ಕೇಜ್ರಿವಾಲ್​ಗೆ ವಿಶೇಷ ಉಪಚಾರ ನೀಡಲಾಗಿದೆ; ಮಧ್ಯಂತರ ಜಾಮೀನಿಗೆ ಅಮಿತ್ ಶಾ ಆಕ್ಷೇಪ

|

Updated on: May 15, 2024 | 8:55 PM

ದೆಹಲಿ ಅಕ್ರಮ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿರುವುದರ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ "ಅರವಿಂದ್ ಕೇಜ್ರಿವಾಲ್​ಗೆ ವಿಶೇಷ ಉಪಚಾರ ನೀಡಲಾಗಿದೆ ಎಂದು ಬಹಳಷ್ಟು ಜನ ಹೇಳುತ್ತಾರೆ" ಎಂದು ಹೇಳಿದ್ದಾರೆ.

ಕೇಜ್ರಿವಾಲ್​ಗೆ ವಿಶೇಷ ಉಪಚಾರ ನೀಡಲಾಗಿದೆ; ಮಧ್ಯಂತರ ಜಾಮೀನಿಗೆ ಅಮಿತ್ ಶಾ ಆಕ್ಷೇಪ
ಅಮಿತ್ ಶಾ
Follow us on

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಜಾಮೀನನ್ನು ವಿಶೇಷ ಉಪಚಾರ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಚಿವ ಅಮಿತ್ ಶಾ, “ಇದು ವಾಡಿಕೆಯ ತೀರ್ಪು ಅಲ್ಲ ಎಂದು ನಾನು ನಂಬುತ್ತೇನೆ. ಈ ದೇಶದ ಬಹಳಷ್ಟು ಜನರು ಅವರಿಗೆ ವಿಶೇಷ ಉಪಚಾರ ನೀಡಲಾಗಿದೆ ಎಂದು ಹೇಳುತ್ತಾರೆ” ಎಂದಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ ನಂತರ ಮೇ 10ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: ಸ್ವಾತಿ ಮಲಿವಾಲ್ ಜೊತೆ ಕೇಜ್ರಿವಾಲ್ ಪಿಎ ಅನುಚಿತ ವರ್ತನೆ; ಒಪ್ಪಿಕೊಂಡ ಆಮ್ ಆದ್ಮಿ ಪಾರ್ಟಿ

ಜೂನ್ 4ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ- ಇಂಡಿಯಾ ಒಕ್ಕೂಟ ಬಹುಮತ ಗಳಿಸಿದರೆ ನಾನು ಜೈಲಿಗೆ ಮರಳುವ ಅಗತ್ಯವಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಬೇಡಿ ಎಂಬ ಕೇಜ್ರಿವಾಲ್ ಹೇಳಿಕೆಗೆ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

ಎಎಪಿ ಮುಖ್ಯಸ್ಥರ ಈ ಹೇಳಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಕರೆದ ಅಮಿತ್ ಶಾ, “ಇದು ಸುಪ್ರೀಂ ಕೋರ್ಟ್‌ನ ಸ್ಪಷ್ಟವಾದ ತಿರಸ್ಕಾರವಾಗಿದೆ. ಯಾರಾದರೂ ವಿಜಯಶಾಲಿಯಾಗಿ ಹೊರಹೊಮ್ಮಿದರೆ ಸುಪ್ರೀಂ ಕೋರ್ಟ್ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ ಎಂದು ಅವರು ಹೇಳಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಜಾಮೀನು ನೀಡಿದ ನ್ಯಾಯಾಧೀಶರು ತಮ್ಮ ತೀರ್ಪನ್ನು ಕೇಜ್ರಿವಾಲ್ ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಯೋಚಿಸಬೇಕು ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಇದನ್ನೂ ಓದಿ: Delhi Excise Policy Scam; ಜುಲೈ 11ಕ್ಕೆ ಇಡಿ ಸಮನ್ಸ್​ ವಿರುದ್ಧದ ಕೇಜ್ರಿವಾಲ್ ಅರ್ಜಿ ವಿಚಾರಣೆ

ಕೇಜ್ರಿವಾಲ್ ಅವರ ಚಲನವಲನಗಳ ಮೇಲೆ ನಿಗಾ ಇಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜೈಲಿನೊಳಗೆ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಿದೆ ಎಂಬ ಕೇಜ್ರಿವಾಲ್ ಅವರ ಆರೋಪಗಳ ಬಗ್ಗೆ ಮಾತನಾಡಿದ ಅಮಿತ್ ಶಾ, “ತಿಹಾರ್ ಜೈಲು ಅವರ (ದೆಹಲಿ ಸರ್ಕಾರ) ಆಡಳಿತದಲ್ಲಿದೆ. ಅವರು ಸುಳ್ಳು ಹೇಳುತ್ತಲೇ ಇರುತ್ತಾರೆ. ಕೇಂದ್ರ ಗೃಹ ಸಚಿವಾಲಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಜಾಮೀನು ಮಾರ್ಗಸೂಚಿಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೂ ಭೇಟಿ ನೀಡುವಂತಿಲ್ಲ. ಈ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಅಥವಾ ಯಾವುದೇ ಸಾಕ್ಷಿಗಳೊಂದಿಗೆ ಸಂವಹನ ನಡೆಸದಂತೆ ಅವರಿಗೆ ಸೂಚಿಸಲಾಗಿದೆ. ಜೂನ್ 2ರೊಳಗೆ ಜೈಲು ಅಧಿಕಾರಿಗಳಿಗೆ ಶರಣಾಗುವಂತೆಯೂ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ