ನಿಜವಾಗುತ್ತಾ ಮತದಾನೋತ್ತರ ಸಮೀಕ್ಷೆಗಳ ವರದಿ? ಕೆಲವೇ ಗಂಟೆಗಳಲ್ಲಿ ಸಿಗಲಿದೆ ಉತ್ತರ

|

Updated on: Jun 04, 2024 | 6:17 AM

Lok Sabha Election Result 2024; ಲೋಕಸಭೆ ಚುನಾವಣೆ ಫಲಿತಾಂಶದ ದಿನ ಬಂದೇಬಿಟ್ಟಿದೆ. ಅತ್ತ ಎಕ್ಸಿಟ್​​ ಪೋಲ್​ ವರದಿಗಳಿಂದ ಖುಷಿಯಾಗಿರುವ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ದೇಶದಾದ್ಯಂತ ಸಿದ್ಧತೆ ಮಾಡುತ್ತಿದ್ದರೆ, ನಾವೇ ಗೆಲ್ಲೋದು ಎಂದು ಇಂಡಿಯಾ ಮೈತ್ರಿಕೂಟ ನಾಯಕರು ಹೇಳುತ್ತಿದ್ದಾರೆ. ಅಂತಿಮವಾಗಿ ಗೆಲುವು ಯಾರದ್ದಾಗಲಿದೆ ಎಂಬುದು ಮಧ್ಯಾಹ್ನದ ವೇಳೆಗೆ ಖಚಿತವಾಗಲಿದೆ.

ನಿಜವಾಗುತ್ತಾ ಮತದಾನೋತ್ತರ ಸಮೀಕ್ಷೆಗಳ ವರದಿ? ಕೆಲವೇ ಗಂಟೆಗಳಲ್ಲಿ ಸಿಗಲಿದೆ ಉತ್ತರ
ದಾವಣಗೆರೆಯಲ್ಲಿ ಮತ ಎಣಿಕೆಗೆ ಅಂತಿಮ ಹಂತದ ಸಿದ್ಧತೆ
Follow us on

ಬೆಂಗಳೂರು, ಜೂನ್ 4: ಜೂನ್ 1ರಂದು ಪ್ರಕಟಗೊಂಡ ಮತದಾನೋತ್ತರ ಸಮೀಕ್ಷಗಳ (Exit polls) ಪೈಕಿ ಬಹುತೇಕ ಬಿಜೆಪಿ (BJP) ಬೆಂಬಲಿತ ಎನ್​​ಡಿಎಗೆ (NDA) ಬಹುಮತ ಖಚಿತ ಎಂದು ಭವಿಷ್ಯ ನುಡಿದಿವೆ. ಅದರಲ್ಲೂ ಮೂರು ಸಮೀಕ್ಷೆಗಳು 400ಕ್ಕೂ ಸ್ಥಾನಗಳನ್ನು ನೀಡಿವೆ. ಆದರೆ, ಇಂಡಿಯಾ ನಾಯಕರಂತೂ ನಮಗೆ 295 ಸೀಟ್ ಬರಲಿದೆ. ಎನ್​ಡಿಎ ಗೆಲ್ಲಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುತೂಹಲಕ್ಕೆ ಇಂದು ಮಧ್ಯಾಹ್ನದ ಒಳಗೆ ಲೋಕಸಭಾ ಚುನಾವಣೆ ಫಲಿತಾಂಶದ ಬಹುತೇಕ ಚಿತ್ರಣ ಸಿಗಲಿದ್ದು, ಆ ಮೂಲಕ ಉತ್ತರ ಸಿಗಲಿದೆ.

ದೇಶವಷ್ಟೇ ಅಲ್ಲ ಇಡೀ ಪ್ರಪಂಚವೇ ಎದುರು ನೋಡ್ತಿರೋ ದಿನ ಬಂದೇ ಬಿಟ್ಟಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಮತಗಟ್ಟೆ ಸಮೀಕ್ಷಾ ವರದಿಗಳ ಲೆಕ್ಕಾಚಾರ ಜೋರಾಗಿದೆ. ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಂಸ್ಥೆಗಳು ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದ್ದು, ಇಂಡಿಯಾ ಮೈತ್ರಿಕೂಟ 200ರ ಒಳಗೆ ಇರಲಿದೆ ಎಂದಿವೆ. ಯಾವ್ಯಾವ ಮತದನೋತ್ತರ ಸಮೀಕ್ಷೆಗಳು ಏನೇನು ಭವಿಷ್ಯ ನುಡಿದಿವೆ ಎಂಬ ಮಾಹಿತಿ ಇಲ್ಲಿದೆ.

ಟಿವಿ9 ಪೋಲ್‌ಸ್ಟ್ರಾಟ್ ಮತ್ತು ಪೀಪಲ್ಸ್ ಇನ್‌ಸೈಟ್ ನಡೆಸಿದ ಸಮೀಕ್ಷೆ ಪ್ರಕಾರ 346 ಕ್ಷೇತ್ರ ಎನ್‌ಡಿಎಗೆ ಸಿಗಲಿದೆ ಎಂದು ಅಂದಾಜಿಸಿದ್ದು, ಇಂಡಿಯಾ ಮೈತ್ರಿಕೂಟ ಕೇವಲ 162 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಹಾಗೆಯೇ ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಎನ್‌ಡಿಎ 361ರಿಂದ 401ರವರೆಗೂ ಗೆಲ್ಲುವ ಸಾಧ್ಯತೆ ಇದೆ ಅಂತಾ ಹೇಳಿದೆ. ಹಾಗೆಯೇ ಇಂಡಿಯಾ ಕೂಟ 131ರಿಂದ 166 ಸ್ಥಾನ ಗೆಲ್ಲಲಿದೆಯಂತೆ. ಇನ್ನೂ ಟುಡೇಸ್ ಚಾಣಕ್ಯ ಸರ್ವೆ ಪ್ರಕಾರ ಎನ್‌ಡಿಎ 385ರಿಂದ 415ರವರೆಗೂ ಗೆಲ್ಲೋ ಸಾಧ್ಯತೆ ಇದೆಯಂತೆ. ಆದ್ರೆ, ಇಂಡಿಯಾ ಮೈತ್ರಿಕೂಟ 96ರಿಂದ 118 ಸ್ಥಾನವನ್ನಷ್ಟೇ ಗೆಲ್ಲಲಿದೆ ಅಂತಾ ಟುಡೇಸ್ ಚಾಣಕ್ಯ ಸಮೀಕ್ಷೆ ಹೇಳ್ತಿದೆ. ಜೊತೆಗೆ ಸಿಎನ್​​ಎಕ್ಸ್ ಸರ್ವೆ ಕೂಡ ಎನ್​​ಡಿಎ 371 ರಿಂದ 401ರವರೆಗೂ ಗೆಲ್ಲಲಿದೆ ಅಂತ ಅಂದಾಜಿಸಲಾಗಿದೆ.

ಮತಗಟ್ಟೆ ವರದಿ ಸುಳ್ಳೆಂದ ‘ಇಂಡಿಯಾ’ ಮೈತ್ರಿಕೂಟ

ಒಂದಲ್ಲ ಎರಡಲ್ಲ, ಚುನಾವಣೋತ್ತರ ಸಮೀಕ್ಷೆ ನಡೆಸಿದ ಬಹುತೇಕ ಸಂಸ್ಥೆಗಳು ಎನ್​ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಬಹುಮತ ಸಿಗುತ್ತೆ ಅಂತಾ ಭವಿಷ್ಯ ಬರೆದಿವೆ. ಈ ಸಮೀಕ್ಷೆ ಭವಿಷ್ಯವನ್ನ ಪ್ರತಿಪಕ್ಷಗಳು ಒಪ್ಪೋಕೆ ಸಿದ್ಧರಿಲ್ಲ. ಅಂಡರ್ ಕರೆಂಟ್ ಬೇರೆಯೇ ಇದೆ ಅನ್ನೋದು ಇಂಡಿಯಾ ಮೈತ್ರಿಕೂಟದ ನಂಬಿಕೆ. 2004ರಲ್ಲಿ ಆದ ರೀತಿ ಉಲ್ಟಾ ಆಗುತ್ತೆ. ಎನ್​​ಡಿಎಗೆ 400 ಬರಲ್ಲ ಎಂದು ರಾಹುಲ್ ಹೇಳಿದ್ರೆ, ಕಾದುನೋಡಿ ಅಂತಾ ಸೋನಿಯಾ ಗಾಂಧಿ ಹೇಳಿದ್ದಾರೆ. ಆಂದೋಲನಕ್ಕೆ ಸಜ್ಜಾಗುವಂತೆ ಅಖಿಲೇಶ್ ಯಾದವ್ ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಸಂಭ್ರಮಾಚರಣೆಗೆ ಲಡ್ಡು ತಯಾರಿಸ್ತಿರೋ ಬಿಜೆಪಿ ಕಾರ್ಯಕರ್ತರು

ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಬಿಹಾರದ ಪಾಟ್ನಾದಲ್ಲಿ 400 ಕೆಜಿ ಲಡ್ಡು ಸಿದ್ಧಗೊಳಿಸಿದ್ದಾರೆ. ಮುಂಬೈ, ಆಗ್ರಾ ಮತ್ತು ಭೋಪಾಲ್‌ ಸೇರಿದಂತೆ ಹಲವೆಡೆ ಬಿಜೆಪಿ ಕಾರ್ಯಕರ್ತರು ಲಡ್ಡು ತಯಾರಿಸಿದ್ದಾರೆ. ಇತ್ತ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿದ್ಯುತ್ ದೀಪಾಲಂಕರಾಗಳಿಂದ ಸಿಂಗರಿಸಲಾಗಿದ್ದು, ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ.

ಇದನ್ನೂ ಓದಿ: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಕ್ಷಣ ಕ್ಷಣದ ಮಾಹಿತಿ

ವಿಜಯೋತ್ಸವಕ್ಕೆ ಬಿಜೆಪಿ, ಕಾಂಗ್ರೆಸ್ ಕಚೇರಿಯಲ್ಲೂ ಸಿದ್ಧತೆ

ಅತ್ತ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೈತ್ರಿಕೂಟವೂ ಗೆಲುವಿನ ವಿಶ್ವಾಸದಲ್ಲಿದೆ. ದೆಹಲಿ ಕಾಂಗ್ರೆಸ್ ಕಚೇರಿಯಲ್ಲೂ ಸಂಭ್ರಮಕ್ಕೆ ಸಿದ್ಧತೆ ನಡೆದಿದೆ. ದೇಶದ ಮತದಾರರ ಪ್ರಭುಗಳು ಯಾರಿಗೆ ಜೈ ಎಂದಿದ್ದಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ