ರಾಜನಾಥ್ ಸಿಂಗ್ ಸಲಹೆ ನಿರ್ಲಕ್ಷಿಸಿ ಮತ್ತೊಮ್ಮೆ ಜಿನ್ನಾ ಹೆಸರು ಬಳಸಿದ ಯೋಗಿ ಆದಿತ್ಯನಾಥ

| Updated By: ರಶ್ಮಿ ಕಲ್ಲಕಟ್ಟ

Updated on: Jan 28, 2022 | 8:49 PM

ರಾಜ್ಯ ರಾಜಕೀಯದ ಸಂದರ್ಭದಲ್ಲಿ "ಕಿಸಾನ್ ಗನ್ನಾ" ಅಥವಾ ರೈತರ ಕಬ್ಬು ಬೆಳೆ ಸಮಸ್ಯೆಗಳನ್ನು ಎತ್ತಬೇಕೇ ಹೊರತು ಮಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಅಲ್ಲ ಎಂದು ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಹೇಳಿದ್ದರು.

ರಾಜನಾಥ್ ಸಿಂಗ್ ಸಲಹೆ ನಿರ್ಲಕ್ಷಿಸಿ ಮತ್ತೊಮ್ಮೆ ಜಿನ್ನಾ ಹೆಸರು ಬಳಸಿದ ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
Follow us on

ಲಖನೌ: ಅವರು ‘ಜಿನ್ನಾ’ (Jinnah) ಆರಾಧಕರು, ನಾವು ‘ಸರ್ದಾರ್ ಪಟೇಲ್’ ಆರಾಧಕರು. ಪಾಕಿಸ್ತಾನ ಅವರಿಗೆ ಪ್ರಿಯವಾಗಿದೆ, ನಾವು ಮಾ ಭಾರತಿಯ ಮೇಲೆ ನಮ್ಮ ಪ್ರಾಣವನ್ನು ಅರ್ಪಿಸುತ್ತೇವೆ ಎಂದು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath)ಶುಕ್ರವಾರ ಟ್ವೀಟ್ ಮಾಡಿದ್ದಾರೆ. ರಾಜ್ಯ ರಾಜಕೀಯದ ಸಂದರ್ಭದಲ್ಲಿ “ಕಿಸಾನ್ ಗನ್ನಾ” ಅಥವಾ ರೈತರ ಕಬ್ಬು ಬೆಳೆ ಸಮಸ್ಯೆಗಳನ್ನು ಎತ್ತಬೇಕೇ ಹೊರತು ಮಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಅಲ್ಲ ಎಂದು ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ (Rajnath Singh) ಹೇಳಿದ ಒಂದು ದಿನದ ನಂತರ ಆದಿತ್ಯನಾಥ ಮತ್ತೆ ಜಿನ್ನಾ ಹೆಸರು ಬಳಸಿ ವಿಪಕ್ಷ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. “ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಅವರ ಹೆಸರನ್ನು ಚುನಾವಣೆಯ ಸಮಯದಲ್ಲಿ ಏಕೆ ತರುತ್ತಾರೆ ಎಂದು ನನಗೆ ತಿಳಿದಿಲ್ಲ. ಉತ್ತರ ಪ್ರದೇಶ ರಾಜಕೀಯದಲ್ಲಿ ಜಿನ್ನಾ ಹೆಸರನ್ನು ಬಳಸಬಾರದು. ಬದಲಿಗೆ, ನಾವು ರೈತರ ಕಬ್ಬು ಕೃಷಿ ಬಗ್ಗೆ ಮಾತನಾಡಬೇಕು ಎಂದು ರಾಜನಾಥ್ ಸಿಂಗ್ ಗುರುವಾರ ಹೇಳಿದರು. ಪಶ್ಚಿಮ ಯುಪಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅವರು ಗಾಜಿಯಾಬಾದ್ ಜಿಲ್ಲೆಯ ಮೋದಿನಗರದಲ್ಲಿ ಮತದಾರರ ಸಂವಾದದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.  ಹಲವಾರು ಬಿಜೆಪಿ ನಾಯಕರು ತಮ್ಮ ಭಾಷಣಗಳಲ್ಲಿ ಜಿನ್ನಾ ಬೆಂಬಲಿಗರು ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಯುಪಿ ರಾಜಕೀಯದಲ್ಲಿ ಜಿನ್ನಾ ಹೆಸರು ಬಳಕೆ ಸಾಮಾನ್ಯ ಎಂಬಂತಿದೆ.  ಈ ಹಿಂದೆ  ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್, ಜವಾಹರಲಾಲ್ ನೆಹರು ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಎಂದು ಹೇಳಿದ್ದರು.

“ಸರ್ದಾರ್ ಪಟೇಲಜಿ, ರಾಷ್ಟ್ರಪಿತ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಜಿನ್ನಾ ಒಂದೇ ಸಂಸ್ಥೆಯಲ್ಲಿ ಓದಿದ ನಂತರ ಬ್ಯಾರಿಸ್ಟರ್‌ಗಳಾದರು. ಅವರು ಒಂದೇ ಸ್ಥಳದಲ್ಲಿ ಅಧ್ಯಯನ ಮಾಡಿದರು. ಅವರು ಬ್ಯಾರಿಸ್ಟರ್ ಆದರು, ನಮಗೆ ಸ್ವಾತಂತ್ರ್ಯ ತಂದುಕೊಟ್ಟರು. ಅವರು ಯಾವುದೇ ರೀತಿಯ ಹೋರಾಟದಿಂದ ಹಿಂದೆ ಸರಿಯಲಿಲ್ಲ” ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಹರ್ದೋಯ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಖಿಲೇಶ್ ಹೇಳಿದ್ದರು.

ಅಖಿಲೇಶ್ ಹೇಳಿಕೆಯನ್ನು ಸಿಎಂ ಆದಿತ್ಯನಾಥ ಟೀಕಿಸಿದ್ದು ಯಾದವ್ ಅವರು ಜಿನ್ನಾರನ್ನು ಪಟೇಲ್ ಅವರೊಂದಿಗೆ ಹೋಲಿಸಿರುವುದು “ನಾಚಿಕೆಗೇಡಿನ ಸಂಗತಿ” ಮತ್ತು ಅದನ್ನು “ತಾಲಿಬಾನಿ ಮನಸ್ಥಿತಿ” ಎಂದು ಹೇಳಿದರು. ಜಿನ್ನಾ ಕುರಿತಾದ ಯಾದವ್ ಟೀಕೆಗಳು ಮತ್ತು ಅದಕ್ಕೆ ಬಿಜೆಪಿಯ ಪ್ರತಿಕ್ರಿಯೆಯು ವಿಧಾನಸಭೆ ಚುನಾವಣೆಗೆ ಮುನ್ನ ಹಿಂದೂ-ಮುಸ್ಲಿಂ ರೀತಿಯಲ್ಲಿ ವಾತಾವರಣವನ್ನು ಕೆಡಿಸಲು ಎರಡು ಪಕ್ಷಗಳ ಚೆನ್ನಾಗಿ ಯೋಚಿಸಿದ ತಂತ್ರದ ಭಾಗವಾಗಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದರು.

2018 ರಲ್ಲಿ ಬಿಜೆಪಿ ಸಂಸದ ಸತೀಶ್ ಗೌತಮ್ ಜಿನ್ನಾ ಭಾವಚಿತ್ರವನ್ನು ಕ್ಯಾಂಪಸ್‌ನಿಂದ ತೆಗೆದುಹಾಕುವಂತೆ ಒತ್ತಾಯಿಸಿದ ನಂತರ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಹಿಂಸಾತ್ಮಕ ಪ್ರತಿಭಟನೆಗಳು ನಡೆದಾಗ 2018 ರಲ್ಲಿ  ಉತ್ತರ ಪ್ರದೇಶದಲ್ಲಿ ಜಿನ್ನಾ ಹೆಸರಲ್ಲಿ ವಿವಾದ ಆರಂಭವಾಯಿತು.

ಎಎಂಯು ವಿದ್ಯಾರ್ಥಿಗಳು ಪೊಲೀಸರೊಂದಿಗೆ ಘರ್ಷಣೆ ನಡೆಸಿದಾಗ ಸುಮಾರು ಎರಡು ಡಜನ್ ಜನರು ಗಾಯಗೊಂಡರು. ಆರೆಸ್ಸೆಸ್ ಅಂಗಸಂಸ್ಥೆ ಹಿಂದೂ ಜಾಗರಣ ಮಂಚ್ (ಎಚ್‌ಜೆಎಂ) ಕಾರ್ಯಕರ್ತರು ಕ್ಯಾಂಪಸ್‌ಗೆ ಮುಂಜಾನೆ ನುಗ್ಗಲು ನಡೆಸಿದ ಪ್ರಯತ್ನದ ವಿರುದ್ಧ ವಿದ್ಯಾರ್ಥಿಗಳ ಮೆರವಣಿಗೆಯನ್ನು ಪೊಲೀಸರು ತಡೆದಿದ್ದರಿಂದ ಘರ್ಷಣೆ ಉಂಟಾಗಿದೆ. ಅದೇ ದಿನ ನಿಗದಿಯಾಗಿದ್ದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಗೆ ವಿದ್ಯಾರ್ಥಿ ಸಂಘದ ಅಜೀವ ಸದಸ್ಯತ್ವ ನೀಡುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಮತ್ತು ಅನ್ಸಾರಿ ದೆಹಲಿಗೆ ಮರಳಬೇಕಾಯಿತು.

ಕೈರಾನಾ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮುನ್ನ ಭಾಷಣವೊಂದರಲ್ಲಿ ಆದಿತ್ಯನಾಥ ಅವರು ಕೆಲವರು ಗನ್ನಾ (ಕಬ್ಬು) ಅಥವಾ ಜಿನ್ನಾ ಎಂದು ಕೇಳುತ್ತಿದ್ದಾರೆ. ನಾನು ಹೇಳಬಲ್ಲೆ, ಕಬ್ಬು ನಮಗೆ ಒಂದು ಸಮಸ್ಯೆ ಆದರೆ ನಾವು ಜಿನ್ನಾ ಅವರ ಭಾವಚಿತ್ರವನ್ನು ಸಹ ಅನುಮತಿಸುವುದಿಲ್ಲ ಎಂದಿದ್ದರು.

ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆಗೆ ಮುನ್ನ ಪಕ್ಷ ತೊರೆಯಲಿದ್ದಾರೆಯೇ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್?