UP Election 2022 Phase 4 Voting Live Updates: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಪೊಲೀಸ್​ ಬಿಗಿ ಭದ್ರತೆಯಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ಅಜಯ್​ ಮಿಶ್ರಾ !

| Updated By: Lakshmi Hegde

Updated on: Feb 24, 2022 | 7:42 AM

ಈ ಬಾರಿ ಬಿಜೆಪಿ ಪಾಲಿಗೆ ಲಖಿಂಪುರ ಖೇರಿ ಸ್ವಲ್ಪ ಸವಾಲಿನ ಕ್ಷೇತ್ರವಾಗಲಿದೆ. ಅಲ್ಲಿ ರೈತರ ಮೇಲೆ ಕಾರು ಹರಿಸಿದ್ದಲ್ಲದೆ, ಹಿಂಸಾಚಾರ ಸೃಷ್ಟಿಸಿದ ಆರೋಪ ಹೊತ್ತಿರುವುದು ಬಿಜೆಪಿ ಕೇಂದ್ರ ಸಚಿವರ ಪುತ್ರನೇ ಆಗಿದ್ದರಿಂದ ತುಸು ಕಗ್ಗಂಟಾಗಿ ಪರಿಣಮಿಸಿದೆ.

UP Election 2022 Phase 4 Voting Live Updates: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಪೊಲೀಸ್​ ಬಿಗಿ ಭದ್ರತೆಯಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ಅಜಯ್​ ಮಿಶ್ರಾ !
ಉನ್ನಾವೋದಲ್ಲಿ ಮತದಾನದ ಚಿತ್ರ

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ (4th Phase of Uttar Pradesh Assembly Election) ನಡೆಯುತ್ತಿದೆ. ಇಂದು ಪಿಲಿಭಿತ್​, ಲಖಿಂಪುರ ಖೇರಿ, ಸೀತಾಪುರ, ಹಾರ್ಡೋಯಿ, ಉನ್ನಾವೋ, ಲಖನೌ, ರಾಯ್​ ಬರೇಲಿ, ಬಾಂದಾ ಮತ್ತು ಫತೇಹ್​ಪುರ ಜಿಲ್ಲೆಗಳ ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 2017ರ ಚುನಾವಣೆಯಲ್ಲಿ ಈ 59 ವಿಧಾನಸಭಾ ಕ್ಷೇತ್ರಗಳಲ್ಲಿ 51ನ್ನು ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿ ಪಾಲಿಗೆ ಲಖಿಂಪುರ ಖೇರಿ ಸ್ವಲ್ಪ ಸವಾಲಿನ ಕ್ಷೇತ್ರವಾಗಲಿದೆ. ಅಲ್ಲಿ ರೈತರ ಮೇಲೆ ಕಾರು ಹರಿಸಿದ್ದಲ್ಲದೆ, ಹಿಂಸಾಚಾರ ಸೃಷ್ಟಿಸಿದ ಆರೋಪ ಹೊತ್ತಿರುವುದು ಬಿಜೆಪಿ ಕೇಂದ್ರ ಸಚಿವರ ಪುತ್ರನೇ ಆಗಿದ್ದರಿಂದ ಮತ್ತು ಇತ್ತೀಚೆಗೆ ಆಶೀಶ್​ ಮಿಶ್ರಾರಿಗೆ ಜಾಮೀನು ಸಿಕ್ಕಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.  ಈಗಾಗಲೇ ಮತದಾನ ಶುರುವಾಗಿದ್ದು, ಮತಗಟ್ಟೆಗಳಿಗೆ ಜನರು ಆಗಮಿಸುತ್ತಿದ್ದಾರೆ.

LIVE NEWS & UPDATES

The liveblog has ended.
  • 23 Feb 2022 04:42 PM (IST)

    ಬಿಜೆಪಿ ಶಾಸಕರಿಂದ ಬೆದರಿಕೆ: ಸಮಾಜವಾದಿ ಪಕ್ಷದಿಂದ ಆರೋಪ

    ಸಮಾಜವಾದಿ ಪಕ್ಷ ಬಿಜೆಪಿ ವಿರುದ್ಧ ಒಂದೇ ಸಮನೆ ಆರೋಪಗಳ ಸುರಿಮಳೆ ಸುರಿಸುತ್ತಿದೆ. ಸೀತಾಪುರ್​​ನ ಲಹರ್​ಪುರ್​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹಳ್ಳಿಯ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬಿಜೆಪಿ ವೋಟ್ ಮಾಡುವಂತೆ ಹೆದರಿಸುತ್ತಿದ್ದಾರೆ ಎಂದು ಪಕ್ಷ ಟ್ವೀಟ್ ಮಾಡಿದೆ.

  • 23 Feb 2022 04:28 PM (IST)

    ಮಧ್ಯಾಹ್ನ 3ಗಂಟೆ ಹೊತ್ತಿಗೆ ಶೇ.49.89ರಷ್ಟು ಮತದಾನ

    ಉತ್ತರ ಪ್ರದೇಶದಲ್ಲಿ ಮಧ್ಯಾಹ್ನ 3ಗಂಟೆವರೆಗೆ ಶೇ.49.89ರಷ್ಟು ಮತದಾನ ಆಗಿದೆ. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಶೇ.37.45 ಮತದಾನವಾಗಿತ್ತು.


  • 23 Feb 2022 02:52 PM (IST)

    ಮಧ್ಯಾಹ್ನ 1ಗಂಟೆವರೆಗೆ ಶೇ.37.45ರಷ್ಟು ಮತದಾನ

    ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಾಹ್ನ 1ಗಂಟೆವರೆಗೆ ಶೇ. 37.45ರಷ್ಟು ಮತದಾನವಾಗಿದೆ. ಬೆಳಗ್ಗೆ 11ಗಂಟೆವರೆಗೆ ಶೇ.22.62ರಷ್ಟು ವೋಟಿಂಗ್​ ಆಗಿತ್ತು. ಇದುವರೆಗೆ ಪಿಲಿಭಿತ್​​ನಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ.41.23 ಮತದಾನವಾಗಿದ್ದು, ಹಾರ್ಡೋಯಿಯಲ್ಲಿ  ತುಂಬ ಕಡಿಮೆ ಅಂದರೆ ಶೇ.34.29ರಷ್ಟು ಮತದಾನ ಆಗಿದೆ.

  • 23 Feb 2022 02:46 PM (IST)

    ಬಿಗಿ ಭದ್ರತೆಯಲ್ಲಿ ಮತ ಹಾಕಿದ ಅಜಯ್​ ಮಿಶ್ರಾ ತೇನಿ

    ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶೀಶ್​ ಮಿಶ್ರಾ ತಂದೆ, ಕೇಂದ್ರ ಸಚಿವ ಅಜಯ್​ ಮಿಶ್ರಾ ತೇನಿ ಇಂದು ಬಿಗಿ ಭದ್ರತೆಯಲ್ಲಿ ಮತದಾನ ಮಾಡಿದ್ದಾರೆ. ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವರಾಗಿರುವ ಅಜಯ್​ ಮಿಶ್ರಾ ಇಂದು ಲಖಿಂಪುರ ಖೇರಿಯ ಮತಗಟ್ಟೆಯೊಂದರಲ್ಲಿ  ಮತ ಹಾಕಿದ್ದಾರೆ.

  • 23 Feb 2022 01:29 PM (IST)

    ಇಲ್ಲಿಯವರೆಗೆ ಪಿಲಿಭಿತ್​​ನಲ್ಲಿ ಹೈಯೆಸ್ಟ್​ ಮತದಾನ

    ಉತ್ತರಪ್ರದೇಶ ವಿಧಾನಸಭೆ ಚುನಾವಣೆ ನಾಲ್ಕನೇ ಹಂತದ ಮತದಾನದಲ್ಲಿ ಜನರು ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ 11ಗಂಟೆಗೆ ಒಟ್ಟು ಶೇ.22.62ರಷ್ಟು ಮತದಾನವಾಗಿದ್ದು, ಅದರಲ್ಲಿ ಪಿಲಿಭಿತ್​​ನಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ.27.43ರಷ್ಟು ಮತದಾನವಾಗಿದೆ.

  • 23 Feb 2022 11:55 AM (IST)

    ಉತ್ತರ ಪ್ರದೇಶದಲ್ಲಿ ಬೆಳಗ್ಗೆ 11ಗಂಟೆವರೆಗೆ ಶೇ. 22.62ರಷ್ಟು ಮತದಾನ

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11ಗಂಟೆವರೆಗೆ  ಶೇ.22.62ರಷ್ಟು ಮತಚಲಾವಣೆಯಾಗಿದೆ.  ಬಾಂದಾದಲ್ಲಿ 23.85%, ಫತೇಹ್​ಪುರ್​ನಲ್ಲಿ 22.49%, ಹಾರ್ಡೋಯಿ 20.27%, ಖಿರಿ ಶೇ.26.29, ಲಖನೌ  21.42%, ಫಿಲಿಬಿತ್​  27.43%, ರಾಯ್​ಬರೇಲಿ ಶೇ. 21.41%, ಸೀತಾಪುರ್​ ಶೇ.21.99 ಮತ್ತು ಉನ್ನಾವೋದಲ್ಲಿ ಶೇ.21.27ರಷ್ಟು ಮತದಾನವಾಗಿದೆ.

  • 23 Feb 2022 11:52 AM (IST)

    ಮತ್ತೆ ನಾವೇ ಗೆಲ್ಲುತ್ತೇವೆ ಎಂದ ರಾಜನಾಥ್​ ಸಿಂಗ್​​

    ಲಖನೌನಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​, 2017ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಂತೆ ಈ ಬಾರಿಯೂ ಗೆಲ್ಲುತ್ತೇವೆ. ನಮ್ಮ ಸರ್ಕಾರದ ಆಡಳಿತವನ್ನು ನೋಡಿದ ಜನರು, ಈ ರಾಜ್ಯದ ಅಭಿವೃದ್ಧಿ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿಯ ಉತ್ತಮ ಆಡಳಿತಕ್ಕೆ ಖಂಡಿತ ಗೆಲುವು ಸಿಗಲಿದೆ ಎಂದು ಹೇಳಿದರು.

  • 23 Feb 2022 11:19 AM (IST)

    ಕೇಂದ್ರ ಸಚಿವ ರಾಜನಾಥ್​ ಸಿಂಗ್​​ರಿಂದ ಮತದಾನ

    ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಲಖನೌದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದರು.

  • 23 Feb 2022 11:17 AM (IST)

    ಬಿಜೆಪಿಗೆ ಮತಹಾಕುವಂತೆ ಒತ್ತಡ: ಎಸ್​ಪಿ ಆರೋಪ

    ಉನ್ನಾವೋ ಜಿಲ್ಲೆಯ ಪೂರ್ವ ವಿಧಾನಸಭಾ ಕ್ಷೇತ್ರದ ಮತಗಟ್ಟ ಸಂಖ್ಯೆ 344ರಲ್ಲಿ ಮತಗಟ್ಟೆ ಮುಖ್ಯಾಧಿಕಾರಿ ಮತದಾರರಿಗೆ ಬಿಜೆಪಿಗೇ ಮತ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಗಮನಹರಿಸಬೇಕು ಎಂದು ಸಮಾಜವಾದಿ ಪಕ್ಷ ಹೇಳಿದೆ.

  • 23 Feb 2022 10:04 AM (IST)

    ಬೆಳಗ್ಗೆ 9ಗಂಟೆವರೆಗೆ ಶೇ.9.1ರಷ್ಟು ಮತದಾನ

    ಉತ್ತರ ಪ್ರದೇಶದಲ್ಲಿ ಬೆಳಗ್ಗೆ 9ಗಂಟೆಯವರೆಗೆ ಶೇ.9.1ರಷ್ಟು ಮತದಾನವಾಗಿದೆ. ಅದರಲ್ಲಿ ಬಾಂದಾದಲ್ಲಿ ಶೇ.8.79, ಫತೇಹ್​​ಪುರದಲ್ಲಿ ಶೇ.0.69, ಹಾರ್ಡೋಯಿ ಶೇ.8.09, ಖಿರಿ ಶೇ.10.45, ಲಖನೌನಲ್ಲಿ ಶೇ.8.19, ಫಿಲಿಬಿತ್​​ನಲ್ಲಿ ಶೇ.10.62, ರಾಯ್​ ಬರೇಲಿಯಲ್ಲಿ ಶೇ.8, ಸೀತಾಪುರ್​ನಲ್ಲಿ ಶೇ.9.52, ಉನ್ನಾವೋದಲ್ಲಿ ಶೇ.9.23ರಷ್ಟು ಮತದಾನವಾಗಿದೆ.

  • 23 Feb 2022 09:42 AM (IST)

    ಮತ ಚಲಾಯಿಸಿದ ಕೇಂದ್ರ ಸಚಿವ

    ಕೇಂದ್ರ ಇಲಾಖೆ ರಾಜ್ಯ ಸಚಿವ ಕೌಶಲ್ ಕಿಶೋರ್​ ತಮ್ಮ ಪತ್ನಿಯೊಂದಿಗೆ ಬಂದು ಲಖನೌದಲ್ಲಿ ಮತ ಹಾಕಿದರು. ಇವರು ಲಖನೌ ಮೋಹನ್​ಲಾಲ್​ಗಂಜ್​ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

  • 23 Feb 2022 09:40 AM (IST)

    ಕೇಸರಿ ಕುರ್ತಾ ಧರಿಸಿ ಬಂದು ಮತ ಹಾಕಿದ ಸಚಿವ

    ಸಚಿವ ಮೊಹ್ಸಿನ್ ರಾಝಾ ಕೇಸರಿ ಕುರ್ತಾ ಧರಿಸಿದ ಬಂದು ತಮ್ಮ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಇಂದು ಉತ್ತರ ಪ್ರದೇಶದಲ್ಲಿ ಸುಮಾರು 24 ಕೋಟಿ ಜನರು ಬಿಜೆಪಿ ಪರವಾಗಿ ಮತ ಹಾಕಲಿದ್ದಾರೆ. ಯಾಕೆಂದರೆ ಬಿಜೆಪಿ ಕೈಯಲ್ಲಿ ಉತ್ತರ ಪ್ರದೇಶ ತುಂಬ ಸುರಕ್ಷಿತವಾಗಿರುತ್ತದೆ ಎಂದು ಅವರಿಗೆ ಗೊತ್ತಿದೆ ಎಂದು ಹೇಳಿದರು.

  • 23 Feb 2022 08:46 AM (IST)

    ಮುಖ್ಯಮಂತ್ರಿ ಯೋಗಿ ಪ್ರಚಾರ ನಡೆಸುವಲ್ಲಿ ಹಸುಗಳನ್ನು ಬಿಟ್ಟ ರೈತರು

    ನಿನ್ನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಯೋಗಿ ಆದಿತ್ಯನಾಥ್​ ಪ್ರಚಾರ ಸಭೆ ನಡೆಸುತ್ತಿದ್ದ ವೇಳೆ, ಅವರ ರ್ಯಾಲಿಗೆ ಅಡ್ಡವಾಗಿ ರೈತರು ನೂರಾರು ಹಸುಗಳನ್ನು ಬಿಟ್ಟ ಘಟನೆ ನಡೆದಿದೆ.  ಅವರು ಪ್ರಚಾರ ನಡೆಸಬೇಕಾದ ಸ್ಥಳದಲ್ಲಿಯೇ ಸಮೀಪ ಹಸುಗಳನ್ನು ಬಿಟ್ಟು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಬಯಲಿನಲ್ಲಿ ಹಸುಗಳನ್ನು ಬಿಡಲಾದ ವಿಡಿಯೋಗಳೂ ವೈರಲ್ ಆಗಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ

  • 23 Feb 2022 08:35 AM (IST)

    ಸರೋಜಿನಿ ನಗರದಲ್ಲಿ ಹಲವೆಡೆ ಇವಿಎಂ ದೋಷ: ಎಸ್​​ಪಿ ಆರೋಪ

    ಮತ್ತೆ ಇವಿಎಂ ದೋಷ ಇರುವುದಾಗಿ ಸಮಾಜವಾದಿ ಪಕ್ಷ ಆರೋಪ ಮಾಡಿದೆ. ಲಖನೌದ ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 578, 340 ಮತ್ತು 543ರಲ್ಲಿ ಇವಿಎಂ ದೋಷವಿದೆ. ಹೀಗಾಗಿ ಮತದಾನ ಸ್ಥಗಿತಗೊಂಡಿದೆ ಎಂದು ಸಮಾಜವಾದಿ ಪಾರ್ಟಿ ಹೇಳಿದೆ. ಇನ್ನು ಸರೋಜಿನಿ ನಗರ ವಿಧಾನಸಭಾ ಕ್ಷೇತ್ರದ 12, 13, 15 ಮತ್ತು 16ನೇ ಬೂತ್​​ಗಳಲ್ಲಿ ಸಮಾಜವಾದಿ ಪಕ್ಷದ ಬೂತ್​ ಏಜೆಂಟ್​​ಗಳನ್ನು ಹೊರಹಾಕಲಾಗಿದೆ ಎಂದೂ ಪಕ್ಷ ಆರೋಪ ಮಾಡಿದೆ.

  • 23 Feb 2022 08:29 AM (IST)

    ಮತ ಚಲಾಯಿಸಿದ ಮಾಯಾವತಿ

    ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿಯವರು ಇಂದು ಲಖನೌದಲ್ಲಿ ಮತ ಚಲಾಯಿಸಿದರು. ಮತದಾನ ಪ್ರಾರಂಭವಾದ ಕೆಲವೇ ಹೊತ್ತಲ್ಲಿ ಆಗಮಿಸಿ ಮತ ಹಾಕಿದ್ದಾರೆ.

  • 23 Feb 2022 08:27 AM (IST)

    ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ: ರಾಜೇಶ್ವರ್ ಸಿಂಗ್​

    ಇ.ಡಿ. ಮಾಜಿ ಅಧಿಕಾರಿ, ಪ್ರಸ್ತುತ ಚುನಾವಣೆಯಲ್ಲಿ ಲಖನೌನ ಸರೋಜಿನಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್ವರ್​ ಸಿಂಗ್​ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರತಿ ಮತಕೇಂದ್ರ, ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಮಾಫಿಯಾ ಬೆಂಬಲಿಸುವ ಪಕ್ಷಗಳ ಅಭ್ಯರ್ಥಿಗಳು ಜೈಲಿನಿಂದ ಸ್ಪರ್ಧಿಸುತ್ತಿದ್ದಾರೆ. ಇದನ್ನೆಲ್ಲ ಸಾರ್ವಜನಿಕರು ಸಹಿಸಿಕೊಳ್ಳುವುದಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಬಂದು ಮತ ಹಾಕಬೇಕು ಎಂದು ಹೇಳಿದರು.

  • 23 Feb 2022 08:24 AM (IST)

    ಅಮೂಲ್ಯ ಮತ ಹಾಕಿ, ಪ್ರಜಾಪ್ರಭುತ್ವ ಬಲಗೊಳಿಸಿ: ಪ್ರಧಾನಿ ಮೋದಿ

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಪೂರ್ವ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಇಂದು ಯುಪಿ ವಿಧಾನಸಭೆ ಚುನಾವಣೆಯ ನಾಲ್ಕನೇ ಸುತ್ತಿನ ಮತದಾನ ನಡೆಯುತ್ತಿದೆ. ಜನರು ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸಿ, ಈ ಮೂಲಕ ಪ್ರಜಾಪ್ರಭುತ್ವ ಬಲಪಡಿಸಲು  ಪ್ರತಿಯೊಬ್ಬರೂ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

  • 23 Feb 2022 08:21 AM (IST)

    ಮತದಾನ ಶುರುವಾಗುವುದಕ್ಕೂ ಮೊದಲು ಪೂಜೆ ಮಾಡಿದ ಸಚಿವ ಬ್ರಜೇಶ್​ ಪಾಠಕ್​

    ನಾಲ್ಕನೇ ಹಂತದ ಮತದಾನ ಶುರುವಾಗುವುದಕ್ಕೂ ಪೂರ್ವದಲ್ಲಿ ಸಚಿವ ಬ್ರಜೇಶ್​ ಪಾಠಕ್​ ಅವರು ತಮ್ಮ ನಿವಾಸದಲ್ಲಿ ಪೂಜೆ ನೆರವೇರಿಸಿದರು. ಇಂದು ಮುಂಜಾನೆಯಿಂದಲೂ ಜನರು ಬಿಜೆಪಿಗೆ ಮತ ಹಾಕಲು ಕಾಯುತ್ತಿದ್ದಾರೆ. ನಾನೀಗ ಮನೆಯಲ್ಲಿ ಪೂಜೆ ಮುಗಿಸಿದ್ದೇನೆ, ದೇವಸ್ಥಾನಕ್ಕೆ ಕೂಡ ಹೋಗುತ್ತೇನೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು ಎಂದು ಹೇಳಿದರು.

  • 23 Feb 2022 08:19 AM (IST)

    ಎಲ್ಲರೂ ತಪ್ಪದೇ ಮತ ಚಲಾಯಿಸಿ: ಸಿಎಂ ಯೋಗಿ

    ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಶುರುವಾಗುವುದಕ್ಕೂ ಮೊದಲು ಟ್ವೀಟ್ ಮಾಡಿದ ಸಿಎಂ ಯೋಗಿ ಆದಿತ್ಯನಾಥ್​, ಪ್ರತಿಯೊಬ್ಬರೂ ನಿಮ್ಮ ಮತ ಚಲಾಯಿಸಿ. ಭಯ ಮುಕ್ತ, ದಂಗೆ ಮುಕ್ತ, ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ಇಲ್ಲಿನವರ ಕನಸಾಗಿದ್ದು. ಅದು ನೆರವೇರಿಸುವ ಪಕ್ಷಕ್ಕೆ ಮತಚಲಾಯಿಸಿ. ಮೊದಲು ಮತದಾನ ಮಾಡಿ, ನಂತರ ಉಪಾಹಾರ ಮಾಡಿ ಎಂದಿದ್ದಾರೆ.

Published On - 8:15 am, Wed, 23 February 22

Follow us on