮಿಷ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನನಗೆ ಇದರ ಬಗ್ಗೆ ಮಾಹಿತಿ ಇಲ್ಲ. ನಾನು ನೋಡಿ ಪ್ರತಿಕ್ರಿಯೆ ಕೊಡುತ್ತೇನೆ. ಅವರ ಪಕ್ಷದವರು ಏನಾದರೂ ಸ್ಟ್ರಾಟಜಿ ಮಾಡಿಕೊಳ್ಳಲಿ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ವಿಫಲವಾಗಿದೆ. ಮೊದಲು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಅಂದ್ರು ಅಮಿತ್ ಶಾ. ಈಗ ಮೋದಿ ನೇತೃತ್ವದಲ್ಲಿ ಚುನಾವಣೆ ಅಂತಿದ್ದಾರೆ. ಸರ್ಕಾರ ಮೂರು ವರ್ಷ ಇತ್ತು. ಮೊದಲೆ ಯೋಜನೆ ಮಾಡಬಹುದಿತ್ತು. ನಾವು ಘೋಷಣೆ ಮಾಡಿದ ಮೇಲೆ ನಾವು ಕೊಡ್ತೆವೆ ಅಂತಿದ್ದಾರೆ. ಭ್ರಷ್ಟಾಚಾರ ಹೊರಗೆ ಬರ್ತಾ ಇದೆ. ಕೊರೊನಾ ಭ್ರಷ್ಟಾಚಾರ, ಪಿಎಸ್ಐ, ಗುತ್ತಿಗೆದಾರರ ಆರೋಪ ಬಂದಿದೆ ಎಂದರು.
ಎಲ್ಲಾ ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿಯವರು ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಜ.23, 24 & 25ರಂದು 3 ದಿನ ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಿದ್ದು 30ಕ್ಕೂ ಹೆಚ್ಚು ಇಲಾಖೆಗಳ ಜೊತೆ ಚರ್ಚಿಸಿ ಫೆ.17ರಂದು ಬಜೆಟ್ ಮಂಡಿಸಲು ಸಿಎಂ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ.
#ViralVideos : ನಾಯೀಮರಿ ನಾಯೀಮರಿ ಎಲ್ಲಿಗೆ ಹೊರಟಿದ್ದೆ? ನಿಮ್ಮ ಶುಕ್ರವಾರವನ್ನು ಮುದಗೊಳಿಸುವ ಈ ವಿಡಿಯೋ#viral #PuppyDogPals #Trending #trendingvideos https://t.co/Gnt25DFsx5
— TV9 Kannada (@tv9kannada) January 20, 2023
ಮೈಸೂರು ಜಿಲ್ಲೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ. ಕ್ಷೇತ್ರ ಶಾಸಕ ಜಿಟಿ ದೇವೇಗೌಡ ವಿರುದ್ಧ ಸಿಡಿದೆದ್ದ ಜೆಡಿಎಸ್ ಬಂಡಾಯ ನಾಯಕರು ಇಂದು (ಜ.20) ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರಲಿದ್ದಾರೆ. ಈ ಸಂಬಂಧ ಬೆಳಗ್ಗೆ 12 ಗಂಟೆಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಲಿಂಗದೇವರ ಕೊಪ್ಪಲಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಜಿ.ಟಿ. ದೇವೆಗೌಡರನ್ನು ಮತ್ತೆ ಜೆಡಿಎಸ್ ಗೆ ಸೇರಿಸಿಕೊಂಡಿದ್ದಕ್ಕೆ ಕೆಲ ನಾಯಕರು ಪಕ್ಷ ತೊರೆದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ದೇವರಾಜು, ಕೆಂಪನಾಯಕ, ಕಾಟೂರು ದೇವರಾಜು ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ಜ.20) ಬೆಳಗ್ಗೆ 11.30ಕ್ಕೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12ಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಜೊತೆ ಸಭೆ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ಸುತ್ತೂರು ಜಾತ್ರೆಯಲ್ಲಿ ಭಾಗಿಯಾಗಲಿದ್ದು, ಸಂಜೆ 6 ಗಂಟೆಗೆ ಮೈಸೂರು, ಚಾಮರಾಜನಗರ ಜಿಲ್ಲೆಯ ಪಕ್ಷದ ಮುಖಂಡರ ಜತೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪಕ್ಷ ಸಂಘಟನೆ, ಮುಂದಿನ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ಮಾಡಿ, ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಸಂಸದ, ಕಾಂಗ್ರೆಸ್ ನಾಯಕ ರಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಕರ್ನಾಟಕಕ್ಕೆ ಬಂದು ಹೋದ ನಂತರ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬೂಸ್ಟರ್ ಡೋಸ್ ಸಿಕ್ಕಂತಾಗಿದ್ದು, ಈಗ ಎರಡು ತಂಡಗಳಾಗಿ ರಾಜ್ಯಾದ್ಯಂತ ಬಸ್ ಯಾತ್ರೆ “ಪ್ರಜಾಧ್ವನಿ” ಮಾಡುತ್ತಿದ್ದಾರೆ. ಇದರ ಭಾಗವಾಗಿ ಜನವರಿ 23 ರಂದು ಬಸ್ ಯಾತ್ರೆ ಕೋಲಾರಕ್ಕೆ ಬರಲಿದೆ. ಈ ಸಂಬಂಧ ಕೋಲಾರ ನಗರದ ಟಮಕ ಬಳಿ ವೇದಿಕೆ ಹಾಕಲು ನಿರ್ಧರಿಸಲಾಗಿದೆ. 10 ಎಕರೆ ಖಾಸಗಿ ಜಮೀನಿನಲ್ಲಿ ವೇದಿಕೆ ನಿರ್ಮಿಸಲು ನಿರ್ಧಿರಿಸಿದ್ದು, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಅವರು ಸ್ಥಳ ವೀಕ್ಷಣೆ ಮಾಡಿದ್ದು, ಕಾರ್ಯಕ್ರಮದಲ್ಲಿ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾಗಿ ಈಗಾಗಲೆ ಘೋಷಣೆ ಮಾಡಿದ್ದು, ಈ ಸಮಾವೇಶದ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಬೆಂಗಳೂರು: ವಿಧಾನಸಭಾ ಚುನಾವಣಾ ಪೂರ್ವ ಸಿದ್ಧತೆಯ ಭಾಗವಾಗಿ ಬಿಜೆಪಿ ಇಂದು (ಜ.20) ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮಧ್ಯಾಹ್ನ 2.30ಕ್ಕೆ ಬೂತ್ ವಿಜಯ, ವಿಜಯ ಸಂಕಲ್ಪ ಅಭಿಯಾನಗಳ ಅನುಷ್ಠಾನ ಸಂಬಂಧ ಸಭೆ ನಡೆಸಲಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಉಸ್ತುವಾರಿಗಳು, ವಿಭಾಗ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖರ ಭಾಗಿಯಾಗಲಿದ್ದಾರೆ.
Published On - 9:48 am, Fri, 20 January 23