ಕರ್ನಾಟಕ ಲೋಕಸಭಾ ರಿಸಲ್ಟ್​ 2024: ಅತಿರಥರೇ ನೆಲಕ್ಕುರುಳಿದ್ದಾರೆ: ಮಹಾರಥರೆಲ್ಲ ಮಣ್ಣುಮುಕ್ಕಿದ್ದಾರೆ

|

Updated on: Jun 04, 2024 | 10:50 PM

Karnataka Lok Sabha Election Results 2024: ಅಂತಿಂಥ ಬೇಟೆಯಲ್ಲ ರಣಬೇಟೆ. ಬೇಟೆಗಾರರೇ ಇಲ್ಲಿ ಬೇಟೆಯಾಗಿದ್ದಾರೆ. ಅತಿರಥರೇ ನೆಲಕ್ಕುರುಳಿದ್ದಾರೆ. ಮಹಾರಥರೆಲ್ಲ ಮಣ್ಣುಮುಕ್ಕಿದ್ದಾರೆ. ನನಗೆ ಸೋಲೇಯಿಲ್ಲ, ನನ್ನ ಗೆಲ್ಲೋರೇ ಇಲ್ಲ ಅನ್ನುವಂತೆ ನಡೆಯುತ್ತಿದ್ದವ್ರಿಗೆ, ಸೋಲಿನ ಸುತ್ತಿಗೆಯ ಹೊಡೆತ ಬಿದ್ದಿದೆ. ರಣಕಲಿಗಳಂತೆ ಮೆರೆಯುತ್ತಿದ್ದ ನಾಯಕರನ್ನ ಬೇಟೆಯಾಡುವ ಮೂಲಕ ದೈತ್ಯಸಂಹಾರಿಗಳು ತಲೆ ಎತ್ತಿದ್ದಾರೆ.

ಕರ್ನಾಟಕ ಲೋಕಸಭಾ ರಿಸಲ್ಟ್​ 2024: ಅತಿರಥರೇ ನೆಲಕ್ಕುರುಳಿದ್ದಾರೆ: ಮಹಾರಥರೆಲ್ಲ ಮಣ್ಣುಮುಕ್ಕಿದ್ದಾರೆ
ಕರ್ನಾಟಕ ಲೋಕಸಭಾ ರಿಸಲ್ಟ್​ 2024: ಅತಿರಥರೇ ನೆಲಕ್ಕುರುಳಿದ್ದಾರೆ...ಮಹಾರಥರೆಲ್ಲ ಮಣ್ಣುಮುಕ್ಕಿದ್ದಾರೆ
Follow us on

ಬೆಂಗಳೂರು, ಜೂನ್​ 04: ಮೋಡದೊಳಗೆ ಮಿಂಚಿದ ಸಿಡಿಲಿನಂತೆ. ಒಮ್ಮಿಂದೊಮ್ಮೆ ಚಿಮ್ಮಿದ ಜ್ವಾಲಾಮುಖಿಯಂತೆ. ದಗ್ಗನೆ ಬಿದ್ದ ಧೂಮಕೇತುವಿನಂತೆ ರಾಜ್ಯ (Lok Sabha Election) ರಾಜಕೀಯದಲ್ಲಿ ಹೊಸ ಕಲಿಗಳು ಉದ್ಭವಿಸಿದ್ದಾರೆ. ಅದ್ರಲ್ಲೂ, ಕಾಂಗ್ರೆಸ್ (Congress) ಪಾಳೆಯದ ಟ್ರಬಲ್ ಶೂಟರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ರ ಸಹೋದರ ಡಿ.ಕೆ.ಸುರೇಶ್​ ಅವರನ್ನೇ ಬಗ್ಗುಬಡಿಯುವ ಮೂಲಕ, ಡಾ.ಸಿ.ಎನ್​ಮಂಜುನಾಥ್​ ಅವರು ಹಲ್​ಚಲ್​ ಸೃಷ್ಟಿಸಿದ್ದಾರೆ.

ಕಾಂಗ್ರೆಸ್​​ ಪಾಲಿಗೆ ಸಂಕಷ್ಟ ಬಂದಾಗಲೆಲ್ಲ ಥಟ್​ ಅಂತ ನೆನಪಾಗುತ್ತಿದ್ದದ್ದು, ಡಿ.ಕೆ.ಬ್ರದರ್ಸ್​​. ಆದರೆ ಬಂಡೆಯಂತಹ ಸೋದರರಿಗೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್​.ಮಂಜುನಾಥ್​​ ಶಾಕ್​ ಕೊಟ್ಟಿದ್ದಾರೆ. ರೋಚಕತೆ ಹುಟ್ಟಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ, ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾಕ್ಟರ್​ ಮಂಜುನಾಥ್ 10 ಲಕ್ಷದ 78 ಸಾವಿರದ 914 ಮತಗಳನ್ನ ಪಡೆದ್ರೆ, ಡಿ.ಕೆ.ಸುರೇಶ್ 8ಲಕ್ಷದ 9324 ಮತಗಳನ್ನಷ್ಟೇ ಪಡೆದಿದ್ದಾರೆ. ಹೀಗಾಗಿ, 2ಲಕ್ಷದ 69 ಸಾವಿರದ 590 ಮತಗಳ ಅಂತರದಿಂದ ಮಂಜುನಾಥ್​ ಜಯಸಾಧಿಸಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ಗೆಲುವು ಸಾಧಿಸಿದ ಶ್ರೇಯಸ್ ಪಟೇಲ್

ಹಾಸನ ಅಂದ್ರೆ ಬರೀ ದೇವೇಗೌಡರದ್ದೇ ರಾಜಕೀಯ ಅನ್ನೋ ಮಾತಿತ್ತು. ಯಾಕಂದ್ರೆ, 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಸ್ವಾಮಿಗೌಡ ಎದುರು, ದೇವೇಗೌಡರು ಸೋತಿದ್ದೇ ಕೊನೆ. ಆ ಬಳಿಕ ಹಾಸನ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಸೋತೇ ಇರಲಿಲ್ಲ. ಆದ್ರೀಗ, ಪುಟ್ಟಸ್ವಾಮಿ ಗೌಡರ ಮೊಮ್ಮಗ, ಶ್ರೇಯಸ್​ ಪಟೇಲ್​​​​​ ಜೆಡಿಎಸ್​ ಅಧಿಪತ್ಯಕ್ಕೆ ತೆರೆ ಎಳೆದಿದ್ದಾರೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಜ್ವಲ್​ ರೇವಣ್ಣ ವಿರುದ್ಧ ಗೆದ್ದು ಬೀಗಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ ರಾಜ್ಯ ಸಂಸದರು, ಇಲ್ಲಿದೆ ಫೋಟೋಸ್​​

ಹಾಸನ ಕಣದಲ್ಲಿ ಕೈ ಅಭ್ಯರ್ಥಿ ಶ್ರೇಯಸ್ ಪಟೇಲ್ 6 ಲಕ್ಷದ 73 ಸಾವಿರದ 313 ಮತಗಳನ್ನ ಪಡೆದ್ರೆ, ಪ್ರಜ್ವಲ್ ರೇವಣ್ಣ 6 ಲಕ್ಷದ 30 ಸಾವಿರದ 646 ಮತಗಳನ್ನ ಪಡೆದಿದ್ದಾರೆ. ಹೀಗಾಗಿ, 42, 667 ಮತಗಳ ಅಂತರದಿಂದ ಶ್ರೇಯಸ್​ ಗೆಲುವು ಸಾಧಿಸಿದ್ದಾರೆ.

ನಡೀಲಿಲ್ಲ ‘ರೆಡ್ಡಿ’ಗಳ ದರ್ಬಾರ್​: ರಾಮುಲುಗೆ ಮತ್ತೆ ಸೋಲು!

ಜನಾರ್ದನ ರೆಡ್ಡಿ ಆಪ್ತಮಿತ್ರ ಮಾಜಿ ಸಚಿವ ಶ್ರೀರಾಮುಲು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ರು. ಆದ್ರೆ ಬಳ್ಳಾರಿ ಕಣದಿಂದ ಮತ್ತೆ ಅದೃಷ್ಟಪರೀಕ್ಷೆಗೆ ಇಳಿದಿದ್ರು. ಜರ್ನಾದನ ರೆಡ್ಡಿ ಕೂಡ ಬೆನ್ನಿಗೆ ನಿಂತಿದ್ರು. ಆದ್ರೆ, ಅವ್ರಿಗೆ ಗೆಲುವು ಸಿಗಲೇ ಇಲ್ಲ. ಸಂಡೂರಿನ ಕಾಂಗ್ರೆಸ್​ ಎಂಎಲ್​ಎ ಆಗಿದ್ದ ಇ.ತುಕಾರಾಂ, ರಾಮುಲುಗೆ ಸೋಲುಣಿಸಿದ್ಧಾರೆ.

ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಮ್‌ 7ಲಕ್ಷದ 30 ಸಾವಿರದ 845 ಮತ ಪಡೆದಿದ್ರೆ, ಬಿ.ಶ್ರೀರಾಮುಲು 6 ಲಕ್ಷದ 31 ಸಾವಿರದ 853 ಮತ ಬಿದ್ದಿವೆ. ಹೀಗಾಗಿ 98 ಸಾವಿರದ 992 ಮತಗಳ ಅಂತರದಿಂದ ರಾಮುಲು ಸೋಲು ಅನುಭವಿಸಿದ್ದಾರೆ.

ಕುತೂಹಲ ಹುಟ್ಟಿಸಿದ್ದ ಲೋಕಸಭಾ ಅಖಾಡದಲ್ಲಿ ಹಲವು ನಾಯಕರು ಗೆದ್ದು ಬೀಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ 8 ಲಕ್ಷದ 51 ಸಾವಿರದ 881 ವೋಟ್​ ಪಡೆದಿದ್ರೆ, ಕೈ ಅಭ್ಯರ್ಥಿ ಸ್ಟಾರ್ ಚಂದ್ರುಗೆ 5 ಲಕ್ಷದ 67 ಸಾವಿರದ 261 ವೋಟ್​ ಮಾತ್ರಬಿದ್ದಿವೆ. 2 ಲಕ್ಷದ 84 ಸಾವಿರ ಮತಗಳ ಅಂತರದಿಂದ ಹೆಚ್​ಡಿಕೆ ಜಯ ಸಾಧಿಸಿದ್ದಾರೆ.

ಇನ್ನು, ಬಿಜೆಪಿ ವಿರುದ್ಧ ಬಂಡಾಯ ಸಾರಿದ್ದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಮಣ್ಣುಮುಕ್ಕಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ 2 ಲಕ್ಷದ 43 ಸಾವಿರದ 715 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ರಾಘವೇಂದ್ರ 7 ಲಕ್ಷದ 78 ಸಾವಿರದ 721 ಮತ ಪಡದರೆ, ಕೈ ಅಭ್ಯರ್ಥಿ ಗೀತಾ​ 5 ಲಕ್ಷದ 35,006 ಮತ ಪಡೆದಿದ್ಧಾರೆ. ಆದ್ರೆ, ಪಕ್ಷೇತರ ಅಭ್ಯರ್ಥಿ K.S.ಈಶ್ವರಪ್ಪಗೆ ಬರೀ 30,050 ಮತಗಳಷ್ಟೇ ಬಿದ್ದಿವೆ.

ವಿಧಾನಸಭೆಯಲ್ಲಿ ಸೋತಿದ್ದವರಿಗೆ ರಾಜಕೀಯ ಪುನರ್ಜನ್ಮ

ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಕಹಿ ಸವಿದಿದ್ದ ಐವರು ನಾಯಕರಿಗೆ, ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಸಿಹಿ ಧಕ್ಕಿದೆ. ಆಗ ಕೈ ಬಿಟ್ಟಿದ್ದ ಮತದಾರರೇ ಈಗ ಕೈ ಹಿಡಿದು ಮೇಲಕ್ಕೆ ಎತ್ತಿದ್ದಾರೆ. ರಾಜಕೀಯ ಮರುಜನ್ಮ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್, ವಿಧಾನಸಭೆಯಲ್ಲಿ ಹೀನಾಯವಾಗಿ ಸೋತಿದ್ರು. ಆದ್ರೀಗ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಶಿರಸಿಯಲ್ಲಿ ಸೋಲನುಭವಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಕ್ಷೇತ್ರದಲ್ಲಿ ವಿಕ್ಟರಿ ಭಾರಿಸಿದ್ದಾರೆ. ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರ. ಎರಡೂ ಕಡೆ ಸೋತಿದ್ದ ವಿ.ಸೋಮಣ್ಣಗೆ ತುಮಕೂರು ಒಲಿದಿದೆ. ಹುಬ್ಬಳ್ಳಿ ಸೆಂಟ್ರಲ್​ನಲ್ಲಿ ಸೋತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈಗ ಬೆಳಗಾವಿಯಲ್ಲಿ ವಿಕ್ಟರಿ ತೋರಿಸಿದ್ದಾರೆ. ಇತ್ತ ಕ್ಷೇತ್ರ ಬಿಟ್ಟು ಬಂದ್ರೂ ಗೋವಿಂದ ಕಾರಜೋಳ ಚಿತ್ರದುರ್ಗ ಗೆದ್ದಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಅಮಿತ್​ ಶಾ ಬುಲಾವ್: ನಾಳೆ ದೆಹಲಿಗೆ ಬರುವಂತೆ ಸೂಚನೆ

ತವರು ಜಿಲ್ಲೆ ಬಳ್ಳಾರಿಯಲ್ಲೇ ಶ್ರೀರಾಮುಲು 2 ಬಾರಿ ಮುಖಭಂಗ ಅನುಭವಿಸಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಅಂಜಲಿ ನಿಂಬಾಳ್ಕರ್ ಸೋತ್ರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್​ನ ಸೌಮ್ಯಾರೆಡ್ಡಿ ಕೂಡ ಸೋಲನ್ನ ಒಪ್ಪಿಕೊಂಡಿದ್ದಾರೆ.

10 ಸಚಿವರ ಮಕ್ಕಳ ಕುಸ್ತಿ: ಐವರಿಗೆ ಜಯ!

ಹೊಸ ಅಭ್ಯರ್ಥಿಗಳ ಹುಡುಕಾಟ ನಡೆಸಿ ಬಂಡಾಯದ ಬೇಗೆ, ಸೋಲಿನ ಭೀತಿಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಹಾಲಿ ಸಚಿವರ ಮಕ್ಕಳು, ಸಂಬಂಧಿಕರಿಗೆ ಮಣೆ ಹಾಕಿತ್ತು. ಈ ಪೈಕಿ ಐವರು ಗೆದ್ದು ಬೀಗಿದ್ರೆ, ಉಳಿದ ಐವರು ಸೋಲು ಕಂಡಿದ್ದಾರೆ. ಬೀದರ್​ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಚಿಕ್ಕೋಡಿಯಲ್ಲಿ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಭಾವ ರಾಧಾಕೃಷ್ಣ, ದಾವಣಗೆರೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಚಾಮರಾಜನಗರದಲ್ಲಿ ಹೆಚ್.ಸಿ ಮಹದೇವಪ್ಪ ಪುತ್ರ ಸುನಿಲ್ ಬೋಸ್​ಗೆ ಜಯ ಒಲಿದಿದೆ. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಡಿಸಿಎಂ ಡಿಕೆಶಿ ಸಹೋದರ ಡಿ.ಕೆ.ಸುರೇಶ್, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್, ಬಾಗಲಕೋಟೆಯಲ್ಲಿ ಶಿವಾನಂದ್ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸಹೋದರಿ ಗೀತಾ, ಬೆಂಗಳೂರು ದಕ್ಷಿಣದಲ್ಲಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಪ್ರಬಲ ವರ್ಚಸ್ಸಿನ ನಡುವೆಯೂ ಸೋತಿದ್ದಾರೆ.

ಅಖಾಡದಲ್ಲಿ ಸೋತ ಸಂಸದರು!

ಬೆಂಗಳೂರು ಗ್ರಾಮಾಂತರದಲ್ಲಿ ಡಾಕ್ಟರ್ ಮಾಡಿದ ಆಪರೇಷನ್‌ಗೆ ಡಿ.ಕೆ ಸುರೇಶ್ ಸೋಲುಂಡಿದ್ದಾರೆ. ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಕಲಬುರಗಿಯಲ್ಲಿ ಖರ್ಗೆ ಅಳಿಯನ ವಿರುದ್ಧ ಉಮೇಶ್ ಜಾಧವ್ ಮಂಡಿಯೂರಿದ್ದಾರೆ. ಹಾಗೆಯೇ ಬೀದರ್‌ನಲ್ಲಿ ಖಂಡ್ರೆ ಪುತ್ರನ ವಿರುದ್ಧ ಭಗವಂತ್ ಖೂಬಾ, ಚಿಕ್ಕೋಡಿಯಲ್ಲಿ ರಾಜಾ ಅಮರೇಶ್ವರ್ ನಾಯಕ್ ರಾಯಚೂರಲ್ಲಿ ಸೋಲನಭವಿಸಿದ್ದಾರೆ.

ಕರುನಾಡ ಕುರುಕ್ಷೇತ್ರದ ಫಲಿತಾಂಶ ನಾನಾ ವಿಶೇಷಗಳಿಗೆ ಸಾಕ್ಷಿಯಾಗಿದ್ದು, ಹಲವು ಹೊಸತನಕ್ಕೆ ಕಾರಣವಾಗಿದೆ. ಅತ್ತ ಗ್ಯಾರಂಟಿಗೂ ಮನಸೋಲದೇ, ಬಿಜೆಪಿಯನ್ನೂ ಉಪ್ಪರಿಗೆ ಮೇಲೆ ಕೂರಿಸದೇ ಕರ್ನಾಟಕದ ಮತದಾರರು ಭವಿಷ್ಯ ಬರೆದಿದ್ದಾರೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9