Punjab Elections 2022: ಸಿಧು VS ಚನ್ನಿ; ಪಂಜಾಬ್ ಚುನಾವಣೆಗೆ ಕಾಂಗ್ರೆಸ್ನಿಂದ ಇಂದೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಸಾಧ್ಯತೆ
Punjab Assembly Polls: ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರಲ್ಲಿ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಲಿದೆ ಎಂಬ ಬಗ್ಗೆ ಸದ್ಯದಲ್ಲೇ ತೆರೆ ಬೀಳಲಿದೆ.
ಅಮೃತಸರ: ಪಂಜಾಬ್‌ನಲ್ಲಿ ಇನ್ನೇನು ವಿಧಾನಸಭಾ ಚುನಾವಣೆ (Punjab Assembly Polls) ಸಮೀಪದಲ್ಲಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಇದರಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದರ ನಡುವೆ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದ ವರದಿಗಳು ತೀವ್ರಗೊಂಡಿರುವುದರಿಂದ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ (Congress) ಪಕ್ಷದ ಉನ್ನತ ನಾಯಕರು ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಇಂದು ಸಂಜೆ ಘೋಷಿಸುವ ಸಾಧ್ಯತೆಯಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಈ ಕುರಿತ ವರದಿಗಳನ್ನು ತಳ್ಳಿಹಾಕಿದ್ದಾರೆ. ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಕಚ್ಚಾಟವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೆ ವರದಿ ಮಾಡಿದ್ದು, ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರಲ್ಲಿ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಹೈಕಮಾಂಡ್ ಘೋಷಿಸಲಿದೆ ಎಂಬ ಬಗ್ಗೆ ಸದ್ಯದಲ್ಲೇ ತೆರೆ ಬೀಳಲಿದೆ.
ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿಯೊಂದಿಗೆ ಕಾಂಗ್ರೆಸ್ ಪಕ್ಷವು ಪಂಜಾಬ್ ವಿಧಾನಸಭಾ ಚುನಾವಣೆಗೆ ಹೋಗಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಜಲಂಧರ್‌ನಲ್ಲಿ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಂಜಾಬ್‌ನಲ್ಲಿ ಯಾರನ್ನು ಸಿಎಂ ಆಗಿ ಆಯ್ಕೆ ಮಾಡಿದರೂ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ.
ಪಂಜಾಬ್‌ನಲ್ಲಿ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ನಂತರವೂ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಯಾರು ಮುನ್ನಡೆಸುತ್ತಾರೆ ಎಂಬುದು ದೊಡ್ಡ ಪ್ರಶ್ನೆ ಎಂದು ಚರಣ್ಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ಇಬ್ಬರೂ ರ್ಯಾಲಿಯಲ್ಲಿ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ನಾನೇ ಸಿಎಂ ಆಗಬೇಕೆಂಬುದು ಶಾಸಕರ ಆಯ್ಕೆಯಾಗಿತ್ತು; ಸುನಿಲ್ ಜಖಾರ್