Amethi Lok Sabha: ಕಾಂಗ್ರೆಸ್ ಭದ್ರಕೋಟೆ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಗೆ ಸೋಲು

|

Updated on: Jun 04, 2024 | 5:40 PM

2019 ರ ಲೋಕಸಭಾ ಚುನಾವಣೆಯಲ್ಲಿ, ಸ್ಮೃತಿ ಇರಾನಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ 2004 ರಿಂದ ಅಮೇಠಿ ಸ್ಥಾನವನ್ನು ಪ್ರತಿನಿಧಿಸಿದ್ದು, 2019 ರವರೆಗೆ ಸತತ ಮೂರು ಅವಧಿಗೆ ಕ್ಷೇತ್ರದಿಂದ ಸಂಸತ್ತಿನ ಸದಸ್ಯರಾಗಿದ್ದರು.

Amethi Lok Sabha: ಕಾಂಗ್ರೆಸ್ ಭದ್ರಕೋಟೆ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಗೆ ಸೋಲು
ಸ್ಮೃತಿ ಇರಾನಿ
Follow us on

ದೆಹಲಿ ಜೂನ್ 04:  ಅಮೇಠಿಯಲ್ಲಿ (Amethi Lok Sabha seat) ಬಿಜೆಪಿಯ (BJP) ಹಾಲಿ ಸಂಸದೆ ಸ್ಮೃತಿ ಇರಾನಿ(Smriti Irani) ಸೋತಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ (Kishori Lal Sharma) ವಿಜಯದ ನಗೆ ಬೀರಿದ್ದಾರೆ. ಸ್ಮೃತಿ ಇರಾನಿ ಈ ಸ್ಥಾನದಿಂದ ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದು ರಾಹುಲ್ ಗಾಂಧಿ ಅವರ ಕುಟುಂಬದ ಸಹಾಯಕ ಕೆಎಲ್ ಶರ್ಮಾ ಅವರು ಕಾಂಗ್ರೆಸ್ ಭದ್ರಕೋಟೆಯಿಂದ ಸಂಸತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 4.6 ಲಕ್ಷ ಮತಗಳ ಅಂತರದಿಂದ ಕಿಶೋರಿ ಲಾಲ್ ಶರ್ಮಾ ಇಲ್ಲಿ ಗೆದ್ದಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ, ಸ್ಮೃತಿ ಇರಾನಿ ಅವರು ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿದ್ದ ರಾಹುಲ್ ಗಾಂಧಿ ಅವರನ್ನು 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ 2004 ರಿಂದ ಅಮೇಠಿ ಸ್ಥಾನವನ್ನು ಪ್ರತಿನಿಧಿಸಿದ್ದು, 2019 ರವರೆಗೆ ಸತತ ಮೂರು ಅವಧಿಗೆ ಕ್ಷೇತ್ರದಿಂದ ಸಂಸತ್ತಿನ ಸದಸ್ಯರಾಗಿದ್ದರು.

ಇದು ಗಾಂಧಿ ಕುಟುಂಬದ ಗೆಲುವು: ಕಿಶೋರಿ ಲಾಲ್ ಶರ್ಮಾ

ಸ್ಮೃತಿ ಇರಾನಿ ವಿರುದ್ಧ ಗೆಲುವು ಸಾಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಾ, ಇದು ಗಾಂಧಿ ಕುಟುಂಬ ಮತ್ತು ಅಮೇಠಿ ಜನರ ಗೆಲವು ಎಂದಿದ್ದಾರೆ.

ಚುನಾವಣೆಯ ಸಿದ್ಧತೆಯ ಹೊತ್ತಲ್ಲಿ ರಾಹುಲ್ ಗಾಂಧಿ ಅಥವಾ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಈ ಸ್ಥಾನದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹಬ್ಬಿತ್ತು. ಆದರೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಶರ್ಮಾ ಅವರನ್ನು ಅಮೇಠಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಶರ್ಮಾ ನಾಮ ನಿರ್ದೇಶನದ ಮೂಲಕ 25 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಗಾಂಧಿಯೇತರ ಅಭ್ಯರ್ಥಿಯೊಬ್ಬರು ಅಮೇಠಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ಕಿಶೋರಿ ಲಾಲ್ ಶರ್ಮಾ ಯಾರು?

ಕಿಶೋರಿ ಲಾಲ್ ಶರ್ಮಾ ಗಾಂಧಿ ಕುಟುಂಬದ ಆಪ್ತರು. ಅವರು ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿಯವರ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಕಿಶೋರಿ ಲಾಲ್ ಶರ್ಮಾ ರಾಯ್ ಬರೇಲಿ ಮತ್ತು ಅಮೇಠಿಯಲ್ಲಿ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಪ್ರಮುಖ ವ್ಯಕ್ತಿಯಾಗಿದ್ದಾರೆ. ಕೆಎಲ್ ಶರ್ಮಾ ಪಂಜಾಬ್ ಮೂಲದವರು. ಅವರು 1983 ರಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿ ಅಮೇಠಿಗೆ ಬಂದ ಅವರು ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ (ದಿವಂಗತ) ರಾಜೀವ್ ಗಾಂಧಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.

1991ರಲ್ಲಿ ರಾಜೀವ್ ಗಾಂಧಿಯವರ ಮರಣದ ನಂತರ ಕೆಎಲ್ ಶರ್ಮಾ ಅವರು ಅಮೇಠಿಯಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಲೇ ಇದ್ದರು. 1990 ರ ದಶಕದಲ್ಲಿ ಗಾಂಧಿ ಕುಟುಂಬವು ಚುನಾವಣಾ ರಾಜಕೀಯದಿಂದ ದೂರವಿದ್ದಾಗ, ಅವರು ಇತರ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. 1999 ರಲ್ಲಿ ಸೋನಿಯಾ ಗಾಂಧಿಯವರ ಮೊದಲ ಚುನಾವಣಾ ಗೆಲುವಿನಲ್ಲಿ ಕಿಶೋರಿ ಲಾಲ್ ಶರ್ಮಾ ಪ್ರಮುಖ ಪಾತ್ರ ವಹಿಸಿದರು.

ಸೋನಿಯಾ ಗಾಂಧಿ ಅವರು ಅಮೇಠಿ ಸ್ಥಾನವನ್ನು ತೆರವು ಮಾಡಿ ರಾಯ್ ಬರೇಲಿಗೆ ತೆರಳಿದ ನಂತರ, ಕೆಎಲ್ ಶರ್ಮಾ ಅವರೊಂದಿಗೆ  ತೆರಳಿದ್ದರು. 2004ರಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾದರು. ನಂತರ, ಕೆಎಲ್ ಶರ್ಮಾ ಅಮೇಠಿ ಮತ್ತು ರಾಯ್ ಬರೇಲಿ ಎರಡರಲ್ಲೂ ಪಕ್ಷದ ವ್ಯವಹಾರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಕೆಎಲ್ ಶರ್ಮಾ ಅವರು ಬಿಹಾರ ಮತ್ತು ಪಂಜಾಬ್‌ನಲ್ಲಿಯೂ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Lok Sabha Result: ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು

ಕಾಂಗ್ರೆಸ್ ಭದ್ರಕೋಟೆ

ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯಂತಹ ಗಾಂಧಿ-ನೆಹರೂ ಕುಟುಂಬದ ಸದಸ್ಯರಿಂದ ಪ್ರತಿನಿಧಿಸಲ್ಪಟ್ಟಿರುವ ಅಮೇಠಿಯು ವರ್ಷಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಆದಾಗ್ಯೂ, 2019 ರ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿಯನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ನ ಕೋಟೆಯನ್ನು ಭೇದಿಸಿದಾಗ ಪಕ್ಷವು ಭಾರಿ ಹಿನ್ನಡೆಯನ್ನು ಎದುರಿಸಿತು. ಈ ಸ್ಥಾನವು 1980 ರಿಂದ ಗಾಂಧಿ ಕುಟುಂಬಕ್ಕೆ ನಿಷ್ಠವಾಗಿತ್ತು. ಸೋನಿಯಾ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ನಂತರ ಅಮೇಠಿಯನ್ನು ಪ್ರತಿನಿಧಿಸಿದರು. 1999 ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು. ಆದಾಗ್ಯೂ, ಅವರು ಐದು ವರ್ಷಗಳ ನಂತರ ತಮ್ಮ ಮಗ ರಾಹುಲ್‌ಗಾಗಿ ಸ್ಥಾನವನ್ನು ನೀಡಿ ಬರೇಲಿಯಲ್ಲಿ ಸ್ಪರ್ಧಿಸಿದರು.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Tue, 4 June 24