ದೆಹಲಿ ಫೆಬ್ರುವರಿ 12: ಕಾಂಗ್ರೆಸ್‌ನ ಸೋನಿಯಾ ಗಾಂಧಿ (Sonia Gandhi) ಅವರು ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಕಣಕ್ಕಿಳಿಯುವುದಿಲ್ಲ. ಇದರ ಬದಲಾಗಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಹಿರಿಯ ನಾಯಕಿ ಸೋನಿಯಾ ಅವರು ರಾಜಸ್ಥಾನದಲ್ಲಿ ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಯ್ ಬರೇಲಿ ಕುಟುಂಬ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಂದಹಾಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೊದಲ ಚುನಾವಣೆಯಾಗಿದೆ. 77ರ ಹರೆಯದ ಸೋನಿಯಾ ಗಾಂಧಿ ಅವರು ರಾಜ್ಯಸಭೆಯ ಚುನಾವಣೆಯ ಸುತ್ತಿನಲ್ಲಿ ಜೈಪುರದಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಾಲಿಗೆ ಇದು ದೊಡ್ಡ ಬದಲಾವಣೆಯಾಗಲಿದೆ. ಸೋನಿಯಾ ಗಾಂಧಿಯವರು 2006 ರಿಂದ ಲೋಕಸಭೆಯಲ್ಲಿ ರಾಯ್ ಬರೇಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 2019 ರಲ್ಲಿ ಕಾಂಗ್ರೆಸ್ ಸಾಧನೆಯು ಅತ್ಯಂತ ಕೆಳಮಟ್ಟದಲ್ಲಿದ್ದಾಗಲೂ ಮತ್ತು ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ಅಮೇಥಿಯನ್ನು ಕಳೆದುಕೊಂಡಾಗಲೂ ಸಹ ಸೋನಿಯಾ ತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
ದಶಕಗಳಿಂದಲೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಚುನಾವಣಾ ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತುಕತೆಗಳು ನಡೆಯುತ್ತಲೇ ಇತ್ತು. ಅಂದ ಹಾಗೆ ಇದು ಸುರಕ್ಷಿತ ಸ್ಥಾನವೆಂದು ಪರಿಗಣಿಸಲಾಗಿದೆ. 1950 ರ ದಶಕದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಮೊದಲು ಆಕೆಯ ಅಜ್ಜ ಫಿರೋಜ್ ಗಾಂಧಿ ಪ್ರತಿನಿಧಿಸಿದ್ದರು.
ಅದೇ ವರ್ಷ ಜನವರಿಯಲ್ಲಿ ಔಪಚಾರಿಕವಾಗಿ ರಾಜಕೀಯ ಪ್ರವೇಶಿಸಿದಾಗ 2019 ರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ವಾರಣಾಸಿಯಲ್ಲಿ ಆಕೆಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಮುಖಾಮುಖಿಯಾಗಬಹುದೆಂದು ಹಲವರು ಆಶಿಸಿದ್ದರು.
ಆದರೆ ಆ ಸಮಯದಲ್ಲಿ ಪಕ್ಷದ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಪೂರ್ವ ಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಂತರ ಇಡೀ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು. ಆದರೆ ಆ ಪ್ರಯತ್ನವು 2019 ರಲ್ಲಿ ರಾಜ್ಯದಿಂದ ಬಿಜೆಪಿಯ ಬೃಹತ್ ಗೆಲುವು ಮತ್ತು 2022 ರಲ್ಲಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ವಿಜಯಶಾಲಿಯಾಗಿ ಅಧಿಕಾರಕ್ಕೆ ಮರಳುವುದರೊಂದಿಗೆ ಕಾಂಗ್ರೆಸ್ಗೆ ಭಾರೀ ಹಿನ್ನಡೆಯಾಯಿತು.
ಇದನ್ನೂ ಓದಿ: ನಾಲ್ಕು ವರ್ಷಗಳಿಂದ ರಾಹುಲ್ ಗಾಂಧಿಯನ್ನು ಭೇಟಿ ಮಾಡಿಲ್ಲ: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್
ಪ್ರಿಯಾಂಕಾ ಅವರ ಅಂದಿನ ಒಡನಾಡಿ, ಉತ್ತರ ಪ್ರದೇಶದ ಉಸ್ತುವಾರಿಯೂ ಆಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಕಣಕ್ಕಿಳಿದರೆ ರಾಷ್ಟ್ರೀಯ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಪುನಶ್ಚೇತನಕ್ಕಾಗಿ ಕಾಂಗ್ರೆಸ್‌ನ ದೊಡ್ಡ ಭರವಸೆ ಇದು ಎಂದು ಪರಿಗಣಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:18 pm, Mon, 12 February 24