Lok Sabha Elections: 50 ಸಾವಿರ ರೂ.ಗಿಂತ ಹೆಚ್ಚಿನ ಹಣ ಠೇವಣಿ, ವಿತ್​ಡ್ರಾ ಮಾಡುವುದಿದ್ದರೆ ಗಮನಿಸಿ

|

Updated on: Mar 23, 2024 | 3:59 PM

ಲೋಕಸಭೆ ಚುನಾವಣೆ ಕಾರಣ ಮಾದರಿ ನೀತಿ ಸಂಹಿತ ಜಾರಿಯಲ್ಲಿ ಇರುವುದರಿಂದ ಜನರ ದೈನಂದಿನ ಹಣಕಾಸು ವಹಿವಾಟಿನ ಮೇಲೆ ನಿಗಾ ಇಡುವಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ 50,000 ರೂ.ಗಿಂತ ಹೆಚ್ಚಿನ ವೈವಾಟು ಮಾಡುವುದಿದ್ದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಚುನಾವಣಾ ಆಯೋಗವು ಮಾರ್ಗಸೂಚಿಯಲ್ಲಿ ಏನೇನು ಹೇಳಿದೆ ಎಂಬ ವಿವರ ಇಲ್ಲಿದೆ.

Lok Sabha Elections: 50 ಸಾವಿರ ರೂ.ಗಿಂತ ಹೆಚ್ಚಿನ ಹಣ ಠೇವಣಿ, ವಿತ್​ಡ್ರಾ ಮಾಡುವುದಿದ್ದರೆ ಗಮನಿಸಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 23: ಲೋಕಸಭೆ ಚುನಾವಣೆಯ (Lok Sabha Elections) ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಲ್ಲಿರುವುದರಿಂದ ಬ್ಯಾಂಕ್‌ಗಳು (ಸಾರ್ವಜನಿಕ ಮತ್ತು ಖಾಸಗಿ ವಲಯ), ಹಣಕಾಸು ಸಂಸ್ಥೆಗಳು ಮತ್ತು ಇತರ ಫೈನಾನ್ಸ್​ಗಳು ಎಲ್ಲಾ ರೀತಿಯ ನಗದು ವಹಿವಾಟಿನ ಮೇಲೆ ನಿಗಾ ಇಡುವಂತೆ ಭಾರತೀಯ ಚುನಾವಣಾ ಆಯೋಗವು (ECI) ಸೂಚಿಸಿದೆ. 50,000 ರೂ.ಗಿಂತ (ಕ್ರೆಡಿಟ್ ಮತ್ತು ಡೆಬಿಟ್) ಮೇಲ್ಪಟ್ಟ ವಹಿವಾಟುಗಳ ಮೇಲೆ ಸೂಕ್ಷ್ಮ ನಿಗಾ ಇಡುವಂತೆ ಸೂಚಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಈ ನಿರ್ದೇಶನ ನೀಡಲಾಗಿದೆ.

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಚೆಕ್ ರವಾನೆ ಮತ್ತು 50,000 ರೂ.ಗಿಂತ ಹೆಚ್ಚಿನ ಠೇವಣಿ ಇಡುವಿಕೆ ಮೇಲೆ ನಿಗಾ ಇರಿಸಿವೆ. ಡಿಡಿ ಖರೀದಿ, ಉಳಿತಾಯ ಖಾತೆ, ಜಂಟಿ ಖಾತೆಗಳು ಇತ್ಯಾದಿಯಲ್ಲಿ 50,000 ರೂ.ಗಿಂತ ಹೆಚ್ಚು ಠೇವಣಿ ಅಥವಾ ಹಿಂಪಡೆಯುವಿಕೆ ಮೇಲೆ ನಿಗಾ ಇರಿಸಲಾಗುತ್ತಿದೆ.

ಆಯೋಗಕ್ಕೆ ಬ್ಯಾಂಕ್​ಗಳಿಂದ ಪ್ರತಿ ದಿನ ಮಾಹಿತಿ ರವಾನೆ

50,000 ರೂ.ಗಿಂತ ಹೆಚ್ಚಿನ ಎಲ್ಲಾ ನಗದು ಮತ್ತು ಇತರ ಹಣಕಾಸು ವಹಿವಾಟುಗಳ ಬಗ್ಗೆ ದಿನನಿತ್ಯದ ಆಧಾರದ ಮೇಲೆ ವರದಿಗಳನ್ನು ಕಳುಹಿಸಲು ಚುನಾವಣಾ ಆಯೋಗ ಬ್ಯಾಂಕ್ ಅಧಿಕಾರಿಗಳನ್ನು ಕೋರಿದೆ. ಈ ನಿರ್ದೇಶನವು ಆರ್‌ಬಿಐನಲ್ಲಿ ನೋಂದಾಯಿಸಲಾದ ಎಲ್ಲಾ ಖಾಸಗಿ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಇದಲ್ಲದೆ, ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ನಂತರ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಹಣ ಬಿಡುಗಡೆ ಮತ್ತು ವಿತರಣೆಯ ಮೇಲೆ ಕೂಡ ನಿಗಾ ಇಡಲು ಬ್ಯಾಂಕ್‌ಗಳಿಗೆ ಚುನಾವಣಾ ಆಯೋಗ ನಿರ್ದೇಶಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಯಾವುದೇ ವ್ಯಾಪಾರ ವಹಿವಾಟುಗಳಲ್ಲಿ (ಖರೀದಿ ಮತ್ತು ಕ್ರೆಡಿಟ್) ಹಠಾತ್ ಹೆಚ್ಚಳ ಅಥವಾ ಅಸಾಮಾನ್ಯ ಏರಿಕೆ ಕಂಡುಬಂದಲ್ಲಿ ವರದಿ ಮಾಡುವಂತೆ ಎಲ್ಲಾ ಆಭರಣ ಅಂಗಡಿಗಳಿಗೆ ಆಯೋಗ ಸೂಚನೆ ನೀಡಿದೆ. ಇಷ್ಟೇ ಅಲ್ಲದೆ, ಇತರ ಹಣಕಾಸಿನ ವಹಿವಾಟುಗಳೂ ಮತ್ತು ಆದಾಯ ತೆರಿಗೆ ಪಾವತಿದಾರರ ಮೇಲೆ ಕೂಡ ಆಯೋಗ ನಿಗಾ ಇರಿಸಿದೆ.

ಇದನ್ನೂ ಓದಿ: ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ನಮ್ಮದೇ: ರಾಮನಗರದಲ್ಲಿ ಇನ್ನೂ ಏನೇನೆಂದರು ನೋಡಿ ಡಾ ಮಂಜುನಾಥ್

ಚುನಾವಣೆಯ ಸಮಯದಲ್ಲಿ ಹಣದ ಹರಿವನ್ನು ತಡೆಯುವ ಕ್ರಮವಾಗಿ ದೇಶದಾದ್ಯಂತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಎಲ್ಲಾ ರೀತಿಯ ಹಣಕಾಸು ವಹಿವಾಟುಗಳನ್ನು ಒಳಗೊಂಡಂತೆ ಚುನಾವಣಾ ಆಯೋಗ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ