ಬಿಜೆಪಿ ಸೇರಿದ ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ ಯಾದವ್​; ಯಾರೀಕೆ? ಇಲ್ಲಿದೆ ಮಾಹಿತಿ

ಬಿಜೆಪಿ ಸೇರಿದ ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ ಯಾದವ್​; ಯಾರೀಕೆ? ಇಲ್ಲಿದೆ ಮಾಹಿತಿ
ಬಿಜೆಪಿ ಸೇರಿದ ಅಪರ್ಣಾ ಯಾದವ್

Aparna Yadav ಪ್ರಾಣಿ ಪ್ರೇಮಿಯಾಗಿರುವ ಅಪರ್ಣಾ ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ‘ಬಿ ಅವೇರ್’ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಅವರು ಕೆಲಸ ಮಾಡುತ್ತಿದ್ದಾರೆ.

TV9kannada Web Team

| Edited By: Apurva Kumar Balegere

Jan 19, 2022 | 1:07 PM

ಸಮಾಜವಾದಿ ಪಕ್ಷದ (Samajwadi Party) ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ  (Uttar Pradesh assembly elections)ಮುನ್ನ ಪ್ರತಿಸ್ಪರ್ಧಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಸಮಾಜವಾದಿ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. ಇದು ಯಾವುದೇ ರಾಜಕೀಯ ಬದಲಾವಣೆಗೆ ಕಾರಣವಾಗದಿದ್ದರೂ, ಕಳೆದ ಕೆಲವು ವಾರಗಳಲ್ಲಿ ಬಿಜೆಪಿಯಿಂದ ಹಲವಾರು ಪಕ್ಷಾಂತರಿಗಳು ಎಸ್‌ಪಿಗೆ ಸೇರ್ಪಡೆಗೊಂಡ ನಂತರ ಹೀಗೊಂದು ಸೇರ್ಪಡೆ ರಾಜಕೀಯ ವಲಯದಲ್ಲಿ ಚರ್ಚಾ ವಿಷಯವಾಗಿದೆ.  ಮುಲಾಯಂ ಸಿಂಗ್  ಮತ್ತು ಸಾಧನಾ ಗುಪ್ತಾ ಅವರ ಪುತ್ರ ಪ್ರತೀಕ್ ಅವರನ್ನು ಮದುವೆಯಾಗಿರುವ ಅಪರ್ಣಾ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆಯೇ ಠಾಕೂರ್-ಬಿಷ್ಟ್ ಹಿನ್ನೆಲೆಯಿಂದ ಬಂದವರು. ಮಹತ್ವಾಕಾಂಕ್ಷಿ ರಾಜಕಾರಣಿ ಎಂಬುದರ ಜತೆಗೆ ಅಪರ್ಣಾ ಅವರು ತರಬೇತಿ ಪಡೆದ ಶಾಸ್ತ್ರೀಯ ಸಂಗೀತ ಗಾಯಕಿ. ಅವರು ಲಖನೌದ ಸಿಟಿ ಮಾಂಟೆಸ್ಸರಿ ಶಾಲೆಯಿಂದ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಯುಕೆಯ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಪ್ರಾಣಿ ಪ್ರೇಮಿಯಾಗಿರುವ ಅಪರ್ಣಾ ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ‘ಬಿ ಅವೇರ್’ ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಪತಿ ಪ್ರತೀಕ್ ಯಾದವ್ ಅವರು ರಾಜಕೀಯದಲ್ಲಿ ಧುಮುಕುವ ಯಾವುದೇ ಯೋಜನೆಯನ್ನು ಹೊಂದಿಲ್ಲದಿದ್ದರೂ, 2017 ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಅಪರ್ಣಾ ಲಖನೌ ಕ್ಯಾಂಟ್‌ನಿಂದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು.

ಅಪರ್ಣಾ ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಹೊಗಳಿದ್ದರು. ಯೋಗಿ ಆದಿತ್ಯನಾಥ ಸರ್ಕಾರ ಆಕೆಗೆ ವೈ ಕೆಟಗರಿ ಭದ್ರತೆಯನ್ನೂ ಒದಗಿಸಿತ್ತು.

ಅಪರ್ಣಾ ಅವರ ಪತಿ ಮತ್ತು ಅವರ ಹಿರಿಯ ಸಹೋದರ ಅಖಿಲೇಶ್ ಯಾದವ್ ನಡುವಿನ ಭಿನ್ನಾಭಿಪ್ರಾಯಗಳ ಊಹಾಪೋಹಗಳ ನಡುವೆ, ಅಪರ್ಣಾ ಅವರು ಕುಟುಂಬದ ಮಹಿಳೆಯರೊಂದಿಗೆ ಸೌಹಾರ್ದ ಸಂಬಂಧವನ್ನು ಹಂಚಿಕೊಂಡಿದ್ದರು. ಅಖಿಲೇಶ್ ಅವರ ಪತ್ನಿ ಡಿಂಪಲ್ ಯಾದವ್ ಅವರೊಂದಿಗೆ ಅನೇಕ ಬಾರಿ ಫೋಟೋಗೆ ಪೋಸ್ ನೀಡಿದ್ದರು ಅಪರ್ಣಾ.

ಕುಟುಂಬದ ಮೂಲಗಳ ಪ್ರಕಾರ, ‘ನೇತಾ ಜಿ’ (ಮುಲಾಯಂ ಸಿಂಗ್) ಏನು ಮಾಡಬೇಕೆಂದು ಕೇಳುತ್ತಾರೋ ಅದನ್ನು ಮಾಡುವುದಾಗಿ ಅಪರ್ಣಾ ಯಾವಾಗಲೂ ಹೇಳುತ್ತಿದ್ದರು.  ಇದಕ್ಕೂ ಮೊದಲು ಅಪರ್ಣಾ ಬಿಜೆಪಿಗೆ ಸೇರುವ ಸುದ್ದಿಯನ್ನು ತಳ್ಳಿಹಾಕಿದ ಅಖಿಲೇಶ್ ಯಾದವ್ ಇದು ಆಂತರಿಕ ಸಮಸ್ಯೆ, ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದರು.  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್​ ಬಿಜೆಪಿ ಸೇರ್ಪಡೆ; ಸಮಾಜವಾದಿ ಪಕ್ಷಕ್ಕೆ ಇದು ಬಹುದೊಡ್ಡ ಹಿನ್ನಡೆ !

Follow us on

Related Stories

Most Read Stories

Click on your DTH Provider to Add TV9 Kannada