Lok Sabha Election: ನಿಮ್ಮ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಪ್ರಧಾನಿ ಮೋದಿ ಹೇಳಿದ್ದೇನು?

|

Updated on: May 12, 2024 | 6:33 PM

PM Narendra Modi: ಬಿಜೆಪಿಯಲ್ಲಿ ನರೇಂದ್ರ ಮೋದಿಯವರ ಬಳಿಕ ಯಾರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬುದನ್ನೇ ವಿರೋಧ ಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿವೆ. ಇದಕ್ಕೆ ಪಶ್ಚಿಮ ಬಂಗಾಳದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ.

Lok Sabha Election: ನಿಮ್ಮ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಪ್ರಧಾನಿ ಮೋದಿ ಹೇಳಿದ್ದೇನು?
ಪ್ರಧಾನಿ ಮೋದಿ
Follow us on

ಕೊಲ್ಕತ್ತಾ: ಈ ಜಗತ್ತಿನಲ್ಲಿ ನನ್ನ ದೇಶವಾಸಿಗಳನ್ನು ಹೊರತುಪಡಿಸಿ ನನಗೆ ಬೇರೇನೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ ಹೇಳಿದ್ದಾರೆ. ಮಕ್ಕಳಿಗೋಸ್ಕರ ಏನಾದರೂ ಮಾಡಲೇಬೇಕು ಎನ್ನುವ ಸಂಸಾರದ ಒಡೆಯನಂತೆಯೇ ಈ ನನ್ನ ಕುಟುಂಬದ ಮಕ್ಕಳ ಕೈಗೂ ‘ವೀಕ್ಷಿತ್ ಭಾರತ್’ ಕೊಡುವ ಆಸೆ ಎಂದು ಹೂಗ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಿದರು.

ಪ್ರಧಾನಿ ಮೋದಿಯವರ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಲೇ ಇದೆ. ನೀವು ಅಂದರೆ ನನ್ನ ದೇಶವಾಸಿಗಳೇ ನನ್ನ ಕುಟುಂಬ. ಈ ಜಗತ್ತಿನಲ್ಲಿ ನಿಮ್ಮನ್ನು ಬಿಟ್ಟು ನನಗೆ ಬೇರೇನೂ ಇಲ್ಲ. ಈ ನನ್ನ ಕುಟುಂಬದವರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ಟಿಎಂಸಿ ಮತ್ತು ಇತರ ಪಕ್ಷಗಳು ದೇಶದ ಜನರನ್ನು ಲೂಟಿ ಮಾಡುತ್ತಿವೆ. ಅವರ ವಾರಸುದಾರರಿಗೆ ಬಂಗಲೆಗಳು ಮತ್ತು ಮಹಲುಗಳನ್ನು ನಿರ್ಮಿಸುತ್ತಿವೆ. ಅವರು ತಮ್ಮ ವಾರಸುದಾರರಿಗಾಗಿ ಭವಿಷ್ಯವನ್ನು ಕಟ್ಟಿಕೊಡಲು ತಯಾರಿ ನಡೆಸುತ್ತಿದ್ದರೆ ನಾನೂ ಸಹ ನನ್ನ ವಾರಸುದಾರರಿಗಾಗಿ ಭವಿಷ್ಯ ನಿರ್ಮಾಣ ಮಾಡುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗುತ್ತದೆ: ಉದ್ಧವ್ ಠಾಕ್ರೆ

ಈ ವೇಳೆ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಟಿಎಂಸಿ ಮತ್ತು ಇತರ ಪಕ್ಷಗಳು ದೇಶದ ಜನರನ್ನು ಲೂಟಿ ಮಾಡುತ್ತಿವೆ. ತಮ್ಮ ವಾರಸುದಾರರಿಗಾಗಿ ಬಂಗಲೆಗಳು ಮತ್ತು ಮಹಲುಗಳನ್ನು ನಿರ್ಮಿಸುತ್ತಿವೆ ಎಂದಿದ್ದಾರೆ. “ಮೂರು ಹಂತದ ಚುನಾವಣೆಗಳಲ್ಲಿನ ಕಾರ್ಯಕ್ಷಮತೆಯನ್ನು ಆಧರಿಸಿ, ಎನ್‌ಡಿಎ 400 ಸ್ಥಾನಗಳನ್ನು ದಾಟುತ್ತದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ” ಎಂದು ಅವರು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ಮತ-ಬ್ಯಾಂಕ್ ರಾಜಕಾರಣವನ್ನು ಟೀಕಿಸಿದ ಪ್ರಧಾನಿ, ಘೋರ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ರಕ್ಷಿಸಲು ಟಿಎಂಸಿಯ ಗೂಂಡಾಗಳು ಪಕ್ಷದ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಬಂದಿರುವ ಸಂದೇಶಖಾಲಿಯ ಹಿಂಸಿಸಲ್ಪಟ್ಟ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮ್ಮಂದಿರ ದಿನಕ್ಕೆ ಮೋದಿಗೆ ವಿಶೇಷ ಉಡುಗೊರೆ; ತಾಯಿಯ ನೆನೆದು ಭಾವುಕರಾದ ಪ್ರಧಾನಿ

ಟಿಎಂಸಿ ಆಡಳಿತದಲ್ಲಿ ಪಶ್ಚಿಮ ಬಂಗಾಳವು “ಭ್ರಷ್ಟಾಚಾರ” ಮತ್ತು “ಬಾಂಬ್ ತಯಾರಿಕೆಯ ಗುಡಿ ಕೈಗಾರಿಕೆ”ಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ರಾಜ್ಯದ ಆಡಳಿತ ವ್ಯವಸ್ಥೆಯು ವೋಟ್ ಬ್ಯಾಂಕ್ ರಾಜಕೀಯದ ಮುಂದೆ ಶರಣಾಗಿದೆ ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣದ ನಂತರ ವಿರೋಧ ಪಕ್ಷದವರು ನಿದ್ರೆ ಕಳೆದುಕೊಂಡಿದ್ದಾರೆ. ಈ ಜನ ರಾಮಮಂದಿರವನ್ನೂ ಬಹಿಷ್ಕರಿಸಿದ್ದಾರೆ. ರಾಮಮಂದಿರಕ್ಕಾಗಿ 500 ವರ್ಷಗಳ ಕಾಲ ಹೋರಾಡಿದ ನಮ್ಮ ಪೂರ್ವಜರ ಆತ್ಮಗಳು ನಿಮ್ಮ ಕಾರ್ಯಗಳನ್ನು ನೋಡುತ್ತಿವೆ. ಟಿಎಂಸಿ, ಕಾಂಗ್ರೆಸ್ಸಿಗರೇ ಕನಿಷ್ಠ ಪಕ್ಷ ನಿಮ್ಮ ಪೂರ್ವಜರ ತ್ಯಾಗ, ತಪಸ್ಸು, ಬಲಿದಾನವನ್ನು ಅವಮಾನಿಸಬೇಡಿ. ಭಗವಾನ್ ರಾಮನನ್ನು ಬಹಿಷ್ಕರಿಸುವುದು ಬಂಗಾಳದ ಸಂಸ್ಕೃತಿಯಲ್ಲ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ