ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿರುವೆ: ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಸೋನಿಯಾ ಪ್ರಚಾರ

|

Updated on: May 17, 2024 | 6:42 PM

ನೀವು ನನ್ನನ್ನು ನಿಮ್ಮವರಾಗಿ ಕಂಡಂತೆ, ಈಗ ರಾಹುಲ್ ಅವರನ್ನು ಅದೇ ರೀತಿ ನಡೆಸಿಕೊಳ್ಳಿ. ಅವರು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಇಂದಿರಾ ಗಾಂಧಿ ಮತ್ತು ರಾಯಬರೇಲಿಯ ಜನರು ನನಗೆ ಕಲಿಸಿದ ಪಾಠಗಳನ್ನು ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಕಲಿಸಿದೆ. ಎಲ್ಲರನ್ನೂ ಗೌರವಿಸುವುದು, ದುರ್ಬಲರನ್ನು ರಕ್ಷಿಸುವುದು, ಜನರ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಡುವುದನ್ನು ಕಲಿಸಿದೆ. ಭಯಪಡಬೇಡಿ, ಏಕೆಂದರೆ ನಿಮ್ಮ ಹೋರಾಟದ ಬೇರುಗಳು ಮತ್ತು ಸಂಪ್ರದಾಯಗಳು ಬಹಳ ಆಳವಾದವು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿರುವೆ: ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಸೋನಿಯಾ ಪ್ರಚಾರ
ರಾಹುಲ್ ಗಾಂಧಿ
Follow us on

ರಾಯ್‌ಬರೇಲಿ ಮೇ 17: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ (Raebareli) ರಾಹುಲ್ ಗಾಂಧಿ (Rahul Gandhi) ಪರ ಚುನಾವಣಾ ಪ್ರಚಾರ ಮಾಡಿದ ಸೋನಿಯಾ ಗಾಂಧಿ (Sonia Gandhi), ಅಲ್ಲಿ ನೆರೆದಿದ್ದ ಜನರಲ್ಲಿ, ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿರುವೆ. ಆತ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವ ತಾಯಿ ಸೋನಿಯಾ ಗಾಂಧಿ (77) ಅವರು ಪ್ರತಿನಿಧಿಸುವ ಕ್ಷೇತ್ರವಾದ ರಾಯ್‌ಬರೇಲಿಯ ಕುಟುಂಬದ ಭದ್ರಕೋಟೆಯಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ.
“ಮೇ ಆಪ್ಕೋ ಅಪ್ನಾ ಬೇಟಾ ಸೌಪ್ ರಹೀ ಹೂಂ (ನಾನು ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ)” ಎಂದು ಸೋನಿಯಾ ಗಾಂಧಿ ಹೇಳಿದಾಗ ಸಭಿಕರು ಭಾರೀ ಚಪ್ಪಾಳೆಯೊಂದಿಗೆ ರಾಹುಲ್ ಗಾಂಧಿಯನ್ನು ಸ್ವಾಗತಿಸಿದ್ದಾರೆ. ಸೋನಿಯಾ ಗಾಂಧಿ ಅವರು ಐದು ಬಾರಿ ಪ್ರತಿನಿಧಿಸಿದ ಕ್ಷೇತ್ರವಾಗಿದೆ ರಾಯ್‌ಬರೇಲಿ.

ಜೈಸಾ ಆಪ್ನೆ ಮುಝೆ ಅಪ್ನಾ ಮಾನ, ವೈಸೇ ಹೀ ರಾಹುಲ್ ಲೋ ಅಪ್ನಾ ಮಾನ್ ಕರ್ ರಖನಾ ಹೈ. ಯೇ ರಾಹುಲ್ ಆಪ್ ಕೊ ನಿರಾಶ್ ನಹೀ ಕರೇಂಗೆ (ನೀವು ನನ್ನನ್ನು ನಿಮ್ಮವರಾಗಿ ಕಂಡಂತೆ, ಈಗ ರಾಹುಲ್ ಅವರನ್ನು ಅದೇ ರೀತಿ ನಡೆಸಿಕೊಳ್ಳಿ. ಅವರು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ)” ಎಂದು ಸೋನಿಯಾ ಹೇಳಿದ್ದಾರೆ. ಇಂದಿರಾ ಗಾಂಧಿ ಮತ್ತು ರಾಯಬರೇಲಿಯ ಜನರು ನನಗೆ ಕಲಿಸಿದ ಪಾಠಗಳನ್ನು ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ಕಲಿಸಿದೆ. ಎಲ್ಲರನ್ನೂ ಗೌರವಿಸುವುದು, ದುರ್ಬಲರನ್ನು ರಕ್ಷಿಸುವುದು, ಜನರ ಹಕ್ಕುಗಳಿಗಾಗಿ ಅನ್ಯಾಯದ ವಿರುದ್ಧ ಹೋರಾಡುವುದನ್ನು ಕಲಿಸಿದೆ. ಭಯಪಡಬೇಡಿ, ಏಕೆಂದರೆ ನಿಮ್ಮ ಹೋರಾಟದ ಬೇರುಗಳು ಮತ್ತು ಸಂಪ್ರದಾಯಗಳು ಬಹಳ ಆಳವಾದವು” ಎಂದು 2004 ರಲ್ಲಿ ರಾಯ್‌ಬರೇಲಿಯಿಂದ ಸಂಸದರಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಹೇಳಿದರು.

ರಾಹುಲ್ ಗಾಂಧಿಯವರ ಚುನಾವಣಾ ರ‍್ಯಾಲಿ

ತನ್ನನ್ನು ಆಯ್ಕೆ ಮಾಡಿದ ರಾಯ್‌ಬರೇಲಿಯ ಜನತೆಗೆ ಸೋನಿಯಾ ಗಾಂಧಿ ಧನ್ಯವಾದ ಹೇಳಿದ್ದಾರೆ.

“ದೀರ್ಘಕಾಲದ ನಂತರ ನಿಮ್ಮ ನಡುವೆ ಇರುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ನನ್ನ ಹೃದಯದಾಳದಿಂದ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಿಮ್ಮ ಮುಂದೆ ತಲೆಬಾಗಿ ಗೌರವದಿಂದ ನಮಸ್ಕರಿಸುತ್ತಿದೆ. ನೀವು ನನಗೆ ಸೇವೆ ಮಾಡುವ ಅವಕಾಶವನ್ನು ನೀಡಿದ್ದೀರಿ. 20 ವರ್ಷಗಳ ಸಂಸದೆಯಾಗಿ ಇದು ನನ್ನ ಜೀವನದ ಬಹುದೊಡ್ಡ ಆಸ್ತಿ ಎಂದಿದ್ದಾರೆ. 53 ವರ್ಷದ ರಾಹುಲ್ ಗಾಂಧಿ ಅವರು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.

“ರಾಯಬರೇಲಿ ನನ್ನ ಕುಟುಂಬ, ಅದೇ ರೀತಿ ಅಮೇಠಿ ಕೂಡ ನನ್ನ ಮನೆ. ಈ ಸ್ಥಳದೊಂದಿಗೆ ನನ್ನ ಜೀವನದ ನವಿರಾದ ನೆನಪುಗಳು ಮಾತ್ರವಲ್ಲದೆ ನಮ್ಮ ಕುಟುಂಬದ ಬೇರುಗಳು ಕಳೆದ 100 ವರ್ಷಗಳಿಂದ ಈ ಮಣ್ಣಿನೊಂದಿಗೆ ಸಂಬಂಧ ಹೊಂದಿವೆ. ಈ ಸಂಬಂಧವು ಪವಿತ್ರವಾಗಿದೆ. ಗಂಗಾ ಮಾತೆ, ಅವಧ್ ಮತ್ತು ರಾಯ್‌ಬರೇಲಿಯ ರೈತರ ಚಳವಳಿಯೊಂದಿಗೆ ಪ್ರಾರಂಭವಾಯಿತು, ಅದು ಇಂದಿಗೂ ಮುಂದುವರೆದಿದೆ” ಎಂದು ಸೋನಿಯಾ ಗಾಂಧಿ ಹಿಂದಿಯಲ್ಲಿ ಹೇಳಿದ್ದಾರೆ. ಮಗಳು ಪ್ರಿಯಾಂಕಾ ಮತ್ತು ಮಗ ರಾಹುಲ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸ್ಥಾನವನ್ನು ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿ ಮತ್ತು ಅಜ್ಜ ಫಿರೋಜ್ ಗಾಂಧಿಯವರು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮೇ 20 ರಂದು ರಾಯ್‌ಬರೇಲಿ ಮತ್ತು ಸಮೀಪದ ಅಮೇಠಿಯಲ್ಲಿ ಮತದಾನ ನಡೆಯಲಿದೆ.

ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಕಣಕ್ಕಿಳಿದಿದ್ದಾರೆ. ಶರ್ಮಾ ಅವರು ಗಾಂಧಿ ಕುಟುಂಬದ ದೀರ್ಘಕಾಲದ ನಿಷ್ಠಾವಂತರಾಗಿದ್ದಾರೆ.

“ನಾನು 42 ವರ್ಷಗಳ ಹಿಂದೆ ನನ್ನ ತಂದೆಯೊಂದಿಗೆ (ರಾಜೀವ್ ಗಾಂಧಿ) ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ನಾನು ರಾಜಕೀಯದ ಬಗ್ಗೆ ಏನು ಕಲಿತಿದ್ದೇನೆ, ಅದನ್ನು ಅಮೇಠಿ ಸಾರ್ವಜನಿಕರು ನನಗೆ ಕಲಿಸಿದ್ದಾರೆ, ಆಗ ರಸ್ತೆಗಳಿಲ್ಲ ಮತ್ತು ಅಭಿವೃದ್ಧಿ ಇರಲಿಲ್ಲ. ಇಲ್ಲಿನ ಜನರು ಮತ್ತು ನನ್ನ ತಂದೆಯ ನಡುವಿನ ಪ್ರೀತಿಯ ಸಂಬಂಧವನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಪರ ಮತ ಯಾಚಿಸಿದರು.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಇಡಿ ಚಾರ್ಜ್​​​ಶೀಟ್​​​ನಲ್ಲಿ ಅರವಿಂದ್ ಕೇಜ್ರಿವಾಲ್, ಎಎಪಿ ಆರೋಪಿ

“ಅದು ಕೂಡ (ನನ್ನ ಶೈಲಿ) ರಾಜಕೀಯವಾಗಿದೆ. ಹಾಗಾಗಿ ನಾನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಭಾವಿಸುವುದಿಲ್ಲ. ನಾನು ಅಮೇಠಿಗೆ ಸೇರಿದ್ದೆ, ಇದ್ದೇನೆ ಮತ್ತು ಸೇರುತ್ತೇನೆ” ಎಂದು ಅವರು ಒತ್ತಿ ಹೇಳಿದರು.  ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಎಲ್ಲಾ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:40 pm, Fri, 17 May 24