ನಾಲ್ಕು ವರ್ಷಗಳಿಂದ ರಾಹುಲ್ ಗಾಂಧಿಯನ್ನು ಭೇಟಿ ಮಾಡಿಲ್ಲ: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್
ಪ್ರಾಮಾಣಿಕ ಆತ್ಮಾವಲೋಕನ ನಡೆಯಬೇಕಿತ್ತು, ಹೊಣೆಗಾರಿಕೆಯನ್ನು ಸರಿಪಡಿಸಲು ಅಥವಾ ಜನರನ್ನು ಗಲ್ಲಿಗೇರಿಸಲು ಅಲ್ಲ, ಆದರೆ ನಾವು ಆ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿದೆ
ಮುಂಬೈ: ಕಳೆದ ನಾಲ್ಕು ವರ್ಷಗಳಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ (Congress) ಮುಖಂಡ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತೀಯರ ಗುಂಪಿನ ಸದಸ್ಯ ಪೃಥ್ವಿರಾಜ್ ಚವಾಣ್ (Prithviraj Chavan) ಹೇಳಿದ್ದಾರೆ. ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಯಾವುದೇ ‘ಚಿಂತನ್’ ಅಥವಾ ಆತ್ಮಾವಲೋಕನ ಇರಲಿಲ್ಲ ಎಂದು ಅವರು ಗುರುವಾರ ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ಪಾಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ. “ನಾನು ದೆಹಲಿಯಲ್ಲಿದ್ದಾಗಲೆಲ್ಲ ಆಗಾಗ ಡಾ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗುತ್ತಿದ್ದೆ. ಆದರೆ ಅವರ ಆರೋಗ್ಯ ಮೊದಲಿನಂತಿಲ್ಲ. ಅವರು ಯಾವಾಗಲೂ ಆತಿಥ್ಯ ವಹಿಸಲು, ಮಾತನಾಡಲು ಸಿದ್ಧರಾಗಿರುತ್ತಿದ್ದರು. ನನಗೆ ಸಮಯ ಸಿಕ್ಕಿದಾಗಲೆಲ್ಲ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದೇನೆ, ಆದರೆ ನನಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಹಳ ದಿನಗಳಿಂದ ಸಾಧ್ಯವಾಗಲಿಲ್ಲ. ಭೇಟಿಯಾಗದೆ ನಾಲ್ಕು ವರ್ಷಗಳಾಗಿರಬಹುದು. ಪಕ್ಷದ ನಾಯಕತ್ವ ಭೇಟಿಗೆ ಸಾಧ್ಯವಾಗುವಂತಿರಬೇಕು ಆದರೆ ಅದು ಆ ರೀತಿ ಇಲ್ಲ ಎಂಬ ದೂರುಗಳೂ ಇವೆ ಎಂದು ಸಂದರ್ಶನದಲ್ಲಿ ಮಾತನಾಡಿದ ಚವಾಣ್ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವರು ಜಿ-23 ರ ಭಾಗವಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಂದರ ನಂತರ ಒಂದರಂತೆ ಚುನಾವಣಾ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗಳಿಗೆ ಒತ್ತಾಯಿಸುತ್ತಿರುವ ಭಿನ್ನಮತೀಯ ನಾಯಕರ ಗುಂಪಾಗಿದೆ ಜಿ -23.
ಉದಯಪುರ ಸಭೆಯ ಕುರಿತು ಮಾತನಾಡಿದ ಚವಾಣ್, ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಮುಂದೆ ಸಮಸ್ಯೆಗಳನ್ನು ಚರ್ಚಿಸಲು “ಚಿಂತನ್ ಶಿಬಿರ” ನಡೆಸಲು ಒಪ್ಪಿಕೊಂಡಿದ್ದಾರೆ. ಆದರೆ “ರಾಜನಿಗಿಂತ ಹೆಚ್ಚು ನಿಷ್ಠಾವಂತ”ರಾದ ಯಾವುದೋ ವ್ಯಕ್ತಿಯೊಬ್ಬರು ಚಿಂತನ ಅಥವಾ ಆತ್ಮಾವಲೋಕನ ಅಗತ್ಯವಿಲ್ಲ ಎಂದು ನಿರ್ಧರಿಸಿದರು ಎಂದಿದ್ದಾರೆ. ಹಾಗಾಗಿ, ಉದಯಪುರ ಸಭೆಯು ‘ನವ್-ಸಂಕಲ್ಪ್ (ಹೊಸ ನಿರ್ಣಯ) ಶಿಬಿರ್ ಆಗಿತ್ತು. ಪುನರವಲೋಕನ ಅಗತ್ಯವಿಲ್ಲ ಎಂದು ಪಕ್ಷವು ಭಾವಿಸಿದ್ದು, ಭವಿಷ್ಯವನ್ನು ನೋಡಿದರೆ ಸಾಕು ಎಂದಿದೆ.
“ಪ್ರಾಮಾಣಿಕ ಆತ್ಮಾವಲೋಕನ ನಡೆಯಬೇಕಿತ್ತು, ಹೊಣೆಗಾರಿಕೆಯನ್ನು ಸರಿಪಡಿಸಲು ಅಥವಾ ಜನರನ್ನು ಗಲ್ಲಿಗೇರಿಸಲು ಅಲ್ಲ, ಆದರೆ ನಾವು ಆ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದಕ್ಕಾಗಿದೆ. ಅಸ್ಸಾಂ ಮತ್ತು ಕೇರಳ ವಿಧಾನಸಭೆ ಚುನಾವಣೆಯ ನಂತರ ಪಕ್ಷದ ಕಾರ್ಯಕ್ಷಮತೆ ಪರಿಶೀಲಿಸಲು ಸಮಿತಿಯನ್ನು ರಚಿಸಲಾಯಿತು. ಆದರೆ ಸಮಿತಿಯ ವರದಿಯನ್ನು ಕಬೋರ್ಡ್‌ನಲ್ಲಿ ಹೂತಿಡಲಾಗಿದ್ದು ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ ಚವಾಣ್.
ಇತ್ತೀಚೆಗೆ ಪಕ್ಷವನ್ನು ತೊರೆದ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ನಾಯಕತ್ವವು ಪ್ರಾಮಾಣಿಕ ಸಲಹೆಯನ್ನು ಪಡೆಯುತ್ತಿಲ್ಲ ಎಂದು ಭಾವಿಸಿದ್ದಾರೆ.ಅದೇ ವೇೆಳೆ ನಾಮನಿರ್ದೇಶಿತ ವ್ಯಕ್ತಿಗಳು ನಾಯಕತ್ವವು ಇಷ್ಟಪಡುವ ಸಲಹೆಯನ್ನು ಮಾತ್ರ ನೀಡುತ್ತಾರೆ ಎಂದ ಚವಾಣ್ ಹೇಳಿದರು.
”2024ರಲ್ಲಿ (ಪ್ರಧಾನಿ ನರೇಂದ್ರ) ಮೋದಿಯನ್ನು ಸೋಲಿಸಬೇಕಾದರೆ, ಮುಂಬರುವ 12 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಸಮಾನ ಮನಸ್ಕ ಪಕ್ಷಗಳ ದೊಡ್ಡ, ವಿಶಾಲವಾದ ಒಕ್ಕೂಟವನ್ನು ಹೊಂದಬೇಕು ಎಂದ ಚವಾಣ್ ಅಭಿಪ್ರಾಯ ಪಟ್ಟಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ