ಸನಾತನ ಧರ್ಮ ವಿರೋಧಿಸಿದ್ದೇ ಸೋಲಿಗೆ ಕಾರಣ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣ ಟೀಕೆ
ಸನಾತನ ಧರ್ಮವನ್ನು ವಿರೋಧಿಸುವುದನ್ನು ದೇಶದಲ್ಲಿ ಯಾರೂ ಒಪ್ಪಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ವಿರೋಧಿಸುತ್ತಲೇ ಬಂದರೆ ಕಾಂಗ್ರೆಸ್ ಸೋಲುತ್ತಲೇ ಹೋಗುತ್ತದೆ ಎಂದು ಅದೇ ಪಕ್ಷದ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ನವದೆಹಲಿ, ಡಿಸೆಂಬರ್ 3: ಐದು ರಾಜ್ಯಗಳಿಗೆ ನಡೆದ ವಿಧಾನಸಭೆ (Assembly Election Results 2023) ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ ಬಹುತೇಕ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ಮುಂದಡಿಯಿಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢಗಳಲ್ಲಿ ಬಿಜೆಪಿ ಗೆಲುವಿನತ್ತ ಸಾಗಿದ್ದರೆ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಬಹುಮತದತ್ತ ಸಾಗಿದೆ. ರಾಜಸ್ಥಾನ ಹಾಗೂ ಛತ್ತೀಸ್ಗಢದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ (Congress) ಪಕ್ಷದ ಈ ಸೋಲಿಗೆ ಸನಾತನ ಧರ್ಮವನ್ನು ವಿರೋಧಿಸಿದ್ದೇ ಕಾರಣ ಎಂದು ಅದೇ ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ಅಭಿಪ್ರಾಯಪಟ್ಟಿದ್ದಾರೆ.
ಸನಾತನ ಧರ್ಮವನ್ನು ವಿರೋಧಿಸುವುದನ್ನು ದೇಶದಲ್ಲಿ ಯಾರೂ ಒಪ್ಪಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ವಿರೋಧಿಸುತ್ತಲೇ ಬಂದರೆ ಕಾಂಗ್ರೆಸ್ ಸೋಲುತ್ತಲೇ ಹೋಗುತ್ತದೆ. ಸನಾತನ ಧರ್ಮವನ್ನು ಕಾಂಗ್ರೆಸ್ ನಿರಂತರವಾಗಿ ವಿರೋಧಿಸುತ್ತಿದೆ. ಚುನಾವಣಾ ಕಣದಲ್ಲಿ ಜಾತಿ ರಾಜಕಾರಣದ ಮಾಡುವುದನ್ನು ದೇಶದ ಜನತೆ ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಚುನಾವಣೆ ಗೆಲ್ಲಬೇಕಿದ್ದರೆ ಗಾಂಧಿ ಮಾರ್ಗ ಅನುಸರಿಸಬೇಕು: ಪ್ರಮೋದ್ ಕೃಷ್ಣಂ
#WATCH | On Congress trailing in MP, Rajasthan and Chhattisgarh, party leader Acharya Pramod Krishnam says, “Opposing Sanatan (Dharma) has sunk the party. This country has never accepted caste-based politics…This is the curse of opposing Sanatan (Dharma).” pic.twitter.com/rertLLlzMS
— ANI (@ANI) December 3, 2023
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕಾದರೆ ಮಹಾತ್ಮಾ ಗಾಂಧೀಜಿಯವರ ಮಾರ್ಗವನ್ನು ಅನುಸರಿಸಬೇಕು. ಆದರೆ ಕಾಂಗ್ರೆಸ್ ಪ್ರಸ್ತುತ ಮಾರ್ಕ್ಸ್ ಮಾರ್ಗವನ್ನು ಅನುಸರಿಸುತ್ತಿದೆ. ಈ ಸಂಪ್ರದಾಯ ಬದಲಾಗಬೇಕು. ಮಹಾತ್ಮ ಗಾಂಧಿಯವರ ಸಭೆಯು ‘ರಘುಪತಿ ರಾಘವ್ ರಾಜಾ ರಾಮ್’ ಅವರ ಸ್ತೋತ್ರದೊಂದಿಗೆ ಪ್ರಾರಂಭವಾಗುತ್ತಿತ್ತು. ಆದರೆ ಕೆಲವು ನಾಯಕರು ಸನಾತನ ಧರ್ಮವನ್ನೇ ವಿರೋಧಿಸುತ್ತಿದ್ದಾರೆ. ಅಂತಹ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕದಿದ್ದರೆ ಕಾಂಗ್ರೆಸ್ ಸ್ಥಿತಿ ಎಐಎಂಐಎಂನಂತಾಗುತ್ತದೆ. ಕಾಂಗ್ರೆಸ್ ನಾಯಕತ್ವ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸನಾತನದ ಧರ್ಮದ ವಿರೋಧವೀಗ ನಮ್ಮನ್ನು ಆವರಿಸಿದೆ ಎಂದು ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಬಹುಮತದತ್ತ ಬಿಜೆಪಿ; ಯಾರಾಗ್ತಾರೆ ಸಿಎಂ? ಅತಂತ್ರವಾದರೆ ವಸುಂಧರಾ, ಬಹುಮತ ಬಂದರೆ ಬಾಲಕನಾಥ್ ಸಿಎಂ?
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಅಂಗವಾಗಿರುವ ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಇತ್ತೀಚೆಗೆ ಸನಾತನ ಧರ್ಮ ಎಂಬುದು ಡೆಂಗ್ಯೂ, ಮಲೇರಿಯಾದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ನ ಕೆಲವು ನಾಯಕರು ಸ್ಟಾಲಿನ್ ಹೇಳಿಕೆ ಸಮರ್ಥಿಸಿದ್ದರೆ ಇನ್ನು ಕೆಲವರು ಪ್ರತಿಕ್ರಿಯಿಸದೆ ಮೌನ ತಾಳಿದ್ದರು. ಚುನಾವಣಾ ಪ್ರಚಾರಗಳಲ್ಲಿ ಸನಾತನ ಧರ್ಮದ ವಿಚಾರವನ್ನೂ ಬಿಜೆಪಿ ಅವಕಾಶ ಸಿಕ್ಕಲ್ಲೆಲ್ಲ ಬಳಸಿಕೊಂಡಿತ್ತು.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ