ಟೂರ್ ಆಫ್ ಡ್ಯೂಟಿ: ಅಲ್ಪಾವಧಿಗೆ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡುವ ಆಸೆ ನಿಮಗಿದ್ದರೆ ಇಲ್ಲಿದೆ ಸುವರ್ಣಾವಕಾಶ!!
ಈ ಸೇವಾವಧಿ ನಾಲ್ಕು ವರ್ಷಗಳದ್ದಾಗಿರುತ್ತದೆ ಮತ್ತು ಅದು ಕೊನೆಗೊಂಡ ಬಳಿಕ ಯೋಧರಿಗೆ ತೆರಿಗೆ ಮುಕ್ತ ರೂ. 10 ಲಕ್ಷ ನಗದು ಮತ್ತು ಅವರು ಸಲ್ಲಿಸಿದ ಸೇವೆಯ ಗುರುತಾಗಿ ಪ್ರಮಾಣ ಪತ್ರ ಇಲ್ಲವೇ ಡಿಪ್ಲೋಮಾಗಳನ್ನು ನೀಡಲಾಗುತ್ತದೆ.
ನವದೆಹಲಿ: ಸೇನೆ ಇಲ್ಲವೇ ಸಶಸ್ತ್ರ ಪಡೆಗಳಲ್ಲಿ (Armed Forces) ಕೆಲಸ ಮಾಡಲು ಉತ್ಸುಕರಾಗಿರುವ ಸಹಸ್ರಾರು ನಿರುದ್ಯೋಗಿ ಯುವಕರಿಗಾಗಿ ನೇಮಕಾತಿ ಪ್ರಕ್ರಿಯೆ ಕುರಿತಂತೆ ಕೇಂದ್ರ ಸರ್ಕಾರ ಇಂದು ಅಂದರೆ ಜೂನ್ 8 ಬುಧವಾರದಂದು ಒಂದು ಮಹತ್ತರ ಪ್ರಕಟಣೆ ಹೊರಡಿಸಲಿದೆ. ಹೊಸ ನೇಮಕಾತಿ ಪ್ರಕ್ರಿಯೆನ್ನು ಟೂರ್ ಆಫ್ ಡ್ಯೂಟಿ ಅಂತ ಕರೆಯಲಾಗಿದ್ದು ಇದರಲ್ಲಿ ಯುವಕರನ್ನು 4 ವರ್ಷಗಳ ಅವಧಿಗೆ ಮಿಲಿಟರಿ ಸೇವೆಯ ಮೂರು ಪಡೆಗಳಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು. ಭಾರತೀಯ ಸೇನೆಯ ಇತಿಹಾಸದಲ್ಲೇ ಇದು ಮೊಟ್ಟ ಮೊದಲ ಪ್ರಯೋಗವಾಗಿದ್ದು ಇದನ್ನು ‘ಅಗ್ನಿಪತ್’ ನೇಮಕಾತಿ ಪ್ರಕ್ರಿಯೆ ಎಂದು ಕರೆಯಲಾಗುವುದು ಮತ್ತು ನೇಮಕಗೊಂಡ ಯೋಧರನ್ನು ‘ಅಗ್ನಿವೀರರು’ ಎಂದು ಹೆಸರಿಸಲಾಗುತ್ತದೆ.
ಈ ಸೇವಾವಧಿ ನಾಲ್ಕು ವರ್ಷಗಳದ್ದಾಗಿರುತ್ತದೆ ಮತ್ತು ಅದು ಕೊನೆಗೊಂಡ ಬಳಿಕ ಯೋಧರಿಗೆ ತೆರಿಗೆ ಮುಕ್ತ ರೂ. 10 ಲಕ್ಷ ನಗದು ಮತ್ತು ಅವರು ಸಲ್ಲಿಸಿದ ಸೇವೆಯ ಗುರುತಾಗಿ ಪ್ರಮಾಣ ಪತ್ರ ಇಲ್ಲವೇ ಡಿಪ್ಲೋಮಾಗಳನ್ನು ನೀಡಲಾಗುತ್ತದೆ.
ಸದರಿ ನೇಮಕಾತಿ ಯೋಜನೆ ಅಡಿಯಲ್ಲಿ ಪ್ರತಿ ವರ್ಷದಲ್ಲಿ ಎರಡು ಬಾರಿ ಅಂದರೆ ಆರು ತಿಂಗಳ ಅಂತರವಿರಿಸಿ ಸುಮಾರು 45,000-50,000 ಜನರನ್ನು ನೇಮಕಾತಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ನಾಲ್ಕು ವರ್ಷಗಳ ಸೇವಾವಧಿ ಕೊನೆಗೊಂಡ ನಂತರ ಇವರ ಪೈಕಿ ಶೇಕಡಾ 25ರಷ್ಟು ಯೋಧರನ್ನು ಸೇವೆ ಮುಂದುವರಿಸಲು ಉಳಿಸಿಕೊಳ್ಳಲಾಗುತ್ತದೆ. ಆದರೆ ಪುನರ್ ನೇಮಕ ಮಾಡಿಕೊಳ್ಳುವ ಬಗ್ಗೆ ಸರ್ಕಾರವಿನ್ನೂ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ.
ಟೂರ್ ಆಫ್ ಡ್ಯೂಟಿ ಯೋಜನೆಯಡಿ ನೇಮಕಗೊಳ್ಳುವ ಯೋಧರೆಲ್ಲ ಮೊದಲ ಆರು ತಿಂಗಳು ತರಬೇತಿ ಹೊಂದಿ ಉಳಿದ ಅವಧಿಗೆ ಸೇವೆ ಸಲ್ಲಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ ಭಾರತೀಯ ಸಶಸ್ತ್ರ ಪಡೆಗೆ ಸೇರುವವರು 17-20 ವರ್ಷಗಳಷ್ಟು ಕಾಲ ಸೇವೆಯಲ್ಲಿರುತ್ತಾರೆ.
ಅಲ್ಪಾವಧಿ ನೇಮಕಾತಿ ವಿವರಗಳು ಕೆಳಗಿನಂತಿವೆ:
ನೇಮಕಾತಿಗೆ ಅರ್ಹ ವಯೋಮಿತಿ: 17½ ವರ್ಷದಿಂದ 21 ವರ್ಷ
ಸೇವಾವಧಿ: 4 ವರ್ಷಗಳು
ಹುದ್ದೆಗಳು: 45,000-50,000 ಯೋಧರು ಪ್ರತಿವರ್ಷ
ತರಬೇತಿ ಅವಧಿ: 6 ತಿಂಗಳು
ವೇತನ ಶ್ರೇಣಿ: ರೂ. 30,000-ರೂ. 40,000 ಮಾಸಿಕ
ಸೇವಾವಧಿ ಮುಗಿದ ನಂತರ ಸಿಗುವ ಮೊತ್ತ: ರೂ. 10—12 ಲಕ್ಷ (ತೆರಿಗೆ ಮುಕ್ತ) ಟೂರ್ ಆಫ್ ಡ್ಯೂಟಿ ಯೋಜನೆ ಅಡಿ ನೇಮಕಗೊಳ್ಳುವ ಯೋಧರ ಆರಂಭಿಕ ಸಂಬಳ ರೂ. 30,000 ಆಗಿರಲಿದೆ ಮತ್ತು ಸೇವಾವಧಿ ಅಂತ್ಯಗೊಳ್ಳುವ ಹೊತ್ತಿಗೆ ಅದು ರೂ. 40,000 ಗಳಿಗೇರುವ ಸಾಧ್ಯತೆ ಇದೆ. ಆದರೆ ಪ್ರತಿ ತಿಂಗಳು ಸಂಬಳದ ಶೇಕಡ 30 ರಷ್ಟನ್ನು ಉಳಿತಾಯದ ರೂಪದಲ್ಲಿ ತಡೆಹಿಡಿಯಲಾಗುವುದು ಮತ್ತು ತಡೆಹಿಡಿದ ಭಾಗದಷ್ಟೇ ಮೊತ್ತವನ್ನು ಸರ್ಕಾರ ಸೇವಾ ನಿಧಿ ಯೋಜನೆ ಅಡಿ ಕಾಂಟ್ರಿಬ್ಯೂಟ್ ಮಾಡುತ್ತದೆ. ನಾಲ್ಕು ವರ್ಷಗಳ ಬಳಿಕ ಈ ಮೊತ್ತವು ರೂ. 10-12 ಲಕ್ಷ ಆಗಲಿದ್ದು ಅದರ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸದೆ ಯೋಧನಿಗೆ ನೀಡಲಾಗುವುದು.
ಸದರಿ ಯೋಜನೆಯನ್ನು ಭಾರತೀಯ ಸೇನೆಯು, ಭಾರತದ ಯುವಕರಿಗೆ ಪೂರ್ಣಾವಧಿಗೆ ಮಿಲಿಟರಿ ಸೇವೆಗೆ ಸೇರದೆ ಮಿಲಿಟರಿ ಬದುಕು ಅನುಭವಿಸಲು ಸುವರ್ಣಾವಕಾಶ ಅಂತ ಬಣ್ಣಸಿದೆ. ಹಾಗೆಯೇ ಮಿಲಿಟರಿ ಸೇರಲು ಇಚ್ಛೆ ಇಲ್ಲದವರಿಗೆ ಆದರೆ ಅಂಥ ಬದುಕನ್ನು ಅನುಭವಿಸಬೇಕು ಅಂದುಕೊಳ್ಳುವವರಿಗೂ ಇದೊಂದು ಅತ್ಯುತ್ತಮ ಅವಕಾಶವೆಂದು ಹೇಳಿದೆ.
ಅಧಿಕಾರಿ ವರ್ಗ ಸೇರಿದಂತೆ ಮಿಲಿಟರಿ ಸೇವೆಗಳಲ್ಲಿ ಸಿಬ್ಬಂದಿಯ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಟೂರ್ ಆಫ್ ಡ್ಯೂಟಿ ಯೋಜನೆ ಪರಿಕಲ್ಪಸಿ ಜಾರಿಗೆ ತರಲಾಗುತ್ತಿದೆ. ಭಾರತೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಇದೇ ಯೋಜನೆಯ ಮೂಲಕ ಮಿಲಿಟರಿ ಸೇವೆಗಳಿಗೆ ಶೇಕಡ 40 ರಷ್ಟು ನೇಮಕಾತಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ.
ಸಶಸ್ತ್ರ ಪಡೆಗಳ ಸೇವೆಗಳಿಗೆ ಭರ್ತಿಯಾಗಬೇಕೆಂಬ ಕನಸು ಹೊತ್ತಿರುವ ಲಕ್ಷಾಂತರ ಯುವಕರಿಗೆ ಈ ಯೋಜನೆ ಆಶಾಕಿರಣವಾಗಿ ಲಭ್ಯವಾಗಲಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.