ನನ್ನ ವಿರುದ್ಧ ಸಿಎಂ, ಪ್ರಧಾನಿ ಮೋದಿ ಬಂದು ನಿಂತರು ನಾನು ಗೆಲ್ಲುವೆ: ಎಸ್ಎಸ್ ಮಲ್ಲಿಕಾರ್ಜುನ
ನನ್ನ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಬಂದು ನಿಂತರು ನಾನು ಗೆಲ್ಲುವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಸ್ಎಸ್ ಮಲ್ಲಿಕಾರ್ಜುನ ಹೇಳಿದ್ದಾರೆ.
ದಾವಣಗೆರೆ: ನನ್ನ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಬಂದು ನಿಂತರು ನಾನು ಗೆಲ್ಲುವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಸ್ಎಸ್ ಮಲ್ಲಿಕಾರ್ಜುನ (SS Mallikarjun) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕಳೆದ ಚುನಾವಣೆಯಲ್ಲಿ ಸ್ವಲ್ಪ ಜಾಸ್ತಿ ಹುಮ್ಮಸಿನಲ್ಲಿದ್ದ ಹಿನ್ನೆಲೆ ಸೋಲಾಗಿದೆ. ಈ ಸಲ ಹಾಗೇ ಆಗಲು ಸಾಧ್ಯವಿಲ್ಲ. ನಾವು ತಂದ ಕಾಮಗಾರಿಗಳೇ ಈಗ ನಡೆಯುತ್ತಿವೆ. ರಾಜ್ಯದಲ್ಲಿ ಹೇಗೆ 40 ಪರ್ಸೆಂಟ್ ಸರ್ಕಾರ ಇದೆ. ದಾವಣಗೆರೆಯಲ್ಲಿ ಸಹ ಇದೆ. ಇದರಿಂದ ಜನ ಬೇಸತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ರೀತಿ ನಡೆಸಲಾಗುತ್ತಿದೆ. ದಾವಣಗೆರೆ ಇನ್ನೂ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಬೇಕು.
ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಸಿಎಂ ಬೊಮ್ಮಯಿ ತೆರೆ
ನಾನು ನನ್ನ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಇತ್ತೀಚೆಗೆ ಹಾವೇರಿಯಲ್ಲಿ ಸ್ಟಷ್ಟಣೆ ನೀಡಿದ್ದರು. ಆ ಮೂಲಕ ಸಿಎಂ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ತೆರೆ ಎಳೆದಿದ್ದರು. ಈ ಹಿಂದೆ ಸಿಎಂ ಬೊಮ್ಮಾಯಿ ಶಿಗ್ಗಾವಿ ಅದರ ಜೊತೆಗೆ ದಾವಣಗೆರೆ ಉತ್ತರ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕವೆಂಬಂತೆ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಈ ಬಾರಿ ಸ್ಪರ್ಧಿಸದಿರುವುದು ಅನುಮಾನ ಎನ್ನಲಾಗಿತ್ತು. ಆದರೆ ಬಳಿಕ ಸಿಎಂ ಬೊಮ್ಮಾಯಿ ತಮ್ಮ ಕ್ಷೇತ್ರ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದಿದ್ದರು.
ಇದನ್ನೂ ಓದಿ: ವನ್ಯಜೀವಿಗಳು ಪತ್ತೆ ಪ್ರಕರಣ: S.S.ಮಲ್ಲಿಕಾರ್ಜುನ್ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು
ನಿರೀಕ್ಷೆಯಂತೆ ಈ ಬಾರಿಯೂ ಶಾಮನೂರು ಶಿವಕಂರಪ್ಪಗೆ ಟಿಕೆಟ್
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿಗೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಕಂರಪ್ಪ ಅವರಿಗೆ ನಿರೀಕ್ಷೆಯಂತೆ ಕಾಂಗ್ರೆಸ್ ಈ ಬಾರಿಯೂ ಟಿಕೆಟ್ ನೀಡಿದೆ. ಆ ಮೂಲಕ ಸತತ 6ನೇ ಸಲ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ ಟಿಕೆಟ್ ನೀಡಲು ಕಾರಣವೂ ಇದೆ. 90ರ ಗಡಿ ದಾಟಿದ, ಶಾಸಕ ಶಾಮನೂರು ಶಿವಕಂರಪ್ಪ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿದ್ದು ಪ್ರಬಲ ಲಿಂಗಾಯತ ಸಮುದಾಯ ಮುಖಂಡರಾಗಿದ್ದಾರೆ.
ಇದನ್ನೂ ಓದಿ: ಸಾತನೂರಿನಲ್ಲಿ ಮುಸ್ಲಿಂ ಯುವಕನ ಬಳಿ 2 ಲಕ್ಷ ನೀಡುವಂತೆ ಪೀಡಿಸಿ ನಂತರ ಕೊಂದಿದ್ದಾರೆ: ಡಿಕೆ ಶಿವಕುಮಾರ್ ಆರೋಪ
ಪ್ರಚಾರ ಕಾರ್ಯ ಚಾಲನೆ
ಏ.03 ರಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ದಾವಣಗೆರೆ ನಗರದ ಅನೆಕೊಂಡದ ಐತಿಹಾಸಿಕ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ 1994, 2004, 2008, 2013 ಹಾಗೂ 2018 ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಇವರು ಜಿಲ್ಲೆಯ ದಕ್ಷಿಣ ಭಾಗದಿಂದ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಪ್ರತಿನಿಧಿಸುತ್ತಿದ್ದಾರೆ.
2008ರಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ವೇಳೆ ಬೆಣ್ಣೆ ನಗರಿ ದಾವಣೆಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರವಾಗಿ ಮಾಡಲಾಯಿತು. ಅದಾದ ಬಳಿಕ 2008ರಲ್ಲಿ ಬಿಜೆಪಿಯ ಯಶವಂತ ರಾವ್ ಜಾಧವ್ ವಿರುದ್ಧ ಗೆಲ್ಲುವ ಮೂಲಕ ದಾವಣಗೆರೆ ದಕ್ಷಿಣದಲ್ಲಿ ಹ್ಯಾಟ್ರಿಕ್ ಭಾರಿಸಿದರು. ಈ ಬಾರಿ ಸ್ಪರ್ಧಿಸುವ ಮೂಲಕ 6ನೇ ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:17 pm, Mon, 3 April 23