ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿ ಪರವಾಗಿದ್ದಾರೆ ಎಂಬ ಸಮೀಕ್ಷೆಗಳು ಒಪೀನಿಯನ್ ಪೋಲ್ಸ್ ಅಲ್ಲ ,ಓಪಿಯಮ್ ಪೋಲ್ಸ್ : ಅಖಿಲೇಶ್ ಯಾದವ್

ಬಿಜೆಪಿ ಶಾಸಕರಿಗೆ ಅವರ ಕ್ಷೇತ್ರಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ, ಅವರನ್ನು ಥಳಿಸಲಾಗುತ್ತಿದೆ, ಅವರ ಸಂಸದರ ಮೇಲೆ ಹಲ್ಲೆ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರ ಉಪಮುಖ್ಯಮಂತ್ರಿ ಅವಮಾನಕ್ಕೆ ಒಳಗಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿ ಪರವಾಗಿದ್ದಾರೆ ಎಂಬ ಸಮೀಕ್ಷೆಗಳು ಒಪೀನಿಯನ್ ಪೋಲ್ಸ್ ಅಲ್ಲ ,ಓಪಿಯಮ್ ಪೋಲ್ಸ್ : ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 24, 2022 | 7:41 PM

ಲಖನೌ: ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಮುನ್ನ ಉತ್ತರ ಪ್ರದೇಶದಲ್ಲಿ (Uttar Pradesh Polls) ಬಿಜೆಪಿಗೆ ಒಲವು ತೋರುವ ಸಮೀಕ್ಷೆಗಳು ಓಪಿಯಮ್ ಪೋಲ್ಸ್, ಒಪೀನಿಯನ್ ಪೋಲ್ಸ್ ಅಲ್ಲ ಎಂದು ಅಖಿಲೇಶ್ ಯಾದವ್ (Akhilesh Yadav)ಹೇಳಿದ್ದಾರೆ. ಅದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath)ಅವರನ್ನು “ದೊಡ್ಡ ಸುಳ್ಳುಗಾರ” ಎಂದೂ ಅಖಿಲೇಶ್ ಯಾದವ್ ಕರೆದಿದ್ದಾರೆ. “ಇವು ಅಭಿಪ್ರಾಯ ಸಂಗ್ರಹಗಳಲ್ಲ. ಇವು ಅಫೀಮು ಸಮೀಕ್ಷೆಗಳು. ಅವರು ಯಾವ ಮಾದಕ ದ್ರವ್ಯ ಸೇವಿಸಿದ ಸ್ಥಿತಿಯಲ್ಲಿ ಇಂತಹ ಅಂಕಿಅಂಶಗಳು ಮತ್ತು ಡೇಟಾವನ್ನು ತೋರಿಸುತ್ತಿದ್ದಾರೆಂದು ನಮಗೆ ತಿಳಿದಿಲ್ಲ” ಎಂದು ಅಖಿಲೇಶ್ ಯಾದವ್ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು. ಮುಂದಿನ ತಿಂಗಳು ಯುಪಿ ಚುನಾವಣೆಯ ಪೂರ್ವದಲ್ಲಿ ಕೆಲವು ಟಿವಿ ಚಾನೆಲ್‌ಗಳಲ್ಲಿ ತೋರಿಸುವ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು. ಯಾವುದೇ ಸತ್ಯ ಅಥವಾ ದಾಖಲೆಗಳನ್ನು ತೋರಿಸದೆ ಸಮೀಕ್ಷೆಗಳು ಬಿಜೆಪಿಗೆ ಒಲವು ತೋರಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥರು ಹೇಳಿದ್ದಾರೆ.  “ಬಿಜೆಪಿ ಶಾಸಕರಿಗೆ ಅವರ ಕ್ಷೇತ್ರಗಳಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ, ಅವರನ್ನು ಥಳಿಸಲಾಗುತ್ತಿದೆ, ಅವರ ಸಂಸದರ ಮೇಲೆ ಹಲ್ಲೆ ಮಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರ ಉಪಮುಖ್ಯಮಂತ್ರಿ ಅವಮಾನಕ್ಕೆ ಒಳಗಾಗಿದ್ದಾರೆ. ಅವರ ಶಾಸಕರು, ಸಂಸದರು ಮತ್ತು ಸಚಿವರನ್ನು ಈ ರೀತಿ ಅವಮಾನಿಸುತ್ತಿರುವಾಗ ಜನರು ಆ ಪಕ್ಷದ ವಿರುದ್ಧ ಇದ್ದಾರೆ ಎಂಬುದು ಸ್ಪಷ್ಟ. ಹೀಗಿರುವಾಗ ಅವರು ಯಾವ ಅಭಿಪ್ರಾಯ ಸಂಗ್ರಹವನ್ನು ತೋರಿಸುತ್ತಿದ್ದಾರೆ? ಅವರು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ, ”ಎಂದು ಅಖಿಲೇಶ್ ಟೀಕಿಸಿದರು.

ಪ್ರತಿಯೊಬ್ಬ ವ್ಯಕ್ತಿಯೂ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದರೂ ಬಿಜೆಪಿ ಅದರ ಬಗ್ಗೆ ಮಾತನಾಡಲಿಲ್ಲ. ಹಣದುಬ್ಬರ ದ್ವಿಗುಣಗೊಂಡರೆ ಮತ್ತು ಗಳಿಕೆ ಅರ್ಧದಷ್ಟು ಕಡಿಮೆಯಾದರೆ, ಸಂತೋಷ ಹೇಗೆ ಇರುತ್ತದೆ ಎಂದು ಅಖಿಲೇಶ್ ಆಶ್ಚರ್ಯ ವ್ಯಕ್ತಪಡಿಸಿದರು.

ಅವರು ನಕಲಿ ವಿಡಿಯೊಗಳನ್ನು ಪ್ರಸಾರ ಮಾಡುತ್ತಾರೆ , ಸುಳ್ಳು ಭರವಸೆಗಳನ್ನು ನೀಡುತ್ತಾರೆ ಮತ್ತು ನಕಲಿ ಜಾಹೀರಾತುಗಳನ್ನು ಹಾಕುತ್ತಾರೆ. ಅವರು ಉತ್ತರ ಪ್ರದೇಶದಲ್ಲಿ ಬಂಗಾಳದ ಮೇಲ್ಸೇತುವೆಯನ್ನು ತೋರಿಸಿದರು. ಅವರು ಚೀನಾದ ವಿಮಾನ ನಿಲ್ದಾಣಗಳನ್ನು ತೋರಿಸುತ್ತಿದ್ದರು. ಅವರು ತಮ್ಮ ಜಾಹೀರಾತುಗಳಲ್ಲಿ ಅಮೆರಿಕ ಕಚೇರಿಯನ್ನು ತೋರಿಸುತ್ತಿದ್ದರು. ಅವರ ಪ್ರತಿ ಭರವಸೆಯೂ ಜುಮ್ಲಾ ಆಗಿತ್ತು.

ಬಿಜೆಪಿಯು ವರ್ಚುವಲ್ ರ್ಯಾಲಿಗಳಿಗೆ ಸಿದ್ಧವಾಗಿದೆ ಎಂದು ಅವರು ಹೇಳಿದರು. “ಅವರ ಸ್ಟುಡಿಯೋಗಳು ಎಲ್ಲಾ ಸಿದ್ಧವಾಗಿವೆ. ಡಿಜಿಟಲ್ ಪ್ರಚಾರದ ಸಾಧ್ಯತೆಯಿದೆ ಎಂದು ಅವರಿಗೆ ತಿಳಿದಿತ್ತು, ಆದ್ದರಿಂದ ಅವರು ತಮ್ಮ ಮೂಲಸೌಕರ್ಯಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದರು. ಚುನಾವಣಾ ಆಯೋಗವು ಭೌತಿಕ ರ್ಯಾಲಿಗಳನ್ನು ನಿಷೇಧಿಸುತ್ತದೆ ಎಂದು ಅವರಿಗೆ ತಿಳಿದಿದೆಯೇ?” ಎಂದು ಯಾದವ್ ಪ್ರಶ್ನಿಸಿದ್ದಾರೆ.

ಆದರೆ ಚುನಾವಣಾ ಆಯೋಗದ ನಿರ್ಧಾರಗಳ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಸಮಾಜಿಪಕ್ಷದ ಉಚಿತ ವಿದ್ಯುತ್ ಭರವಸೆಯ ಬಗ್ಗೆ ಯೋಗಿ ಆದಿತ್ಯನಾಥ ಅವರು ಲೇವಡಿ ಮಾಡಿ ಬೆಳದಿಂಗಳ ರಾತ್ರಿ ಕಳ್ಳರಿಗೆ ಇಷ್ಟವಿಲ್ಲ. ಉಚಿತ ವಿದ್ಯುತ್ ಭರವಸೆ ನೀಡುವವರು ಜನರನ್ನು ವರ್ಷಗಳ ಕಾಲ ಕತ್ತಲೆಯಲ್ಲಿಟ್ಟರು ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಅಖಿಲೇಶ್, ‘ವಿದ್ಯುತ್ ಘಟಕಗಶ ಬಗ್ಗೆ ಮುಖ್ಯಮಂತ್ರಿಗೆ ಏನು ಗೊತ್ತು, ಸಿಎಂಗಿಂತ ದೊಡ್ಡ ಸುಳ್ಳುಗಾರ ಮತ್ತೊಬ್ಬರಿಲ್ಲ, ಕಳೆದ ನಾಲ್ಕೂವರೆ ವರ್ಷದಲ್ಲಿ ಒಂದೇ ಒಂದು ವಿದ್ಯುತ್ ಘಟಕ ಸ್ಥಾಪಿಸಿದ್ದಾರಾ ಎಂಬುದನ್ನು ಅವರೇ ಹೇಳಬೇಕು ಎಂದಿದ್ದಾರೆ.

ನಿಜವಾದ ಶತ್ರು ಚೀನಾ, ಪಾಕಿಸ್ತಾನವನ್ನು ನಮ್ಮ ರಾಜಕೀಯ ಶತ್ರು, ಅದನ್ನು ಆಡಳಿತ ಪಕ್ಷ ವೋಟ್ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಅಖಿಲೇಶ್ ಹೇಳಿದ್ದಕ್ಕೆ ಬಿಜೆಪಿ ಖಾರವಾಗಿಯೇ ಪ್ರತಿಕ್ರಿಯಿಸಿತ್ತು. ಈ ಬಗ್ಗೆ ಮಾತನಾಡಿದ ಅಖಿಲೇಶ್ “ನಮ್ಮ ದಿವಂಗತ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ ಅವರು ಹೇಳುತ್ತಿದ್ದಂತೆಯೇ ನಾನು ಪಾಕಿಸ್ತಾನದ ಬಗ್ಗೆ ಹೇಳಿದ್ದೇನೆ. ಅವರು ಚೀನಾ ನಮ್ಮ ದೊಡ್ಡ ಶತ್ರು ಎಂದು ಹೇಳಿದ್ದರು. ನಾನು ಬಿಪಿನ್ ರಾವತ್ ಅವರನ್ನು ಉಲ್ಲೇಖಿಸಲು ಸಾಧ್ಯವಿಲ್ಲವೇ? ಎಂದು ಕೇಳಿದ್ದಾರೆ.

ಕಳೆದ ವಾರ ಬಿಜೆಪಿಗೆ ಸೇರ್ಪಡೆಗೊಂಡ ಅತ್ತಿಗೆ ಅಪರ್ಣಾ ಯಾದವ್ ಅವರ ಬಗ್ಗೆ ಮಾತನಾಡಿದ ಅಖಿಲೇಶ್, ಬಿಜೆಪಿ ಕುಟುಂಬಗಳನ್ನು ವಿಭಜಿಸುತ್ತದೆ ಆದರೆ ನಮ್ಮ ಪಕ್ಷವು ಯಾರ ಕುಟುಂಬವನ್ನೂ ಜಗಳಕ್ಕಾಗಿ ಎಳೆದುಕೊಂಡಿಲ್ಲ. ನಾವು ಬಯಸಿದರೆ ನಾವು ಅನೇಕ ಬಿಜೆಪಿ ಮನೆಗಳಲ್ಲಿ ಜಗಳಗಳನ್ನು ಉಂಟುಮಾಡಬಹುದು ಎಂದು ನಕ್ಕಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಯಾಕೆ ಬಹಿರಂಗ ಮಾಡುತ್ತಿಲ್ಲ?; ಬಿಜೆಪಿ ಪ್ರಶ್ನೆ