AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜಿ ಸಲ್ಲಿಸೋ ಬದಲು 3ಡಿ ವಿಡಿಯೋ ಮಾಡಿ ಕೆಲಸ ಗಿಟ್ಟಿಸಿಕೊಂಡ ಹುಡುಗ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ

ಕ್ರೆಡ್ ಸಂಸ್ಥಾಪಕ ಕೃನಾಲ್​ ಶಾ ಅವರೇ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಶ್ರಮಕ್ಕೆ ತಕ್ಕದಾದ ಪ್ರತಿಫಲ ಸಿಗುತ್ತೆ ಎನ್ನುವ ಮೂಲಕ ಆತನ ಕನಸು ಈಡೇರುವುದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಜತೆಗೆ, ಡಿಸೈನ್ ವಿಭಾಗದ ಮುಖ್ಯಸ್ಥ ಹರಿ ಶಿವರಾಮಕೃಷ್ಣನ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಥೆಯ ಇಂಟರ್ನ್​ ಕ್ಲಬ್​ಗೆ ಸ್ವಾಗತ ಎಂದಿದ್ದಾರೆ.

ಅರ್ಜಿ ಸಲ್ಲಿಸೋ ಬದಲು 3ಡಿ ವಿಡಿಯೋ ಮಾಡಿ ಕೆಲಸ ಗಿಟ್ಟಿಸಿಕೊಂಡ ಹುಡುಗ; ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ
ಅವಕಾಶ್ ಶಾ
TV9 Web
| Edited By: |

Updated on:Jun 07, 2021 | 4:40 PM

Share

ಮುಂಬೈ: ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಈಗಿನ ತಲೆಮಾರು ಯೋಚಿಸುವ ರೀತಿಯೂ ಬದಲಾಗಿದೆ. ಅದಕ್ಕೆ ತಕ್ಕನಾಗಿ ಆಧುನಿಕ ಯುಗ ನಮ್ಮಿಂದ ಬಯಸುವ ಕೆಲಸದ ಶೈಲಿಯೂ ಬದಲಾವಣೆ ಕಂಡಿದೆ. ಯಾರು ಅತಿ ವೇಗವಾಗಿ ತಂತ್ರಜ್ಞಾನವನ್ನು ದುಡಿಸಿಕೊಂಡು ಕ್ರಿಯಾಶೀಲ ಕೆಲಸ ಮಾಡುತ್ತಾರೋ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂಬೈನ 21 ವರ್ಷದ ಯುವಕನೋರ್ವ ಕ್ರೆಡ್ ಸಂಸ್ಥೆಯಲ್ಲಿ ಇಂಡರ್ನ್​ಶಿಪ್ ಮಾಡಬೇಕೆಂಬ ಬಯಕೆಯಿಂದ ತಯಾರಿಸಿದ 3ಡಿ ವಿಡಿಯೋ ಆತನ ಕನಸನ್ನು ನನಸಾಗಿಸಿದೆ. ಅವಕಾಶ್ ಶಾ ಎಂಬ ಹೆಸರಿನ 3ಡಿ ಗ್ರಾಫಿಕ್, ಮೋಷನ್ ಡಿಸೈನರ್ ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾನೆ.

ಕ್ರೆಡ್​ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ವಿನೂತನ ಜಾಹೀರಾತುಗಳೊಂದಿಗೆ ಬರುತ್ತಿದ್ದ ಕಾರಣ ಅದರ ಗಮನ ಸೆಳೆಯಬೇಕೆಂಬ ಉದ್ದೇಶದಿಂದ ಅವಕಾಶ್ ಕೊಂಚ ವಿಭಿನ್ನವಾಗಿರುವುದನ್ನು ಮಾಡಲು ಆಲೋಚಿಸಿದ್ದ. ಹೀಗಾಗಿ ಸಂಸ್ಥೆಗೆ ಸಾಂಪ್ರದಾಯಿಕ ಶೈಲಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಬದಲು ತಾನು ಮಾಡಿದ ಕೆಲಸದ ಮೂಲಕ ಕೆಲಸ ಪಡೆಯಲು ನಿರ್ಧರಿಸಿದ. ನಂತರ ಅದಕ್ಕಾಗಿ ವಿಶೇಷ 3ಡಿ ವಿಡಿಯೋ ಒಂದನ್ನು ತಯಾರಿಸಿ ಸಂಸ್ಥೆಗೆ ತನ್ನ ಬಯಕೆ ಏನೆಂಬುದನ್ನು ಅರ್ಥ ಮಾಡಿಸಿದ. ಆತನ ಕೌಶಲ್ಯವನ್ನು ಗಮನಿಸಿದ ಕ್ರೆಡ್​ ಮುಕ್ತ ಮನಸ್ಸಿನಿಂದ ಯುವಕನ ಪ್ರಯತ್ನವನ್ನು ಶ್ಲಾಘಿಸಿ ಇಂಟರ್ನ್​ಶಿಪ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.

ಈ ಬಗ್ಗೆ ತಿಳಿಸಿರುವ ಅವಕಾಶ್ ಶಾ, ನಾನು ಕ್ರೆಡ್ ಸಂಸ್ಥೆಯಲ್ಲಿ ಇಂಟರ್ನ್​ಶಿಪ್ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದು, ಅದಕ್ಕಾಗಿ ಈ ರೀತಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಲಿಂಕ್ಡ್​ ಇನ್ ಮೂಲಕ ತನ್ನ ಕೆಲಸವನ್ನು ಹಂಚಿಕೊಂಡಿದ್ದ. ನಾನು ಅವಕಾಶ ಪಡೆಯಬೇಕೆಂದರೆ ಅದಕ್ಕೆ ತಕ್ಕದ್ದೇನಾದರೂ ಮಾಡಬೇಕು ಎಂದು ಬಯಸಿದ್ದೇನೆ ಎಂಬುದನ್ನೂ ಉಲ್ಲೇಖಿಸಿದ್ದ.

ಅಲ್ಲದೇ, ವಿಡಿಯೋ ಹಂಚಿಕೊಳ್ಳುವ ಸಂದರ್ಭದಲ್ಲಿ ಕ್ರೆಡ್ ಸಂಸ್ಥೆಯ ಸ್ಥಾಪಕ ಕೃನಾಲ್ ಶಾ ಹಾಗೂ ಡಿಸೈನ್ ವಿಭಾಗದ ಮುಖ್ಯಸ್ಥ ಹರಿ ಶಿವರಾಮಕೃಷ್ಣನ್ ಅವರನ್ನು ಟ್ಯಾಗ್ ಮಾಡಿದ್ದ. ಅವಕಾಶ್ ಶಾ ವಿಡಿಯೋ ಹಂಚಿಕೊಂಡ ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಭಾರೀ ಸದ್ದು ಮಾಡಿತ್ತು. ಒಂಬತ್ತು ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಸೆಳೆಯುವ ಮೂಲಕ ಹುಬ್ಬೇರಿಸುವಂತೆ ಮಾಡಿತ್ತು. ಅದರ ಪರಿಣಾಮವಾಗಿ ಕ್ರೆಡ್ ಸಂಸ್ಥಾಪಕ ಕೃನಾಲ್​ ಶಾ ಅವರೇ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಶ್ರಮಕ್ಕೆ ತಕ್ಕದಾದ ಪ್ರತಿಫಲ ಸಿಗುತ್ತೆ ಎನ್ನುವ ಮೂಲಕ ಆತನ ಕನಸು ಈಡೇರುವುದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಜತೆಗೆ, ಡಿಸೈನ್ ವಿಭಾಗದ ಮುಖ್ಯಸ್ಥ ಹರಿ ಶಿವರಾಮಕೃಷ್ಣನ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಂಸ್ಥೆಯ ಇಂಟರ್ನ್​ ಕ್ಲಬ್​ಗೆ ಸ್ವಾಗತ. ನಿಮ್ಮ ಕೆಲಸವನ್ನು ನಾವೆಲ್ಲರೂ ಇಷ್ಟಪಟ್ಟಿದ್ದೇವೆ. ನಿಮ್ಮ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಅಪೇಕ್ಷಿಸುತ್ತೇವೆ ಎಂದಿದ್ದಾರೆ. ಬಹುಮುಖ್ಯವಾಗಿ ಸ್ವತಃ ಲಿಂಕ್ಡ್​ ಇನ್ ಸಂಸ್ಥೆಯೇ ಯುವಕನ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದು, ಇದು ಅತ್ಯಂತ ಕ್ರಿಯಾಶೀಲ ಪ್ರಯೋಗ ಎಂದು ಶ್ಲಾಘಿಸಿದೆ.

ಆತನ ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ: ಈಗಷ್ಟೇ ಓದು ಮುಗಿಸಿರುವ ಹೈದರಾಬಾದ್​ ಹುಡುಗಿಗೆ 2 ಕೋಟಿ ರೂಪಾಯಿ ಸಂಬಳದ ಕೆಲಸ ನೀಡಿದ ಮೈಕ್ರೋಸಾಫ್ಟ್ 

Viral Video: ಪುಟ್ಟ ಮಕ್ಕಳಿಗೂ ಎಷ್ಟು ಕೆಲಸ? 6 ವರ್ಷದ ಬಾಲಕಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ದೂರು; ವಿಡಿಯೋ ನೋಡಿ

Published On - 3:58 pm, Mon, 7 June 21