ಬೆಂಗಳೂರು, ಮೇ 6: ಲೋಕಸಭೆ ಚುನಾವಣೆಯ (Lok Sabha Elections) ಮೂರನೇ ಹಂತದ ಮತದಾನ ಮೇ 7ರಂದು ಮಂಗಳವಾರ ನಡೆಯಲಿದ್ದು, ಕರ್ನಾಟಕದ 14 ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದೆ. ಕರ್ನಾಟಕದಲ್ಲಿ ಇದು ಎರಡನೇ ಹಂತದ ಮತದಾನವಾಗಿದೆ. ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದೀಗ ಮೂರನೇ ಹಂತದಲ್ಲಿ 11 ರಾಜ್ಯಗಳ 92 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಒಟ್ಟು 1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ ಸುಮಾರು 120 ಮಹಿಳೆಯರಾಗಿದ್ದಾರೆ.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಸಂಜೆ 6 ಗಂಟೆಯ ಒಳಗೆ ಮತಗಟ್ಟೆಗೆ ಬಂದವರಿಗೆ 6ರ ನಂತರವೂ ಅವಕಾಶ ದೊರೆಯಲಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ (ಶೇ 81.67), ಕೋಲಾರದಲ್ಲಿ (ಶೇ 78.27) ಮತ್ತು ತುಮಕೂರಿನಲ್ಲಿ (ಶೇ 78.05 ರಷ್ಟು) ಅತಿ ಹೆಚ್ಚು ಮತದಾನವಾಗಿತ್ತು. ಬೆಂಗಳೂರು ಸೆಟ್ರಲ್ನಲ್ಲಿ ಶೇ 54.06, ಬೆಂಗಳೂರು ದಕ್ಷಿಣದಲ್ಲಿ ಶೇ 53.17, ಬೆಂಗಳೂರು ಉತ್ತರದಲ್ಲಿ ಶೇ 54.45 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನವಾಗಿತ್ತು.
ಮೂರನೇ ಹಂತದಲ್ಲಿ ಗುಜರಾತ್ನ 25, ಕರ್ನಾಟಕದ 14, ಮಹಾರಾಷ್ಟ್ರದ 11, ಮಧ್ಯಪ್ರದೇಶದ 8, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂನ 4, ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 4, ಗೋವಾದ 2, ದಾದರ್-ನಗರ ಹವೇಲಿಯ 2 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಮೂರನೇ ಹಂತದಲ್ಲಿ ಕೇಂದ್ರ ಸಚಿವ ಅಮಿತ್ ಶಾ (ಗಾಂಧಿನಗರ), ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (ಗುಣಾ), ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ (ಪೋರಬಂದರ್), ಕೇಂದ್ರ ಸಚಿವ ಪರ್ಷೋತ್ತಮ್ ರೂಪಾಲಾ (ರಾಜ್ಕೋಟ್) ಸೇರಿದಂತೆ ಹಲವು ಹಿರಿಯ ನಾಯಕರ ಭವಿಷ್ಯ ಮತಯಂತ್ರ ಸೇರಲಿದೆ.
ಇದನ್ನೂ ಓದಿ: ಮತದಾನ ಮಾಡಿ ಗುರುತು ತೋರ್ಸಿದ್ರೆ ಈ ಬಾರ್ನಲ್ಲಿ ಸಿಗಲಿದೆ ಸ್ಪೆಷಲ್ ಡಿಸ್ಕೌಂಟ್!
ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟಗೊಳ್ಳಲಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Mon, 6 May 24