ಕೊರೊನಾ ಲಕ್ಷಣ ಇದ್ದರೆ ಪ್ಯಾರಾಸಿಟಮಾಲ್, ಕಾಫ್ ಸಿರಪ್ ಮಾತ್ರ ನೀಡಬೇಕು; ಜಿಂಕ್, HCQ ಮಾತ್ರೆ ಇತ್ಯಾದಿ ನೀಡುವಂತಿಲ್ಲ: ಪರಿಷ್ಕೃತ ಮಾರ್ಗಸೂಚಿ

ಅನಗತ್ಯವಾಗಿ, ತರ್ಕರಹಿತವಾಗಿ CT ಸ್ಕ್ಯಾನ್, HRCT ಮಾಡಬಾರದು. ಭಾರೀ ಎಚ್ಚರಿಕೆಯಿಂದ ಇವುಗಳನ್ನು ನಿರ್ವಹಿಸಬೇಕು. ರೆಮ್​ಡಿಸಿವಿರ್ ಬಳಕೆಯಲ್ಲೂ ಎಚ್ಚರಿಕೆ ಅಗತ್ಯ. ರೆಮ್​​ಡಿಸಿವಿರ್ ಇಂಜೆಕ್ಷನ್​ನಿಂದ ಹಾನಿ ಸಂಭವಿಸಬಹುದು.

ಕೊರೊನಾ ಲಕ್ಷಣ ಇದ್ದರೆ ಪ್ಯಾರಾಸಿಟಮಾಲ್, ಕಾಫ್ ಸಿರಪ್ ಮಾತ್ರ ನೀಡಬೇಕು; ಜಿಂಕ್, HCQ ಮಾತ್ರೆ ಇತ್ಯಾದಿ ನೀಡುವಂತಿಲ್ಲ: ಪರಿಷ್ಕೃತ ಮಾರ್ಗಸೂಚಿ
ಸಂಗ್ರಹ ಚಿತ್ರ

ದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ (ಡಿಜಿಹೆಚ್​​ಎಸ್) ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಅಧೀನದ ಡಿಜಿಹೆಚ್​​ಎಸ್ (Directorate General of Health Services) ವತಿಯಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಅದರನ್ವಯ ಕೊರೊನಾ ಸೋಂಕಿತರ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಜತೆಗೆ, ಸಾಧಾರಣ ಕೊರೊನಾ ಲಕ್ಷಣ ಇರುವ ರೋಗಿಗಳಿಗೆ ಪ್ಯಾರಾಸಿಟಮಾಲ್, ಕಾಫ್ ಸಿರಪ್ ಮಾತ್ರ ನೀಡಬೇಕು ಇದನ್ನು ಹೊರತುಪಡಿಸಿ ಬೇರೆ ಯಾವ ಔಷಧವನ್ನೂ ನೀಡುವಂತಿಲ್ಲ ಎಂಬುದನ್ನೂ ತಿಳಿಸಲಾಗಿದೆ.

ಕೊರೊನಾ ಸೋಂಕು ದೃಢಪಟ್ಟ ನಂತರ ಚಿಕಿತ್ಸೆ ನೀಡುವಲ್ಲಿ ನಿರ್ದಿಷ್ಟ ಕ್ರಮವನ್ನೇ ಅನುಸರಿಸಬೇಕು. HCQ ಮಾತ್ರೆ, ಫವಿಪಿರವಿರ್, ಐವರ್​ಮೆಕ್ಟಿನ್, ಜಿಂಕ್, ಡಾಕ್ಸಿಸೈಕ್ಲಿನ್, ಪ್ಲಾಸ್ಮಾ ಥೆರಪಿ ನೀಡಕೂಡದು ಎಂದು ಹೊಸ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಗಂಭೀರ ಅನಾರೋಗ್ಯದ ಸ್ಥಿತಿಯಲ್ಲಿದ್ದರೆ ಆಕ್ಸಿಜನ್, ಸ್ಟಿರಾಯ್ಡ್, ಟೊಸಿಲಿಜುಂಬ್ ನೀಡಬೇಕು. ಸಾಧಾರಣ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ಕೊಮಾರ್ಬಿಡಿಟಿ (ಬಹು ಆರೋಗ್ಯ ಸಮಸ್ಯೆ) ನಿಯಂತ್ರಿಸುವುದಕ್ಕೆ ಆದ್ಯತೆ ನೀಡಬೇಕು. ಅಂತಹವರಿಗೆ ಆಕ್ಸಿಜನ್ ನೀಡಿ ಕೊಮಾರ್ಬಿಡಿಟಿ ನಿಯಂತ್ರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, 2 DG ಬಳಕೆಗೆ ಮಾರ್ಗಸೂಚಿಯಲ್ಲಿ ಸೂಚಿಸಿಲ್ಲ ಎನ್ನುವುದು ಗಮನಾರ್ಹ.

ಇದೆಲ್ಲದರ ಜತೆಗೆ ಆಸ್ಪತ್ರೆಗೆ ಸಮಿತಿ ನೇಮಕದ ಅಗತ್ಯ ಇದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು, ಸೋಂಕು ನಿಯಂತ್ರಣ ಸಮಿತಿ ನೇಮಕದ ಅಗತ್ಯವಿದೆ ಎಂಬ ಅಂಶ ಗಮನ ಸೆಳೆದಿದೆ. ಅಲ್ಲದೇ, ಅನಗತ್ಯವಾಗಿ, ತರ್ಕರಹಿತವಾಗಿ CT ಸ್ಕ್ಯಾನ್, HRCT ಮಾಡಬಾರದು. ಭಾರೀ ಎಚ್ಚರಿಕೆಯಿಂದ ಇವುಗಳನ್ನು ನಿರ್ವಹಿಸಬೇಕು. ರೆಮ್​ಡಿಸಿವಿರ್ ಬಳಕೆಯಲ್ಲೂ ಎಚ್ಚರಿಕೆ ಅಗತ್ಯ. ರೆಮ್​​ಡಿಸಿವಿರ್ ಇಂಜೆಕ್ಷನ್​ನಿಂದ ಹಾನಿ ಸಂಭವಿಸಬಹುದು. ಹೀಗಾಗಿ ಆರ್ಡರ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ಹೈಪೊಕ್ಸಿ ರೋಗಿಗಳಿಗೆ ಡೆಕ್ಸಾ ಮಾತ್ರೆಯನ್ನ ದಿನಕ್ಕೆ 6 ಎಂಜಿಯಂತೆ 10 ದಿನ ನೀಡಿ ಎನ್ನುವುದನ್ನೂ ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಜಾರಿಮಾಡಿರುವ ನೂತನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

CT ಸ್ಕ್ಯಾನ್, HRCT, ಸ್ಟೀರಾಯ್ಡ್, ರೆಮಿಡಿಸಿವರ್ ಬಳಕೆಯಿಂದ ಹಿಡಿದು ಯಾವ ಯಾವ ಹಂತದಲ್ಲಿ ಯಾವೆಲ್ಲಾ ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿರುವ ನೂತನ ಮಾರ್ಗಸೂಚಿಗೆ ವೈದ್ಯಕೀಯ ಕ್ಷೇತ್ರದ ಗಣ್ಯರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಇಂಥದ್ದೊಂದು ನಿರ್ದಿಷ್ಟ ಮಾರ್ಗಸೂಚಿಯ ಅವಶ್ಯಕತೆ ಇತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:
ಕೊರೊನಾ ಸೋಂಕಿತರಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸಲು ಹೊಸ ಮಾರ್ಗಸೂಚಿ ಬಿಡುಗಡೆ 

ಬ್ಲ್ಯಾಕ್ ಫಂಗಸ್ ರೋಗ ಪತ್ತೆ, ಚಿಕಿತ್ಸಾವಿಧಾನಕ್ಕೆ ಮಾರ್ಗಸೂಚಿ; ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್‌ ನಂತರದ ಚಿಕಿತ್ಸಾ ಘಟಕ ಸ್ಥಾಪನೆ