ಹಸುಗಳು ಹುಲ್ಲು ತಿಂದು ಒಳ್ಳೆಯ ಹಾಲು ಕೊಡುತ್ತಿವೆ: ಸಿಂಗೂರ್​ನಲ್ಲಿ ಟಿಎಂಸಿ ಸಾಧನೆ ಬಗ್ಗೆ ಅಭ್ಯರ್ಥಿ ಹೊಗಳಿಕೆ ಇದು

Rachana Banergy and Singur curd statement: ಹೂಗ್ಲಿ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ರಚನಾ ಬ್ಯಾನರ್ಜಿ ಇತ್ತೀಚೆಗೆ ನೀಡಿದ್ದ ಹೇಳಿಕೆ ಟ್ರೋಲ್ ಆಗುತ್ತಿದೆ. ಸಿಂಗೂರ್​ನಲ್ಲಿ ಕಾರ್ಮಿಕರೊಬ್ಬರ ಮನೆಯಲ್ಲಿ ಊಟ ಮಾಡಿ, ಅಲ್ಲಿನ ಮೊಸರಿನ ರುಚಿಗೆ ಮನಸೋತ ರಚನಾ, ಈ ರುಚಿಕರ ಮೊಸರಿಗೆ ಟಿಎಂಸಿ ಆಡಳಿತ ಕಾರಣ ಎಂದಿದ್ದಾರೆ. ಟಿಎಂಸಿ ಆಡಳಿತದಿಂದಾಗಿ ಸಿಂಗೂರ್​ನಲ್ಲಿ ಚೆನ್ನಾಗಿ ಹುಲ್ಲು, ಗಿಡಮರಗಳು ಬೆಳೆದು ಹಸುಗಳಿಗೆ ಒಳ್ಳೆಯ ಆಹಾರವಾಗಿದೆ. ಇದರಿಂದ ಗುಣಮಟ್ಟದ ಹಾಲು ಮತ್ತು ಮೊಸರು ಸಿಗುವಂತಾಗಿದೆ ಎಂದು ರಚನಾ ಹೇಳಿರುವ ಒಂದು ವಿಡಿಯೋ ತುಣುಕು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಶೇರ್ ಆಗುತ್ತಿದೆ.

ಹಸುಗಳು ಹುಲ್ಲು ತಿಂದು ಒಳ್ಳೆಯ ಹಾಲು ಕೊಡುತ್ತಿವೆ: ಸಿಂಗೂರ್​ನಲ್ಲಿ ಟಿಎಂಸಿ ಸಾಧನೆ ಬಗ್ಗೆ ಅಭ್ಯರ್ಥಿ ಹೊಗಳಿಕೆ ಇದು
ರಚನಾ ಬ್ಯಾನರ್ಜಿ

Updated on: Mar 27, 2024 | 3:26 PM

ಕೋಲ್ಕತಾ, ಮಾರ್ಚ್ 27: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಯ (Lok Sabha Elections 2024) ಕಾವು ದಿನೇ ದಿನೇ ಹೆಚ್ಚುತ್ತಿದೆ. ಹೇಳಿಕೆ, ಪ್ರತಿಹೇಳಿಕೆಗಳು ವಿವಿಧ ವಿವಾದ, ಚರ್ಚೆಗಳಿಗೆ ಕಾರಣವಾಗುತ್ತಿವೆ. ಈ ಮಧ್ಯೆ ಬಂಗಾಳಿ ನಟಿ ಹಾಗೂ ಹೂಗ್ಲಿ (Hooghly) ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ರಚನಾ ಬ್ಯಾನರ್ಜಿ (Rachana Banerjee) ಸಿಂಗೂರ್​ನಲ್ಲಿನ ಸಾಧನೆ ಬಗ್ಗೆ ನೀಡಿದ ಒಂದು ನಿದರ್ಶನ ಟ್ರೋಲ್ ಆಗುತ್ತಿದೆ. ಬಂಗಾಳದಲ್ಲಿ 13 ವರ್ಷದ ಟಿಎಂಸಿ ಆಡಳಿತದಲ್ಲಿ ಸಿಂಗೂರ್​ನಲ್ಲಿ ಆಗಿರುವ ಅಭಿವೃದ್ಧಿ ಏನು ಎಂಬ ಪ್ರಶ್ನೆಗೆ ರಚನಾ ಬ್ಯಾನರ್ಜಿ ಅವರು ಹುಲ್ಲು, ಮರ ಗಿಡ, ಹಸು, ಹಾಲು, ಮೊಸರಿನ ಉದಾಹರಣೆಗಳನ್ನು ನೀಡಿದ್ದಾರೆ.

‘ಸಿಂಗೂರ್ ಈಗ ಪೂರ್ಣವಾಗಿ ಹಲ್ಲು ಮತ್ತು ಗಿಡಮರಗಳಿಂದ ತುಂಬಿಹೋಗಿದೆ. ಹಸುಗಳು ಈ ಹುಲ್ಲು ತಿಂದು ಗುಣಮಟ್ಟದ ಹಾಲು ನೀಡುತ್ತಿವೆ. ಇದರಿಂದ ಉತ್ತಮ ಮೊಸರು ಸಿಗುವಂತಾಗಿದೆ ಎಂದು ರಚನಾ ಬ್ಯಾನರ್ಜಿ ಹೇಳಿದ್ದಾರೆ,’ ಎಂದು ಎಕ್ಸ್ ಖಾತೆದಾರರೊಬ್ಬರು ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ರಚನಾ ಬ್ಯಾನರ್ಜಿ ಬಂಗಾಳಿಯಲ್ಲಿ ಮಾತನಾಡುತ್ತಿರುವ ವಿಡಿಯೋ ಇದೆ.

ಇದನ್ನೂ ಓದಿ: ಇಲ್ಲಿ ಗಂಡಸರು ಸೀರೆ ಉಟ್ಕೊಂಡು ಹೂ ಮುಡಿದು ವಿಶೇಷ ಪೂಜೆ ಮಾಡುತ್ತಾರೆ! ಯಾಕೆ ಗೊತ್ತಾ?

ರಚನಾ ಬ್ಯಾನರ್ಜಿ ಅವರು ಸಿಂಗೂರ್​ನಲ್ಲಿ ಕಾರ್ಮಿಕರೊಬ್ಬರ ಮನೆಗೆ ಹೋಗಿ ಊಟ ಮಾಡಿದ್ದರು. ಆ ಸಂದರ್ಭದಲ್ಲಿ ಮೊಸರಿನ ರುಚಿಯನ್ನು ಇಷ್ಟಪಟ್ಟಿದ್ದರು. ಸಿಂಗೂರ್​ನ ಮೊಸರು ಯಾಕೆ ರುಚಿಯಾಗಿದೆ ಎಂದು ವಿವರಿಸುವಾಗ ರಚನಾ ಟಿಎಂಸಿ ಪಕ್ಷಕ್ಕೆ ಅದರ ಕ್ರೆಡಿಟ್ ಕೊಡಲು ಯತ್ನಿಸಿದರು. ಅಂತೆಯೇ, ಟಿಎಂಸಿ ಆಡಳಿತದ ದೆಸೆಯಿಂದ ಸಿಂಗೂರ್​ನಲ್ಲಿ ಹುಲ್ಲುಗಳು ಹುಲುಸಾಗಿ ಬೆಳೆದು ದನಗಳಿಗೆ ಒಳ್ಳೆಯ ಮೇವಾಗಿ, ಅದರಿಂದ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಆಗುತ್ತದೆ. ಒಳ್ಳೆಯ ರುಚಿನ ಮೊಸರೂ ತಯಾರಾಗುತ್ತದೆ ಎಂಬರ್ಥದಲ್ಲಿ ಹೇಳಿದ್ದರು ರಚನಾ.

ರಚನಾ ಮಾತನಾಡಿರುವ ಒಂದು ತುಣುಕು

ರಚನಾ ಬ್ಯಾನರ್ಜಿ ಬಂಗಾಳದ ಜನಪ್ರಿಯ ನಟಿ. ದೀದಿ ನಂಬರ್ ಒನ್ ಕಾರ್ಯಕ್ರಮದ ಮೂಲಕ ಅವರು ಹೆಚ್ಚು ಚಿರಪರಿಚಿತರಾಗಿದ್ದಾರೆ. ಟಿಎಂಸಿ ಪಕ್ಷ ಹೂಗ್ಲಿ ಲೋಕಸಭಾ ಕ್ಷೇತ್ರಕ್ಕೆ ಅವರನ್ನು ಕಣಕ್ಕಿಳಿಸಿದೆ. ಲಾಕೆಟ್ ಚಟರ್ಜಿ ಅವರು ಇಲ್ಲಿಯ ಹಾಲಿ ಸಂಸದೆ ಹಾಗೂ ಬಿಜೆಪಿ ಅಭ್ಯರ್ಥಿ. ಲಾಕೆಟ್ ಕೂಡ ನಟಿಯೇ ಆಗಿದ್ದವರು. ಲಾಕೆಟ್ ಮತ್ತು ರಚನಾ ಇಬ್ಬರೂ ಹಲವು ಬಂಗಾಳಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವುದುಂಟು. ಈಗ ಚುನಾವಣಾ ಅಖಾಡದಲ್ಲಿ ಇಬ್ಬರೂ ಎದುರುಬದುರಾಗಿದ್ದಾರೆ.

ಇದನ್ನೂ ಓದಿ: ಮೊಯಿತ್ರಾ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ರಾಜಮಾತಾ ಅಮೃತಾ ರಾಯ್ ಜತೆ ಮೋದಿ ಮಾತಕತೆ

ತೆರೆಯ ಮೇಲೆ ನೋಡುತ್ತಿದ್ದಿರಿ, ಈಗ ನಿಮ್ಮ ಮಧ್ಯೆಯೇ ಇರುತ್ತೇನೆ ಎನ್ನುವ ರಚನಾ

ನೀವು ತುಂಬಾ ಕಾಲದಿಂದ ನನ್ನನ್ನು ಟಿವಿಯಲ್ಲಿ ನೋಡುತ್ತಿದ್ದಿರಿ. ನಿಮ್ಮ ಮಧ್ಯೆಯೇ ನಾನಿರುತ್ತೇನೆ. ಸಂಜೆಯ ಹೊತ್ತು ನೀವು ಟಿವಿಯಲ್ಲಿ ನನ್ನನ್ನು ನೋಡಬಹುದು. ಬೆಳಗಿನ ಹೊತ್ತು ಮುಖತಃ ನನ್ನನ್ನು ಕಾಣಬಹುದು,’ ಎಂದು ರಚನಾ ತನ್ನ ಕ್ಷೇತ್ರದ ಮತದಾರರಿಗೆ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Wed, 27 March 24