ಬೆಂಗಳೂರು: ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿ ಈಗಾಗಲೇ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳೂ ಸರಿಯಾಗಿ ನಡೆಯದ ಕಾರಣದಿಂದ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಹೀಗಾಗಿ, ಇದೀಗ ಪದವಿ, ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜಿನಿಂದ ಹೊರಬರುತ್ತಿರುವ ಬ್ಯಾಚ್ನವರಿಗೆ ಉದ್ಯೋಗ ಹುಡುಕುವುದೇ ದೊಡ್ಡ ಸವಾಲಾಗಿದೆ. ನೀವೇನಾದರೂ ಆ ರೀತಿ ಉದ್ಯೋಗ ಹುಡುಕುತ್ತಾ ಭವಿಷ್ಯದ ಚಿಂತೆಯಲ್ಲಿದ್ದರೆ ನಿಮಗಿಲ್ಲಿದೆ ಗುಡ್ ನ್ಯೂಸ್!
ಭಾರತದ ಪ್ರಮುಖ ಐಟಿ ಕಂಪನಿಯಾದ ಇನ್ಫೋಸಿಸ್ನಲ್ಲಿ (Infosys)ಕೆಲಸ ಮಾಡಬೇಕೆಂಬುದು ಬಹುತೇಕರ ಆಸೆ. ನಿಮಗೂ ಇನ್ಫೋಸಿಸ್ನಲ್ಲಿ ಕೆಲಸ ಮಾಡುವ ಬಯಕೆಯಿದ್ದರೆ ಖಂಡಿತ ಪ್ರಯತ್ನ ಮಾಡಬಹುದು. ಏಕೆಂದರೆ ಇನ್ಫೋಸಿಸ್ ಸದ್ಯದಲ್ಲೇ 35,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಲಾಕ್ಡೌನ್ನಿಂದ ಹಲವು ಕಂಪನಿಗಳು ನಷ್ಟದಲ್ಲಿದ್ದರೆ ಇನ್ಫೋಸಿಸ್ ಲಿಮಿಟೆಡ್ ಮಾತ್ರ ಭಾರೀ ಲಾಭ ಕಂಡಿದೆ. ಇನ್ಫೋಸಿಸ್ ಸಂಸ್ಥೆಯ ಲಾಭದಲ್ಲಿ ಶೇ. 22.7ರಷ್ಟು ಹೆಚ್ಚಳವಾಗಿದ್ದು, ಈ ವರ್ಷ ಇನ್ನೂ ಸಾಕಷ್ಟು ಪ್ರಾಜೆಕ್ಟ್ಗಳು ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮತ್ತೆ 35 ಸಾವಿರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ಬೆಂಗಳೂರು ಮೂಲದ ಐಟಿ ಕಂಪನಿಯಾದ ಇನ್ಫೋಸಿಸ್ ಮೊದಲ ಕ್ವಾರ್ಟರ್ ಅವಧಿಯಲ್ಲಿ 5,195 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷ 4,233 ಕೋಟಿ ರೂ. ಆದಾಯ ಗಳಿಸಿತ್ತು. 2022ರ ಆರ್ಥಿಕ ವರ್ಷದ ವೇಳೆಗೆ ಇನ್ಫೋಸಿಸ್ ಶೇ. 14ರಿಂದ 16ರಷ್ಟು ಆದಾಯದ ನಿರೀಕ್ಷೆಯಲ್ಲಿದೆ. ಇನ್ಫೋಸಿಸ್ ಸಂಸ್ಥೆಯ ಈ ಸಾಧನೆ ಬಗ್ಗೆ ಮಾತನಾಡಿರುವ ಭಾರತದ ಎರಡನೇ ಐಟಿ ಸರ್ವಿಸ್ ಸಂಸ್ಥೆಯಾಗಿರುವ ಇನ್ಫೋಸಿಸ್ ಡಿಜಿಟಲ್ ವಲಯಕ್ಕೆ ವಿಶ್ವಾದ್ಯಂತ ಮತ್ತಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ಇದಕ್ಕೂ ಮೊದಲು ಟಿಸಿಎಸ್ (TCS) ಕೂಡ 40,000 ಪ್ರೆಷರ್ಗಳನ್ನು ಕಾಲೇಜಿನ ಕ್ಯಾಂಪಸ್ಗಳಿಂದಲೇ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಇನ್ಫೋಸಿಸ್ ಕೂಡ ಪದವೀಧರರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿದ್ದು, ಇದರಿಂದ ಸಾವಿರಾರು ಜನರ ಉದ್ಯೋಗದ ಸಮಸ್ಯೆ ದೂರವಾಗಲಿದೆ.
ಇದನ್ನೂ ಓದಿ: Indian Navy Recruitment 2021: ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ; 2500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
(Infosys to Hire 35000 College Graduates as Demand for Tech based Jobs on Rise)
Published On - 6:43 pm, Wed, 14 July 21