AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆ ಫಲಿತಾಂಶ: ಕರ್ನಾಟಕದಲ್ಲಿ ಗಮನ ಸೆಳೆದ ನೋಟಾ, ಈ ಕ್ಷೇತ್ರದಲ್ಲೇ ಹೆಚ್ಚು

ಹೆಚ್ಚಿನ ನಗರ ಅಥವಾ ಗ್ರಾಮೀಣ ಮತದಾರರು ನೋಟಾ ಆಯ್ಕೆ ಮಾಡಿದ್ದಾರೆಯೇ ಮತ್ತು ಯಾವ ಕ್ಷೇತ್ರದಲ್ಲಿದ್ದಾರೆ ಎಂಬುದನ್ನು ಈಗ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ. ಜತೆಗೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಲೋಕಸಭೆ ಫಲಿತಾಂಶ: ಕರ್ನಾಟಕದಲ್ಲಿ ಗಮನ ಸೆಳೆದ ನೋಟಾ, ಈ ಕ್ಷೇತ್ರದಲ್ಲೇ ಹೆಚ್ಚು
ನೋಟಾ
Ganapathi Sharma
|

Updated on: Jun 05, 2024 | 11:44 AM

Share

ಬೆಂಗಳೂರು ಜೂನ್ 5: ಲೋಕಸಭೆ ಚುನಾವಣೆಯ (Lok Sabha Elections) ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಕರ್ನಾಟಕದಲ್ಲಿ (Karnataka) ನೋಟಾ ಮತಗಳ ಪ್ರಮಾಣ ಗಮನ ಸೆಳೆಯುವಂತೆ ಮಾಡಿದೆ. ಚುನಾವಣೆಯಲ್ಲಿ ಗೆದ್ದವರು ಮತ್ತು ಸೋತವರ ಹೊರತಾಗಿ, ಮೇಲಿನ ಯಾವುದೂ ಇಲ್ಲ ಎಂಬ ಆಯ್ಕೆ (NOTA) ಸಾಕಷ್ಟು ಗಮನ ಸೆಳೆದಿದೆ. ಚುನಾವಣಾ ಆಯೋಗದ ಅಂತಿಮ ವರದಿಗಳ ಪ್ರಕಾರ, ರಾಜ್ಯಾದ್ಯಂತ 2,18,300 ನೋಟಾ ಮತಗಳು ಚಲಾವಣೆಯಾಗಿವೆ. ಇದರ ಮತ ಹಂಚಿಕೆ ಪ್ರಮಾಣ ಶೇ 0.56 ಆಗಿದೆ. 2019 ರ ಚುನಾವಣೆಗೆ ಹೋಲಿಸಿದರೆ ಇದು ಸ್ವಲ್ಪ ಕಡಿಮೆಯಾಗಿದೆ. ಆಗ 2,50,810 ನೋಟಾ ಮತಗಳು ಚಲಾವಣೆಯಾಗಿದ್ದವು. ಮತ ಹಂಚಿಕೆ ಪ್ರಮಾಣ ಶೇ 0.72 ರಷ್ಟಿತ್ತು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೇ ಹೆಚ್ಚು

ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 23,576 ನೋಟಾ ಮತಗಳು ಚಲಾವಣೆಯಾಗಿವೆ. ಇದು ರಾಜ್ಯದಲ್ಲಿ ಚಲಾವಣೆಯಾದ ಅತಿ ಹೆಚ್ಚು ನೋಟಾ ಮತಗಳಾಗಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ಉತ್ತರ (13,554) ಮತ್ತು ಬೆಂಗಳೂರು ಸೆಂಟ್ರಲ್ (12,126) ಇವೆ. ಚಿಕ್ಕೋಡಿಯಲ್ಲಿ 2,608 ನೋಟಾ ಮತಗಳು ಚಲಾವಣೆಯಾಗಿವೆ. ಅತಿ ಕಡಿಮ ನೋಟಾ ಮತ ಚಲಾವಣೆಯಾಗಿದ್ದು ಚಿಕ್ಕೋಡಿಯಲ್ಲಿ.

ನೋಟಾ ಆಯ್ಕೆ ಮಾಡುವ ಮತದಾರರು ಅಭ್ಯರ್ಥಿಗಳನ್ನು ತಿರಸ್ಕರಿಸುತ್ತಾರೆ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಬಗ್ಗೆ ಅವರ ಅಸಮಾಧಾನವನ್ನು ಇದು ಸೂಚಿಸುತ್ತದೆ.

ರಾಜಕೀಯ ಪಕ್ಷಗಳು ಇದನ್ನು ಗಮನಿಸುವುದಿಲ್ಲ ಎಂದು ರಾಜಕೀಯ ತಜ್ಞ ಚಂದನ್ ಗೌಡ ತಿಳಿಸಿದ್ದಾರೆ. ಇದು ರಾಜಕೀಯ ಪಕ್ಷಗಳಿಗೆ ಮುಖ್ಯವಲ್ಲ, ಆದರೆ ನಾವು ಅದನ್ನು ನಿರ್ಲಕ್ಷಿಸಬಾರದು. ಇದು ಅಭ್ಯರ್ಥಿಯ ಆಯ್ಕೆಯ ಬಗ್ಗೆ ಮತದಾರರ ಅಸಮಾಧಾನದ ಸಂಕೇತವಾಗಿದೆ. ಉತ್ತಮ ಅಭ್ಯರ್ಥಿಗಳ ಅಗತ್ಯತೆ ಮತ್ತು ಉತ್ತಮ ವಿಷಯಗಳ ಕುರಿತು ಚರ್ಚೆಯಾಗಬೇಕು ಎಂಬುದನ್ನು ಇದು ತೋರಿಸುತ್ತದೆ. ಇದು ಪೌರತ್ವದ ಸಮಸ್ಯೆಯಾಗಿದ್ದು, ಮತದಾರರು ಪ್ರಜಾಪ್ರಭುತ್ವದ ಸ್ಥಾಪನೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ನಿರ್ಮಾಪಕ, ಮುಖ್ಯಮಂತ್ರಿ ಇದೀಗ ಮತ್ತೊಮ್ಮೆ ಸಂಸದ: ಹೆಚ್​ಡಿ ಕುಮಾರಸ್ವಾಮಿ ರಾಜಕೀಯ ಟೈಂ ​ಲೈನ್​

ಹೆಚ್ಚಿನ ನಗರ ಅಥವಾ ಗ್ರಾಮೀಣ ಮತದಾರರು ನೋಟಾ ಆಯ್ಕೆ ಮಾಡಿದ್ದಾರೆಯೇ ಮತ್ತು ಯಾವ ಕ್ಷೇತ್ರದಲ್ಲಿದ್ದಾರೆ ಎಂಬುದನ್ನು ಈಗ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ. ಜತೆಗೆ, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ