ಯಾವುದೂ ರಹಸ್ಯವಾಗಿ ಉಳಿದಿಲ್ಲ, ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರಿದ್ದರೇ ಅಚ್ಚರಿಯಾಗುತ್ತಿತ್ತು: ಕಾಂಗ್ರೆಸ್ ವಿರುದ್ಧ ಮನೀಶ್​ ತಿವಾರಿ ವ್ಯಂಗ್ಯ

| Updated By: Lakshmi Hegde

Updated on: Feb 05, 2022 | 3:02 PM

ಮನೀಶ್​ ತಿವಾರಿಯನ್ನು ಕಾಂಗ್ರೆಸ್​ ಸ್ಟಾರ್​ ಪ್ರಚಾರಕ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಟಿಎಂಸಿ ಮುಖಂಡ, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಪುತ್ರ ಅಭಿಜಿತ್​ ಮುಖರ್ಜಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಯಾವುದೂ ರಹಸ್ಯವಾಗಿ ಉಳಿದಿಲ್ಲ, ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ನನ್ನ ಹೆಸರಿದ್ದರೇ ಅಚ್ಚರಿಯಾಗುತ್ತಿತ್ತು: ಕಾಂಗ್ರೆಸ್ ವಿರುದ್ಧ ಮನೀಶ್​ ತಿವಾರಿ ವ್ಯಂಗ್ಯ
ಮನೀಶ್ ತಿವಾರಿ
Follow us on

ದೆಹಲಿ: ಪಂಜಾಬ್​ ಚುನಾವಣೆಗೆ ಇನ್ನು 15ದಿನ ಬಾಕಿ ಇರುವಾಗ ಕಾಂಗ್ರೆಸ್​ ಅಲ್ಲಿನ ಸ್ಟಾರ್​ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಮನಮೋಹನ್​ ಸಿಂಗ್ ಅವರ ಹೆಸರಿದ್ದು, ಪ್ರಮುಖ ಜಿ 23 ನಾಯಕರಾದ ಗುಲಾಂ ನಬಿ ಆಜಾದ್​, ಮನೀಶ್​ ತಿವಾರಿಯವರ ಹೆಸರನ್ನು ಸ್ಟಾರ್​ ಪ್ರಚಾರಕರ ಲಿಸ್ಟ್​​ನಿಂದ ಕೈಬಿಡಲಾಗಿದೆ. ಇವರೊಂದಿಗೆ ಇನ್ನೂ ಹಲವು ಪ್ರಮುಖ ಕಾಂಗ್ರೆಸ್ ನಾಯಕರ ಹೆಸರೂ ಇಲ್ಲ.  ಹೀಗೆ ಲಿಸ್ಟ್ ಬಿಡುಗಡೆಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಮನೀಶ್​ ತಿವಾರಿ ಟ್ವೀಟ್ ಮಾಡಿ,  ಕಾಂಗ್ರೆಸ್​ ವಿರುದ್ಧ ಸೂಕ್ಷ್ಮವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಒಂದೊಮ್ಮೆ ಸ್ಟಾರ್ ಪ್ರಚಾರಕ ಲಿಸ್ಟ್​​ನಲ್ಲಿ ನನ್ನ ಹೆಸರು ಇದ್ದಿದ್ದರೇ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿತ್ತು. ಅದಕ್ಕೆ ಇರುವ ಕಾರಣಗಳೇನೂ ರಹಸ್ಯವಾಗಿ ಉಳಿದಿಲ್ಲ ಎಂದು ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.  ಈ ಮೂಲಕ ಕಾಂಗ್ರೆಸ್​ ನನ್ನನ್ನು ಸ್ಟಾರ್​ ಪ್ರಚಾರಕರ ಪಟ್ಟಿಯಿಂದ ಕೈಬಿಡುವುದು ನಿರೀಕ್ಷಿತವೇ ಆಗಿತ್ತು ಎಂದಿದ್ದಾರೆ. ಅಂದಹಾಗೇ, ಈ ಲಿಸ್ಟ್​​ನಲ್ಲಿ ಭೂಪಿಂದರ್​ ಸಿಂಗ್ ಹೂಡಾ, ಆನಂದ್ ಶರ್ಮಾ ಹೆಸರೂ ಕೂಡ ಇಲ್ಲ.

2020ರಲ್ಲಿ ಮನೀಶ್​ ತಿವಾರಿ, ಗುಲಾಂ ನಬಿ ಆಜಾದಿ ಸೇರಿ ಜಿ-23 ನಾಯಕರು ಕಾಂಗ್ರೆಸ್​ ನಾಯಕತ್ವದ ವಿರುದ್ಧ ರೆಬಲ್ ಆಗಿದ್ದರು. ಅದನ್ನು ಸೋನಿಯಾ ಗಾಂಧಿಗೆ ಬಹಿರಂಗವಾಗಿ ಪತ್ರ ಬರೆಯುವ ಮೂಲಕ ವ್ಯಕ್ತಪಡಿಸಿದ್ದರು. ಕಾಂಗ್ರೆಸ್​ನ್ನು ತುರ್ತಾಗಿ ನವೀಕರಿಸುವ ಅಗತ್ಯವಿದೆ. ಅದಕ್ಕಾಗಿ ಪಕ್ಷದ ನಾಯಕತ್ವವನ್ನು ಪೂರ್ಣಾವಧಿಗೆ ಯಾರಾದರೂ ವಹಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಹೇಳಿದ್ದರು. ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬಿಟ್ಟಮೇಲೆ ಸೋನಿಯಾ ಗಾಂಧಿ ಮಧ್ಯಂತರ ಅವಧಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಚರ್ಚೆ ನಡೆದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಅದೇ ಹೊತ್ತಲ್ಲಿ ಕಾಂಗ್ರೆಸ್​ನಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳೂ ಶುರುವಾಗಿದ್ದವು. ಹೀಗಾಗಿ ಪಕ್ಷದ ಹಿರಿಯರೆಲ್ಲ ಸೇರಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.

ಮನೀಶ್​ ತಿವಾರಿಯನ್ನು ಕಾಂಗ್ರೆಸ್​ ಸ್ಟಾರ್​ ಪ್ರಚಾರಕ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಟಿಎಂಸಿ ಮುಖಂಡ, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಪುತ್ರ ಅಭಿಜಿತ್​ ಮುಖರ್ಜಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಪಂಜಾಬ್​ ಚುನಾವಣೆ ನಿಮಿತ್ತ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಮನೀಶ್​ ತಿವಾರಿ ಹೆಸರು ಇಲ್ಲದೆ ಇರುವುದು ಖೇದಕರ. ಕಾಂಗ್ರೆಸ್​ ಇಂಥ ಸಂಕುಚಿತ ಮನೋಭಾವದಿಂದಲೇ ಚುನಾವಣೆ ಎದುರಿಸಲು ಹೊರಟರೆ ಖಂಡಿತ ಆ ಪಕ್ಷ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಗುಲಾಂ ನಬಿ ಆಜಾದ್​ರಂತೂ ಈಗಾಗಲೇ ಕಾಂಗ್ರೆಸ್​ ಟಾರ್ಗೆಟ್ ಆಗಿದ್ದಾರೆ. ಅವರಿಗೆ ಪ್ರಸಕ್ತ ಸಾಲಿನ ಪದ್ಮ ಭೂಷಣ ಸಿಕ್ಕಾಗಲೂ ಕೂಡ ಕಾಂಗ್ರೆಸ್​ನಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಹಾಗಿದ್ದಾಗ್ಯೂ ಅವರು ಉತ್ತರಾಖಂಡ ಸ್ಟಾರ್​ ಪ್ರಚಾರಕರಾಗಿದ್ದಾರೆ. ಇದೇ ಉತ್ತರಾಖಂಡ್​ಗೆ ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿಯವರನ್ನು ಸ್ಟಾರ್​ ಪ್ರಚಾರಕನ್ನಾಗಿ ಮಾಡಿದ ಕಾಂಗ್ರೆಸ್ ನವಜೋತ್​ ಸಿಂಗ್​ ಸಿಧುರನ್ನು ಕೈಬಿಟ್ಟಿದೆ.

ಇದನ್ನೂ ಓದಿ: Lata Mangeshkar: ಮತ್ತೆ ಬಿಗಡಾಯಿಸಿದ ಲತಾ ಮಂಗೇಶ್ಕರ್ ಆರೋಗ್ಯ; ವೈದ್ಯರು ಹೇಳಿದ್ದೇನು?

Published On - 3:01 pm, Sat, 5 February 22