ದೆಹಲಿ: ಬಿಜೆಪಿಯ ಸಿದ್ಧಾಂತಗಳನ್ನು ಕಟುವಾಗಿ ವಿರೋಧಿಸುವವರಲ್ಲಿ ಒಬ್ಬರಾದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಇದೀಗ ತಮ್ಮ ಮೊದಲ ಗುರಿ ಏನೆಂಬುದನ್ನು ತಿಳಿಸಿದ್ದಾರೆ. ಟೈಮ್ಸ್ ನೌ ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಓವೈಸಿ, ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಇನ್ನೊಮ್ಮೆ ಅಧಿಕಾರಕ್ಕೆ ಬಾರದಂತೆ ತಡೆಯುವುದೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಹಾಗೇ, ಉತ್ತರ ಪ್ರದೇಶ ಚುನಾವಣೆ ನಿಮಿತ್ತ ಇನ್ಯಾವುದೇ ರಾಜಕೀಯ ಪಕ್ಷಗಳೊಂದಿಗೂ ಕೂಡ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು 100 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ನಮ್ಮನ್ನು ಜನರು ಹೇಗೆ ಪರಿಗಣಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ.
ನಮ್ಮ ಮೊದಲ ಗುರಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವುದು. ಎರಡನೇಯದಾಗಿ ಜಾತಿ, ಧರ್ಮದ ಹೆಸರಲ್ಲಿ ತಾರತಮ್ಯ ಮಾಡದೆ ಇರುವ ವ್ಯಕ್ತಿ ನಾಯಕನಾಗಬೇಕು ಎಂಬುದು ಎಂದು ಹೇಳಿದ ಅಸಾದುದ್ದೀನ್ ಓವೈಸಿ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವನ್ನೂ ಟೀಕಿಸಿದ್ದಾರೆ. ಅಖಿಲೇಶ್ ಯಾದವ್ ಅವರು ತಮ್ಮನ್ನು ತಾವು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಎಂದುಕೊಂಡುಬಿಟ್ಟಿದ್ದಾರೆ. ಹಾಗಾಗೇ, ಕನಸಲ್ಲಿ ಶ್ರೀಕೃಷ್ಣ ಬರುತ್ತಿದ್ದಾನೆ ಎಂಬ ಕತೆ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಹಾಗೇ, ಸಮಾಜವಾದಿ ಪಕ್ಷ, ಕಾಂಗ್ರೆಸ್, ಬಿಜೆಪಿಗಳೆಲ್ಲವೂ ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸುತ್ತಿವೆ. ಉತ್ತರ ಪ್ರದೇಶದ ಮುಸ್ಲಿಮರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ನೀರಸವಾಗಿದೆ ಎಂದು ಹೇಳಿದರು.
ಫೆಬ್ರವರಿ 10ರಿಂದ ಪ್ರಾರಂಭವಾಗಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ಪಕ್ಷ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ. ಎರಡು ದಿನಗಳ ಹಿಂದೆ ಎಐಎಂಐಎಂನ 9 ಅಭ್ಯರ್ಥಿಗಳ ಹೆಸರುಳ್ಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗೇ, ಓವೈಸಿಯವರು ಉತ್ತರಪ್ರದೇಶದಲ್ಲಿ ಯಾವುದಾದರೂ ರಾಜಕೀಯ ಪಕ್ಷದೊಟ್ಟಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಈ ಪಕ್ಷ ಏಕಾಂಗಿಯಾಗಿ ಸ್ಪರ್ಧೆಗೆ ಇಳಿದಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ಶೂಟಿಂಗ್ ಸೆಟ್ನಲ್ಲಿ ರವೀನಾ ಟಂಡನ್ಗೆ ನಿರಾಸೆ; ಓಪನ್ ಆಗಿಯೇ ಹೇಳಿಕೊಂಡ ನಟಿ