ಬೆಂಗಳೂರನ್ನು ಸಿಲಿಕಾನ್ ಸಿಟಿ ಬದಲು TecHalli ಅನ್ನೋಣ: ಆನಂದ್ ಮಹಿಂದ್ರಾ, ನೀಲೆಕಣಿಗೆ ಇಷ್ಟವಾಯ್ತು ಈ ಸಲಹೆ

ಬೆಂಗಳೂರನ್ನು ಸಿಲಿಕಾನ್ ಸಿಟಿ ಬದಲು TecHalli ಅನ್ನೋಣ: ಆನಂದ್ ಮಹಿಂದ್ರಾ, ನೀಲೆಕಣಿಗೆ ಇಷ್ಟವಾಯ್ತು ಈ ಸಲಹೆ
ಆನಂದ್ ಮಹೀಂದ್ರ ಮತ್ತು TecHalli ಹೆಸರು ಅಂತಿಮಗೊಳಿಸುವ ಟ್ವೀಟ್

ಆನಂದ್ ಮಹೀಂದ್ರ ಜೊತೆಗೆ ಇನ್​ಫೋಸಿಸ್​ ಕಂಪನಿಯ ಸಹ ಸ್ಥಾಪಕ ನಂದನ್ ನೀಲೆಕಣಿ ಸಹ ಬೆಂಗಳೂರನ್ನು ‘ಟೆಕ್​ಹಳ್ಳಿ’ ಎನ್ನಬಹುದು ಎನ್ನುವ ಸಲಹೆಯನ್ನು ಒಪ್ಪಿಕೊಂಡಿದ್ದಾರೆ.

Ghanashyam D M | ಡಿ.ಎಂ.ಘನಶ್ಯಾಮ

|

Jun 06, 2021 | 10:21 PM

ಬೆಂಗಳೂರು: ‘ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಬದಲು ಇಲ್ಲಿನ ದೇಸಿ ಸೊಗಡು ಇರುವ ಮತ್ತೊಂದು ಹೆಸರು ಬೇಕು’ ಎಂಬ ಮಹಿಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಅವರ ಹುಡುಕಾಟ ಇದೀಗ ಫಲ ನೀಡಿದೆ. ಆನಂದ್ ಮಹೀಂದ್ರ ಜೊತೆಗೆ ಇನ್​ಫೋಸಿಸ್​ ಕಂಪನಿಯ ಸಹ ಸ್ಥಾಪಕ ನಂದನ್ ನೀಲೆಕಣಿ ಸಹ ಬೆಂಗಳೂರನ್ನು ‘ಟೆಕ್​ಹಳ್ಳಿ’ ಎನ್ನಬಹುದು ಎನ್ನುವ ಸಲಹೆಯನ್ನು ಒಪ್ಪಿಕೊಂಡಿದ್ದಾರೆ.

ಈ ಕುರಿತು ಭಾನುವಾರ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಆನಂದ್​ ಮಹೀಂದ್ರ, ‘ನಮ್ಮ ಬಳಿ ಫಲಿತಾಂಶವಿದೆ. ನಂದನ್ ನೀಲೇಕಣಿ ಈ ಸ್ಪರ್ಧೆಗೆ ಸಹ ತೀರ್ಪುಗಾರರಾಗಿದ್ದರು. ನಾಲ್ಕು ಸಲಹೆಗಳನ್ನು ಅಂತಿಮಗೊಳಿಸಿದ್ದೆವು. ನಂತರ ನಾವಿಬ್ಬರೂ ಸೇರಿ ಒಂದು ಹೆಸರನ್ನು ಅಂತಿಮಗೊಳಿಸಿದೆವು. TecHalli (ಟೆಕ್​ಹಳ್ಳಿ) ನಮ್ಮ ಆಯ್ಕೆಯಾಗಿತ್ತು. ಈ ಹೆಸರು ಸೂಚಿಸಿದ್ದವರು ಶ್ರೀನಿವಾಸ ಪಿ.ರೆಡ್ಡಿ’ ಎಂದು ಟ್ವೀಟ್ ಮಾಡಿದ್ದಾರೆ.

TecHalli ಎನ್ನುವ ಹೆಸರನ್ನು ಏಕೆ ಅಂತಿಮಗೊಳಿಸಲಾಯಿತು ಎಂದು ವಿವರಿಸಿರುವ ಆನಂದ್ ಮಹೀಂದ್ರ, ಈ ಸಲಹೆಯಲ್ಲಿರುವ H ಅಕ್ಷರವು ಎರಡು ಉದ್ದೇಶಗಳಿಗೆ ಸಮರ್ಪಕವಾಗಿ ಬಳಕೆಯಾಗುವಂತಿದೆ ಎಂದಿದ್ದಾರೆ. ‘H ಅಕ್ಷರವನ್ನು ದೊಡ್ಡ ಅಕ್ಷರದಲ್ಲಿ ಬರೆಯುವ ಮೂಲಕ ಅವರು ನಮ್ಮ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ ‘Halli’ ಎಂದರೆ ಗ್ರಾಮ ಎಂದು ಅರ್ಥ. ಈಗ ನಾವು ಸಿಲಿಕಾನ್ ವ್ಯಾಲಿಯಿಂದ TecHalliಗೆ ಹೋಗೋಣ. ಪಿನಿಫಾರಿನ ಎಚ್​2 ಸ್ಪೀಡ್ ಕಾರ್​ನ ಮಾದರಿ ಪಡೆಯಲು ನಿಮ್ಮ ಇಮೇಲ್ ಅಡ್ರೆಸ್ ನನಗೆ ಮೆಸೇಜ್ ಮಾಡಿ’ ಎಂದು ಅವರು ವಿನಂತಿಸಿದ್ದಾರೆ.

ಟೆಕ್​ಹಳ್ಳಿ ಎಂದರೇನು ಎಂದು ಹಲವರಿಗೆ ಅರ್ಥವಾಗುವುದಿಲ್ಲ ಎಂಬ ಆಕ್ಷೇಪಗಳಿಗೂ ಆನಂದ್ ಮಹೀಂದ್ರ ಪ್ರತಿಕ್ರಿಯಿಸಿದ್ದಾರೆ. ‘ವಿಜೇತರಿಗೆ ಅಭಿನಂದನೆಗಳು. ಆದರೆ ಸಿಲಿಕಾನ್ ವ್ಯಾಲಿ ಎನ್ನುವುದು ಒಂದು ರೂಪಕವಾಗಿತ್ತು. ನೀವು ಬೆಂಗಳೂರನ್ನು ಭಾರತದ ಟೆಕ್​ಹಳ್ಳಿ ಎಂದರೆ ಕನ್ನಡ ತಿಳಿಯದವರಿಗೆ ಅದು ಅರ್ಥವಾಗುವುದಿಲ್ಲ’ ಎಂದು ಒಬ್ಬರು ಟ್ವೀಟ್ ಮಾಡಿದ್ದರು.

ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರ, ‘ಮೊದಲ ಬಾರಿಗೆ ಈ ಪದವನ್ನು ಕೇಳಿಸಿಕೊಂಡವರು, ಓದಿದವರು ಇದರ ಅರ್ಥ ಏನು ಎಂದು ತಿಳಿಯಲು ಪ್ರಯತ್ನಿಸಬಹುದು. ವಿಶ್ವದ ಹಲವು ದೇಶಗಳಲ್ಲಿ ಇಂಗ್ಲಿಷ್ ಮಾತನಾಡುವುದಿಲ್ಲ. ಅವರಿಗೆ ಸಿಲಿಕಾನ್ ವ್ಯಾಲಿ ಎಂದರೇನು ಎಂಬುದೂ ತಿಳಿದಿಲ್ಲ’ ಎಂದಿದ್ದಾರೆ.

ಬೆಂಗಳೂರನ್ನು ಹಳ್ಳಿ ಎಂದಿರುವುದನ್ನು ಸ್ವಾಗತಿಸಿರುವ ಮತ್ತೊಬ್ಬರು, ‘ಸಿಲಿಕಾನ್ ವ್ಯಾಲಿ ಆಗಿ ರೂಪಾಂತರಗೊಳ್ಳುವ ಮೊದಲು ಬೆಂಗಳೂರು ಹಳ್ಳಿಯೇ ಆಗಿತ್ತು. ಈಗ ಇದನ್ನು ಟೆಕ್​ಹಳ್ಳಿ ಎನ್ನುವುದು ನಾವು ನಮ್ಮ ಬೇರುಗಳನ್ನು ಎಂದಿಗೂ ಮರೆಯಬಾರದು’ ಎಂಬ ಸಂದೇಶ ಕೊಡುತ್ತದೆ ಎಂದಿದ್ದಾರೆ.

ಕಳೆದ ಮಂಗಳವಾರ ಆನಂದ್ ಮಹೀಂದ್ರ ಟ್ವಿಟರ್​ನಲ್ಲಿ ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎನ್ನುವ ಬದಲು ಬೇರೊಂದು ಹೆಸರು ಸೂಚಿಸುವಂತೆ ಕೋರಿ ಒಂದು ಸವಾಲು ಹಾಕಿದ್ದರು. ಬೆಂಗಳೂರು ಮತ್ತು ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೊ ನಡುವಣ ನೇರ ವಿಮಾನ ಜೂನ್ 10ರಿಂದ ಮತ್ತೆ ಆರಂಭವಾಗಲಿದೆ ಎಂಬ ಸುದ್ದಿಯ ಜೊತೆಗೆ ಈ ಚರ್ಚೆ ಗರಿಗೆದರಿತ್ತು. ಎರಡು ಟೆಕ್ ವ್ಯಾಲಿಗಳ ನಡುವೆ ಸಂಚಾರ ಆರಂಭವಾಗಿದೆ. ಆದರೆ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುವುದರಲ್ಲಿ ನನಗೆ ಅಷ್ಟು ಖುಷಿಯಿಲ್ಲ. ಭಾರತದ ಹೈ-ಟೆಕ್ ರಾಜಧಾನಿಗೆ ಒಂದು ಸ್ವಂತ ಹೆಸರು ಸೂಚಿಸಿ. ಈ ಬಗ್ಗೆ ಒಂದು ಸ್ಪರ್ಧೆ ಮಾಡೋಣವೇ ಎಂದು ಹೇಳಿದ್ದರು. ಅವರ ಈ ಟ್ವೀಟ್ ಸವಾಲು ಮುಂದುವರಿದು ನಂತರದ ದಿನಗಳಲ್ಲಿ ‘tecHalli’ ಎಂಬ ಹೆಸರನ್ನು ನಂದನ್ ನೀಲೆಕಣಿ ಅಂತಿಮಗೊಳಿಸುವವರೆಗೂ ಬಂದು ಮುಟ್ಟಿದೆ.

(TecHalli New Name for Bengaluru Anand Mahindra Nandan Nilekani Finalises new Name)

ಇದನ್ನೂ ಓದಿ: ಮೋಹನ್​ ಭಾಗವತ್​ ಸೇರಿ ಆರ್​ಎಸ್​ಎಸ್​ನ ಪ್ರಮುಖ ನಾಯಕರ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಕೂಡ ಮಾಯ..!

ಇದನ್ನೂ ಓದಿ: ಲಸಿಕೆಗೆ ಕೊರತೆ ಇರುವಾಗ ಟ್ವಿಟರ್ ಬ್ಲೂ ಟಿಕ್ ಬಗ್ಗೆ ಚರ್ಚೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ

Follow us on

Related Stories

Most Read Stories

Click on your DTH Provider to Add TV9 Kannada