ಇದನ್ನು ಮನೆಯಲ್ಲೂ ಮಾಡಬಹುದಿತ್ತು, ಈ ನಾಟಕ ಯಾಕೆ?: ಮೋದಿ ಧ್ಯಾನದ ಬಗ್ಗೆ ಖರ್ಗೆ
ಅವರು ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಬೇಕಿತ್ತು. ಅವರು ಕಳೆದ 10 ವರ್ಷಗಳಿಂದ ಏನು ಮಾಡಿದ್ದಾರೆ? ಅದನ್ನು ಜನರಿಗೆ ತಿಳಿಸಬೇಕು. ಆದರೆ ಅವರು ಜನರಿಗೆ ತೊಂದರೆ ನೀಡಲು ಸಂವಿಧಾನ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದ ಖರ್ಗೆ.
ದೆಹಲಿ ಮೇ 31: ತಮಿಳುನಾಡಿನ (Tamilnadu) ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ನರೇಂದ್ರ ಮೋದಿ (Narendra Modi) ಅವರ 45 ಗಂಟೆಗಳ ಕಾಲ ಧ್ಯಾನದ ಬಗ್ಗೆ ಟೀಕೆ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಪ್ರಧಾನಿಗೆ ಅದನ್ನು ಮನೆಯಲ್ಲಿಯೂ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಖರ್ಗೆ, ಮೋದಿ ಅವರು 45 ಗಂಟೆಗಳ ಕಾಲ ಮನೆಯಲ್ಲಿ ಧ್ಯಾನ ಮಾಡಬಹುದಿತ್ತು, ಅಲ್ಲಿಗೆ ಹೋಗುವ ಅಗತ್ಯ ಏನಿತ್ತು, ಹತ್ತು ಸಾವಿರ ಪೊಲೀಸ್ ಸಿಬ್ಬಂದಿ ಅವರನ್ನು ರಕ್ಷಿಸುತ್ತಿದ್ದಾರೆ, ಏಕೆ ಈ ನಾಟಕ? ನೀವು ಮನೆಯಲ್ಲಿಯೇ ಪೂಜೆ ಮತ್ತು ಧ್ಯಾನ ಮಾಡಬಹುದು. ಭದ್ರತೆಗಾಗಿ ನೂರಾರು ಜನರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ. ಇದೇನು ಪ್ರದರ್ಶನ? ಇದು ಒಳ್ಳೆಯದಲ್ಲ ಎಂದ ಖರ್ಗೆ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಗುರುವಾರ ಸಂಜೆ ಧ್ಯಾನ ಮಂಟಪದಲ್ಲಿ ತಮ್ಮ 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ್ದು ಇದು ಜೂನ್ 1 ರ ಶನಿವಾರದ ಸಂಜೆಯವರೆಗೆ ಮುಂದುವರಿಯುತ್ತದೆ. ಧ್ಯಾನ ಮಂಟಪವು 1892ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಅದೇ ಸ್ಥಳವಾಗಿದೆ.
ಇಂಡಿಯಾ ಬಣವು 273 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ, ಬಿಜೆಪಿ ಪಕ್ಷವು ತನ್ನ ಭದ್ರಕೋಟೆಗಳಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಖರ್ಗೆ ಹೇಳಿದ್ದಾರೆ. ಲೋಕಸಭೆಯಲ್ಲಿ ಸರ್ಕಾರ ರಚನೆಗೆ ಸಂಪೂರ್ಣ ಬಹುಮತ ಪಡೆಯಲು ಪಕ್ಷ ಅಥವಾ ಮೈತ್ರಿಕೂಟಕ್ಕೆ 272 ಸ್ಥಾನಗಳ ಅಗತ್ಯವಿದೆ. ನಮ್ಮ ಮೈತ್ರಿಯ ಅಡಿಯಲ್ಲಿ, ಎಲ್ಲಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ನಮ್ಮ ಅಂದಾಜಿನ ಪ್ರಕಾರ, ನಾವು ಬಿಜೆಪಿಗಿಂತ ಹೆಚ್ಚು ಮುಂದಿದ್ದೇವೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಆತಂಕದಲ್ಲಿದ್ದಾರೆ. ನಾವು 273 ಸ್ಥಾನಗಳನ್ನು ಪಡೆಯುತ್ತೇವೆ, ಬಿಜೆಪಿ ಗೆಲ್ಲುವುದಿಲ್ಲ ಎಂದಿದ್ದಾರೆ ಖರ್ಗೆ.
ಪ್ರಧಾನಿ ಮೋದಿಯವರು “ದ್ವೇಷ ಭಾಷಣಗಳನ್ನು” ನೀಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷರು, ಜನರು ಅಂತಹ ಭಾಷಣ ಕೇಳಲು ಆಸಕ್ತಿ ಹೊಂದಿಲ್ಲ. ಜನರು ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.
“ಅವರು ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಬೇಕಿತ್ತು. ಅವರು ಕಳೆದ 10 ವರ್ಷಗಳಿಂದ ಏನು ಮಾಡಿದ್ದಾರೆ? ಅದನ್ನು ಜನರಿಗೆ ತಿಳಿಸಬೇಕು. ಆದರೆ ಅವರು ಜನರಿಗೆ ತೊಂದರೆ ನೀಡಲು ಸಂವಿಧಾನ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದಿದ್ದಾರೆ ಖರ್ಗೆ.
ಇದನ್ನೂ ಓದಿ: Lok Sabha Elections: ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ನನ್ನ ಆಯ್ಕೆ; ಮಲ್ಲಿಕಾರ್ಜುನ ಖರ್ಗೆ
ಬಿಜೆಪಿಯ ‘400 ಪಾರ್’ ಘೋಷಣೆಗೆ ತಿರುಗೇಟು ನೀಡಿದ ಖರ್ಗೆ, ಇದು ಸತ್ಯಕ್ಕೆ ದೂರವಾದದ್ದು.ಇದು ತಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುವ ಕ್ರಮ ಎಂದು ಹೇಳಿದರು. ಇಂಡಿಯಾ ಬಣವು ಸರ್ಕಾರ ರಚಿಸಿದರೆ ನೀವೇ ಪ್ರಧಾನ ಮಂತ್ರಿಯಾಗಿರುತ್ತೀರಾ ಎಂಬ ಪ್ರಶ್ನೆಗೆ, ಖರ್ಗೆ ತಮ್ಮನ್ನು ಕಾಂಗ್ರೆಸ್‌ನ “ಯೋಧ” ಎಂದು ಎಂದಿದ್ದು, ಚುನಾವಣೆಯ ನಂತರ ಮೈತ್ರಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಒಂದಿಬ್ಬರು ನನ್ನ ಹೆಸರು ಹೇಳಿದರೆ ಕೆಲಸ ಆಗುವುದಿಲ್ಲ, ನಮ್ಮ ಪಾಲುದಾರರು ಚರ್ಚಿಸಿ ನಂತರ ಹೆಸರು ಪ್ರಸ್ತಾಪಿಸುತ್ತಾರೆ, ಮೊದಲು ಬಿಜೆಪಿಯನ್ನು ಸೋಲಿಸುವುದು ನಮ್ಮ ಉದ್ದೇಶ, ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಖರ್ಗೆ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Fri, 31 May 24