ಗುಡ್ನ್ಯೂಸ್: ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಕೆ
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಸಲ್ಲಿಸುವುದಕ್ಕೆ ವಿಶೇಷ ಅವಕಾಶದ ಜೊತೆಗೆ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೂ ವಿಶೇಷ ಅವಕಾಶ ನೀಡಲು ಸಚಿವ ಸಂಪುಟ ನಿರ್ಧಾರ ಮಾಡಿದೆ.
ಬೆಂಗಳೂರು, ಜು.26: 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ ನೀಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಡಿಲಿಸಿ ಅರ್ಜಿ ಸಲ್ಲಿಸುವುದಕ್ಕೆ ವಿಶೇಷ ಅವಕಾಶ ನೀಡಲಾಗುವುದು ಎಂದು ಇಂದು (ಶುಕ್ರವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್ಕೆ ಪಾಟೀಲ್ ಹೇಳಿದ್ದಾರೆ.
ಇನ್ನು ಕರ್ನಾಟಕದಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಹಲವು ವರ್ಷಗಳಿಂದ ಭರ್ತಿ ಮಾಡುವ ಕಾರ್ಯ ಆಗಿರಲಿಲ್ಲ. ಈ ಮಧ್ಯೆ ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಗೆ ನೇಮಕಾತಿ ವಿಳಂಬವಾಗಿತ್ತು. ಈ ಬಾರಿ 2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಗರಿಷ್ಠ 3 ವರ್ಷ ವಯೋಮಿತಿ ಸಡಿಲಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಆಕಾಂಕ್ಷಿಗಳಾಗಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಬದಲಾಗಿ 38 ವರ್ಷದವರೆಗೆ, ಒಬಿಸಿ ವರ್ಗದವರಿಗೆ 38 ವರ್ಷ ಬದಲಿಗೆ 41 ವರ್ಷದವರೆಗೆ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷದ ಬದಲಿಗೆ 43 ವರ್ಷದ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆದರೆ ಈ ನಿಯಮವು ಈ ಬಾರಿಗೆ ಮಾತ್ರ ಅನ್ವಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ