Sweeper jobs: ಕಸಗುಡಿಸುವ ಕೆಲಸಕ್ಕೆ ಅರ್ಜಿ ಹಾಕಿದ ಲಕ್ಷಾಂತರ ಪದವೀಧರರು, ಸ್ನಾತಕೋತ್ತರರು! ವಿಶೇಷ ಏನು?

Sweeper jobs in Haryana govt: ಸಕಾರಾತ್ಮಕವಾಗಿ ಕೆಲಸ ಸಿಗುವ ಭರವಸೆಯೊಂದಿಗೆ ನಾನು ಅರ್ಜಿ ಸಲ್ಲಿಸಬಹುದಾದ ಏಕೈಕ ಕೆಲಸ ಇದಾಗಿದೆ. ನನ್ನ ಕುಟುಂಬವು ಹೆಚ್ಚಿನ ಅಧ್ಯಯನ ಅಥವಾ ತರಬೇತಿಗೆ ಹಣವನ್ನು ಖರ್ಚು ಮಾಡಲು ಸಿದ್ಧವಿಲ್ಲ. ಆದ್ದರಿಂದ ಈ ಉದ್ಯೋಗ ಈಗ ನನ್ನ ಏಕೈಕ ಆಯ್ಕೆಯಾಗಿದೆ ಎಂದು ಸುಮಿತ್ರಾ ಕಟುವಾಸ್ತವಕ್ಕೆ ಕನ್ನಡಿ ಹಿಡಿದರು.

Sweeper jobs: ಕಸಗುಡಿಸುವ ಕೆಲಸಕ್ಕೆ ಅರ್ಜಿ ಹಾಕಿದ ಲಕ್ಷಾಂತರ ಪದವೀಧರರು, ಸ್ನಾತಕೋತ್ತರರು! ವಿಶೇಷ ಏನು?
ಕಸಗುಡಿಸುವ ಕೆಲಸಕ್ಕೆ ಅರ್ಜಿ ಹಾಕಿದ ಲಕ್ಷಾಂತರ ಪದವೀಧರರು, ಸ್ನಾತಕೋತ್ತರರು
Follow us
|

Updated on: Sep 04, 2024 | 10:23 AM

ಚಂಡೀಗಢ: ಈ ವಿಚಾರ ಹೊಸದೇನೂ ಅಲ್ಲ; ಆದರೆ ಅದಿನ್ನೂ ಜೀವಂತವಾಗಿದ್ದು, ನಿರುದ್ಯೋಗದ ಪಿಡುಗಾಗಿ ಕಾಡುತ್ತಿದೆಯಲ್ಲಾ ಎಂಬುದೇ ಶೋಚನೀಯ ಸಂಗತಿ. ಹರಿಯಾಣ ಸರ್ಕಾರದಲ್ಲಿ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ನಾಗರಿಕ ಸಂಸ್ಥೆಗಳಲ್ಲಿ ಕಚೇರಿಗಳನ್ನು ಸ್ವಚ್ಛಗೊಳಿಸಲು ಸ್ವೀಪರ್ ಕೆಸಲಗಳು ಅಂದರೆ ಕಸ ಗುಡಿಸುವ ಗ್ರೂಪ್ ಡಿ ಹುದ್ದೆಗಳು ಖಾಲಿಯಿವೆ. ಅದಕ್ಕೆ ಮಾಸಿಕ ಸಂಬಳ 15,000 ರೂಪಾಯಿ ಕೊಡ್ತೀವಿ ಅಂತಾ ಸರಕಾರವೂ ಹೇಳಿದೆ. ಹಾಗೆ ಹೇಳಿದ್ದೇ ತಡ. ಅರ್ಜಿಗಳು ಪ್ರವಾಹೋಪಾದಿಯಲ್ಲಿ ಬಂದುಬಿದ್ದಿವೆ. ಚೋದ್ಯವೆಂದರೆ ಸಾವಿರಾರು ಸಂಖ್ಯೆಯ ಸ್ನಾತಕೋತ್ತರ ಪದವೀಧರರು, ಪದವೀಧರರು ಮತ್ತು ಹುದ್ದೆಗೆ ಅರ್ಹವಾದ ಶಿಕ್ಷಣ ಬೇಕಾಗಿರುವ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ ಲಕ್ಷಾಂತರ ಅಭ್ಯರ್ಥಿಗಳು ಸಹ ಅರ್ಜಿ ಗುಜರಾಯಿಸಿದ್ದಾರೆ.

ಉನ್ನತ ಶಿಕ್ಷಣ ಪಡೆದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸ್ವೀಪರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಹೊರಗುತ್ತಿಗೆ ಸಂಸ್ಥೆ ಹರ್ಯಾಣ ಕೌಶಲ್ ರೋಜ್ಗರ್ ನಿಗಮ್ ಲಿಮಿಟೆಡ್ (Haryana Kaushal Rozgar Nigam Limited -HKRN) ಈ ನೇಮಕಾತಿ ಜವಾಬ್ದಾರಿ ಹೊತ್ತಿದೆ.

ಕಳೆದೊಂದು ತಿಂಗಳಲ್ಲಿ ಉದ್ಯೋಗವನ್ನು ಬಯಸಿ ಲಕ್ಷಾಂತರ ಅರ್ಜಿದಾರರು ಅರ್ಜಿ ಹಾಕಿದ್ದಾರೆ. ಅರ್ಜಿದಾರರು ಎಲ್ಲಾ ವರ್ಗದವರಿದ್ದಾರೆ. ಅವರಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರ ಮನೀಶ್ ಕುಮಾರ್ ಮತ್ತು ಅವರ ಪತ್ನಿ ಅರ್ಹ ಶಿಕ್ಷಕಿ ರೂಪಾ ಅವರುಗಳೂ ಇದ್ದಾರೆ ಅಂದರೆ ಅಲ್ಲಿ ನಿರುದ್ಯೋಗ ಪರ್ವ ಹೇಗೆ ತಾಂಡವವಾಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಖಾಸಗಿ ಸಂಸ್ಥೆಗಳು ಹಾಗೂ ಕಂಪನಿಗಳಲ್ಲಿ ಕೂಡ ನಮಗೆ ತಿಂಗಳಿಗೆ 10,000 ರೂ. ನೀಡುವುದಿಲ್ಲ. ಇಲ್ಲಿ ಸರ್ಕಾರಿ ಮಟ್ಟದಲ್ಲಿ, ಭವಿಷ್ಯದಲ್ಲಿ ನಿಯಮಿತ ಉದ್ಯೋಗದ ಭರವಸೆಯೇ ಆಶಾಕಿರಣವಾಗಿದೆ. ಜೊತೆಗೆ, ಕಸ ಗುಡಿಸುವುದು ಪೂರ್ಣ ದಿನದ ಕೆಲಸವಲ್ಲ, ಆದ್ದರಿಂದ ನಾವು ಹಗಲಿನಲ್ಲಿ ಇತರ ಕೆಲಸವನ್ನು ಮುಂದುವರಿಸಬಹುದು ಎಂದು ಮನೀಶ್ ತಮ್ಮತರ್ಕವನ್ನು ಮುಂದಿಡುತ್ತಾರೆ.

ಮನೀಶ್​ ಕಥೆಯೊಂದೇ ಅನನ್ಯವಾಗಿಲ್ಲ. ರೋಹ್ಟಕ್‌ನ ಸುಖಪುರ ಚೌಕ್‌ನ ನಿವಾಸಿಯಾಗಿರುವ ಸುಮಿತ್ರಾ ಅವರು ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಚ್‌ಎಸ್‌ಎಸ್‌ಸಿ) ಮೂಲಕ ಸರ್ಕಾರಿ ಉದ್ಯೋಗವನ್ನು ಪಡೆಯುವ ಪ್ರಯತ್ನದಲ್ಲಿ ಪದೇ ಪದೇ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ಅವರಿಗೂ ಈಗ ಈ ಹುದ್ದೆಗೆ ಅರ್ಜಿ ಸಲ್ಲಿಸುವುದು ಕೊನೆಯ ಜೀವನೋಪಾಯವಾಗಿದೆ.

ಸಕಾರಾತ್ಮಕವಾಗಿ ಕೆಲಸ ಸಿಗುವ ಭರವಸೆಯೊಂದಿಗೆ ನಾನು ಅರ್ಜಿ ಸಲ್ಲಿಸಬಹುದಾದ ಏಕೈಕ ಕೆಲಸ ಇದಾಗಿದೆ. ನನ್ನ ಕುಟುಂಬವು ಹೆಚ್ಚಿನ ಅಧ್ಯಯನ ಅಥವಾ ತರಬೇತಿಗೆ ಹಣವನ್ನು ಖರ್ಚು ಮಾಡಲು ಸಿದ್ಧವಿಲ್ಲ. ಆದ್ದರಿಂದ ಈ ಉದ್ಯೋಗ ಈಗ ನನ್ನ ಏಕೈಕ ಆಯ್ಕೆಯಾಗಿದೆ ಎಂದು ಸುಮಿತ್ರಾ ಕಟುವಾಸ್ತವಕ್ಕೆ ಕನ್ನಡಿ ಹಿಡಿದರು.

ಆದರೆ ರಾಜ್ಯದಲ್ಲಿನ ಈ ಪರಿಸ್ಥಿತಿ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಅಲ್ಲದೆ, ನೇಮಕಾತಿ ಹೊಣೆ ಹೊತ್ತಿರುವ HKRN ಸಂಸ್ಥೆ ಪಾರದರ್ಶಕತೆ ಪಾಲಿಸದ, ಸರಿಯಾಘಿ ಸಂಬಳಗಳನ್ನು ಕೊಡದ, ಉದ್ಯೋಗ ಅಭದ್ರತೆ ಕಾಡುವ ಮತ್ತು ವಿವಿಧ ವರ್ಗಗಳಿಗೆ ಮೀಸಲಾತಿ ನೀಡದಿರುವ ಆರೋಪಗಳನ್ನು ಹೊತ್ತಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ನಿರುದ್ಯೋಗ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಹರ್ಯಾಣ ಕಾಂಗ್ರೆಸ್ ಆರೋಪಿಸಿದೆ.