ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಇಂದು, ಜಾಟ್ ಸಮುದಾಯ ಪ್ರಾಬಲ್ಯವಿರುವ ಬಾಗ್‌ಪತ್‌ನಲ್ಲಿ ಅಮಿತ್ ಶಾ ರ್ಯಾಲಿ

| Updated By: ರಶ್ಮಿ ಕಲ್ಲಕಟ್ಟ

Updated on: Feb 06, 2022 | 11:33 AM

Uttar Pradesh Election ಬಾಗ್‌ಪತ್ ರ್ಯಾಲಿಯಲ್ಲಿ ಶಾ ಅವರು ಈ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಜಾಟ್ ಸಮುದಾಯದ ಮತದಾರರನ್ನು ಮನವೊಲಿಸಲು ಪ್ರಯತ್ನಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಣಾಳಿಕೆ  ಬಿಡುಗಡೆ ಇಂದು, ಜಾಟ್ ಸಮುದಾಯ ಪ್ರಾಬಲ್ಯವಿರುವ ಬಾಗ್‌ಪತ್‌ನಲ್ಲಿ ಅಮಿತ್ ಶಾ ರ್ಯಾಲಿ
ಗೋವಾದಲ್ಲಿ ಅಮಿತ್ ಶಾ
Follow us on

ಲಖನೌ: ಕೇಂದ್ರ ಗೃಹ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (BJP) ಹಿರಿಯ ನಾಯಕ ಅಮಿತ್ ಶಾ (Amit Shah) ಅವರು ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಶ್ಚಿಮ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ (Baghpat) ಭಾನುವಾರ ರ್ಯಾಲಿ ನಡೆಸಲಿದ್ದಾರೆ. ಫೆಬ್ರವರಿ 10 ರಂದು ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿರುವ ಛಪ್ರೌಲಿ, ಬರೌತ್ ಮತ್ತು ಬಾಗ್‌ಪತ್ ವಿಧಾನಸಭಾ ಕ್ಷೇತ್ರಗಳನ್ನು ಈ ರ್ಯಾಲಿ ಒಳಗೊಳ್ಳಲಿದೆ. ಅವರು ಅಮ್ರೋಹಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನೂ ನಡೆಸಲಿದ್ದಾರೆ. 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ (Uttar Pradesh Election) ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರ ಮತದಾನದ ನಂತರ, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7 ರಂದು ಮುಂದಿನ ಸುತ್ತಿನ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ. ಎಎನ್ಐ ಯ ವರದಿಯ ಪ್ರಕಾರ, ಬಾಗ್‌ಪತ್ ರ್ಯಾಲಿಯಲ್ಲಿ ಶಾ ಅವರು ಈ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವ ಜಾಟ್ ಸಮುದಾಯದ ಮತದಾರರನ್ನು ಮನವೊಲಿಸಲು ಪ್ರಯತ್ನಿಸಲಿದ್ದಾರೆ. ದೆಹಲಿಯಲ್ಲಿ ಈಗ ಹಿಂಪಡೆದಿರುವ ಕೇಂದ್ರದ ಮೂರು ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಜಾಟ್ ರೈತರು ಭಾಗವಹಿಸಿದ್ದರು. ಈ ತಿಂಗಳ ಆರಂಭದಲ್ಲಿ ಶಾ ಅವರು ದೆಹಲಿಯಲ್ಲಿರುವ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ನಿವಾಸದಲ್ಲಿ ಪ್ರದೇಶದ 200 ಕ್ಕೂ ಹೆಚ್ಚು ಜಾಟ್ ನಾಯಕರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ, ಶಾ ಸಮುದಾಯದ ಮುಖಂಡರು ಮತ್ತು ಬಿಜೆಪಿ ನಡುವೆ ಸಾಮ್ಯತೆಗಳನ್ನು ಸೆಳೆಯಲು ಪ್ರಯತ್ನಿಸಿದರು, “ನಿಮ್ಮ (ಜಾಟ್ ನಾಯಕರು) ಮತ್ತು ನಮ್ಮ (ಬಿಜೆಪಿ) ನಡುವೆ ಕೆಲವು ಸಾಮ್ಯತೆಗಳಿವೆ. ನೀವು ಸುಮಾರು 650 ವರ್ಷಗಳ ಕಾಲ ಮೊಘಲರೊಂದಿಗೆ ಹೋರಾಡಿದ್ದೀರಿ. ಜಾಟ್‌ಗಳು ತಮ್ಮ ಬಗ್ಗೆ ಮಾತ್ರ ಯೋಚಿಸುವುದಿಲ್ಲ, ಆದರೆ ಯಾವಾಗಲೂ ರಾಷ್ಟ್ರದ ಭದ್ರತೆಗೆ ಆದ್ಯತೆ ನೀಡುತ್ತಾರೆ, ಬಿಜೆಪಿ ಕೂಡ ಅದೇ ಸಿದ್ಧಾಂತವನ್ನು ಹೊಂದಿದೆ ಎಂದು ಅಮಿತ್ ಶಾ ಅವರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏತನ್ಮಧ್ಯೆ, ರ್ಯಾಲಿಗೆ ಮೊದಲು, ಶಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಮ್ಮುಖದಲ್ಲಿ ಲಖನೌ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.  ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಧರ್ಮೇಂದ್ರ ಪ್ರಧಾನ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, ಯುಪಿ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಮತ್ತು ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿರುವ ಹಿರಿಯ ಸಚಿವ ಸುರೇಶ್ ಖನ್ನಾ ಅವರು ಪ್ರಣಾಳಿಕೆ ಬಿಡುಗಡೆಯಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಮೊದಲು ಘೋಷಿಸುವವರೆಗೆ ನಾವು ಕಾಯಲು ನಿರ್ಧರಿಸಿದ್ದೇವೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದು, ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಪ್ರಣಾಳಿಕೆಯನ್ನು ಇಲ್ಲಿಯವರೆಗೆ ಘೋಷಿಸಿಲ್ಲ. ಚುನಾವಣೆಗಾಗಿ ಕಾಂಗ್ರೆಸ್ ಈಗಾಗಲೇ ಮಹಿಳಾ ಕೇಂದ್ರಿತ ಪ್ರಣಾಳಿಕೆಯನ್ನು ಘೋಷಿಸಿದೆ, ಆದರೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿಲ್ಲ.

ಇದನ್ನೂ ಓದಿ: ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಕೋರ್ಟ್​​ನಿಂದ ನೋಟಿಸ್​; ಶಿಕ್ಷಾರ್ಹ ಅಪರಾಧವೆಂದ ಅರ್ಜಿದಾರ ವಕೀಲ

Published On - 11:32 am, Sun, 6 February 22