ನವದೆಹಲಿ, ಜೂನ್ 5: ಬಿಜೆಪಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha elections 2024 results) ಅಗಿಯಲೂ ಆಗದ ನುಂಗಲೂ ಆಗದ ರೀತಿ ಇದೆ ಎಂದೇ ಬಹಳ ಮಂದಿ ಹೇಳುತ್ತಿದ್ದಾರೆ. ಅದೇನೇ ಇರಲಿ, ಕಳೆದ ಬಾರಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈಗ 240 ಸ್ಥಾನಗಳಿಗೆ ತೃಪ್ತಿಪಡಬೇಕಿರುವುದು ಹೌದು. 2019ರಲ್ಲಿಗಿಂತ ಈ ಬಾರಿ ಬಿಜೆಪಿ ಬರೋಬ್ಬರಿ 63 ಸ್ಥಾನಗಳನ್ನು ಕಳೆದುಕೊಂಡಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಮುಖವಾಗಿ ಸ್ಥಾನನಷ್ಟವಾಗಿದೆ. ಮಹಾರಾಷ್ಟ್ರದಲ್ಲಿ ಈ ಅವಸ್ಥೆ ನಿರೀಕ್ಷಿತವೇ ಆಗಿತ್ತು. ಆದರೆ, ಉತ್ತರಪ್ರದೇಶದಲ್ಲಿ ಮತದಾರನಿಂದ ಬಿಜೆಪಿಗೆ ಅಕ್ಷರಶಃ ಶಾಕ್ ಸಿಕ್ಕಿದೆ.
ಉತ್ತರಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ 80 ಸ್ಥಾನಗಳ ಪೈಕಿ ಬಿಜೆಪಿ 71ರಲ್ಲಿ ಗೆದ್ದಿತ್ತು. 2019ರಲ್ಲಿ ಅದು ಗೆದ್ದ ಕ್ಷೇತ್ರಗಳ ಸಂಖ್ಯೆ 62ಕ್ಕೆ ಇಳಿಯಿತು. ಈಗ 2024ರಲ್ಲಿ 33 ಸ್ಥಾನಗಳಿಗೆ ಕುಸಿದಿದೆ. ಬರೋಬ್ಬರಿ 29 ಕ್ಷೇತ್ರಗಳನ್ನು ಈ ರಾಜ್ಯವೊಂದರಲ್ಲೇ ಬಿಜೆಪಿ ಕಳೆದುಕೊಂಡಿದೆ. ಸಮಾಜವಾದಿ ಪಕ್ಷ ಅತಿಹೆಚ್ಚು ಕ್ಷೇತ್ರ ಜಯಿಸಿದೆ. ಉತ್ತರಪ್ರದೇಶದಿಂದ ಬಹುತೇಕ ನಿರ್ನಾಮವಾಗಿಯೇ ಹೋಯಿತು ಎಂದು ಭಾವಿಸಲಾಗಿದ್ದ ಕಾಂಗ್ರೆಸ್ ಪಕ್ಷ ಫೀನಿಕ್ಸ್ನಂತೆ ಮೇಲೆದ್ದು ಆರರಲ್ಲಿ ಜಯಿಸಿದೆ.
ಇದನ್ನೂ ಓದಿ: ಅಮೇಥಿಯಲ್ಲಿ ನನ್ನ ಸೇವೆ ಮುಂದುವರೆಯುತ್ತೆ, ಸೋಲಿನ ಬಳಿಕ ಸ್ಮೃತಿ ಇರಾನಿ ಮಾತು
ಉತ್ತರಪ್ರದೇಶದಲ್ಲಿ ಸಾಮಾನ್ಯವಾಗಿ ಮುಸ್ಲಿಮ್ ಮತಗಳು ಕಾಂಗ್ರೆಸ್ ಹಾಗೂ ಎಸ್ಪಿ ಪಕ್ಷಗಳ ಮಧ್ಯೆ ಹಂಚಿ ಹೋಗುತ್ತವೆ. ಕಳೆದ ಬಾರಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದವು. ಕಾಂಗ್ರೆಸ್ ಏಕಾಂಗಿಯಾಗಿತ್ತು. ಆಗ ಮುಸ್ಲಿಮ್ ಮತಗಳ ಹಂಚಿಕೆ ಆಗಿತ್ತು.
ಈ ಬಾರಿ ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ, ಮುಸ್ಲಿಮ್ ಮತಗಳು ಪೂರ್ಣವಾಗಿ ಧ್ರುವೀಕರಣಗೊಂಡಿವೆ. ಉತ್ತರಪ್ರದೇಶದಲ್ಲಿ ಮುಸ್ಲಿಮ್ ಬಾಹುಳ್ಯ ಇರುವ 23 ಲೋಕಸಭಾ ಕ್ಷೇತ್ರಗಳಿವೆ. 2019ರಲ್ಲಿ ಬಿಜೆಪಿ ಈ 23ರಲ್ಲಿ 14 ಅನ್ನು ಗೆದ್ದುಕೊಂಡಿತ್ತು. ಈ ಬಾರಿ ಅದರ ಸಂಖ್ಯೆ 11ಕ್ಕೆ ಇಳಿದಿದೆ.
ಇನ್ನು ಯಾದವ ಸಮುದಾಯ ಬಾಹುಳ್ಯ ಇರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಹೊಡೆತಕೊಟ್ಟಿದೆ. ಈ ರೀತಿಯ 11 ಕ್ಷೇತ್ರಗಳು ಯುಪಿಯಲ್ಲಿದೆ. 2019ರಲ್ಲಿ ಬಿಜೆಪಿ ಎಂಟರಲ್ಲಿ ಗೆದ್ದಿತ್ತು. ಈ ಬಾರಿ ಬಿಜೆಪಿ ಕೇವಲ ಎರಡಕ್ಕೆ ತೃಪ್ತಿಪಟ್ಟಿದೆ.
ಅಂದರೆ ಮುಸ್ಲಿಮ್ ಮತ್ತು ಯಾದವ ಪ್ರಾಬಲ್ಯದ 34 ಕ್ಷೇತ್ರಗಳಲ್ಲಿ ಬಿಜೆಪಿ ನಷ್ಟ ಮಾಡಿಕೊಂಡಿದ್ದು 9 ಸ್ಥಾನಗಳನ್ನು.
ಇದನ್ನೂ ಓದಿ: ಲೋಕಸಭೆ ಫಲಿತಾಂಶ: ಕರ್ನಾಟಕದಲ್ಲಿ ಗಮನ ಸೆಳೆದ ನೋಟಾ, ಈ ಕ್ಷೇತ್ರದಲ್ಲೇ ಹೆಚ್ಚು
ಕುಮಾರಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ 2019ರಲ್ಲಿ ಹೆಚ್ಚೂಕಡಿಮೆ ಶೇ. 20ರಷ್ಟು ಮತಗಳನ್ನು ಪಡೆದಿತ್ತು. ಈ ಬಾರಿ ಅದು ಶೇ. 10ಕ್ಕಿಂತಲೂ ಕಡಿಮೆಗೆ ಇಳಿದಿದೆ. ಬಿಎಸ್ಪಿ ಪಾಲಾಗುತ್ತಿದ್ದ ದಲಿತರ ಮತದಲ್ಲಿ ತಕ್ಕಮಟ್ಟಿನ ಪ್ರಮಾಣವು ಎಸ್ಪಿಗೆ ಹೋದಂತಿದೆ.
ಇನ್ನು, ಬಿಜೆಪಿ ಪಡೆದ ಮತಗಳ ಪ್ರಮಾಣವೂ ಗಣನೀಯವಾಗಿ ಕಡಿಮೆ ಆಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಶೇ. 50ರಷ್ಟು ಮತ ಪಡೆದಿತ್ತು. ಈ ಬಾರಿ ಅದು 41.37 ಪ್ರತಿಶತ ಮತ ಮಾತ್ರ ಪಡೆಯಲು ಯಶಸ್ವಿಯಾಗಿದೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ