10 ದಿನಗಳೊಳಗೆ ಪಂಜಾಬ್ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸಿ; ರಾಹುಲ್ ಗಾಂಧಿಗೆ ನವಜೋತ್ ಸಿಂಗ್ ಸಿಧು ಒತ್ತಾಯ

ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಮುಂದಿನ 7ರಿಂದ 10 ದಿನಗಳಲ್ಲಿ ಘೋಷಿಸಬೇಕೆಂದು ಹೈಕಮಾಂಡ್​ಗೆ ಪಿಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇಂದು ಒತ್ತಾಯಿಸಿದ್ದಾರೆ.

10 ದಿನಗಳೊಳಗೆ ಪಂಜಾಬ್ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸಿ; ರಾಹುಲ್ ಗಾಂಧಿಗೆ ನವಜೋತ್ ಸಿಂಗ್ ಸಿಧು ಒತ್ತಾಯ
ರಾಹುಲ್​ ಗಾಂಧಿ ಮತ್ತು ನವಜೋತ್​ ಸಿಂಗ್​ ಸಿಧು
Updated By: ಸುಷ್ಮಾ ಚಕ್ರೆ

Updated on: Jan 27, 2022 | 7:57 PM

ನವದೆಹಲಿ: ಪಂಜಾಬ್‌ನಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಕಾಂಗ್ರೆಸ್‌ ಪಕ್ಷದ ಸಿಎಂ ಅಭ್ಯರ್ಥಿಯ ಹೆಸರನ್ನು 10 ದಿನಗಳಲ್ಲಿ ಘೋಷಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿಗೆ (Rahul Gandhi) ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್‌ ಸಿಧು ಡೆಡ್‌ಲೈನ್‌ ನೀಡಿದ್ದಾರೆ. ಪಂಜಾಬ್​ನ ಅಮೃತಸರದಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕೇವಲ ಸಿಧು ಮಾತ್ರವಲ್ಲದೆ ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಕೂಡ ಸಿಎಂ ಅಭ್ಯರ್ಥಿ ಹೆಸರು ಘೋಷಿಸಲು ಒತ್ತಡ ಹೇರಿದ್ದಾರೆ.

ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಮುಂದಿನ 7ರಿಂದ 10 ದಿನಗಳಲ್ಲಿ ಘೋಷಿಸಬೇಕೆಂದು ಹೈಕಮಾಂಡ್​ಗೆ ಪಿಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇಂದು ಒತ್ತಾಯಿಸಿದ್ದಾರೆ. ಜಲಂಧರ್‌ನಲ್ಲಿ ಸಭೆಯೊಂದರಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದ ರಾಹುಲ್ ಗಾಂಧಿಯನ್ನು ಉದ್ದೇಶಿಸಿ ಮಾತನಾಡಿದ ಸಿಧು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವಂತೆ ಕೇಳಿಕೊಂಡರು.

ಪಂಜಾಬ್​ನಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ದಯವಿಟ್ಟು ಪಂಜಾಬ್‌ನ ಜನರಿಗೆ ತಿಳಿಸಿ. ಕಾಂಗ್ರೆಸ್ ಅಜೆಂಡಾವನ್ನು ಯಾರು ಜಾರಿಗೆ ತರುತ್ತಾರೆ? ಸಿಎಂ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದನ್ನು ನೀವು ಸ್ಪಷ್ಟಪಡಿಸಿದರೆ ಕಾಂಗ್ರೆಸ್ 70 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಸಿಧು ಹೇಳಿದ್ದಾರೆ.

ನವಜೋತ್ ಸಿಂಗ್ ಸಿಧು ಬೇಡಿಕೆಗೆ ಸಿಎಂ ಚನ್ನಿ ಕೂಡ ಬೆಂಬಲ ಸೂಚಿಸಿದ್ದು, ವೇದಿಕೆಯಲ್ಲಿ ನವಜೋತ್ ಸಿಂಗ್ ಸಿಧು ಅವರನ್ನು ತಬ್ಬಿಕೊಳ್ಳುವ ಮೂಲಕ ತಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಘೋಷಿಸಿದ್ದಾರೆ.

‘ರಾಹುಲ್ ಗಾಂಧಿ ಜೀ, ನೀವು ನನಗೆ ಎಲ್ಲವನ್ನೂ ಕೊಟ್ಟಿದ್ದೀರಿ. ನಾನು ನಿಮ್ಮಿಂದ ಇನ್ನೇನು ಕೇಳಲಿ? ನಾನು ಪಂಜಾಬ್‌ಗಾಗಿ ನನ್ನ ಪ್ರಾಣವನ್ನೇ ಕೊಡುತ್ತೇನೆ. ನಮ್ಮ ಸರ್ಕಾರ ಒಟ್ಟಾಗಿ ನಿಂತು ಮಾಫಿಯಾ ರಾಜ್ ಅನ್ನು ಮುಗಿಸುತ್ತದೆ. ಆದರೆ, ಇಂದು ಜನ ಸಿಎಂ ಮುಖವನ್ನು ಘೋಷಿಸಿ ಎಂದು ಆಗ್ರಹಿಸುತ್ತಿದ್ದಾರೆ. ನೀವು ಯಾರ ಹೆಸರನ್ನೇ ಘೋಷಿಸಿದರೂ ನಾನು ಸಂತೋಷಪಡುತ್ತೇನೆ’ ಎಂದು ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಸಿಧು ಮತ್ತು ಚನ್ನಿ ಅವರ ಬೇಡಿಕೆಗೆ ಸ್ಪಂದಿಸಿದ ರಾಹುಲ್ ಗಾಂಧಿ ಪಂಜಾಬ್ ಸಿಎಂ ಆಯ್ಕೆಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ನಾವು ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳುತ್ತೇವೆ ಎಂದು ರಾಹುಲ್ ಗಾಂಧಿ ವರ್ಚುವಲ್ ರ್ಯಾಲಿಯಲ್ಲಿ ಹೇಳಿದರು. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಹಳೆಯ ಸ್ನೇಹಿತ ನವಜೋತ್ ಸಿಂಗ್ ಸಿಧುಗಾಗಿ ಪಾಕ್ ಪ್ರಧಾನಿ ಲಾಬಿ ಮಾಡಿದ್ದರು: ಅಮರಿಂದರ್ ಸಿಂಗ್

ಪಂಜಾಬ್‌: 65 ಸ್ಥಾನಗಳಲ್ಲಿ ಬಿಜೆಪಿ, 37 ಸ್ಥಾನಗಳಲ್ಲಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಸ್ಪರ್ಧೆ