ಬಿಜೆಪಿಗೆ ಸೇರಿದ್ದರೂ ನಾನು ಮುಲಾಯಂ ಸಿಂಗ್ ಯಾದವ್ ಸೊಸೆಯಾಗಿಯೇ ಉಳಿಯುತ್ತೇನೆ: ಅಪರ್ಣಾ ಯಾದವ್
Aparna Yadav: ‘ನನಗೆ ಸಾಕಷ್ಟು ರಾಜಕೀಯ ಜ್ಞಾನ ನೀಡಿದ್ದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮುಲಾಯಂ ಸಿಂಗ್ ಯಾದವ್’ ಅವರ ಸೊಸೆ ಅಪರ್ಣಾ ಯಾದವ್ ಹೇಳಿದ್ದಾರೆ.
ಲಖನೌ: ಭಾರತೀಯ ಜನತಾ ಪಕ್ಷಕ್ಕೆ (Bharatiya Janata Party – BJP) ಇತ್ತೀಚೆಗೆ ಸೇರ್ಪಡೆಯಾದ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಅವರ ಸೊಸೆ ಅಪರ್ಣಾ ಯಾದವ್ (Aparna Yadav) ಭಾನುವಾರ ಮಾವನನ್ನು ಭೇಟಿಯಾಗಿ ಅವರ ಆಶೀರ್ವಾದ ಕೋರಿದರು. ನಾನು ಯಾವಾಗಲೂ ಮುಲಾಯಂ ಕುಟುಂಬದ ಸೊಸೆಯಾಗಿಯೇ ಉಳಿಯುತ್ತೇನೆ. ‘ನನಗೆ ಸಾಕಷ್ಟು ರಾಜಕೀಯ ಜ್ಞಾನ ನೀಡಿದ್ದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾನು ಆ ಕುಟುಂಬದ ಸೊಸೆಯಾಗಿದ್ದೆ, ಮುಂದೆಯೂ ಆ ಕುಟುಂಬದ ಸೊಸೆಯಾಗಿಯೇ ಉಳಿಯುತ್ತೇನೆ’ ಎಂದು ಹೇಳಿದರು. ಲಖನೌ ನಗರದಲ್ಲಿ ನಡೆದ ಮನೆಮನೆ ಪ್ರಚಾರದಲ್ಲಿ ಪಾಲ್ಗೊಂಡ ಅವರು, ಬಿಜೆಪಿಗೆ ಮತ ನೀಡಬೇಕೆಂದು ಜನರಿಗೆ ಮನವಿ ಮಾಡಿದರು.
‘ಉತ್ತರ ಪ್ರದೇಶದ ಎಲ್ಲ ತಾಯಂದಿರು, ಸೋದರಿಯರು ಬಿಜೆಪಿ ಆಡಳಿತದಲ್ಲಿ ನೆಮ್ಮದಿ ಅನುಭವಿಸಿದರು. ಹೀಗಾಗಿಯೇ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕಿದೆ. ‘ಏಕ್ ಬಾರ್ ಫಿರ್ಸೆ ಬಿಜೆಪಿ ಸರ್ಕಾರ್ ಬನಿಯೇ’ ಎಂದು ಕರೆ ನೀಡಿದರು. ಕಳೆದ ಬುಧವಾರ ಅಪರ್ಣಾ ಯಾದವ್ ದೆಹಲಿಯಲ್ಲಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬಿಜೆಪಿ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಫೆಬ್ರುವರಿ 10ರಿಂದ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10, 14, 20, 23, 27, ಮಾರ್ಚ್ 3 ಮತ್ತು 7ರಂದು ಮತದಾನ ನಡೆಯಲಿದೆ.
ಇದನ್ನೂ ಓದಿ: ಅಪರ್ಣಾ ಯಾದವ್ ನಮ್ಮ ಸಿದ್ಧಾಂತವನ್ನು ಬಿಜೆಪಿಗೆ ಕೊಂಡೊಯ್ಯುತ್ತಾರೆ ಎಂದು ಆಶಿಸುವೆ : ಅಖಿಲೇಶ್ ಯಾದವ್ ಇದನ್ನೂ ಓದಿ: ಬಿಜೆಪಿ ಸೇರಿದ ಮುಲಾಯಂ ಸಿಂಗ್ ಕಿರಿಯ ಸೊಸೆ ಅಪರ್ಣಾ ಯಾದವ್; ಯಾರೀಕೆ? ಇಲ್ಲಿದೆ ಮಾಹಿತಿ